2027ರ ಏಕದಿನ ವಿಶ್ವಕಪ್ ವೇಳಾಪಟ್ಟಿ ಅಕ್ಟೋಬರ್ 1ರಂದು ಬಿಡುಗಡೆ - ಭಾರತ ಸೇರಿದಂತೆ 10 ತಂಡಗಳ ಅರ್ಹತೆ ಬಹುತೇಕ ಖಚಿತ!!

2027ರ ಐಸಿಸಿ ಪುರುಷರ ಏಕದಿನ ವಿಶ್ವಕಪ್‌ಗೆ ಈಗಿನಿಂದಲೇ ಭರ್ಜರಿ ಸಿದ್ಧತೆ ಆರಂಭವಾಗಿದೆ. ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ನಮೀಬಿಯಾ ಜಂಟಿಯಾಗಿ ಆತಿಥ್ಯ ವಹಿಸಲಿರುವ ಈ ಮಹತ್ವದ ಟೂರ್ನಿಯ ಸಂಪೂರ್ಣ ವೇಳಾಪಟ್ಟಿ ಅಕ್ಟೋಬರ್ 1ರಂದು ದಕ್ಷಿಣ ಆಫ್ರಿಕಾದ ಕೇಪ್ ಟೌನ್‌ನಲ್ಲಿ ಬಿಡುಗಡೆಯಾಗಲಿದೆ. ಟೂರ್ನಿಗೆ ಒಂದು ವರ್ಷ ಬಾಕಿ ಇರುವ ಸಂದರ್ಭದಲ್ಲೇ ವೇಳಾಪಟ್ಟಿ ಅನಾವರಣಗೊಳ್ಳಲಿದ್ದು, ಇದೇ ಕಾರ್ಯಕ್ರಮದಲ್ಲಿ ವಿಶ್ವಕಪ್ ಟಿಕೆಟ್‌ಗಳಿಗಾಗಿ ಬ್ಯಾಲೆಟ್ ನೋಂದಣಿ ಪ್ರಕ್ರಿಯೆಯೂ ಆರಂಭವಾಗಲಿದೆ.

2027ರ ಏಕದಿನ ವಿಶ್ವಕಪ್ ವೇಳಾಪಟ್ಟಿ | Photo Credit: https://x.com/cricsam02
2027ರ ಏಕದಿನ ವಿಶ್ವಕಪ್ ವೇಳಾಪಟ್ಟಿ | Photo Credit: https://x.com/cricsam02

ಈ ಹಿಂದೆ ಅಕ್ಟೋಬರ್ 2ರಂದು ವೇಳಾಪಟ್ಟಿ ಬಿಡುಗಡೆಯಾಗಲಿದೆ ಎಂಬ ವರದಿಗಳು ಹರಿದಾಡಿದ್ದವು. ಆದರೆ ಇದೀಗ ಅಕ್ಟೋಬರ್ 1ರಂದೇ ವೇಳಾಪಟ್ಟಿ ಪ್ರಕಟವಾಗಲಿದೆ ಎಂಬ ಮಾಹಿತಿ ಹೊರಬಿದ್ದಿದೆ. 2027ರ ವಿಶ್ವಕಪ್ ಅಕ್ಟೋಬರ್ 2ರಿಂದ ನವೆಂಬರ್ 21ರವರೆಗೆ ನಡೆಯಲಿದೆ ಎಂದು Cricbuzz ವರದಿ ಮಾಡಿದೆ.

14 ತಂಡಗಳ ಮಹಾ ಟೂರ್ನಿ

2027ರ ವಿಶ್ವಕಪ್‌ನಲ್ಲಿ ಒಟ್ಟು 14 ತಂಡಗಳು ಭಾಗವಹಿಸಲಿವೆ. ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ನಮೀಬಿಯಾ ಆತಿಥೇಯ ರಾಷ್ಟ್ರಗಳಾಗಿವೆ. ಆದರೆ ಆತಿಥೇಯರಾಗಿರುವುದರಿಂದ ದಕ್ಷಿಣ ಆಫ್ರಿಕಾ ಮತ್ತು ಜಿಂಬಾಬ್ವೆ ನೇರ ಸ್ಥಾನ ಪಡೆದಿದ್ದರೆ, ನಮೀಬಿಯಾದ ಅರ್ಹತೆ ಇನ್ನೂ ಖಚಿತವಾಗಿಲ್ಲ. ಉಳಿದ ತಂಡಗಳ ಪೈಕಿ ಎಂಟು ತಂಡಗಳು ಐಸಿಸಿ ಏಕದಿನ ಶ್ರೇಯಾಂಕದ ಆಧಾರದ ಮೇಲೆ ನೇರ ಅರ್ಹತೆ ಪಡೆಯಲಿವೆ. ಇನ್ನೂ ನಾಲ್ಕು ತಂಡಗಳು ಅರ್ಹತಾ ಪಂದ್ಯಗಳ ಮೂಲಕ ವಿಶ್ವಕಪ್ ಪ್ರವೇಶಿಸಲಿವೆ.

ಸೆಪ್ಟೆಂಬರ್ 30ರ ಅರ್ಹತಾ ಗಡುವಿನ ವೇಳೆಗೆ 14 ತಂಡಗಳ ಪೈಕಿ 10 ತಂಡಗಳು ಅಂತಿಮಗೊಳ್ಳಲಿವೆ. ಪ್ರಸ್ತುತ ಶ್ರೇಯಾಂಕದ ಆಧಾರದ ಮೇಲೆ ಭಾರತ, ನ್ಯೂಜಿಲೆಂಡ್, ಪಾಕಿಸ್ತಾನ, ಆಸ್ಟ್ರೇಲಿಯಾ, ಇಂಗ್ಲೆಂಡ್, ಶ್ರೀಲಂಕಾ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶ ತಂಡಗಳು ಅರ್ಹತಾ ಸ್ಥಾನದಲ್ಲಿವೆ. ದಕ್ಷಿಣ ಆಫ್ರಿಕಾ ಆತಿಥೇಯ ಸ್ಥಾನದಿಂದ ನೇರವಾಗಿ ಅರ್ಹತೆ ಪಡೆಯುವುದರಿಂದ ಬಾಂಗ್ಲಾದೇಶಕ್ಕೂ ಸ್ಥಾನ ಸಿಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ವೆಸ್ಟ್ ಇಂಡೀಸ್‌ಗೆ ಅರ್ಹತಾ ಸುತ್ತಿನ ಸವಾಲು

ಪ್ರಸ್ತುತ ಭಾರತ ಪ್ರವಾಸದಲ್ಲಿರುವ ವೆಸ್ಟ್ ಇಂಡೀಸ್ ತಂಡಕ್ಕೆ ನೇರ ಅರ್ಹತೆ ಪಡೆಯಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ಅರ್ಹತಾ ಪಂದ್ಯಗಳ ಮೂಲಕ ವಿಶ್ವಕಪ್ ಟಿಕೆಟ್ ಪಡೆಯಬೇಕಾದ ಪರಿಸ್ಥಿತಿ ಇದೆ. ಉಳಿದ ನಾಲ್ಕು ತಂಡಗಳನ್ನು ಅರ್ಹತಾ ಹಂತದಿಂದ ಆಯ್ಕೆ ಮಾಡಲಾಗುತ್ತದೆ ಮತ್ತು ವೇಳಾಪಟ್ಟಿಯಲ್ಲಿ ಅವುಗಳನ್ನು ಕ್ವಾಲಿಫೈಯರ್ 1, ಕ್ವಾಲಿಫೈಯರ್ 2, ಕ್ವಾಲಿಫೈಯರ್ 3 ಮತ್ತು ಕ್ವಾಲಿಫೈಯರ್ 4 ಎಂದು ನಮೂದಿಸಲಾಗುತ್ತದೆ.

2027ರ ವಿಶ್ವಕಪ್‌ನಲ್ಲಿ ಹೊಸ ಮಾದರಿ

ಈ ಬಾರಿ ವಿಶ್ವಕಪ್‌ನ ಸ್ವರೂಪದಲ್ಲೂ ಮಹತ್ವದ ಬದಲಾವಣೆ ಮಾಡಲಾಗಿದೆ. ಒಟ್ಟು 14 ತಂಡಗಳು ಮೂರು ಪ್ರಮುಖ ಹಂತಗಳ ಮೂಲಕ ಸೆಮಿಫೈನಲ್ ಮತ್ತು ಫೈನಲ್ ಹಂತಕ್ಕೆ ಸಾಗಲಿವೆ. ಮೊದಲ ಹಂತದಲ್ಲಿ ಶ್ರೇಯಾಂಕದಲ್ಲಿ 12ರಿಂದ 14ನೇ ಸ್ಥಾನದಲ್ಲಿರುವ ಮೂರು ತಂಡಗಳು 'ಸೂಪರ್ ಸೀರೀಸ್'ನಲ್ಲಿ ರೌಂಡ್-ರಾಬಿನ್ ಮಾದರಿಯಲ್ಲಿ ಆಡಲಿವೆ. ಅಲ್ಲಿ ಅಗ್ರಸ್ಥಾನ ಪಡೆಯುವ ತಂಡ ಮುಂದಿನ ಹಂತಕ್ಕೆ ಪ್ರವೇಶಿಸಲಿದೆ.

ನಂತರ 12 ತಂಡಗಳನ್ನು ತಲಾ ಆರು ತಂಡಗಳ ಎರಡು ಗುಂಪುಗಳಾಗಿ ವಿಭಜಿಸಿ 30 ಪಂದ್ಯಗಳನ್ನು ಆಡಿಸಲಾಗುತ್ತದೆ. ಪ್ರತಿ ಗುಂಪಿನ ಅಗ್ರ ಮೂರು ತಂಡಗಳ ಜೊತೆಗೆ ಎರಡೂ ಗುಂಪುಗಳಲ್ಲಿನ ಮುಂದಿನ ಅತ್ಯುತ್ತಮ ತಂಡ ಸೇರಿದಂತೆ ಒಟ್ಟು ಏಳು ತಂಡಗಳು 'ಸೂಪರ್ 7' ಹಂತಕ್ಕೆ ಪ್ರವೇಶಿಸಲಿವೆ.

ಸೂಪರ್ 7 ಬಳಿಕ ಸೆಮಿಫೈನಲ್

ಸೂಪರ್ 7 ಹಂತದಲ್ಲಿ ಏಳು ತಂಡಗಳು ಪರಸ್ಪರ ರೌಂಡ್-ರಾಬಿನ್ ಮಾದರಿಯಲ್ಲಿ ಒಟ್ಟು 21 ಪಂದ್ಯಗಳನ್ನು ಆಡಲಿವೆ. ಅಂಕಪಟ್ಟಿಯ ಅಗ್ರ ನಾಲ್ಕು ತಂಡಗಳು ಸೆಮಿಫೈನಲ್ ಪ್ರವೇಶಿಸಲಿವೆ. ಮೊದಲ ಸ್ಥಾನ ಪಡೆದ ತಂಡ ನಾಲ್ಕನೇ ಸ್ಥಾನ ಪಡೆದ ತಂಡವನ್ನು ಎದುರಿಸಿದರೆ, ಎರಡನೇ ಸ್ಥಾನ ಪಡೆದ ತಂಡ ಮೂರನೇ ಸ್ಥಾನ ಪಡೆದ ತಂಡದ ವಿರುದ್ಧ ಸೆಣಸಲಿದೆ. ಈ ಎರಡು ಸೆಮಿಫೈನಲ್‌ಗಳ ವಿಜೇತರು ಫೈನಲ್‌ನಲ್ಲಿ ವಿಶ್ವಕಪ್ ಪ್ರಶಸ್ತಿಗಾಗಿ ಮುಖಾಮುಖಿಯಾಗಲಿದ್ದಾರೆ.

ಟಿಕೆಟ್‌ಗಾಗಿ ಬ್ಯಾಲೆಟ್ ನೋಂದಣಿ

ವಿಶ್ವಕಪ್ ವೇಳಾಪಟ್ಟಿ ಬಿಡುಗಡೆ ಕಾರ್ಯಕ್ರಮದಂದೇ ಟಿಕೆಟ್‌ಗಳಿಗಾಗಿ ಬ್ಯಾಲೆಟ್ ಪ್ರಕ್ರಿಯೆ ಆರಂಭವಾಗಲಿದೆ. ಅಕ್ಟೋಬರ್ 1ರಿಂದ ಅಭಿಮಾನಿಗಳು ಟಿಕೆಟ್ ಬ್ಯಾಲೆಟ್‌ಗೆ ನೋಂದಣಿ ಮಾಡಿಕೊಳ್ಳಬಹುದು. ಆದರೆ ಆ ದಿನವೇ ಟಿಕೆಟ್‌ಗಳನ್ನು ನೇರವಾಗಿ ಖರೀದಿಸುವ ವ್ಯವಸ್ಥೆ ಇರುವುದಿಲ್ಲ ಎಂದು ವರದಿಯಾಗಿದೆ.

2027ರ ವಿಶ್ವಕಪ್ ಒಟ್ಟು 57 ಪಂದ್ಯಗಳನ್ನು ಒಳಗೊಂಡಿದ್ದು, ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ನಮೀಬಿಯಾದ 12 ಮೈದಾನಗಳಲ್ಲಿ ಪಂದ್ಯಗಳು ನಡೆಯಲಿವೆ. 24 ವರ್ಷಗಳ ಬಳಿಕ ಏಕದಿನ ವಿಶ್ವಕಪ್ ಮತ್ತೆ ಆಫ್ರಿಕಾ ಖಂಡಕ್ಕೆ ಮರಳುತ್ತಿರುವುದರಿಂದ ಟೂರ್ನಿಯ ಬಗ್ಗೆ ಕ್ರಿಕೆಟ್ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಾಗಿದೆ.

ಅಕ್ಟೋಬರ್ 1ರಂದು ವೇಳಾಪಟ್ಟಿ ಬಿಡುಗಡೆಯಾದ ಬಳಿಕ ಭಾರತ ಸೇರಿದಂತೆ ಇತರ ತಂಡಗಳ ಪಂದ್ಯಗಳ ದಿನಾಂಕ, ಸ್ಥಳ ಹಾಗೂ ಸಂಪೂರ್ಣ ಟೂರ್ನಿ ವೇಳಾಪಟ್ಟಿ ಸ್ಪಷ್ಟವಾಗಲಿದೆ. ಹೊಸ ಮೂರು ಹಂತಗಳ ಸ್ವರೂಪದೊಂದಿಗೆ ನಡೆಯಲಿರುವ 2027ರ ವಿಶ್ವಕಪ್‌ನಲ್ಲಿ ಆರಂಭಿಕ ಹಂತದಿಂದಲೇ ಪ್ರತಿಯೊಂದು ಪಂದ್ಯವೂ ತಂಡಗಳ ಮುಂದಿನ ಹಾದಿಗೆ ಮಹತ್ವ ಪಡೆದುಕೊಳ್ಳಲಿದೆ.