Mar 11, 2026 Languages : ಕನ್ನಡ | English

ಕೈ ಸುಟ್ಟುಕೊಂಡ ಕರಣ್ ಸಿನಿಮಾ ಕೊನೆಗೂ ಓಟಿಟಿಗೆ ಎಂಟ್ರಿ - ಇಲ್ಲಾದ್ರೂ ಜನರ ಪ್ರೀತಿ ಕಾರ್ತಿಕ್' ಗೆ ಸಿಗುತ್ತಾ?

ಸಿನಿಮಾ ನೋಡಬೇಕು ಅಂದರೆ ಸೀದಾ ಚಿತ್ರಮಂದಿರಕ್ಕೆ ಹೋಗಿ ನಮ್ಮಿಷ್ಟದ ಸ್ಟಾರ್ ಸೆಲೆಬ್ರೆಟಿಗಳ ಚಿತ್ರವನ್ನು ಬೆಳ್ಳಿಪರದೆ ಮೇಲೆ ನೋಡಿದರೆ ಆ ಮಜಾನೇ ಬೇರೆ, ಅದು ಆಗಿನ ಕಾಲ. ಸಿನಿಮಾ ಚಿತ್ರಮಂದಿರದಲ್ಲಿ ಗೆದ್ದರೆ ಮಾತ್ರ ಬಹಳ ದಿನಗಳವರೆಗೂ ಸೆಂಚುರಿ ಬಾರಿಸಿ ಮುನ್ನುಗ್ಗಿ ಹೋಗುತ್ತಾ ಇದ್ದ ಕಾಲವದು. ನೂರು ದಿನ ಸಿನಿಮಾ ಬೆಳ್ಳಿಪರದೆ ಮೇಲೆ ರಾರಾಜಿಸ್ತು ಅಂದರೆ ಸಿನಿಮಾ ನಟನಿಂದ ಹಿಡಿದು, ಚಿತ್ರತಂಡದ ಪ್ರತಿಯೊಬ್ಬರೂ ಹೆಚ್ಚು ಸಕ್ಸಸ್ ಕಾಣುತ್ತಿದ್ದರು. ಒಂದು ವೇಳೆ ಆ ಸಿನಿಮಾ ಸೋತು ಮಕಾಡೆ ಮಲಗಿತು ಅಂದ್ರೆ, ಅದರ ಕಥೆ ಅಷ್ಟೇ ಹಾಕಿದ ಬಂಡವಾಳ ಸಹ ವಾಪಸ್ಸು ಬರುತ್ತಿರಲಿಲ್ಲ. ಆದ್ರೆ ಇವತ್ತಿನ ದಿನದ ಸಿನಿಮಾ ವಿಚಾರ ಹೇಗಪ್ಪಾ ಅಂತ ಅಂದರೆ, ಸಿನಿಮಾ ಬೆಳ್ಳಿಪರದೆ ಮೇಲೆ ಓಡದೆ ಇದ್ದರೂ, ಅಥ್ವಾ ಪ್ರೇಕ್ಷಕರಿಗೆ ನೋಡಲು ಸಮಯ ಸಿಗದೇ ಇದ್ದರೂ ಸೀದಾ ಮನೆಯ ಲಿವಿಂಗ್ ರೂಮಿಗೆ ಬಂದು ಬಿಡುತ್ತೆ. ಓಟಿಟಿ ಮೂಲಕ ನಮ್ಮಿಷ್ಟದ ಸ್ಟಾರ್ ನಟ ನಟಿಯರ ಸಿನಿಮಾವನ್ನು ಮನೆಯಲ್ಲೇ ಸವಿಯಬಹುದು. 

ಕಾರ್ತಿಕ್-ಅನನ್ಯಾ ಜೋಡಿ ಸಿನಿಮಾ ಈಗ ಅಮೆಜಾನ್ ಪ್ರೈಂನಲ್ಲಿ!! | Photo Credit: kartikaaryan instagram
ಕಾರ್ತಿಕ್-ಅನನ್ಯಾ ಜೋಡಿ ಸಿನಿಮಾ ಈಗ ಅಮೆಜಾನ್ ಪ್ರೈಂನಲ್ಲಿ!! | Photo Credit: kartikaaryan instagram

ಚಿತ್ರಮಂದಿರದಲ್ಲಿ ಸಿನಿಮಾಗಳು ಎಲ್ಲವೂ ಗೆಲ್ಲುವುದಿಲ್ಲ. ಸೋತ ಸಿನಿಮಾಗಳು ಓಟಿಟಿ ಮೂಲಕ ಸದ್ದು ಮಾಡಿದ ಸಿನಿಮಾಗಳು ಇವೆ. ಜನರಿಗೆ ತಲುಪವಲ್ಲಿ ಅಥವಾ ಪ್ರಚಾರ ಸಿಗದ ಸಿನಿಮಾಗಳು ಸಹ ಓಟಿಟಿಯಲ್ಲಿ ಸಕತ್ ಇಷ್ಟ ಆದಂತಹ, ಆ ಮೂಲಕವೇ ಕಲಾವಿದರ ಜೀವನ ಬದಲಿಸಿದ ಸಿನಿಮಾಗಳ ಪಟ್ಟಿ ಸಹ ನಮ್ಮ ಕಣ್ಣ ಮುಂದಿವೆ. ಸಿನಿಮಾ ಥಿಯೇಟರ್ ನಲ್ಲಿ ಸೋಲು ಕಂಡ ಚಿತ್ರಗಳಲ್ಲಿ ಕೆಲ ಸಿನಿಮಾಗಳು ಓಟಿಟಿಯಲ್ಲಿ ಹೆಚ್ಚು ಸದ್ದು ಮಾಡಿವೆ. ಉದಾಹರಣೆ ನೋಡುವುದಾದರೆ ಇಮ್ತಿಯಾಜ್ ಅಲಿಯ ''ತಮಾಷಾ'' ಇವತ್ತು ಹೆಚ್ಚಿನವರ ಪಾಲಿನ ಕ್ಲಾಸಿಕ್ ಚಿತ್ರ ಎನ್ನಬಹುದು. ''ತುಂಬಾಡ್'' ಭಯಂಕರ ಹಾರರ್ ಇಷ್ಟ ಪಡುವ ಮಾಸ್ಟರ್ ಪೀಸ್ ಆಗಿ ಹೊರ ಹೊಮ್ಮಿದೆ. 

ನಮ್ಮ ಕನ್ನಡದಲ್ಲಿಯೂ ಈ ತರಹದ ಹೆಚ್ಚು ಉದಾಹರಣೆಗಳು ಇವೆ. ಹೌದು, ಅದೇ ಸಾಲಿನಲ್ಲಿ ಕಾರ್ತಿಕ್ ಆರ್ಯನ್ ನಟಿಸಿದ ''ತು ಮೇರಿ ಮೇ ತೇರಾ, ಮೇ ತೇರಾ ತು ಮೇರಿ'' ಸಹ ಸೇರ್ಪಡೆಯಾಗುತ್ತಾ ಅಥ್ವಾ ಇಲ್ವಾ ಅನ್ನೋದು ಮುಂಬರುವ ದಿನಗಳಲ್ಲಿ ಗೊತ್ತಾಗಲಿದೆಯಾದರೂ ಸದ್ಯ ನೋಡ ನೋಡುತ್ತಿದ್ದಂತೇ ಈ ಸಿನಿಮಾ ಸದ್ದಿಲ್ಲದೇ ಓಟಿಟಿಗೆ ಬಂದು ಬಿಟ್ಟಿದೆ. 

ಕಳೆದ ವರ್ಷದ ಕೊನೆಯಲ್ಲಿ ಹಾಗೂ ಈ ವರ್ಷದ ಆರಂಭದಲ್ಲಿ ಹೆಚ್ಚು ಸಿನಿಮಾಗಳು ಸದ್ದಿಲ್ಲದೇ ಥಿಯೇಟರ್ ನಿಂದ ಕಾಲ್ ಕಿತ್ತವು. ಅದಕ್ಕೆ ಕಾರಣ 'ಧುರಂಧರ್' ಸಿನಿಮಾ ಎನ್ನಬಹುದು. ಅದರ ಸಾಲಿನಲ್ಲಿಯೇ ''ತು ಮೇರಿ ಮೇ ತೇರಾ, ಮೇ ತೇರಾ ತು ಮೇರಿ'' ಸಿನಿಮಾ ಸಹ ಒಂದು ಎನ್ನಬಹುದು. ಕರಣ್ ಜೋಹರ್ ಅವರಂತಹ ದೊಡ್ಡ ನಿರ್ಮಾಪಕ ಮತ್ತು ಬಾರಿ ಚತುರ ಚಾಲಾಕಿ ವ್ಯಾಪಾರಸ್ಥ ಈ ಚಿತ್ರದ ಹಿಂದೆ ಇದ್ರೂ ಏನು ಮಾಡಲು ಆಗಲಿಲ್ಲ, ಕೊನೆಗೂ ಸಿನಿಮಾ ಸೋಲಿನ ದವಡೆಯಿಂದ ಪಾರಾಗಲು ಆಗಲೇ ಇಲ್ಲ. ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಥಿಯೇಟರ್ ಗೆ ಎಂಟ್ರಿ ಕೊಟ್ಟ ಈ ಸಿನಿಮಾ ಒಂದೇ ಮಾತಲ್ಲಿ ಹೇಳಬೇಕು ಅಂದರೆ ಮಕಾಡೆ ಮಲಗಿತು. 

 ಹೌದು, ''koimoi'' ಅವರ ಪ್ರಕಾರ ತಿಳಿದುಬಂದಿರುವ ಮಾಹಿತಿ ನೋಡುವುದಾದರೆ, ಚಿತ್ರ ನಿರ್ಮಾಣ ಮಾಡಿದ ಒಂದೇ ಒಂದು ತಪ್ಪಿಗೆ ನಿರ್ಮಾಪಕರಾದ ಕರಣ್ ಜೋಹರ್ ಅವರಿಗೆ ಬರೋಬ್ಬರಿ 50 ಕೋಟಿ ನಷ್ಟ ಆಯ್ತು ಎಂದು ಕೇಳಿಬಂದಿದೆ. ಜೊತೆಗೆ ಚಿತ್ರದ ಬಾಕ್ಸಾಫೀಸ್‌ ವಿಚಾರಕ್ಕೆ ಬರೋದಾದರೆ ''ಸ್ಯಾಕ್ನಿಲ್'' ಪ್ರಕಾರ ಒಟ್ಟು 90 ಕೋಟಿ ರೂಪಾಯಿ ಬಜೆಟ್‌ನಲ್ಲಿ ತಯಾರಾದ ಈ ಸಿನಿಮಾ ಇಂಡಿಯಾದಲ್ಲಿ ಗಳಿಸಿದ್ದು ಮಾತ್ರ ಬರೀ 32.95 ಕೋಟಿ ರೂಪಾಯಿ ಎನ್ನಲಾಗಿದೆ. 

ದಕ್ಷಿಣ ಯುರೋಪ್‌ನ ಕ್ರೊಯೇಷಿಯಾದಲ್ಲಿ ಕಥೆ ಆರಂಭವಾಗುತ್ತದೆ. ಲಾಸ್ ಏಂಜಲೀಸ್‌ನಲ್ಲಿ ವೆಡ್ಡಿಂಗ್ ಪ್ಲಾನರ್ ಆಗಿರುವ ರೇ (ಕಾರ್ತಿಕ್ ಆರ್ಯನ್) ಮತ್ತು ಲೇಖಕಿ ರೂಮಿ (ಅನನ್ಯಾ ಪಾಂಡೆ) ಭೇಟಿಯಾಗುತ್ತಾರೆ. ಮೊದಲ ನೋಟದಲ್ಲಿಯೇ ಇಬ್ಬರ ನಡುವೆ ಪ್ರೇಮಾಂಕುರ ಮೂಡುತ್ತದೆ. ಹೌದು, ರೇ ಮುಕ್ತ ಮನಸ್ಸಿನ ಹುಡುಗ. ಸಂಪ್ರದಾಯ, ಮದುವೆ, ಕುಟುಂಬ – ಯಾವುದರ ಮೇಲೂ ನಂಬಿಕೆ ಇಲ್ಲ. ಆದರೆ ರೂಮಿ ತದ್ವಿರುದ್ಧ. ಕುಟುಂಬ ಮೌಲ್ಯಗಳಿಗೆ ಬೆಲೆ ಕೊಡುವ ಹುಡುಗಿ. ರೇ ತಾಯಿ (ನೀನಾ ಗುಪ್ತಾ) ಮಗ ಸ್ವತಂತ್ರ ಹಕ್ಕಿಯಂತೆ ಇರಬೇಕು ಎಂದು ಬಯಸಿದರೆ, ರೂಮಿ ತಂದೆ (ಜಾಕಿ ಶ್ರಾಫ್) ಸಂಪ್ರದಾಯಸ್ಥ ಅಳಿಯ ಬೇಕೆಂದು ಬಯಸುತ್ತಾರೆ. ಹೀಗೆ ಬೇರೆ ಬೇರೆ ಆಲೋಚನೆ ಹೊಂದಿರುವ ಇವರು ಒಂದಾಗುತ್ತಾರಾ ಎನ್ನುವುದೇ ಚಿತ್ರದ ಕಥಾಹಂದರ.  

ತಾರಾಬಳಗದಲ್ಲಿ ಕಾರ್ತಿಕ್ ಆರ್ಯನ್, ಅನನ್ಯಾ ಪಾಂಡೆ, ಜಾಕಿ ಶ್ರಾಫ್, ನೀನಾ ಗುಪ್ತಾ, ಟಿಕು ತಲ್ಸಾನಿಯಾ, ಚಾಂದಿನಿ ಭಾಭ್ಧಾ, ಲೋಕೇಶ್ ಮಿತ್ತಲ್, ಗೃಶಾ ಕಪೂರ್, ರಾಘವ್ ಬಿನಾನಿ, ಅಫ್ನಾನ್ ಫಜ್ಲಿ ಮತ್ತು ಗೌರವ್ ಪಾಂಡೆ ಮುಂತಾದವರು ನಟಿಸಿದ್ದಾರೆ.  

ನಿರ್ದೇಶಕ – ಸಮೀರ್ ವಿದ್ವಾನ್ಸ್. ನಿರ್ಮಾಪಕರು – ಕರಣ್ ಜೋಹರ್, ಆಧಾರ್ ಪೂನಾವಾಲಾ, ಅಪೂರ್ವ ಮೆಹ್ತಾ, ಶರೀನ್ ಮಂತ್ರಿ ಕೇಡಿಯಾ ಮತ್ತು ಕಿಶೋರ್ ಅರೋರಾ. ಸಂಗೀತ ನಿರ್ದೇಶನ – ವಿಶಾಲ್-ಶೇಖರ್. ಹಿನ್ನೆಲೆ ಸಂಗೀತ – ಹಿತೇಶ್ ಸೋನಿಕ್.  

'ಎಲ್ಲಿ ಸಿನಿಮಾ ವೀಕ್ಷಣೆ ಮಾಡಬಹುದು'? 

“ತು ಮೇರಿ ಮೇ ತೇರಾ, ಮೇ ತೇರಾ ತು ಮೇರಿ” ಚಿತ್ರ ನಿನ್ನೆಯಿಂದ (ಫೆಬ್ರವರಿ 19) ಅಮೆಜಾನ್ ಪ್ರೈಂನಲ್ಲಿ ಪ್ರಸಾರವಾಗುತ್ತಿದೆ. ಚಿತ್ರ ಕೇವಲ ಹಿಂದಿಯಲ್ಲಿ ಲಭ್ಯವಿದ್ದು, ಸಬ್‌ಟೈಟಲ್‌ಗಳ ಸಹಾಯದಿಂದ ಬೇರೆ ಭಾಷಿಗರು ಸಹ ನೋಡಬಹುದು. ಆಸಕ್ತ ಚಿತ್ರಪ್ರೇಮಿಗಳು ಮನೆ ಮಂದಿ ಜೊತೆ ಕುಳಿತು ಚಿತ್ರವನ್ನು ಕಣ್ತುಂಬಿಕೊಳ್ಳಬಹುದು.  

Latest News