ನಿಮಗೆ ಅಪರಿಚಿತ ವ್ಯಕ್ತಿಗಳ ಜೊತೆ ಹರಟೆ ಹೊಡೆಯುವ ಅಭ್ಯಾಸವಿದೆಯೇ? ಅದೂ ಡೇಟಿಂಗ್ ಆ್ಯಪ್‌ಗಳ ಮೂಲಕ ಪರಿಚಯ ಮಾಡಿಕೊಳ್ಳುತ್ತೀರಾ? ಹಾಗಿದ್ದರೆ ಈ ಸ್ಟೋರಿಯನ್ನು ಪೂರ್ತಿ ಓದಿ. ಯಾಕಂದ್ರೆ ನಿಮ್ಮ ಒಂದು ಸಣ್ಣ ತಪ್ಪು ನಿಮ್ಮನ್ನು ಪ್ರಾಣಾಪಾಯಕ್ಕೆ ದೂಡಬಹುದು.
ಯಲಹಂಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂತಹದ್ದೊಂದು ಮೈ ನಡುಗಿಸುವ ಘಟನೆ ನಡೆದಿದೆ. ವೃತ್ತಿಯಲ್ಲಿ ಇಂಜಿನಿಯರ್ ಆಗಿರುವ ವ್ಯಕ್ತಿಯೊಬ್ಬರು ಕಳೆದ ಒಂದೂವರೆ ವರ್ಷದಿಂದ 'Grindr' ಎಂಬ ಸಲಿಂಗಕಾಮಿ ಡೇಟಿಂಗ್ ಆ್ಯಪ್ ಬಳಸುತ್ತಿದ್ದರು. ಇತ್ತೀಚೆಗೆ ಈ ಆ್ಯಪ್ ಮೂಲಕ ಇವರಿಗೆ ಓರ್ವ ಯುವಕನ ಪರಿಚಯವಾಗಿದೆ. ಪರಸ್ಪರ ಮಾತುಕತೆ ನಡೆಸಿ ನಂಬರ್ ಕೂಡ ಎಕ್ಸ್ಚೇಂಜ್ ಮಾಡಿಕೊಂಡಿದ್ದಾರೆ.
ಹನಿ ಟ್ರ್ಯಾಪ್ ರೀತಿ ಭೇಟಿಗೆ ಕರೆದಿದ್ದ ಕಿರಾತಕರು
ಪರಿಚಯವಾದ ಯುವಕ ಮೇ 1ರಂದು ಇಂಜಿನಿಯರ್ ಅವರನ್ನು ಭೇಟಿಯಾಗಲು ಯಲಹಂಕದ ಪಾಲನಹಳ್ಳಿ ಬಳಿ ಕರೆದಿದ್ದಾನೆ. ಆತನ ಮಾತನ್ನು ನಂಬಿದ ಇಂಜಿನಿಯರ್ ಅಲ್ಲಿಗೆ ತೆರಳಿದ್ದಾರೆ. ಆದರೆ ಅಲ್ಲಿ ಅವರಿಗೆ ಕಾದಿದ್ದು ಒಬ್ಬ ಯುವಕನಲ್ಲ, ಬದಲಾಗಿ ನಾಲ್ವರು ಆರೋಪಿಗಳ ಗ್ಯಾಂಗ್!
ಇಂಜಿನಿಯರ್ ಅವರನ್ನು ಬಲವಂತವಾಗಿ ಕಾರಿನಲ್ಲಿ ಕರೆದೊಯ್ದ ಆರೋಪಿಗಳು, "ನೀನು ಸಲಿಂಗಕಾಮಿ ಅನ್ನೋ ವಿಚಾರವನ್ನು ಎಲ್ಲರಿಗೂ ತಿಳಿಸಿ ನಿನ್ನ ಮಾನ ಕಳೆಯುತ್ತೇವೆ" ಎಂದು ಬೆದರಿಕೆ ಹಾಕಿದ್ದಾರೆ. ಅಷ್ಟಕ್ಕೇ ನಿಲ್ಲದೆ ಆತನ ಮೊಬೈಲ್ ಕಿತ್ತುಕೊಂಡು ಯುಪಿಐ (UPI) ಪಾಸ್‌ವರ್ಡ್ ನೀಡುವಂತೆ ಪೀಡಿಸಿದ್ದಾರೆ.
ಪಾಸ್‌ವರ್ಡ್ ನೀಡದ್ದಕ್ಕೆ ಚಾಕು ಇರಿತ!
ಯಾವಾಗ ಇಂಜಿನಿಯರ್ ಪಾಸ್‌ವರ್ಡ್ ನೀಡಲು ನಿರಾಕರಿಸಿದರೋ, ಆರೋಪಿಗಳು ಕ್ರೌರ್ಯ ಮೆರೆದಿದ್ದಾರೆ. ಚಾಕುವಿನಿಂದ ಇಂಜಿನಿಯರ್‌ನ ತೊಡೆ ಮತ್ತು ದೇಹದ ಹಲವು ಭಾಗಗಳಿಗೆ ಮನಸೋಇಚ್ಛೆ ಇರಿದಿದ್ದಾರೆ. ನೋವಿನಿಂದ ಕಿರುಚಾಡಿದಾಗ ಬಲವಂತವಾಗಿ ಮೊಬೈಲ್ ಕಸಿದು ಯುಪಿಐ ಮೂಲಕ 16 ಸಾವಿರ ರೂಪಾಯಿ ವರ್ಗಾವಣೆ ಮಾಡಿಕೊಂಡಿದ್ದಾರೆ. ಬಳಿಕ ಗಾಯಾಳು ವ್ಯಕ್ತಿಯನ್ನು ನಿರ್ಜನ ಪ್ರದೇಶದಲ್ಲಿ ಬಿಟ್ಟು ಹಂತಕರು ಪರಾರಿಯಾಗಿದ್ದಾರೆ.
ಎಂಟು ಜನರಿಗೆ ಇದೇ ರೀತಿ ವಂಚನೆ?
ಗಾಯಗೊಂಡ ಇಂಜಿನಿಯರ್ ಹೇಗೋ ಸಾಹಸ ಪಟ್ಟು ಸ್ನೇಹಿತನಿಗೆ ಕರೆ ಮಾಡಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ತನಿಖೆ ಕೈಗೆತ್ತಿಕೊಂಡ ಯಲಹಂಕ ಪೊಲೀಸರು ದರ್ಶನ್ ಮತ್ತು ರಾಜೇಶ್ ಎಂಬಿಬ್ಬರನ್ನು ಬಂಧಿಸಿದ್ದಾರೆ. ಇನ್ನುಳಿದ ಇಬ್ಬರು ಅಪ್ರಾಪ್ತರಾಗಿದ್ದರಿಂದ ಅವರನ್ನು ಬಾಲಮಂದಿರಕ್ಕೆ ಕಳುಹಿಸಲಾಗಿದೆ.
ವಿಚಾರಣೆ ವೇಳೆ ತಿಳಿದುಬಂದ ಆಘಾತಕಾರಿ ವಿಷಯವೇನೆಂದರೆ, ಈ ಗ್ಯಾಂಗ್ ಇದೇ ರೀತಿ ಡೇಟಿಂಗ್ ಆ್ಯಪ್ ಮೂಲಕ ಈ ಹಿಂದೆಯೂ ಸುಮಾರು 8ಕ್ಕೂ ಹೆಚ್ಚು ಜನರಿಗೆ ಮೋಸ ಮಾಡಿ ಹಣ ಸುಲಿಗೆ ಮಾಡಿದೆ! ಬಂಧಿತರಿಂದ ಕೃತ್ಯಕ್ಕೆ ಬಳಸಿದ್ದ ಚಾಕು, 4 ಮೊಬೈಲ್ ಮತ್ತು ಒಂದು ಬೈಕ್ ಸೀಜ್ ಮಾಡಲಾಗಿದೆ.
ಸಾರ್ವಜನಿಕರೇ ಎಚ್ಚರ!
ಡೇಟಿಂಗ್ ಆ್ಯಪ್‌ಗಳಲ್ಲಿ ಅಪರಿಚಿತರ ಪ್ರೊಫೈಲ್ ನೋಡಿ ಮರುಳಾಗಬೇಡಿ.
ಯಾರು ಅಂತ ಗೊತ್ತಿಲ್ಲದ ವ್ಯಕ್ತಿಗಳ ಜೊತೆ ಪರ್ಸನಲ್ ವಿಷಯ ಹಂಚಿಕೊಳ್ಳಬೇಡಿ.
ಭೇಟಿಯಾಗಲೇಬೇಕು ಎಂದಿದ್ದರೆ ಜನನಿಬಿಡ ಪ್ರದೇಶಗಳಲ್ಲಿ ಮಾತ್ರ ಭೇಟಿಯಾಗಿ.
ಯಾರಾದರೂ ಬೆದರಿಕೆ ಹಾಕಿದರೆ ತಕ್ಷಣ ಪೊಲೀಸರಿಗೆ ದೂರು ನೀಡಿ.
ಸದ್ಯ ಯಲಹಂಕ ಪೊಲೀಸರು ತನಿಖೆ ಮುಂದುವರಿಸಿದ್ದು, ಈ ಗ್ಯಾಂಗ್‌ನಿಂದ ಇನ್ನೂ ಎಷ್ಟು ಜನ ಮೋಸ ಹೋಗಿದ್ದಾರೆ ಎಂಬುದು ಪತ್ತೆಯಾಗಬೇಕಿದೆ.