ಬೆಂಗಳೂರಿನ ಅಲ್ಲಾಳಸಂದ್ರ ರಾಜಕಾಲುವೆಯಲ್ಲಿ ಇತ್ತೀಚೆಗೆ ಒಬ್ಬ ವ್ಯಕ್ತಿಯ ಮೃತದೇಹ ಪತ್ತೆಯಾಗಿತ್ತು. ಮೊದಲು ಇದೊಂದು ಅನುಮಾನಾಸ್ಪದ ಸಾ*ವು ಅಂದುಕೊಂಡಿದ್ದ ಯಲಹಂಕ ಪೊಲೀಸರು, ತನಿಖೆ ಶುರು ಮಾಡಿದಾಗ ಸಿಕ್ಕಿದ್ದು ಶಾಕಿಂಗ್ ನ್ಯೂಸ್. ತನ್ನ ಮಗಳ ಹಿಂದೆ ಬಿದ್ದು ಪೀಡಿಸುತ್ತಿದ್ದ ರಮೇಶ್ ಎಂಬಾತನನ್ನು ಆಕೆಯ ತಂದೆ ಈರಯ್ಯ ಮತ್ತು ಸಂಬಂಧಿಕರೇ ಸೇರಿ ಕೊ*ಲೆ ಮಾಡಿದ್ದಾರೆ.
ಕೊ*ಲೆಯಾದ ರಮೇಶ್ ಮತ್ತು ಆರೋಪಿ ಈರಯ್ಯ ಇಬ್ಬರೂ ಮೂಲತಃ ಬಾಗಲಕೋಟೆ ಜಿಲ್ಲೆಯ ಮುಧೋಳದವರು. ಈರಯ್ಯನ ಮಗಳು ರಮೇಶನ ಮನೆಯಲ್ಲೇ ಇದ್ದು ಓದಿಕೊಂಡಿದ್ದಳು. ರಮೇಶ್ ಸ್ವಲ್ಪ ಕಾಲ ಕೆಲಸಕ್ಕೆ ಅಂತ ದುಬೈಗೆ ಹೋಗಿದ್ದ. ಅಲ್ಲಿಂದ ವಾಪಸ್ ಬಂದಮೇಲೆ ಆ ಯುವತಿಯನ್ನು ಮದುವೆಯಾಗಬೇಕು ಅಂತ ಹಠ ಹಿಡಿದಿದ್ದ.
ಆದರೆ ವಿಷಯ ಏನೆಂದರೆ, ಆ ಹುಡುಗಿಗೆ ಇನ್ನು 18 ವರ್ಷ ತುಂಬಿರಲಿಲ್ಲ. ಆದರೂ ರಮೇಶ್ ಸುಮ್ಮನೆ ಬಿಡದೆ ಮದುವೆ ಮಾಡಿಕೊಡಿ ಅಂತ ಪೀಡಿಸುತ್ತಿದ್ದ. ಇದರಿಂದ ರೋಸಿಹೋದ ಈರಯ್ಯ, ಬಾಗಲಕೋಟೆಯಲ್ಲಿ ರಮೇಶನ ಮೇಲೆ ಪೋಕ್ಸೋ (POCSO) ಕೇಸ್ ದಾಖಲಿಸಿ ಜೈಲಿಗೆ ಕಳಿಸಿದ್ದರು.
ಬೆಂಗಳೂರಿಗೆ ಬಂದರೂ ಬಿಡದ ಕಾಟ
ರಮೇಶನ ಕಾಟದಿಂದ ಮಗಳನ್ನು ದೂರ ಇಡಬೇಕು ಅಂತ ಈರಯ್ಯ ಆಕೆಯನ್ನು ಬೆಂಗಳೂರಿನ ಕಾಲೇಜೊಂದಕ್ಕೆ ಸೇರಿಸಿ ಇಲ್ಲೇ ಓದಿಸುತ್ತಿದ್ದರು. ಇತ್ತ ಜೈಲಿನಿಂದ ಹೊರಬಂದ ರಮೇಶ್ ಸುಮ್ಮನಿರಬೇಕಲ್ಲ? ಮತ್ತೆ ಹುಡುಗಿಯ ಅಡ್ರೆಸ್ ಪತ್ತೆ ಹಚ್ಚಿ ಬೆಂಗಳೂರಿಗೆ ಬಂದಿದ್ದಾನೆ. ಮಗಳನ್ನು ಮದುವೆಯಾಗಲೇಬೇಕು ಅಂತ ಮತ್ತೆ ಕಿರುಕುಳ ಕೊಡಲು ಶುರು ಮಾಡಿದ್ದಾನೆ. ಇದರಿಂದ ಈರಯ್ಯನ ತಾಳ್ಮೆ ಮೀರಿದೆ. "ಜೈಲಿಗೆ ಹೋದ್ರೂ ಇವನು ಬುದ್ಧಿ ಕಲಿತಿಲ್ಲ, ಇವನನ್ನು ಸುಮ್ಮನೆ ಬಿಟ್ಟರೆ ಮಗಳ ಜೀವನ ಹಾಳಾಗುತ್ತೆ" ಅಂತ ನಿರ್ಧರಿಸಿದ ಈರಯ್ಯ, ತನ್ನ ಸಂಬಂಧಿಕರಾದ ಚಿನ್ನಯ್ಯ, ಚೇತನ್ ಮತ್ತು ಚರಣ್ ಜೊತೆ ಸೇರಿ ರಮೇಶನನ್ನ ಮುಗಿಸಲು ಪ್ಲಾನ್ ಮಾಡಿದರು.
ಸ್ಕೇಚ್ ಹಾಕಿದ್ದು ಹೇಗೆ?
ಪ್ಲಾನ್ ಪ್ರಕಾರ, ಬೆಂಗಳೂರಲ್ಲಿದ್ದ ರಮೇಶನನ್ನ ಆರೋಪಿಗಳು ಭೇಟಿಯಾಗಿದ್ದಾರೆ. "ಬಾಪ್ಪಾ, ಹಳೇದೆಲ್ಲ ಮರೆತು ಬಿಡೋಣ, ಕುಳಿತು ಮಾತನಾಡೋಣ" ಅಂತ ನಂಬಿಸಿ ಆತನನ್ನು ಕರೆದೊಯ್ದಿದ್ದಾರೆ. ಮೊದಲು ರಮೇಶನಿಗೆ ಹೊಟ್ಟೆ ತುಂಬಾ ಊಟ ಮಾಡಿಸಿ, ಆಮೇಲೆ ಫುಲ್ ಆಗಿ ಎಣ್ಣೆ ಕುಡಿಸಿದ್ದಾರೆ. ರಮೇಶ್ ಪೂರ್ತಿ ಕಿಕ್‌ನಲ್ಲಿ ಇದ್ದಾಗ, ಎಲ್ಲರೂ ಸೇರಿ ಹಗ್ಗದಿಂದ ಆತನ ಕುತ್ತಿಗೆ ಬಿಗಿದು ಕೊ*ಲೆ ಮಾಡಿದ್ದಾರೆ. ಸಾಕ್ಷಿ ಸಿಗಬಾರದು ಅಂತ ಹೆಣವನ್ನ ಅಲ್ಲಾಳಸಂದ್ರ ರಾಜಕಾಲುವೆಗೆ ಎಸೆದು ಎಸ್ಕೇಪ್ ಆಗಿದ್ದರು.
ಪೊಲೀಸರ ತನಿಖೆಗೆ ಸಿಕ್ಕಿಬಿದ್ದ ಹಂತಕರು
ರಾಜಕಾಲುವೆಯಲ್ಲಿ ಶ*ವ ಸಿಕ್ಕಾಗ ಪೊಲೀಸರಿಗೆ ಇದು ಯಾರ ದೇಹ ಅಂತಲೇ ಗೊತ್ತಿರಲಿಲ್ಲ. ತನಿಖೆ ನಡೆಸುತ್ತಾ ಹೋದಂತೆ ರಮೇಶನ ಹಳೆ ಹಿಸ್ಟರಿ ಬಯಲಾಗಿದೆ. ಯುವತಿಯ ತಂದೆ ಮತ್ತು ರಮೇಶನ ಮಧ್ಯೆ ಇದ್ದ ಗಲಾಟೆ ಬಗ್ಗೆ ಕ್ಲೂ ಸಿಕ್ಕಿದ ತಕ್ಷಣ ಪೊಲೀಸರು ಈರಯ್ಯನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅಸಲಿ ಸತ್ಯ ಹೊರಬಂದಿದೆ. ಈಗ ಈರಯ್ಯ ಸೇರಿ ನಾಲ್ವರು ಆರೋಪಿಗಳು ಯಲಹಂಕ ಪೊಲೀಸರ ಅತಿಥಿಗಳಾಗಿದ್ದಾರೆ.