ಮದುವೆಗೆ ನಿರಾಕರಿಸಿದ ವೈದ್ಯ - ಮನನೊಂದು ಪ್ರಾಣ ಕಳೆದುಕೊಂಡ ಪಿಜಿ ವಿದ್ಯಾರ್ಥಿನಿ!! ಫೋನ್ ಮೂಲಕ ಎಲ್ಲಾ ಬಯಲು;

ಆಂಧ್ರಪ್ರದೇಶದ ವಿಜಯವಾಡದಲ್ಲಿ ಕಳೆದ ಫೆಬ್ರವರಿ ತಿಂಗಳಿನಲ್ಲಿ ನಡೆದಿದ್ದ ವೈದ್ಯಕೀಯ ಸ್ನಾತಕೋತ್ತರ ವಿದ್ಯಾರ್ಥಿನಿಯ ಆತ್ಮಹ*ತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮಹತ್ವದ ಕ್ರಮ ಕೈಗೊಂಡಿದ್ದಾರೆ. ಈ ಸಾವಿಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಒಬ್ಬ ವೈದ್ಯನನ್ನು ಪೊಲೀಸರು ಬಂಧಿಸಿದ್ದಾರೆ. ಡಿಜಿಟಲ್ ಪುರಾವೆಗಳು ಮತ್ತು ಫೋನ್ ದಾಖಲೆಗಳ ಆಧಾರದ ಮೇಲೆ ಈ ಬಂಧನ ನಡೆದಿದೆ.

ಡಿಜಿಟಲ್ ಸಾಕ್ಷ್ಯದಿಂದ ಬಯಲಾದ ಪ್ರೇಮದ ದುರಂತ!!
ಡಿಜಿಟಲ್ ಸಾಕ್ಷ್ಯದಿಂದ ಬಯಲಾದ ಪ್ರೇಮದ ದುರಂತ!!

ಬಾತುಲ ದೀಪಿಕಾ ಎಂಬುವವರು ವಿಜಯವಾಡದ ಸಿದ್ಧಾರ್ಥ ವೈದ್ಯಕೀಯ ಕಾಲೇಜಿನಲ್ಲಿ ಅರಿವಳಿಕೆ ವಿಭಾಗದ (Anaesthesiology) ಅಂತಿಮ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿನಿಯಾಗಿದ್ದರು. ಅವರು ವಿಜಯವಾಡದ ಸರ್ಕಾರಿ ಸಾಮಾನ್ಯ ಆಸ್ಪತ್ರೆಯಲ್ಲಿ (GGH) ಕರ್ತವ್ಯ ನಿರತ ವೈದ್ಯೆಯಾಗಿಯೂ ಕೆಲಸ ಮಾಡುತ್ತಿದ್ದರು. ಫೆಬ್ರವರಿ 5 ರಂದು ದೀಪಿಕಾ ಅವರು ತಾವು ಕೆಲಸ ಮಾಡುತ್ತಿದ್ದ ಆಸ್ಪತ್ರೆಯ ರೂಮಿನಲ್ಲಿಯೇ ಶ*ವವಾಗಿ ಪತ್ತೆಯಾಗಿದ್ದರು. ಅವರು ತಮಗೆ ತಾವೇ ಮಾರಣಾಂತಿಕ ಚುಚ್ಚುಮದ್ದನ್ನು ಚುಚ್ಚಿಕೊಳ್ಳುವ ಮೂಲಕ ಆತ್ಮಹ*ತ್ಯೆ ಮಾಡಿಕೊಂಡಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿತ್ತು. ಈ ಘಟನೆ ಅಂದು ಇಡೀ ಆಸ್ಪತ್ರೆ ಮತ್ತು ವೈದ್ಯಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿತ್ತು.

ದೀಪಿಕಾ ಅವರ ಪೋಷಕರು ಈ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ದೂರು ನೀಡಿದ್ದರು. ಪ್ರಕರಣದ ತನಿಖೆ ಕೈಗೆತ್ತಿಕೊಂಡ ಮಚವರಂ ಪೊಲೀಸರು ದೀಪಿಕಾ ಅವರ ಮೊಬೈಲ್ ಫೋನ್ ಮತ್ತು ವಾಟ್ಸಾಪ್ ಸಂದೇಶಗಳನ್ನು ಕೂಲಂಕಷವಾಗಿ ಪರಿಶೀಲಿಸಿದರು. ಈ ತನಿಖೆಯಲ್ಲಿ ಅಮರ್ ಸಹಸ್ಯ ಎಂಬ ವೈದ್ಯನ ಹೆಸರು ಮುನ್ನೆಲೆಗೆ ಬಂದಿತು. ದೀಪಿಕಾ ಅವರು ಸಾಯುವ ಕೆಲವೇ ಕ್ಷಣಗಳ ಮೊದಲು, ಅಂದರೆ ಫೆಬ್ರವರಿ 4 ರಂದು ಮಧ್ಯರಾತ್ರಿ 12:30 ಕ್ಕೆ ಅಮರ್ ಜೊತೆ ಸುಮಾರು ಒಂಬತ್ತು ನಿಮಿಷಗಳ ಕಾಲ ಮಾತನಾಡಿದ್ದರು ಎಂಬುದು ತಾಂತ್ರಿಕ ಸಾಕ್ಷ್ಯಗಳಿಂದ ಸಾಬೀತಾಗಿದೆ.

ದೀಪಿಕಾ ಮತ್ತು ಅಮರ್ ನಡುವೆ ಪ್ರೇಮ ಸಂಬಂಧವಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಎನ್‌ಟಿಆರ್ ಜಿಲ್ಲೆಯ ನಂದಿಗಾಮ ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಅಮರ್, ದೀಪಿಕಾ ಅವರನ್ನು ಮದುವೆಯಾಗಲು ನಿರಾಕರಿಸಿದ್ದರು ಎಂದು ಹೇಳಲಾಗಿದೆ. ಅಲ್ಲದೆ, ಅಮರ್ ಅವರು ಬೇರೊಬ್ಬ ಮಹಿಳೆಯೊಂದಿಗೆ ವಿವಾಹವಾಗಲು ಸಿದ್ಧತೆ ನಡೆಸುತ್ತಿದ್ದರು. ಪ್ರಿಯಕರನ ಈ ವರ್ತನೆಯಿಂದ ದೀಪಿಕಾ ಅವರು ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ಮದುವೆಗೆ ನಿರಾಕರಿಸಿದ ಮತ್ತು ಮೋಸ ಮಾಡಿದ ಕಾರಣಕ್ಕಾಗಿಯೇ ದೀಪಿಕಾ ಅತೀವ ನೋವಿನಿಂದ ಈ ನಿರ್ಧಾರ ಕೈಗೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಸಂಗ್ರಹಿಸಲಾದ ತಾಂತ್ರಿಕ ಸಾಕ್ಷ್ಯಗಳ ಆಧಾರದ ಮೇಲೆ ಎನ್‌ಟಿಆರ್ ಪೊಲೀಸ್ ಕಮಿಷನರೇಟ್ ಸೋಮವಾರ ಅಮರ್ ಸಹಸ್ಯನನ್ನು ಬಂಧಿಸಿದೆ. ಭಾರತೀಯ ನ್ಯಾಯ ಸಂಹಿತೆ (BNS), 2023 ರ ಸೆಕ್ಷನ್ 108 ರ ಅಡಿಯಲ್ಲಿ (ಆತ್ಮಹತ್ಯೆಗೆ ಪ್ರಚೋದನೆ) ಪ್ರಕರಣ ದಾಖಲಿಸಲಾಗಿದೆ. "ಡಿಜಿಟಲ್ ಸಂವಹನ ಮತ್ತು ತಾಂತ್ರಿಕ ಸಾಕ್ಷ್ಯಗಳ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ" ಎಂದು ಎಸಿಪಿ ಕೆ. ದಾಮೋದರ್ ತಿಳಿಸಿದ್ದಾರೆ.

ದೀಪಿಕಾ ಅವರ ತಂದೆ ಮೊದಲಿನಿಂದಲೂ ಸತ್ಯಾಂಶ ಹೊರಬರಬೇಕು ಎಂದು ಒತ್ತಾಯಿಸುತ್ತಿದ್ದರು. ಇದೀಗ ಆರೋಪಿಯ ಬಂಧನದಿಂದ ತನಿಖೆ ಒಂದು ಪ್ರಮುಖ ಹಂತಕ್ಕೆ ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಪಡೆಯಲು ಪೊಲೀಸರು ಆರೋಪಿಯನ್ನು ವಿಚಾರಣೆಗೊಳಪಡಿಸುತ್ತಿದ್ದಾರೆ.

Latest News