ಸಿನಿಮಾಗಳಲ್ಲಿ ಕಾರು, ಬೈಕ್ ಕಳ್ಳತನ ಮಾಡೋದನ್ನ ನೋಡಿದ್ದೇವೆ. ಆದರೆ ಇಲ್ಲೊಬ್ಬರು ಭೂಪರು ಬರೋಬ್ಬರಿ 40 ಲಕ್ಷ ರೂಪಾಯಿ ಬೆಲೆಯ ಬೃಹತ್ ಜೆಸಿಬಿಯನ್ನೇ ಎಗರಿಸಿದ್ದಾರೆ! ಅಷ್ಟೇ ಅಲ್ಲ, ಅದನ್ನು ಕದ್ದು ತಮ್ಮೂರಲ್ಲಿ ತಾವೇ ಹೊಸದಾಗಿ ಖರೀದಿಸಿದ್ದು ಎಂದು 'ಹವಾ' ಕೂಡ ಎಬ್ಬಿಸಿದ್ದರು. ಆದರೆ ಇವರ ಅತಿಯಾದ ಬುದ್ಧಿವಂತಿಕೆಯೇ ಇವರನ್ನು ಪೊಲೀಸರ ಅತಿಥಿಯನ್ನಾಗಿ ಮಾಡಿದೆ.
ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಕಲಕೇರಿ ಗ್ರಾಮದ ಸೈಪನ್ ಬಾಗವಾನ್ ಎಂಬುವವರು ಬಹಳ ಆಸೆಯಿಂದ 40 ಲಕ್ಷ ರೂಪಾಯಿ ಕೊಟ್ಟು ಹೊಸ ಜೆಸಿಬಿಯೊಂದನ್ನು ಖರೀದಿಸಿದ್ದರು. ಮನೆ ಮುಂದೆ ತಂದು ಸಂಭ್ರಮದಿಂದ ಪೂಜೆ ಮಾಡಿ ನಿಲ್ಲಿಸಿದ್ದರು. ಆದರೆ ಪಾಪ, ಅವರಿಗೆ ಗೊತ್ತಿರಲಿಲ್ಲ ಕಳ್ಳರ ಕಣ್ಣು ಈ ಹೊಸ ಗಾಡಿಯ ಮೇಲೆ ಬಿದ್ದಿದೆ ಎಂದು.
ಮಹಾರಾಷ್ಟ್ರದ ಹುಲಜಂತಿ ಮೂಲದ ಶಿವಾಜಿ ರೈತಮುರೆ ಮತ್ತು ಹೂವಣ್ಣ ಬಂಡಗರ್ ಎಂಬ ಇಬ್ಬರು ಕಿಲಾಡಿ ಕಳ್ಳರು ರಾತ್ರೋರಾತ್ರಿ ಈ ಜೆಸಿಬಿಯನ್ನು ಕದ್ದಿದ್ದಾರೆ. ಇವರು ಎಂತಹ ಖತರ್ನಾಕ್ ಅಂದರೆ, ಜೆಸಿಬಿ ಎಲ್ಲಿದೆ ಎಂದು ಪತ್ತೆ ಹಚ್ಚಬಾರದು ಎಂಬ ಕಾರಣಕ್ಕೆ ಅದಕ್ಕೆ ಅಳವಡಿಸಿದ್ದ ಜಿಪಿಎಸ್ (GPS) ಕಿಟ್‌ನ್ನೇ ಕಟ್ ಮಾಡಿದ್ದರು!
ಕಳ್ಳತನದ 'ಹೈಟೆಕ್' ಪ್ಲ್ಯಾನ್!
ಸಿಸಿಟಿವಿ ದೃಶ್ಯಗಳನ್ನು ನೋಡಿದರೆ ಈ ಕಳ್ಳರ ಪ್ಲ್ಯಾನ್ ಗೊತ್ತಾಗುತ್ತದೆ. ಒಬ್ಬ ಜೆಸಿಬಿ ಚಲಾಯಿಸಿಕೊಂಡು ಹೋಗುತ್ತಿದ್ದರೆ, ಇನ್ನೊಬ್ಬ ಬೈಕ್‌ನಲ್ಲಿ ಮುಂದೆ ಹೋಗುತ್ತಾ ರಸ್ತೆಯಲ್ಲಿ ಎಲ್ಲಾದರೂ ಪೊಲೀಸರು ಇದ್ದಾರಾ? ರಸ್ತೆ ಕ್ಲಿಯರ್ ಇದೆಯಾ? ಎಂದು ಮಾಹಿತಿ ನೀಡುತ್ತಿದ್ದ. ಹೀಗೆ ಯಾರ ಕಣ್ಣಿಗೂ ಬೀಳದೆ ಜೆಸಿಬಿಯನ್ನು ಮಹಾರಾಷ್ಟ್ರಕ್ಕೆ ಸಾಗಿಸಿದ್ದರು.
ಅಲ್ಲಿಗೆ ಹೋದ ಮೇಲೆ ಇವರು ಮಾಡಿದ ಕೆಲಸವೇ ತಮಾಷೆ. "ನಾವು ಹೊಸ ಜೆಸಿಬಿ ತಂದಿದ್ದೇವೆ" ಎಂದು ಊರಲ್ಲಿ ಬಿಲ್ಡಪ್ ಕೊಟ್ಟಿದ್ದರು. ಬಳಿಕ ಈ 40 ಲಕ್ಷದ ಗಾಡಿಯನ್ನು ಯಾರಿಗಾದರೂ ಕಡಿಮೆ ದರಕ್ಕೆ ಮಾರಿ ಕೈ ತೊಳೆದುಕೊಳ್ಳಲು ಸ್ಕೆಚ್ ಹಾಕಿದ್ದರು.
100 ರೂಪಾಯಿಗೆ ಸಿಕ್ಕಿಬಿದ್ದರು ನೋಡಿ!
ಕಳ್ಳರು ಎಷ್ಟೇ ಬುದ್ಧಿವಂತರಾದರೂ ಒಂದು ಸಣ್ಣ ತಪ್ಪು ಮಾಡೇ ಮಾಡುತ್ತಾರೆ ಅಲ್ವಾ? ಈ ಪ್ರಕರಣದಲ್ಲೂ ಹಾಗೆಯೇ ಆಯಿತು. ಜೆಸಿಬಿ ಕದ್ದು ಎಸ್ಕೇಪ್ ಆಗುವ ದಾರಿಯಲ್ಲಿ ದೇವರ ಹಿಪ್ಪರಗಿ ಬಳಿಯ ಪೆಟ್ರೋಲ್ ಬಂಕ್‌ನಲ್ಲಿ ಇವರು ತಮ್ಮ ಬೈಕಿಗೆ 100 ರೂಪಾಯಿ ಪೆಟ್ರೋಲ್ ಹಾಕಿಸಿಕೊಂಡಿದ್ದರು. ಕೈಯಲ್ಲಿ ಚಿಲ್ಲರೆ ಇಲ್ಲದ ಕಾರಣಕ್ಕೆ ಫೋನ್ ಪೇ (PhonePe) ಮೂಲಕ ಹಣ ಪಾವತಿಸಿದ್ದರು.
ಇತ್ತ ಜೆಸಿಬಿ ಕಳವಾದ ಬಗ್ಗೆ ದೂರು ದಾಖಲಿಸಿಕೊಂಡ ವಿಜಯಪುರ ಪೊಲೀಸರು ತನಿಖೆ ಶುರು ಮಾಡಿದರು. ಸಿಸಿಟಿವಿ ಚೆಕ್ ಮಾಡುತ್ತಾ ಹೋದಾಗ ಪೆಟ್ರೋಲ್ ಬಂಕ್‌ನಲ್ಲಿ ಇವರ ಚಲನವಲನ ಪತ್ತೆಯಾಯಿತು. ಪೊಲೀಸರು ತಕ್ಷಣವೇ ಬಂಕ್ ಮಾಲೀಕರಿಂದ ಆ ಫೋನ್ ಪೇ ನಂಬರ್ ಪಡೆದು ಟ್ರ್ಯಾಕ್ ಮಾಡಿದರು. ಅಷ್ಟೇ, ಕಳ್ಳರ ಅಡ್ರೆಸ್ ಫಿಕ್ಸ್ ಆಯಿತು!
ಪೊಲೀಸರ ಬಲೆಗೆ ಖದೀಮರು
ಫೋನ್ ಪೇ ನಂಬರ್ ಬೆನ್ನತ್ತಿದ ಪೊಲೀಸರು ಮಹಾರಾಷ್ಟ್ರಕ್ಕೆ ಹೋಗಿ ಇಬ್ಬರು ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ. ಕಳುವಾಗಿದ್ದ 40 ಲಕ್ಷದ ಜೆಸಿಬಿಯನ್ನು ವಾಪಸ್ ತಂದಿದ್ದಾರೆ. ಪೂಜೆ ಮಾಡಿ ನಿಲ್ಲಿಸಿದ್ದ ಗಾಡಿ ಕೈ ತಪ್ಪಿ ಹೋಯಿತು ಎಂದು ಕಂಗಾಲಾಗಿದ್ದ ಮಾಲೀಕ ಸೈಪನ್ ಬಾಗವಾನ್ ಈಗ ನಿಟ್ಟುಸಿರು ಬಿಟ್ಟಿದ್ದಾರೆ.