ಕಡಿಮೆ ಬಡ್ಡಿಯ ಆಸೆಗಾಗಿ ತಾಳಿ ಅಡವಿಟ್ಟು ಹಣ ಕಳೆದುಕೊಂಡ ವಿಜಯಪುರದ ಬಡ ಮಹಿಳೆಯರು!!

"ಮೋಸ ಹೋಗುವವರು ಇರುವವರೆಗೂ ಮೋಸ ಮಾಡುವವರು ಇದ್ದೇ ಇರುತ್ತಾರೆ" ಎಂಬ ನಾಣ್ಣುಡಿ ಸಾರ್ವಕಾಲಿಕ ಸತ್ಯ. ತಂತ್ರಜ್ಞಾನ ಎಷ್ಟೇ ಮುಂದುವರಿದರೂ, ಜನರಲ್ಲಿ ಎಷ್ಟೇ ಜಾಗೃತಿ ಮೂಡಿಸಿದರೂ ಸಹ ವಂಚಕರು ಹೊಸ ಹೊಸ ಹೈಟೆಕ್ ರೂಪದಲ್ಲಿ ಬಂದು ಅಮಾಯಕರನ್ನು ವಂಚಿಸುತ್ತಲೇ ಇದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ, ವಿಜಯಪುರ ಜಿಲ್ಲೆಯಲ್ಲಿ ಮತ್ತೊಂದು ಬೃಹತ್ ವಂಚನೆ (Fraud) ಜಾಲ ಬಯಲಿಗೆ ಬಂದಿದ್ದು, ನೂರಾರು ಗ್ರಾಮೀಣ ಮಹಿಳೆಯರು ಲಕ್ಷ ಲಕ್ಷ ಹಣ ಕಳೆದುಕೊಂಡು ಬೀದಿಗೆ ಬೀಳುವಂತಾಗಿದೆ.

50 ಪೈಸೆ ಬಡ್ಡಿ ಲೋನ್ ಆಮಿಷ | Photo Credit: CANVA
50 ಪೈಸೆ ಬಡ್ಡಿ ಲೋನ್ ಆಮಿಷ | Photo Credit: CANVA

ಕಡಿಮೆ ಬಡ್ಡಿ ದರದಲ್ಲಿ ಸಾಲ ಕೊಡಿಸುವುದಾಗಿ ನಂಬಿಸಿ, ನೂರಾರು ಅಮಾಯಕ ಗ್ರಾಮೀಣ ಮಹಿಳೆಯರಿಗೆ ಮಕ್ಮಲ್ ಟೋಪಿ ಹಾಕಿರುವ ಆಘಾತಕಾರಿ ಘಟನೆ ಜಿಲ್ಲೆಯಲ್ಲಿ ವರದಿಯಾಗಿದೆ. ಸಾಲದ ಆಸೆಗೆ ಬಿದ್ದ ನೂರಾರು ಜನ ಮುಂಗಡವಾಗಿ ಹಣ ಕಟ್ಟಿ, ಈಗ ತಮ್ಮ ಕಷ್ಟದ ದುಡಿಮೆಯ ಹಣವನ್ನು ಕಳೆದುಕೊಂಡು ಕಣ್ಣೀರು ಹಾಕುತ್ತಿದ್ದಾರೆ.

ಹಳ್ಳಿ ಹಳ್ಳಿಗಳಿಗೂ ವ್ಯಾಪಿಸಿದ ವಂಚನೆ ಜಾಲ

ವಿಜಯಪುರ ತಾಲೂಕಿನಾದ್ಯಂತ ಈ ಖದೀಮರು ತಮ್ಮ ಜಾಲವನ್ನು ವಿಸ್ತರಿಸಿದ್ದರು. ಜಿಲ್ಲೆಯ ಲೋಂಗಾವ, ಬಳ್ಳೊಳ್ಳಿ, ಕಪನಿಂಬರಗಿ, ಹೊರ್ತಿ, ತಿಕೋಟ ಮತ್ತು ಜಾಲಗೇರಿ ಸೇರಿದಂತೆ ಹಲವು ಹಳ್ಳಿಗಳ ನೂರಾರು ನಿವಾಸಿಗಳು ಈ ವಂಚಕರ ಮಾತುಗಳನ್ನು ನಂಬಿ ತಲೆಯ ಮೇಲೆ ಕೈ ಹೊತ್ತು ಕುಳಿತುಕೊಳ್ಳುವಂತಾಗಿದೆ.

ಬಡತನದ ಬೇಗೆಯಲ್ಲಿ ಬೇಯುತ್ತಿರುವ ಗ್ರಾಮೀಣ ಭಾಗದ ಜನರಿಗೆ ಆರ್ಥಿಕ ನೆರವು ನೀಡುವುದಾಗಿ ನಂಬಿಸಿದ ಈ ವಂಚಕರು, ಅವರನ್ನೇ ಟಾರ್ಗೆಟ್ ಮಾಡಿ ಕೋಟ್ಯಂತರ ರೂಪಾಯಿ ಲೂಟಿ ಮಾಡಿದ್ದಾರೆ. ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು, ಕೃಷಿ ಅಥವಾ ಸಣ್ಣ ಪುಟ್ಟ ವ್ಯಾಪಾರಕ್ಕೆ ಬಂಡವಾಳ ಸಿಗಬಹುದು ಎಂದು ನಂಬಿದ್ದ ಮುಗ್ಧ ಜನರಿಗೆ ಈಗ ದಿಕ್ಕು ತೋಚದಂತಾಗಿದೆ.

ನಂಬಿಸಲು ಖದೀಮರ ಹೈಟೆಕ್ ಪ್ಲ್ಯಾನ್

ಜನರನ್ನು ಸುಲಭವಾಗಿ ನಂಬಿಸಲು ಈ ಖದೀಮರು ಅತ್ಯಂತ ಚಾಣಾಕ್ಷತನದಿಂದ ಹೈಟೆಕ್ ಪ್ಲ್ಯಾನ್ ಮಾಡಿದ್ದರು. ಯಾರೋ ಬೀದಿಯಲ್ಲಿ ನಿಂತು ಸಾಲ ಕೊಡುತ್ತೇವೆ ಎಂದರೆ ಜನ ನಂಬುವುದಿಲ್ಲ ಎಂದು ಅರಿತಿದ್ದ ಇವರು, ನಗರದ ಹೃದಯಭಾಗದಲ್ಲೇ ದೊಡ್ಡದೊಂದು ನೆಲೆ ಕಂಡುಕೊಂಡಿದ್ದರು.

ಸುಸಜ್ಜಿತ ಕಚೇರಿ: ವಿಜಯಪುರ ನಗರದ ಪ್ರಮುಖ ಕೇಂದ್ರವಾದ ಬಂಜಾರಾ ಕ್ರಾಸ್ ಬಳಿಯ ‘ಪಾಟೀಲ್ ಪ್ಲಾನೆಟ್’ ಕಾಂಪ್ಲೆಕ್ಸ್ ಒಳಗೆ ಅತ್ಯಂತ ಸುಸಜ್ಜಿತ ಹಾಗೂ ಕಾರ್ಪೊರೇಟ್ ಶೈಲಿಯ ಕಚೇರಿಯನ್ನು ತೆರೆದಿದ್ದರು. ಇದನ್ನು ನೋಡಿದ ಜನ ಸಾಮಾನ್ಯರು ಇದು ನಿಜವಾದ ಫೈನಾನ್ಸ್ ಕಂಪನಿಯೇ ಇರಬೇಕು ಎಂದು ಸುಲಭವಾಗಿ ನಂಬಿಬಿಟ್ಟರು.

ಕಿಂಗ್‌ಪಿನ್‌ಗಳು ಯಾರು?: ಈ ಇಡೀ ವಂಚನೆ ಜಾಲದ ಸೂತ್ರಧಾರರು ವಿಜಯಪುರದ ಧೀರಜ್ ಸಿಂಗ್ ರಜಪೂತ್ ಹಾಗೂ ಲೋಂಗಾವ ಮೂಲದ ಬಂದೇನವಾಜ್ ಪಠಾಣ್ ಎಂದು ಗುರುತಿಸಲಾಗಿದೆ. ಇವರಿಬ್ಬರೇ ಸೇರಿಕೊಂಡು ಗ್ರಾಮೀಣ ಭಾಗದ ಜನರನ್ನು ಸೆಳೆಯಲು ನಕಲಿ ಏಜೆಂಟ್‌ಗಳನ್ನು ನೇಮಿಸಿಕೊಂಡು ಈ ಜಾಲವನ್ನು ಸೃಷ್ಟಿಸಿದ್ದರು.

ಕೇವಲ 50 ಪೈಸೆ ಬಡ್ಡಿಯ ಆಮಿಷ

ಇತ್ತೀಚಿನ ದಿನಗಳಲ್ಲಿ ಬ್ಯಾಂಕುಗಳಲ್ಲಿ ಸಾಲ ಸಿಗಬೇಕಾದರೆ ನೂರಾರು ದಾಖಲೆಗಳು, ಸಿಬಿಲ್ ಸ್ಕೋರ್ ಹಾಗೂ ಅತಿ ಹೆಚ್ಚು ಬಡ್ಡಿ ದರ ಇರುತ್ತದೆ. ಇದನ್ನೇ ಬಂಡವಾಳ ಮಾಡಿಕೊಂಡ ಈ ವಂಚಕರು, "ಕೇವಲ ನೂರಕ್ಕೆ 50 ಪೈಸೆ ಬಡ್ಡಿ" ದರದಲ್ಲಿ ಲೋನ್ ಕೊಡುವುದಾಗಿ ಭರವಸೆ ನೀಡಿದ್ದರು. ಇಷ್ಟು ಕಡಿಮೆ ಬಡ್ಡಿಗೆ ಎಲ್ಲೂ ಸಾಲ ಸಿಗುವುದಿಲ್ಲ ಎಂದು ಭಾವಿಸಿದ ಜನ ಇವರ ಬಲೆಗೆ ಬಿದ್ದರು.

"ನಿಮಗೆ ಲಕ್ಷಾಂತರ ರೂಪಾಯಿ ಲೋನ್ ಮಂಜೂರಾಗಬೇಕಾದರೆ, ನೀವು ಮೊದಲು ಮೂರ್ನಾಲ್ಕು ಕಂತಿನ ಮುಂಗಡ ಹಣವನ್ನು (Advance/Process Fee) ಕಟ್ಟಬೇಕು. ಆ ಪ್ರಕ್ರಿಯೆ ಮುಗಿದ ತಕ್ಷಣ ನಿಮ್ಮ ಬ್ಯಾಂಕ್ ಬ್ಯಾಂಕ್ ಖಾತೆಗೆ ನೇರವಾಗಿ ಲೋನ್ ಹಣ ಜಮೆಯಾಗುತ್ತದೆ."

ಹೆಚ್ಚಿನ ಲೋನ್ ಸಿಗುತ್ತದೆ ಎಂಬ ಆಸೆಗೆ ಬಿದ್ದ ಹಳ್ಳಿಗರು ತಡ ಮಾಡದೆ ತಮ್ಮಲ್ಲಿದ್ದ ಹಣವನ್ನು ತಂದು ಕೊಟ್ಟಿದ್ದಾರೆ. ಒಬ್ಬೊಬ್ಬರಿಂದ 50 ಸಾವಿರ ರೂಪಾಯಿಯಿಂದ ಹಿಡಿದು 1 ಲಕ್ಷ ರೂಪಾಯಿವರೆಗೂ ಮುಂಗಡ ಹಣವನ್ನು ವಸೂಲಿ ಮಾಡಲಾಗಿದೆ.

ತಾಳಿ ಅಡವಿಟ್ಟು ಹಣ ತಂದ ಮಹಿಳೆಯರು

ಈ ವಂಚನೆ ಜಾಲದ ಅತ್ಯಂತ ಕರುಣಾಜನಕ ಮತ್ತು ದುರಂತದ ಸಂಗತಿ ಎಂದರೆ, ಸಾಲ ಸಿಕ್ಕರೆ ತಮ್ಮ ಸಂಸಾರದ ಕಷ್ಟಗಳು ತೀರುತ್ತವೆ, ಬದುಕು ಹಸನಾಗಬಹುದು ಎಂಬ ಆಸೆಯಿಂದ ಗ್ರಾಮೀಣ ಭಾಗದ ಮಹಿಳೆಯರು ತಮ್ಮ ಅತ್ಯಂತ ಪವಿತ್ರವಾದ ಮಂಗಳಸೂತ್ರ (ತಾಳಿ) ಹಾಗೂ ಬಂಗಾರದ ಒಡವೆಗಳನ್ನು ಅಡವಿಟ್ಟು ತಂದು ಹಣ ಕಟ್ಟಿದ್ದಾರೆ.

ಮಹಿಳೆಯರಿಗೆ ಯಾವುದೇ ಅನುಮಾನ ಬಾರದಿರಲಿ ಎಂದು ಈ ವಂಚಕರು ಕಂಪನಿಯ ಹೆಸರಿನ ನಕಲಿ ರಸೀದಿಗಳು, ನಕಲಿ ಬಿಲ್‌ಗಳು ಹಾಗೂ ನಕಲಿ ಬಾಂಡ್‌ ಪೇಪರ್‌ಗಳನ್ನು ಸಹ ಸೃಷ್ಟಿಸಿ ನೀಡಿದ್ದರು. ಸದ್ಯದ ಮಾಹಿತಿ ಪ್ರಕಾರ, ಅಮಾಯಕರಿಂದ ಸುಮಾರು ಕೋಟಿಗೂ ಅಧಿಕ ಹಣ ಸಂಗ್ರಹಿಸಿರುವ ಈ ಖದೀಮರು ಕಚೇರಿಗೆ ಬೀಗ ಹಾಕಿ, ರಾತ್ರೋರಾತ್ರಿ ಊರು ಬಿಟ್ಟು ಪರಾರಿಯಾಗಿದ್ದಾರೆ.

ಎಸ್​ಪಿ ಕಚೇರಿ ಮೆಟ್ಟಿಲೇರಿದ ಸಂತ್ರಸ್ತರು; ತನಿಖೆ ಚುರುಕು

ಅತ್ತ ಲೋನ್​​ ಭರವಸೆಯೂ ಇಲ್ಲ, ಇತ್ತ ಕಷ್ಟಪಟ್ಟು ಒಡವೆ ಅಡವಿಟ್ಟು ಕಟ್ಟಿದ ಹಣವೂ ಇಲ್ಲದೇ ಕಂಗಾಲಾದ ಮಹಿಳೆಯರು ಮತ್ತು ಸಂತ್ರಸ್ತರು ಒಟ್ಟಾಗಿ ವಿಜಯಪುರ ಎಸ್​​ಪಿ ಕಚೇರಿಯ ಮೆಟ್ಟಿಲು ಹತ್ತಿದ್ದಾರೆ. ಕಚೇರಿ ಮುಂದೆ ಜಮಾಯಿಸಿದ ನೂರಾರು ಮಹಿಳೆಯರು ತಮಗೆ ನ್ಯಾಯ ಕೊಡಿಸುವಂತೆ ಕಣ್ಣೀರು ಹಾಕುತ್ತಾ ಅಳಲು ತೋಡಿಕೊಂಡಿದ್ದಾರೆ.

ವಿಷಯದ ಗಾಂಭೀರ್ಯತೆಯನ್ನು ತಕ್ಷಣವೇ ಅರಿತಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಲಕ್ಷ್ಮಣ ನಿಂಬರಗಿ ಅವರು ಸಂತ್ರಸ್ತರಿಗೆ ಧೈರ್ಯ ತುಂಬಿದ್ದಾರೆ. ವಂಚನೆಗೆ ಒಳಗಾದ ಪ್ರತಿಯೊಬ್ಬರಿಂದಲೂ ಪ್ರತ್ಯೇಕ ದೂರುಗಳನ್ನು ದಾಖಲಿಸಿಕೊಳ್ಳಲು ಮತ್ತು ತಕ್ಷಣವೇ ತನಿಖೆ ಆರಂಭಿಸಲು ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳಿಗೆ ಕಡಕ್ ಸೂಚನೆ ನೀಡಿದ್ದಾರೆ. ಸದ್ಯ ಪೊಲೀಸರು ವಿಶೇಷ ತಂಡವನ್ನು ರಚಿಸಿ, ತಲೆಮರೆಸಿಕೊಂಡಿರುವ ಖದೀಮರಿಗಾಗಿ ತೀವ್ರ ಜಾಲ ಬೀಸಿದ್ದಾರೆ.

ಸಾರ್ವಜನಿಕರೇ ಎಚ್ಚರ

ಈ ಘಟನೆಯು ಸಾರ್ವಜನಿಕರಿಗೆ ಮತ್ತೊಮ್ಮೆ ಎಚ್ಚರಿಕೆಯ ಗಂಟೆಯಾಗಿದೆ. ಯಾವುದೇ ಅಧಿಕೃತ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳು ಲೋನ್ ನೀಡುವ ಮುನ್ನ ಇಷ್ಟೊಂದು ದೊಡ್ಡ ಮೊತ್ತದ ಮುಂಗಡ ಹಣವನ್ನು ನಗದು ರೂಪದಲ್ಲಿ ಕೇಳುವುದಿಲ್ಲ. ಅದರಲ್ಲೂ ಅತಿ ಕಡಿಮೆ ಬಡ್ಡಿಯ ಆಮಿಷ ಒಡ್ಡುವ ಖಾಸಗಿ ವ್ಯಕ್ತಿಗಳು ಅಥವಾ ಸಂಸ್ಥೆಗಳ ಬಗ್ಗೆ ಸಾರ್ವಜನಿಕರು ತೀವ್ರ ಜಾಗ್ರತೆ ವಹಿಸಬೇಕಾಗಿದೆ. ಸದ್ಯ ಸಂತ್ರಸ್ತರು ತಮ್ಮ ಹಣ ವಾಪಸ್ ಸಿಗುವ ಹಾಗೂ ವಂಚಕರಿಗೆ ತಕ್ಕ ಶಿಕ್ಷೆಯಾಗುವ ದಿನಗಳಿಗಾಗಿ ಕಾಯುತ್ತಿದ್ದಾರೆ.

Latest News