ಬೆಂಗಳೂರಿನಲ್ಲಿ ಮನೆ ಲೀಸ್ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ವಂಚನೆ - 'ಅರ್ಬನ್ ಸ್ಟ್ಯಾಂಜ್' ಕಂಪನಿ ಮೋಸ ಬಯಲು!!

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮನೆ ಲೀಸ್‌ಗೆ (ಭೋಗ್ಯ) ಪಡೆಯಬೇಕು ಎಂದು ಹೊರಟ ಅಮಾಯಕರಿಗೆ ಬೃಹತ್ ಮೋಸ ಜಾಲವೊಂದು ಕೋಟ್ಯಂತರ ರೂಪಾಯಿ ನಾಮ ಹಾಕಿರುವ ಆಘಾರ್ಥಕಾರಿ ಘಟನೆ ಬೆಳಕಿಗೆ ಬಂದಿದೆ. 'ಅರ್ಬನ್ ಸ್ಟ್ಯಾಂಜ್' ಎಂಬ ಖಾಸಗಿ ಕಂಪನಿಯು ಮೊಬೈಲ್ ಆ್ಯಪ್ ಮತ್ತು ಇನ್‌ಸ್ಟಾಗ್ರಾಮ್‌ನಂತಹ ಪ್ರಮುಖ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಗ್ರಾಹಕರನ್ನು ಬುಟ್ಟಿಗೆ ಹಾಕಿಕೊಂಡಿತ್ತು.

ಮುಂಗಡ ಹಣ ಪಡೆದು ಕೈಕೊಟ್ಟ ವಂಚಕರು | Photo Credit: CANVA
ಮುಂಗಡ ಹಣ ಪಡೆದು ಕೈಕೊಟ್ಟ ವಂಚಕರು | Photo Credit: CANVA

"ನಿಮಗೆ ಬೇಕಾದ ಜಾಗದಲ್ಲಿ ಸೂಕ್ತವಾದ ಮನೆಗಳನ್ನು ಭೋಗ್ಯಕ್ಕೆ ಕೊಡಿಸುತ್ತೇವೆ" ಎಂದು ಬಣ್ಣಬಣ್ಣದ ಮಾತುಗಳನ್ನಾಡಿ, ಸಾರ್ವಜನಿಕರಿಂದ ಕೋಟ್ಯಂತರ ರೂಪಾಯಿ ವಸೂಲಿ ಮಾಡಿ ಈಗ ಕೈಕೊಟ್ಟಿದೆ. ಇತ್ತ ಮನೆಯೂ ಸಿಗದೆ, ಅತ್ತ ಕೊಟ್ಟ ಹಣವೂ ವಾಪಸ್ ಬಾರದೆ ನೂರಾರು ಸಂತ್ರಸ್ತರು ಕಂಗಾಲಾಗಿದ್ದು, ನ್ಯಾಯ ಕೊಡಿಸುವಂತೆ ಎಚ್‌ಎಸ್‌ಆರ್ ಲೇಔಟ್ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.

ಈ ವಂಚನೆ ಜಾಲದ ವಿರುದ್ಧ ಮೇ 9ರಂದು ಎಚ್‌ಎಸ್‌ಆರ್ ಲೇಔಟ್ ಠಾಣೆಯಲ್ಲಿ ಪ್ರಮುಖವಾಗಿ 7 ಮಂದಿ ದೂರು ದಾಖಲಿಸಿದ್ದಾರೆ. ಈ ಏಳು ಜನರಿಂದಲೇ ಬರೋಬ್ಬರಿ 1.09 ಕೋಟಿ ರೂಪಾಯಿ ಪೀಕಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಸದ್ಯ ಸಂತ್ರಸ್ತರ ನೀಡಿದ ದೂರಿನ ಆಧಾರದ ಮೇಲೆ ಕಂಪನಿಯ ಮಾಲೀಕ ನಿತೀನ್ ಹೊನ್ನೇಗೌಡ, ಹಾಗೂ ಅವರ ಸಿಬ್ಬಂದಿಗಳಾದ ಮದನ್‌ರಾಜ್ ಮತ್ತು ಶಿವಕುಮಾರ್ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.

ಸಂತ್ರಸ್ತರ ಪೈಕಿ ಮೈತ್ರಿ ಲೇಔಟ್‌ನ ಕಲೀದ್ ಅಲಿ ಖಾನ್ ಎಂಬುವರು 17 ಲಕ್ಷ ರೂ., ಹೈದರಾಬಾದ್ ಮೂಲದ ಬರ್ಕತ್ ಉನ್ನಿಸಾ 27 ಲಕ್ಷ ರೂ., ದೊಡ್ಡಕಲ್ಲಸಂದ್ರದ ಸ್ವಪ್ನಿಲ್ ಜಾರ್ಜ್ 22 ಲಕ್ಷ ರೂ., ಸಬ್‌ಸ್ಟೈನ್ ರಾಜ್ 19 ಲಕ್ಷ ರೂ., ಬೊಮ್ಮನಹಳ್ಳಿಯ ಖುಷ್ಬು ಬೇಗಂ 11 ಲಕ್ಷ ರೂ. ಹಾಗೂ ಹೊಂಗಸಂದ್ರದ ಮಂಜುಶಾ ಜಗದೀಶ್ ಎಂಬುವರು 13 ಲಕ್ಷ ರೂಪಾಯಿ ಕಳೆದುಕೊಂಡಿರುವುದು ಎಫ್‌ಐಆರ್‌ನಲ್ಲಿ ದಾಖಲಾಗಿದೆ.

ವರದಿಗಳ ಪ್ರಕಾರ, ಈ ವಂಚಕರು ಕೆಲಸ ಮಾಡುವ ಶೈಲಿಯೇ ವಿಚಿತ್ರವಾಗಿತ್ತು. ಲೀಸ್‌ಗೆ ಮನೆ ಹುಡುಕುವ ಅಮಾಯಕರನ್ನು ಗುರಿಯಾಗಿಸಿಕೊಂಡು ಅವರಿಂದ ಲಕ್ಷಾಂತರ ರೂಪಾಯಿ ಮುಂಗಡವಾಗಿ ಪಡೆಯುತ್ತಿದ್ದರು. ಆ ನಂತರ ಮನೆ ಮಾಲೀಕರಿಗೆ ಮೊದಲ ಆರು ತಿಂಗಳು ತಾವೇ ಸರಿಯಾದ ಸಮಯಕ್ಕೆ ಬಾಡಿಗೆ ಪಾವತಿಸುತ್ತಿದ್ದರು. ಇದರಿಂದ ಬಾಡಿಗೆದಾರರು ಹಾಗೂ ಮಾಲೀಕರು ಕಂಪನಿಯನ್ನು ಕುರುಡಾಗಿ ನಂಬುತ್ತಿದ್ದರು. ಆದರೆ, ಆರು ತಿಂಗಳ ನಂತರ ವಂಚಕರು ಬಾಡಿಗೆ ನೀಡುವುದನ್ನು ಏಕಾಏಕಿ ನಿಲ್ಲಿಸಿಬಿಡುತ್ತಿದ್ದರು.

ಇದರಿಂದ ಆಕ್ರೋಶಗೊಳ್ಳುವ ಮನೆ ಮಾಲೀಕರು, ಮನೆಗೆ ಬಂದಿರುವ ಸಂತ್ರಸ್ತರಿಗೆ "ಬಾಡಿಗೆ ಪಾವತಿಸಿ, ಇಲ್ಲವೇ ತಕ್ಷಣ ಮನೆ ಖಾಲಿ ಮಾಡಿ" ಎಂದು ಒತ್ತಡ ಹೇರುತ್ತಿದ್ದರು. ವಿಷಯ ತಿಳಿಯಲು ಸಂತ್ರಸ್ತರು ಕಂಪನಿಯ ಕಚೇರಿಗೆ ಹೋದರೆ, ವಂಚಕರು ಅವಾಚ್ಯ ಶಬ್ದಗಳಿಂದ ನಿಂದಿಸಿ "ಹಣ ಕೊಡಲ್ಲ, ಏನು ಮಾಡಿಕೊಳ್ಳುತ್ತೀರೋ ಮಾಡಿಕೊಳ್ಳಿ" ಎಂದು ಬೆದರಿಕೆ ಹಾಕುತ್ತಿದ್ದರು ಎಂದು ಸಂತ್ರಸ್ತರು ಅಳಲು ತೋಡಿಕೊಂಡಿದ್ದಾರೆ.

ಸ್ವಂತ ಊರುಗಳನ್ನು ಬಿಟ್ಟು, ಬದುಕಿನ ಬಂಡಿ ಸಾಗಿಸಲು ಬೆಂಗಳೂರಿಗೆ ಬಂದಿದ್ದ ಕುಟುಂಬಗಳು ಈಗ ಈ ವಂಚನೆಯ ಜಾಲಕ್ಕೆ ಸಿಲುಕಿ ಬೀದಿಗೆ ಬಿದ್ದಿವೆ. ಮನೆ ಲೀಸ್‌ಗೆ ಪಡೆಯಲು ವಂಚಕರಿಗೆ ಹಣ ನೀಡಲು ಹಲವರು ಪತ್ನಿಯ ಮಾಂಗಲ್ಯ ಸರವನ್ನು ಬ್ಯಾಂಕ್‌ನಲ್ಲಿ ಅಡವಿಟ್ಟಿದ್ದಾರೆ. ಇನ್ನು ಕೆಲವರು ಸ್ನೇಹಿತರ ಬಳಿ ಕೈಸಾಲ ಮಾಡಿದ್ದಾರೆ, ಇನ್ನು ಕೆಲವರಂತೂ ಬ್ಯಾಂಕ್‌ನಲ್ಲಿ ಭಾರೀ ಬಡ್ಡಿಗೆ ಸಾಲ ಮಾಡಿ ವಂಚಕರ ಕೈಗೆ ಹಣ ನೀಡಿದ್ದಾರೆ. ಈಗ ಮನೆ ಮಾಲೀಕರು ಖಾಲಿ ಮಾಡಲು ಹೇಳುತ್ತಿದ್ದು, ಸಾಲದ ಸುಳಿಯಲ್ಲಿ ಸಿಲುಕಿರುವ ಈ ಕುಟುಂಬಗಳಿಗೆ ಮುಂದೇನು ಮಾಡಬೇಕೆಂದು ತೋಚದಂತಾಗಿದೆ.

ಪೊಲೀಸರ ಅನುಮಾನದ ಪ್ರಕಾರ, ಕೇವಲ 7 ಜನರಿಂದಲೇ 1 ಕೋಟಿಗೂ ಅಧಿಕ ಹಣ ಲಪಟಾಯಿಸಿರುವ ಈ ಕಂಪನಿ, ಬೆಂಗಳೂರಿನಾದ್ಯಂತ ನೂರಾರು ಕೋಟಿ ರೂಪಾಯಿ ವಂಚಿಸಿರುವ ಸಾಧ್ಯತೆಯಿದೆ. ಮರ್ಯಾದೆಗೆ ಅಂಜಿ ಅಥವಾ ಕಂಪನಿಯವರು ಹಣ ವಾಪಸ್ ಕೊಡುತ್ತಾರೆಂಬ ಹುಸಿ ಭರವಸೆಯಿಂದ ಪೊಲೀಸ್ ಠಾಣೆಗೆ ಬಾರದವರ ಸಂಖ್ಯೆ ದೊಡ್ಡದಿದೆ.

ಇನ್ನು ಬೆಂಗಳೂರಿನಲ್ಲಿ ಇಂತಹ ಲೀಸ್ ವಂಚನೆ ಇದೊಂದೇ ಅಲ್ಲ; ಇತ್ತೀಚೆಗಷ್ಟೇ ಇಂದಿರಾನಗರ ಹಾಗೂ ಆವಲಹಳ್ಳಿ ಪೊಲೀಸ್ ಠಾಣೆಗಳಲ್ಲೂ ಇದೇ ಮಾದರಿಯ ಬೃಹತ್ ವಂಚನೆ ಪ್ರಕರಣಗಳು ದಾಖಲಾಗಿದ್ದವು. ಸಾರ್ವಜನಿಕರು ಮಧ್ಯವರ್ತಿ ಆ್ಯಪ್‌ಗಳು ಹಾಗೂ ಖಾಸಗಿ ಕಂಪನಿಗಳ ಬಣ್ಣದ ಮಾತುಗಳಿಗೆ ಮರುಳಾಗದೆ, ಮನೆ ಲೀಸ್‌ಗೆ ಪಡೆಯುವಾಗ ಮನೆ ಮಾಲೀಕರೊಂದಿಗೆ ನೇರ ವ್ಯವಹಾರ ನಡೆಸುವುದು ಮತ್ತು ಅಧಿಕೃತ ದಾಖಲೆಗಳನ್ನು ಪರಿಶೀಲಿಸುವುದು ಅತ್ಯಂತ ಅಗತ್ಯವಾಗಿದೆ.

Latest News