ನಮ್ಮ ಬೆಂಗಳೂರಿನಲ್ಲಿ ಸಂಜೆ ಆಯ್ತು ಅಂದ್ರೆ ಸಾಕು, ಬೀದಿಬದಿಯ ಗಾಡಿಗಳ ಹತ್ತಿರ ಜನಜಂಗುಳಿ ಶುರುವಾಗುತ್ತೆ. ಬಿಸಿ ಬಿಸಿ ಬಜ್ಜಿ, ಬೋಂಡಾ ಇರಲಿ ಅಥವಾ ಮಸ್ತ್ ಮಸಾಲ ದೋಸೆ ಇರಲಿ, ಇಲ್ಲಿನ ಆಹಾರಕ್ಕೆ ಒಂದು ಪ್ರತ್ಯೇಕ ಫ್ಯಾನ್ ಬೇಸ್ ಇದೆ. ಆದ್ರೆ, ಈ ವ್ಯಾಪಾರ ಮಾಡುವವರ ಕಷ್ಟ ಮಾತ್ರ ಯಾರಿಗೂ ಕಾಣಲ್ಲ. ಈಗ ಈ ಸಣ್ಣ ವ್ಯಾಪಾರಿಗಳ ಕೈ ಹಿಡಿಯಲು ಉದ್ಯಮ್ ವ್ಯಾಪಾರ್ ಅನ್ನೋ ಒಂದು ಹೊಸ ಯೋಜನೆ ಬಂದಿದ್ದು, ಇದು ಬೆಂಗಳೂರಿನ ಫುಡ್ ಸ್ಟಾಲ್ ಮಾಲೀಕರಿಗೆ ಹೊಸ ಚೈತನ್ಯ ನೀಡಿದೆ.
ಇದು ಬರೀ ಸಾಲ ಕೊಡುವ ಯೋಜನೆಯಲ್ಲ, ಬದಲಿಗೆ ವ್ಯಾಪಾರವನ್ನು ಹೇಗೆ ಸ್ಮಾರ್ಟ್ ಆಗಿ ಮಾಡಬೇಕು ಅಂತ ಹೇಳಿಕೊಡುವ ಉಪಕ್ರಮ. ಉದ್ಯಮ್ ಲರ್ನಿಂಗ್ ಫೌಂಡೇಶನ್ ನಿಂದ ಆರಂಭವಾದ ಈ ಯೋಜನೆಯು ಬೀದಿಬದಿ ವ್ಯಾಪಾರಿಗಳಿಗೆ ಪ್ರಾಯೋಗಿಕ ತರಬೇತಿ, ಬ್ರಾಂಡಿಂಗ್ ಮತ್ತು ಅಂಗಡಿ ನವೀಕರಣಕ್ಕೆ ಸಹಾಯ ಮಾಡ್ತಿದೆ. 2025ರಲ್ಲಿ ಶುರುವಾದ ಈ ಪ್ಲ್ಯಾನ್‌ನಿಂದ ಈಗಾಗಲೇ ನಗರದ 350ಕ್ಕೂ ಹೆಚ್ಚು ವ್ಯಾಪಾರಿಗಳು ಲಾಭ ಪಡೆದಿದ್ದಾರೆ.
ಆದಾಯ ಹೆಚ್ಚಿಸಲು ಸಿಂಪಲ್ ಟ್ರಿಕ್ಸ್
ಈ ಯೋಜನೆಯ ಅಡಿ ವ್ಯಾಪಾರಿಗಳಿಗೆ ಸಣ್ಣ ಸಣ್ಣ ಬದಲಾವಣೆಗಳ ಮೂಲಕ ದೊಡ್ಡ ಲಾಭ ಮಾಡಿಕೊಡಲಾಗುತ್ತಿದೆ.
ಬೆಳಕಿನ ವ್ಯವಸ್ಥೆ - ಅಂಗಡಿ ಕಂಡ ತಕ್ಷಣ ಗ್ರಾಹಕರು ಬರಬೇಕು ಅಂದ್ರೆ ಒಳ್ಳೆ ಲೈಟಿಂಗ್ ಇರಬೇಕು. ಈ ಯೋಜನೆ ಅಡಿಯಲ್ಲಿ ಉತ್ತಮ ಲೈಟಿಂಗ್ ಮತ್ತು ಬ್ರಾಂಡಿಂಗ್ ಬೋರ್ಡ್‌ಗಳನ್ನು ಹಾಕಿಕೊಡಲಾಗುತ್ತಿದೆ.
ಕ್ಲೀನ್ ಅಂಡ್ ನೀಟ್ - ಆಹಾರದ ಸ್ವಚ್ಛತೆ ಮತ್ತು ಮೆನು ಕಾರ್ಡ್‌ಗಳನ್ನು ಹೇಗೆ ಇಡಬೇಕು ಅನ್ನೋದರ ಬಗ್ಗೆಯೂ ಮಾರ್ಗದರ್ಶನ ನೀಡಲಾಗ್ತಿದೆ.
ಶೆಡ್ ಮತ್ತು ಆಸನ - ಮಳೆ ಬಂದಾಗ ವ್ಯಾಪಾರ ನಿಲ್ಲಬಾರದು ಅಂತ ವಾಟರ್‌ಪ್ರೂಫ್ ಶೆಡ್‌ಗಳು ಮತ್ತು ಗ್ರಾಹಕರು ಕುಳಿತು ತಿನ್ನಲು ಬೆಂಚ್‌ಗಳ ವ್ಯವಸ್ಥೆ ಮಾಡಲಾಗುತ್ತಿದೆ.
ಡಿಜಿಟಲ್ ಪವರ್ - ಇಂದಿನ ಕಾಲಕ್ಕೆ ತಕ್ಕಂತೆ ಡಿಜಿಟಲ್ ಪೇಮೆಂಟ್ ಮತ್ತು ಪ್ರಚಾರಕ್ಕೂ ಈ ಟೀಮ್ ಸಹಾಯ ಮಾಡ್ತಿದೆ.
ಇದರ ರಿಸಲ್ಟ್ ಹೇಗಿದೆ ಅಂದ್ರೆ, ಈ ಯೋಜನೆಗೆ ಸೇರಿದ ವ್ಯಾಪಾರಿಗಳ ಆದಾಯದಲ್ಲಿ ಸರಾಸರಿ ಶೇ.33ರಷ್ಟು ಹೆಚ್ಚಳ ಕಂಡಿದೆ! ಗ್ರಾಹಕರ ಸಂಖ್ಯೆಯೂ ಶೇ.24ರಷ್ಟು ಏರಿಕೆಯಾಗಿದೆ ಅಂದ್ರೆ ಸುಮ್ಮನೆ ಅಲ್ಲ.
ರೇಣುಕಾ ದೇವಿ ಅವರ ಸಕ್ಸಸ್ ಸ್ಟೋರಿ
ಕೊಣನಕುಂಟೆ ಕ್ರಾಸ್ ಹತ್ತಿರ ಅಂಗಡಿ ಇಟ್ಟುಕೊಂಡಿರೋ ರೇಣುಕಾ ದೇವಿ ಅವರದ್ದು ಒಂದು ಬೆಸ್ಟ್ ಎಕ್ಸಾಂಪಲ್. ಅವರ ಹತ್ತಿರ ಜನ ಜಾಸ್ತಿ ಇದ್ರೂ, ಅಡುಗೆ ಬೇಗ ಮಾಡಲು ಸಾಧ್ಯವಾಗ್ತಿರಲಿಲ್ಲ. ಉದ್ಯಮ್ ವ್ಯಾಪಾರ್ ಟೀಮ್ ಅವರ ಹಳೆಯ ಎರಡು ಬರ್ನರ್ ಸ್ಟೌವ್ ಬದಲು, ಹೊಸದಾಗಿ ಮೂರು ಬರ್ನರ್ ಸ್ಟೌವ್ ಅಳವಡಿಸಲು ಸಹಾಯ ಮಾಡಿತು.
ಹಿಂದೆ ಗರಿಷ್ಠ ಸಮಯದಲ್ಲಿ ಕಸ್ಟಮರ್‌ಗೆ ಫುಡ್ ಕೊಡೋಕೆ ಲೇಟ್ ಆಗ್ತಿತ್ತು. ಈಗ ಮೂರು ಸ್ಟೌವ್ ಇರೋದ್ರಿಂದ ಯಾರೂ ಕಾಯೋ ಹಾಗಿಲ್ಲ. ಜನ ಖುಷಿಯಾಗಿದ್ದಾರೆ, ನನಗೂ ನಾಲ್ಕು ಕಾಸು ಜಾಸ್ತಿ ಬರ್ತಿದೆ, ಅಂತ ರೇಣುಕಾ ದೇವಿ ಅವರು ಸಂಭ್ರಮದಿಂದ ಹೇಳ್ತಾರೆ.
5,000 ವ್ಯಾಪಾರಿಗಳ ಸಬಲೀಕರಣವೇ ಗುರಿ!
ಉದ್ಯಮ್ ವ್ಯಾಪಾರ್ ನಿರ್ದೇಶಕ ಕೃಷ್ಣನ್ ರಂಗನಾಥನ್ ಅವರ ಪ್ರಕಾರ, ಭಾರತದಲ್ಲಿ ಸುಮಾರು 50 ಲಕ್ಷ ಬೀದಿಬದಿ ವ್ಯಾಪಾರಿಗಳಿದ್ದಾರೆ. ಬೆಂಗಳೂರಿನಲ್ಲೇ ಪ್ರತಿದಿನ ಸುಮಾರು 60 ರಿಂದ 80 ಲಕ್ಷ ಜನ ರಸ್ತೆ ಬದಿಯ ಫುಡ್ ಸವಿಯುತ್ತಾರೆ. ಆದರೆ ಹೆಚ್ಚಿನ ವ್ಯಾಪಾರಿಗಳು ತಿಂಗಳಿಗೆ 30 ಸಾವಿರಕ್ಕಿಂತ ಕಡಿಮೆ ಗಳಿಸುತ್ತಿದ್ದಾರೆ.
ಹಾಗಾಗಿ ಮುಂದಿನ ಮೂರು ವರ್ಷಗಳಲ್ಲಿ ಬೆಂಗಳೂರಿನ 5,000 ವ್ಯಾಪಾರಿಗಳನ್ನು ಈ ರೀತಿ ಸಬಲಗೊಳಿಸೋದು ಸಂಸ್ಥೆಯ ಗುರಿಯಾಗಿದೆ. ವಿಶೇಷ ಅಂದ್ರೆ ಇದು ಲಾಭರಹಿತ ಉದ್ದೇಶದ್ದಾಗಿದ್ದು, ವ್ಯಾಪಾರಿಗಳಿಂದ ನಯಾಪೈಸೆ ಶುಲ್ಕ ವಸೂಲಿ ಮಾಡಲಾಗುವುದಿಲ್ಲ.
ಬೀದಿಬದಿ ವ್ಯಾಪಾರವೂ ಒಂದು ದೊಡ್ಡ ಉದ್ಯಮವೇ. ಅದಕ್ಕೆ ಸ್ವಲ್ಪ 'ಟಚ್ ಅಪ್' ಮತ್ತು ಮಾರ್ಗದರ್ಶನ ಸಿಕ್ಕರೆ ಸಾವಿರಾರು ಕುಟುಂಬಗಳು ನೆಮ್ಮದಿಯಾಗಿ ಬದುಕಬಹುದು ಅನ್ನೋದಕ್ಕೆ 'ಉದ್ಯಮ್ ವ್ಯಾಪಾರ್' ಯೋಜನೆ ಒಂದು ಮಾದರಿ. ನಮ್ಮ ಬೆಂಗಳೂರಿನ ಸಣ್ಣ ಉದ್ಯಮಿಗಳು ಇನ್ನು ಮುಂದೆ ದೊಡ್ಡ ಮಟ್ಟಕ್ಕೆ ಬೆಳೆಯಲಿ ಅನ್ನೋದೇ ಎಲ್ಲರ ಹಾರೈಕೆ.