ದೇವಸ್ಥಾನದ ಹುಂಡಿ ಕದ್ದವರನ್ನ ಬಿಡದ ಶಂಕರನಾರಾಯಣ ಪೊಲೀಸರು - ಸಿನಿಮೀಯ ಶೈಲಿಯಲ್ಲಿ ಆರೋಪಿಗಳ ಅರೆಸ್ಟ್!!

ದೇವಸ್ಥಾನದ ಒಳಗೆ ನುಗ್ಗಿ ಭಕ್ತರು ಕಾಣಿಕೆ ಹಾಕಿದ್ದ ಹುಂಡಿಯನ್ನೇ ಹೊತ್ತೊಯ್ದಿದ್ದ ಇಬ್ಬರು ಕಿರಾತಕರನ್ನು ಪೊಲೀಸರು ಸಿನಿಮೀಯ ಶೈಲಿಯಲ್ಲಿ ಬಂಧಿಸಿದ್ದಾರೆ. ಉಡುಪಿ ಜಿಲ್ಲೆಯ ಶಂಕರನಾರಾಯಣ ಪೊಲೀಸರ ಈ ಚುರುಕಿನ ಕಾರ್ಯಾಚರಣೆಗೆ ಸಾರ್ವಜನಿಕ ವಲಯದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಉಮಾಮಹೇಶ್ವರ ದೇವಸ್ಥಾನದ ಹರಕೆ ಹುಂಡಿ ಹೊತ್ತೊಯ್ದಿದ್ದ ಸಂದೀಪ್ ಮತ್ತು ಮುತ್ತಪ್ಪ
ಉಮಾಮಹೇಶ್ವರ ದೇವಸ್ಥಾನದ ಹರಕೆ ಹುಂಡಿ ಹೊತ್ತೊಯ್ದಿದ್ದ ಸಂದೀಪ್ ಮತ್ತು ಮುತ್ತಪ್ಪ

ಕಳೆದ ಏಪ್ರಿಲ್ 20ರಂದು ಬೆಳಿಗ್ಗೆ ಸುಮಾರು 7:56ರ ಸಮಯದಲ್ಲಿ ಕುಂದಾಪುರ ತಾಲೂಕಿನ ಅಜ್ರಿ ಗ್ರಾಮದ ಪ್ರಸಿದ್ಧ ಉಮಾಮಹೇಶ್ವರ ದೇವಸ್ಥಾನದಲ್ಲಿ ಕಳ್ಳತನ ನಡೆದಿತ್ತು. ಒಬ್ಬ ವ್ಯಕ್ತಿ ತಲೆಗೆ ಹೆಲ್ಮೆಟ್ ಧರಿಸಿಕೊಂಡು ದೇವಸ್ಥಾನದ ಹೊರ ಆವರಣಕ್ಕೆ ನುಗ್ಗಿ, ಅಲ್ಲಿದ್ದ ಕಾಣಿಕೆ ಹುಂಡಿಯನ್ನು ಎತ್ತಿಕೊಂಡು ಪರಾರಿಯಾಗಿದ್ದ. ದೇವಸ್ಥಾನದ ಆಡಳಿತ ಮಂಡಳಿ ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿತ್ತು.

ಪೊಲೀಸರ ಚಾಣಾಕ್ಷ ತನಿಖೆ

ದೂರು ದಾಖಲಾಗುತ್ತಿದ್ದಂತೆಯೇ ಕುಂದಾಪುರ ಡಿವೈಎಸ್ಪಿ ಎಚ್.ಡಿ. ಕುಲಕರ್ಣಿ ಮತ್ತು ಸರ್ಕಲ್ ಇನ್ಸ್‌ಪೆಕ್ಟರ್ ಸಂತೋಷ್ ಎ. ಕಾಯ್ಕಣಿ ಅವರ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚಿಸಲಾಯಿತು. ಪಿಎಸ್ಐ ಐ.ಆರ್. ಗುದ್ದೇಕರ್ ಮತ್ತು ಪಿಎಸ್ಐ ಅಕ್ಷಯಕುಮಾರಿ ಎಸ್.ಎನ್. ನೇತೃತ್ವದ ತಂಡ ತಾಂತ್ರಿಕ ನೆರವು ಮತ್ತು ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಕಳ್ಳರ ಬೆನ್ನು ಬಿದ್ದಿತ್ತು.

ಕುಂದಾಪುರ ಗ್ರಾಮಾಂತರ ಪೊಲೀಸರು ಹಾಗೂ ಜಿಲ್ಲಾ ತಾಂತ್ರಿಕ ವಿಭಾಗದ ಸಿಬ್ಬಂದಿಗಳ ನೆರವಿನೊಂದಿಗೆ ಕಾರ್ಯಾಚರಣೆ ನಡೆಸಿದ ತಂಡಕ್ಕೆ ಕಳ್ಳರು ಬಾಗಲಕೋಟೆ ಜಿಲ್ಲೆಯಲ್ಲಿರುವುದು ಪತ್ತೆಯಾಯಿತು.

ಬಾಗಲಕೋಟೆಯಲ್ಲಿ ಸೆರೆಸಿಕ್ಕ ಖದೀಮರು!

ಪೊಲೀಸರು ಬಾಗಲಕೋಟೆ ಜಿಲ್ಲೆಯ ಇಳಕಲ್ ಎಂಬಲ್ಲಿ ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಸಂದೀಪ್ ಆಚಾರಿ (28) ಮತ್ತು ಮುತ್ತಪ್ಪ ಶರಣಪ್ಪ ವಾಲಿಖಾರ್ (40) ಎಂದು ಗುರುತಿಸಲಾಗಿದೆ.

  • ಪೊಲೀಸರು ವಶಪಡಿಸಿಕೊಂಡಿದ್ದೇನು?
  • ಕಳ್ಳತನಕ್ಕೆ ಬಳಸಿದ್ದ ಒಂದು ಮೋಟಾರ್ ಸೈಕಲ್.
  • ಮೂರು ಮೊಬೈಲ್ ಫೋನ್‌ಗಳು.
  • ದೇವಸ್ಥಾನದಿಂದ ಕದ್ದೊಯ್ದಿದ್ದ ಕಾಣಿಕೆ ಹುಂಡಿ.

ವಶಪಡಿಸಿಕೊಂಡ ಈ ಎಲ್ಲಾ ವಸ್ತುಗಳ ಒಟ್ಟು ಮೌಲ್ಯ ಅಂದಾಜು 1.5 ಲಕ್ಷ ರೂಪಾಯಿ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತ ಇಬ್ಬರೂ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಕೋರ್ಟ್ ಅವರಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಇವರ ಜೊತೆ ಇನ್ನೂ ಯಾರಾದರೂ ಭಾಗಿಯಾಗಿದ್ದಾರೆಯೇ ಅಥವಾ ಇವರು ಬೇರೆ ಕಡೆಗಳಲ್ಲಿಯೂ ಇಂತಹ ಕಳ್ಳತನ ಮಾಡಿದ್ದಾರೆಯೇ ಎಂಬ ಬಗ್ಗೆ ಪೊಲೀಸರು ಈಗ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.