ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂಗಾರು ವೇಳೆ ಭಾರೀ ಮಳೆ ಸುರಿದ ಕಾರಣಕ್ಕೆ ವಿದ್ಯಾರ್ಥಿಗಳ ಆರೋಗ್ಯದ ವಿಚಾರವ ತಲೆಯಲ್ಲಿಟ್ಟುಕೊಂಡು ಶಾಲೆಗಳಿಗೆ ಸಾಲು ಸಾಲು ರಜೆಗಳನ್ನು ಘೋಷಿಸಲಾಗಿತ್ತು. ವಿಶೇಷವಾಗಿ ಕರಾವಳಿ ಜಿಲ್ಲೆಗಳಲ್ಲಿ ನಿರಂತರ ಮಳೆ ಮುಂದುವರೆದಿದ್ದರಿಂದ ಶಾಲಾ-ಕಾಲೇಜುಗಳಿಗೆ ಹೆಚ್ಚು ರಜೆ ನೀಡಲಾಗಿತ್ತು. ಆನ್‌ಲೈನ್ ತರಗತಿಗಳ ಮೂಲಕ ಪಾಠಗಳನ್ನು ಮುಂದುವರಿಸುವ ವ್ಯವಸ್ಥೆ ಮಾಡಲಾಗಿತ್ತು. ಇದೀಗ ಉಡುಪಿ ಜಿಲ್ಲೆಯಲ್ಲಿ ನವೆಂಬರ್ 28, ಶುಕ್ರವಾರ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಆದರೆ ಈ ಬರಿ ಮಳೆಯ ಅಡಚಣೆಯಿಂದ ಅಲ್ಲ, ಬದಲಿಗೆ ನಮ್ಮ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಉಡುಪಿ ಶ್ರೀಕೃಷ್ಣ ಮಠ ಭೇಟಿ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಮೋದಿ ಅವರು ಶ್ರೀಕೃಷ್ಣ ದೇವರ ದರ್ಶನ ಪಡೆದು "ಲಕ್ಷ ಕಂಠ ಗೀತ ಗಾಯನ" ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಉಡುಪಿ ನಗರ, ಮಲ್ಪೆ ಹಾಗೂ ಮಣಿಪಾಲ ಠಾಣಾ ವ್ಯಾಪ್ತಿಯಲ್ಲಿನ ಎಲ್ಲಾ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಜಿಲ್ಲಾಧಿಕಾರಿ ಸ್ವರೂಪ್ ಅವರು ಶಾಲಾ ಮಕ್ಕಳ ಸಂಚಾರಕ್ಕೆ ಅಡಚಣೆ ಉಂಟಾಗುವ ಸಾಧ್ಯತೆ ಹಾಗೂ ಸುರಕ್ಷತೆ, ಭದ್ರತೆ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಒಂದು ದಿನ ರಜೆ ಘೋಷಿಸಲಾಗಿದೆ ಎಂದು ತಿಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳೂರು ವಿಮಾನ ನಿಲ್ದಾಣಕ್ಕೆ ಬರಲಿದ್ದು ಹೆಲಿಕಾಪ್ಟರ್ ಮೂಲಕ ಉಡುಪಿಗೆ ಪ್ರಯಾಣ ಮಾಡಲಿದ್ದಾರೆ. ಹಾಗಾಗಿ ಬೆಳಗ್ಗೆ 9ರಿಂದ ಸಂಜೆ 3ರವರೆಗೆ ಉಡುಪಿಯ ಕೆಲವು ಮಾರ್ಗಗಳಲ್ಲಿ ಸಂಚಾರ ನಿಷೇಧ ಮಾಡಲಾಗುತ್ತಿದ್ದು ಅದಕ್ಕೆ ಪರ್ಯಾಯ ಮಾರ್ಗಗಳನ್ನು ಸಜ್ಜು ಮಾಡಿದ್ದಾರೆ. ತುರ್ತು ಸೇವೆಗಳ ವಾಹನಗಳಿಗೆ ಮಾತ್ರ ವಿನಾಯಿತಿ ನೀಡಲಾಗಿದೆ.
ಉಡುಪಿಯಲ್ಲಿ ಸಂಚಾರ ನಿಯಮ ಬದಲಾವಣೆ ಹೀಗಿದೆ ನೋಡಿ.
1. ಆದಿ ಉಡುಪಿ ಹೆಲಿಪ್ಯಾಡ್‌ನಿಂದ ಕರಾವಳಿ ಜಂಕ್ಷನ್‌ವರೆಗೆ, ಬನ್ನಂಜೆ–ಶಿರಿಬೀಡು–ಕಲ್ಸಂಕ–ಶ್ರೀಕೃಷ್ಣ ಮಠದವರೆಗಿನ ರಸ್ತೆಗಳಲ್ಲಿ ವಾಹನ ಸಂಚಾರ ಮತ್ತು ಪಾರ್ಕಿಂಗ್‌ಗೆ ಸಂಪೂರ್ಣ ನಿಷೇಧ ಮಾಡಲಾಗುತ್ತಿದೆ.
2. ಮಣಿಪಾಲದಿಂದ ಉಡುಪಿಗೆ ಬರುವ ವಾಹನಗಳು ಶಾರದಾ ಕಲ್ಯಾಣ ಮಂಟಪ–ಬೀಡಿನಗುಡ್ಡೆ ಮಾರ್ಗವಾಗಿ ಸಂಚರಿಸಬೇಕು. ಕುಂದಾಪುರದಿಂದ ಬರುವವರು ಕರಾವಳಿ ಫ್ಲೈಓವರ್–ಅಂಬಲಪಾಡಿ–ಬ್ರಹ್ಮಗಿರಿ–ಜೋಡುಕಟ್ಟೆ ಮಾರ್ಗವಾಗಿ ಬರಲು ಸೂಚಿಸಲಾಗಿದೆ.
3. ಮಂಗಳೂರಿನಿಂದ ಉಡುಪಿಗೆ ಬರುವ ವಾಹನಗಳು ಕಿನ್ನಿಮುಲ್ಕಿ ಸ್ವಾಗತಗೋಪುರ–ಜೋಡುಕಟ್ಟೆ ಮಾರ್ಗವಾಗಿ ಸಂಚರಿಸಬೇಕು. ಅಂಬಾಗಿಲು–ಗುಂಡಿಬೈಲ್ ಮಾರ್ಗವಾಗಿ ಬರುವವರು ಗುಂಡಿಬೈಲ್ ರಸಿಕಾ ಬಾರ್ ಮೂಲಕ ದೊಡ್ಡಣಗುಡ್ಡೆ–ಎಂಜಿಎಂ–ಎಸ್.ಎಂ.ಕೆ.ಎಂ–ಬೀಡಿನಗುಡ್ಡೆ ಮೂಲಕ ಉಡುಪಿಗೆ ಬರಬೇಕು.
4. ಮಲ್ಪೆಯಿಂದ ಬರುವ ವಾಹನಗಳು ಕುತ್ಪಾಡಿ ಮಾರ್ಗವಾಗಿ ಅಂಬಲಪಾಡಿ ಮೂಲಕ ಉಡುಪಿಗೆ ಬರಲು ಸೂಚಿಸಲಾಗಿದೆ.
5. ತುರ್ತು ಸೇವೆಗಳ ವಾಹನಗಳು (ಆಂಬ್ಯುಲೆನ್ಸ್, ಅಗ್ನಿಶಾಮಕ) ಈ ನಿಯಮದಿಂದ ವಿನಾಯಿತಿ ಪಡೆದಿವೆ ಎಂದು ಉಡುಪಿ ಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿದೆ.