Mar 3, 2026 Languages : ಕನ್ನಡ | English

₹235 ಕೋಟಿ ಅಕ್ರಮ ಹಣಕಾಸು – ತಿರುಪತಿ ಲಡ್ಡು ಕಲಬೆರಕೆ ಪ್ರಕರಣ!!

ತಿರುಪತಿ ತಿರುಮಲ ವೆಂಕಟೇಶ್ವರ ದೇವಸ್ಥಾನದಲ್ಲಿ ಭಕ್ತರಿಗೆ ವಿತರಿಸಲಾಗುವ ಲಡ್ಡು ಪ್ರಸಾದದ ಕಲಬೆರಕೆ ವಿವಾದ ದಿನದಿಂದ ದಿನಕ್ಕೆ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ. ಈಗಾಗಲೇ ಈ ಪ್ರಕರಣವನ್ನು ಸಿಬಿಐ ತನಿಖೆ ನಡೆಸುತ್ತಿರುವ ಬೆನ್ನಲ್ಲೇ, ಇದೀಗ ಎನ್‌ಫೋರ್ಸ್‌ಮೆಂಟ್ ಡೈರೆಕ್ಟರೇಟ್ (ಇ.ಡಿ.) ಕೂಡ ಪ್ರಕರಣಕ್ಕೆ ಎಂಟ್ರಿ ಕೊಟ್ಟಿದೆ. ಹಣಕಾಸು ಅಕ್ರಮ ಮತ್ತು ಹವಾಲಾ ವ್ಯವಹಾರಗಳ ಶಂಕೆಯ ಹಿನ್ನೆಲೆ ಇ.ಡಿ ತನಿಖೆ ಆರಂಭಿಸಿದೆ.

ಭಕ್ತರ ನಂಬಿಕೆಯ ಸಂಕೇತ ಲಡ್ಡು ಪ್ರಸಾದ – ಹಗರಣದಿಂದ ದೇಶಾದ್ಯಂತ ಆಕ್ರೋಶ
ಭಕ್ತರ ನಂಬಿಕೆಯ ಸಂಕೇತ ಲಡ್ಡು ಪ್ರಸಾದ – ಹಗರಣದಿಂದ ದೇಶಾದ್ಯಂತ ಆಕ್ರೋಶ

ಸಿಬಿಐ ತನಿಖೆಯ ಪ್ರಕಾರ, ಈ ಹಗರಣದ ಒಟ್ಟು ಮೌಲ್ಯ ಸುಮಾರು ₹235 ಕೋಟಿ ಎಂದು ಅಂದಾಜಿಸಲಾಗಿದೆ. ಇದರಲ್ಲಿ ₹20 ಕೋಟಿ ಹವಾಲಾ ಹಣ ಬಳಕೆಯಾಗಿದೆ ಎನ್ನುವ ಗಂಭೀರ ಆರೋಪ ಕೇಳಿಬಂದಿದೆ. ಮೊಬೈಲ್ ಫೋನ್‌ಗಳು, ವಾಟ್ಸಾಪ್ ಚಾಟ್‌ಗಳು ಹಾಗೂ ಎಕ್ಸೆಲ್ ಶೀಟ್‌ಗಳ ಆಧಾರದಲ್ಲಿ, ಹಲವು ಅಧಿಕಾರಿಗಳಿಗೆ ಸಣ್ಣ ಮೊತ್ತದ ಹಣ ಪಾವತಿಸಿರುವ ದಾಖಲೆಗಳು ಪತ್ತೆಯಾಗಿವೆ ಎಂದು ಸಿಬಿಐ ಈಗಾಗಲೇ ಹೇಳಿತ್ತು. ಇದೇ ಮಾಹಿತಿಯನ್ನು ಆಧರಿಸಿ ಇ.ಡಿ ಅಧಿಕೃತವಾಗಿ ಪ್ರಕರಣ ದಾಖಲಿಸಿಕೊಂಡಿದೆ.

ಈ ಹಿಂದೆ ನಡೆದ ಎಸ್‌ಐಟಿ ತನಿಖೆಯಲ್ಲಿ, ಟಿಟಿಡಿ ಅಧ್ಯಕ್ಷರ ಪಿಎ, ಜನರಲ್ ಮ್ಯಾನೇಜರ್ ಸೇರಿದಂತೆ ಹಲವು ಪ್ರಮುಖರಿಗೆ ನಗದು ಹಣ ಹಾಗೂ ದುಬಾರಿ ಉಡುಗೊರೆಗಳನ್ನು ನೀಡಿರುವುದು ದೃಢಪಟ್ಟಿತ್ತು. ಈ ಹಣವನ್ನು ಕಮಿಷನ್ ಏಜೆಂಟ್‌ಗಳ ಮೂಲಕ ರವಾನಿಸಲಾಗಿದ್ದು, ವ್ಯವಸ್ಥಿತ ಹಣಕಾಸು ಅಕ್ರಮ ನಡೆದಿದೆ ಎಂಬುದು ತನಿಖೆಯಿಂದ ಹೊರಬಂದಿದೆ.

ಈ ಎಲ್ಲ ಅಂಶಗಳನ್ನು ಪರಿಗಣಿಸಿ, ಇದೀಗ ಇ.ಡಿ ಹಣಕಾಸು ವ್ಯವಹಾರಗಳು, ಹವಾಲಾ ಸಂಪರ್ಕಗಳು ಮತ್ತು ಅಕ್ರಮ ಹಣದ ಬಳಕೆಯ ಕುರಿತು ಆಳವಾದ ತನಿಖೆಗೆ ಮುಂದಾಗಿದೆ. ಮುಂದಿನ ದಿನಗಳಲ್ಲಿ ಈ ಪ್ರಕರಣದಲ್ಲಿ ಇನ್ನಷ್ಟು ಅಧಿಕಾರಿಗಳು ಹಾಗೂ ಮಧ್ಯವರ್ತಿಗಳ ಹೆಸರುಗಳು ಹೊರಬೀಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ತಿರುಪತಿ ಲಡ್ಡು ಪ್ರಸಾದವು ಕೋಟಿ ಕೋಟಿ ಭಕ್ತರ ನಂಬಿಕೆಯ ಸಂಕೇತವಾಗಿರುವ ಹಿನ್ನೆಲೆಯಲ್ಲಿ, ಈ ಹಗರಣ ದೇಶಾದ್ಯಂತ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ತನಿಖೆ ಅಂತಿಮ ಹಂತ ತಲುಪಿದ ಬಳಿಕ ಇನ್ನಷ್ಟು ಸತ್ಯಾಂಶಗಳು ಬಹಿರಂಗವಾಗುವ ನಿರೀಕ್ಷೆಯಿದೆ.