ತಮಿಳುನಾಡು ರಾಜಕೀಯದಲ್ಲಿ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲು ರೆಡಿಯಾಗಿರುವ ದಳಪತಿ ವಿಜಯ್ ಈಗ ತಮ್ಮ ಆಸ್ತಿ ವಿವರದಿಂದಲೇ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸೌಂಡ್ ಮಾಡುತ್ತಿದ್ದಾರೆ. ವಿಜಯ್ ಅವರ ಒಟ್ಟು ಆಸ್ತಿ 624 ಕೋಟಿ ರೂಪಾಯಿ ಎಂದು ತಿಳಿದುಬಂದ ಬೆನ್ನಲ್ಲೇ, ನೆಟ್ಟಿಗರು ಅವರ ಹೂಡಿಕೆಯ ಶೈಲಿಯನ್ನು ನೋಡಿ ಕಾಲೆಳೆಯಲು ಶುರು ಮಾಡಿದ್ದಾರೆ.
ಹಣಕಾಸು ನಿರ್ವಹಣೆ ಬಗ್ಗೆ ಟ್ರೋಲ್: ಯಾಕಿಷ್ಟು ಚರ್ಚೆ?
ಸಾಮಾನ್ಯವಾಗಿ ಕೋಟ್ಯಧಿಪತಿಗಳು ತಮ್ಮ ಹಣವನ್ನು ಶೇರ್ ಮಾರ್ಕೆಟ್, ಮ್ಯೂಚುವಲ್ ಫಂಡ್ ಅಥವಾ ಸ್ಟಾರ್ಟ್‌ಅಪ್‌ಗಳಲ್ಲಿ ಹೂಡಿಕೆ ಮಾಡಿ ಬೆಳೆಸುತ್ತಾರೆ. ಆದರೆ ವಿಜಯ್ ಮಾತ್ರ ಹಳೆಯ ಕಾಲದ ಜನರಂತೆ ಬ್ಯಾಂಕ್ ಎಫ್‌ಡಿ (FD) ಮತ್ತು ಸೇವಿಂಗ್ಸ್ ಅಕೌಂಟ್ ಮೇಲೆ ಅತಿಯಾದ ನಂಬಿಕೆ ಇಟ್ಟಿದ್ದಾರೆ.
ವಿಜಯ್ ಅವರ 313 ಕೋಟಿ ರೂಪಾಯಿ ಹಣ ಕೇವಲ ಬ್ಯಾಂಕ್ ಡಿಪಾಸಿಟ್‌ಗಳಲ್ಲಿದೆ! ಇದರಲ್ಲಿ ಸಾಲಿಗ್ರಾಮದ ಐಒಬಿ ಬ್ಯಾಂಕ್‌ನ ಒಂದೇ ಖಾತೆಯಲ್ಲಿ 213.36 ಕೋಟಿ ರೂಪಾಯಿ ನಗದು ಹಣವಿದೆ. ಇನ್ನುಳಿದ 100 ಕೋಟಿ ರೂಪಾಯಿಯನ್ನು ಆಕ್ಸಿಸ್, ಎಚ್‌ಡಿಎಫ್‌ಸಿ ಮತ್ತು ಎಸ್‌ಬಿಐ ಬ್ಯಾಂಕ್‌ಗಳಲ್ಲಿ ಫಿಕ್ಸೆಡ್ ಡಿಪಾಸಿಟ್ ಮಾಡಿದ್ದಾರೆ.
ಇದನ್ನು ನೋಡಿರುವ ನೆಟ್ಟಿಗರು, "ತನ್ನ ಸ್ವಂತ ಹಣವನ್ನೇ ಸರಿಯಾಗಿ ಇನ್ವೆಸ್ಟ್ ಮಾಡದ ವಿಜಯ್, ಇನ್ನು ತಮಿಳುನಾಡಿನ ಬಜೆಟ್ ಮತ್ತು ಹಣಕಾಸನ್ನು ಹೇಗೆ ನಿಭಾಯಿಸ್ತಾರೋ?" ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಇಂದಿನ ಕಾಲದಲ್ಲಿ ಎಸ್‌ಐಪಿ (SIP) ಮಾಡದೆ ಬರೀ ಎಫ್‌ಡಿ ನಂಬಿಕೊಂಡಿರುವುದು ಹಣಕಾಸು ತಜ್ಞರ ಪಾಲಿಗೆ ಒಂದು 'ದುಸ್ವಪ್ನ' ಎಂದು ಕೆಲವರು ತಮಾಷೆ ಮಾಡುತ್ತಿದ್ದಾರೆ.
ಷೇರು ಮಾರುಕಟ್ಟೆಯಲ್ಲಿ ಕೇವಲ 'ಚಿಲ್ಲರೆ' ಹೂಡಿಕೆ!
600 ಕೋಟಿಗೂ ಅಧಿಕ ಆಸ್ತಿ ಇರುವ ವಿಜಯ್, ಶೇರ್ ಮಾರ್ಕೆಟ್‌ನಲ್ಲಿ ತೊಡಗಿಸಿರುವುದು ಕೇವಲ 19.37 ಲಕ್ಷ ರೂಪಾಯಿ ಮಾತ್ರ! ಇದು ಅವರ ಒಟ್ಟು ಆಸ್ತಿಯ ಶೇ. 0.04 ರಷ್ಟು ಕೂಡ ಇಲ್ಲ. ಮ್ಯೂಚುವಲ್ ಫಂಡ್ ಅಥವಾ ಬಾಂಡ್‌ಗಳ ಸಹವಾಸಕ್ಕೆ ಅವರು ಹೋಗಿಲ್ಲ. ಈ ಕಾರಣಕ್ಕಾಗಿಯೇ ಅವರನ್ನು "ತಮಿಳುನಾಡಿನ ವಾರನ್ ಬಫೆಟ್" ಎಂದು ಕಾಲೆಳೆಯಲಾಗುತ್ತಿದೆ. ಬಫೆಟ್ ಕೂಡ ಭಾರಿ ಮೊತ್ತದ ನಗದನ್ನು ತಮ್ಮ ಬಳಿ ಇಟ್ಟುಕೊಳ್ಳುವುದಕ್ಕೆ ಫೇಮಸ್.
ಸ್ಥಿರಾಸ್ತಿ ಮತ್ತು ಐಷಾರಾಮಿ ಕಾರುಗಳ ಅಬ್ಬರ
ಹೂಡಿಕೆಯಲ್ಲಿ ಹಳೇ ಶೈಲಿ ಅನುಸರಿಸಿದರೂ, ಆಸ್ತಿ ಮಾಡುವಲ್ಲಿ ವಿಜಯ್ ಹಿಂದೆ ಬಿದ್ದಿಲ್ಲ. ನೀಲಂಕರೈ, ಮೈಲಾಪುರದಂತಹ ಪ್ರೈಮ್ ಲೊಕೇಶನ್‌ಗಳಲ್ಲಿ 115 ಕೋಟಿ ಮೌಲ್ಯದ 10 ಮನೆಗಳು ಅವರಿಗಿವೆ. 82.8 ಕೋಟಿ ಮೌಲ್ಯದ ಕಮರ್ಷಿಯಲ್ ಬಿಲ್ಡಿಂಗ್‌ಗಳಿವೆ. 2023ರಲ್ಲಿ ಅವರು ಖರೀದಿಸಿದ 2.30 ಎಕರೆ ಜಮೀನಿನ ಮೌಲ್ಯವೇ ಸುಮಾರು 35 ಕೋಟಿ ರೂಪಾಯಿ.
ಇನ್ನು ಕಾರುಗಳ ವಿಚಾರಕ್ಕೆ ಬಂದರೆ, ವಿಜಯ್ ಬಳಿ 6 ಕೋಟಿ ಬೆಲೆಯ ಟಾಟಾ ಕ್ಯಾರವಾನ್, 3 ಕೋಟಿಯ ಲೆಕ್ಸಸ್ ಮತ್ತು 2 ಕೋಟಿ ಬೆಲೆಯ ಬಿಎಂಡಬ್ಲ್ಯೂ ಕಾರುಗಳಿವೆ. ವಿಶೇಷವೆಂದರೆ, ಇಷ್ಟೆಲ್ಲಾ ಐಷಾರಾಮಿ ಕಾರುಗಳ ನಡುವೆ ಅವರ ಬಳಿ ಒಂದು ಹಳೆಯ ಮಾರುತಿ ಸ್ವಿಫ್ಟ್ ಮತ್ತು 67 ಸಾವಿರ ಬೆಲೆಯ ಟಿವಿಎಸ್ ಎಕ್ಸ್‌ಎಲ್ (TVS XL) ಮೊಪೆಡ್ ಕೂಡ ಇದೆ!
ಕುಟುಂಬದ ಒಡವೆಗಳು ಮತ್ತು ಸಾಲದ ಲೆಕ್ಕ
ವಿಜಯ್ ಅವರ ಬಳಿ 1.20 ಕೋಟಿ ಮೌಲ್ಯದ ಚಿನ್ನವಿದ್ದರೆ, ಅವರ ಪತ್ನಿ ಸಂಗೀತ ಅವರ ಬಳಿ ಬರೋಬ್ಬರಿ 4 ಕೋಟಿ ಮೌಲ್ಯದ ಚಿನ್ನ ಹಾಗೂ 1 ಕೋಟಿ ರೂಪಾಯಿ ಬೆಲೆಬಾಳುವ ವಜ್ರದ ಆಭರಣಗಳಿವೆ. ಸಾಲದ ವಿಚಾರಕ್ಕೆ ಬಂದರೆ, ವಿಜಯ್ ತಮ್ಮ ಪತ್ನಿಗೇ 12.6 ಕೋಟಿ ರೂಪಾಯಿ ಸಾಲ ನೀಡಿದ್ದಾರೆ! ಇದರ ಜೊತೆಗೆ ವಿವಿಧ ಚಾರಿಟೇಬಲ್ ಟ್ರಸ್ಟ್ ಮತ್ತು ವ್ಯಕ್ತಿಗಳಿಗೆ ಕೋಟ್ಯಂತರ ರೂಪಾಯಿ ಸಾಲ ಕೊಟ್ಟಿದ್ದಾರೆ.
ವಿಜಯ್ ಅವರ ಈ 'ಸೇಫ್ ಗೇಮ್' ಹೂಡಿಕೆ ಈಗ ತಮಿಳುನಾಡು ರಾಜಕೀಯದಲ್ಲಿ ದೊಡ್ಡ ಚರ್ಚೆಯ ವಿಷಯವಾಗಿದೆ. "ಹಣದುಬ್ಬರ ಲೆಕ್ಕ ಹಾಕದ ನಾಯಕ" ಎಂದು ಕೆಲವರು ಟೀಕಿಸುತ್ತಿದ್ದರೆ, "ಕಷ್ಟಪಟ್ಟು ಸಂಪಾದಿಸಿದ ಹಣವನ್ನು ರಿಸ್ಕ್ ಇಲ್ಲದೆ ಉಳಿಸಿಕೊಂಡಿದ್ದಾರೆ" ಎಂದು ಅಭಿಮಾನಿಗಳು ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ.