ಚಿಕ್ಕಮಗಳೂರು: ಶೃಂಗೇರಿ ಕ್ಷೇತ್ರದ ಅಂಚೆ ಮತಗಳ (Postal Ballots) ಮರು ಎಣಿಕೆ ಪ್ರಕ್ರಿಯೆ ಮುಗಿಯುತ್ತಿದ್ದಂತೆಯೇ, ಜಿಲ್ಲಾ ರಾಜಕಾರಣದಲ್ಲಿ ಕಿಚ್ಚು ಹೊತ್ತಿಕೊಂಡಿದೆ. ಈ ಇಡೀ ಪ್ರಕ್ರಿಯೆಯಲ್ಲಿ ದೊಡ್ಡ ಮಟ್ಟದ ಟ್ಯಾಂಪರಿಂಗ್ ನಡೆದಿದೆ ಎಂದು ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷ ವಿ.ಎಸ್. ಉಗ್ರಪ್ಪ ಗುಡುಗಿದ್ದಾರೆ. "ಬಿಜೆಪಿ ಅಭ್ಯರ್ಥಿಯನ್ನು ಹೇಗಾದರೂ ಮಾಡಿ ಗೆಲ್ಲಿಸಲೇಬೇಕು ಎಂಬ ವ್ಯವಸ್ಥಿತ ಷಡ್ಯಂತ್ರ ಇಲ್ಲಿ ನಡೆದಿದೆ" ಎಂದು ಅವರು ನೇರ ವಾಗ್ದಾಳಿ ನಡೆಸಿದ್ದಾರೆ.
ಮರು ಎಣಿಕೆ ಪ್ರಕ್ರಿಯೆಯ ಬಗ್ಗೆ ಶಾಕಿಂಗ್ ಮಾಹಿತಿ ಬಿಚ್ಚಿಟ್ಟ ಉಗ್ರಪ್ಪ ಅವರು, "ಕೋರ್ಟ್ ನಿರ್ದೇಶನದ ಮೇರೆಗೆ ಮರು ಎಣಿಕೆ ಮಾಡಲಾಗುತ್ತಿದೆ ನಿಜ. ಆದರೆ, ಮೊನ್ನೆ ಕೌಂಟಿಂಗ್ ಶುರು ಮಾಡುವ ಮೊದಲೇ ಮತಪತ್ರಗಳಿದ್ದ ಟ್ರಂಕ್‌ಗಳ ಸೀಲ್‌ಗಳು ಒಡೆದು ಹೋಗಿದ್ದವು. ನನಗಿರುವ ಮಾಹಿತಿ ಪ್ರಕಾರ, ಟ್ರಂಕ್‌ಗಳೇ ಓಪನ್ ಆಗಿದ್ದವು. ಅಧಿಕಾರಿಗಳೆಲ್ಲಾ ಚುನಾವಣಾ ಆಯೋಗದ ಅಧೀನದಲ್ಲೇ ಬರುತ್ತಾರೆ, ಹೀಗಿದ್ದರೂ ಇಂತಹ ಬೇಜವಾಬ್ದಾರಿತನ ನಡೆಯಲು ಹೇಗೆ ಸಾಧ್ಯ?" ಎಂದು ಪ್ರಶ್ನಿಸಿದ್ದಾರೆ.
ಅಂಚೆ ಮತಗಳ ಟ್ಯಾಂಪರಿಂಗ್ ಬಗ್ಗೆ ಸಂಶಯ ವ್ಯಕ್ತಪಡಿಸಿದ ಅವರು, "ಕೆಲವು ಮತಪತ್ರಗಳಲ್ಲಿ ಇಬ್ಬರು ಅಭ್ಯರ್ಥಿಗಳಿಗೂ ಗೆರೆ ಎಳೆಯಲಾಗಿದೆ. ಇದನ್ನು ಅಲ್ಲಿನ ಏಜೆಂಟರುಗಳು ಪತ್ತೆ ಹಚ್ಚಬೇಕಿತ್ತು, ಯಾಕೆ ಮಾಡಲಿಲ್ಲ? ಚುನಾವಣಾ ಆಯೋಗದ ಸಿಬ್ಬಂದಿಗಳೇ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಲು ಕುತಂತ್ರ ರೂಪಿಸಿದ್ದಾರೆ. ಈ ರೀತಿಯ ಕಾನ್ಫಿರಸಿಯಿಂದಾಗಿಯೇ ನಮ್ಮ ಅಭ್ಯರ್ಥಿಗೆ ಹಿನ್ನಡೆಯಾಗಿದೆ" ಎಂದು ಆರೋಪಿಸಿದರು.
"ಮೊದಲು ಕೌಂಟಿಂಗ್ ಸರಿಯಿದೆ, ಯಾವುದೇ ಮಿಸ್ಟೇಕ್ ಇಲ್ಲ ಎಂದು ಸಹಿ ಮಾಡಲಾಗಿತ್ತು. ಇವಿಎಂ ಮತ್ತು ಬ್ಯಾಲೆಟ್ ಪೇಪರ್‌ಗಳು ಆಯೋಗದ ಸುಪರ್ದಿಯಲ್ಲೇ ಇರುತ್ತವೆ. ಆದರೆ, ಮರು ಎಣಿಕೆ ವೇಳೆ ಪೋಸ್ಟಲ್ ಬ್ಯಾಲೆಟ್‌ಗಳನ್ನು ಟ್ಯಾಂಪರ್ ಮಾಡಿರುವುದಕ್ಕೆ ಸಾಕ್ಷ್ಯಗಳು ಸಿಗುತ್ತಿವೆ. ಅಂತಿಮವಾಗಿ ಇಡೀ ವ್ಯವಸ್ಥೆಯನ್ನು ಬಳಸಿಕೊಂಡು ನಮ್ಮ ವಿರುದ್ಧ ಪ್ಲಾನ್ ಮಾಡಲಾಗಿದೆ" ಎಂದು ಉಗ್ರಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಈ ಇಡೀ ಪ್ರಕ್ರಿಯೆಯಲ್ಲಿ ತಮಗೆ ಅನ್ಯಾಯವಾಗಿದೆ ಎಂದು ಭಾವಿಸಿರುವ ಕಾಂಗ್ರೆಸ್, ಈಗ ಸುಮ್ಮನೆ ಕೂರುವಂತೆ ಕಾಣುತ್ತಿಲ್ಲ. "ನಮ್ಮ ಅಭ್ಯರ್ಥಿಗೆ ಆಗಿರುವ ಹಿನ್ನಡೆಗೆ ಈ ಷಡ್ಯಂತ್ರವೇ ಕಾರಣ. ನಾವು ಇದನ್ನು ಸುಮ್ಮನೆ ಬಿಡುವುದಿಲ್ಲ. ಈ ಅಕ್ರಮದ ವಿರುದ್ಧ ಕಾನೂನಾತ್ಮಕವಾಗಿ ಹೋರಾಟ ಮುಂದುವರಿಸುತ್ತೇವೆ" ಎಂದು ಉಗ್ರಪ್ಪ ಸ್ಪಷ್ಟಪಡಿಸಿದ್ದಾರೆ.
ಶೃಂಗೇರಿ ಮರು ಎಣಿಕೆ ಪ್ರಕ್ರಿಯೆಯು ದಿನಕ್ಕೊಂದು ತಿರುವು ಪಡೆಯುತ್ತಿದೆ. ಉಗ್ರಪ್ಪ ಅವರ ಆರೋಪಗಳು ಕೇವಲ ರಾಜಕೀಯ ಹೇಳಿಕೆಯೋ ಅಥವಾ ನಿಜಕ್ಕೂ ಅಲ್ಲಿ ಅಕ್ರಮ ನಡೆದಿದೆಯೋ ಎಂಬುದು ತನಿಖೆಯಿಂದಷ್ಟೇ ತಿಳಿಯಬೇಕಿದೆ. ಆದರೆ, 'ಸೀಲ್ ಒಡೆದಿತ್ತು' ಎಂಬ ಅವರ ಮಾತು ಈಗ ಚುನಾವಣಾ ಆಯೋಗದ ಕಾರ್ಯವೈಖರಿಯ ಮೇಲೆ ಅನುಮಾನದ ಹುತ್ತ ಬೆಳೆಯುವಂತೆ ಮಾಡಿದೆ.