ಮನೆಯಲ್ಲೇ ಕುಳಿತು ಪ್ಯಾಕಿಂಗ್ ಕೆಲಸ ಎಂದ ನಂಬಿಸಿ ವಂಚನೆ: ನೂರಾರು ಮಹಿಳೆಯರಿಗೆ ಲಕ್ಷ ಲಕ್ಷ ಪಂಗನಾಮ ಹಾಕಿದ ವಿನಾಯಕ-ರಮ್ಯ ಜೋಡಿ!!

ಹಾವೇರಿ "ಮನೆಯಲ್ಲೇ ಕುಳಿತು ಅಗರಬತ್ತಿ, ಕಸಬರಗಿ ಪ್ಯಾಕ್ ಮಾಡಿ, ತಿಂಗಳಿಗೆ ಕೈತುಂಬಾ ಸಂಪಾದನೆ ಮಾಡಿ..." ಎಂದು ನಂಬಿಸಿ ರಾಜ್ಯದ ಮೂಲೆ ಮೂಲೆಗಳಿಂದ ಬಂದ ನೂರಾರು ಮುಗ್ಧ ಮಹಿಳೆಯರಿಗೆ ಬರೋಬ್ಬರಿ 5 ರಿಂದ 10 ಕೋಟಿ ರೂಪಾಯಿ ವಂಚಿಸಿ ಮಹಾ ಚೋರ ಪ್ರೇಮಿಗಳ ಜೋಡಿಯೊಂದು ರಾತ್ರೋರಾತ್ರಿ ಪರಾರಿಯಾಗಿರುವ ಆಘಾತಕಾರಿ ಹಗರಣ ಹಾವೇರಿಯಲ್ಲಿ ಬೆಳಕಿಗೆ ಬಂದಿದೆ!

ಕೋಟಿ ಕೋಟಿ ಹಣದೊಂದಿಗೆ ಫ್ರಾಡ್ ಪ್ರೇಮಿಗಳು ಪರಾರಿ
ಕೋಟಿ ಕೋಟಿ ಹಣದೊಂದಿಗೆ ಫ್ರಾಡ್ ಪ್ರೇಮಿಗಳು ಪರಾರಿ

ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು ಎಂದು ಆಸೆಪಟ್ಟು, ಕಷ್ಟಪಟ್ಟು ಸಂಪಾದಿಸಿದ ಲಕ್ಷ ಲಕ್ಷ ಹಣವನ್ನು ಬಂಡವಾಳವಾಗಿ ಹೂಡಿದ್ದ ನೂರಾರು ಮಹಿಳೆಯರು ಇಂದು ಬೀದಿಗೆ ಬಿದ್ದಿದ್ದು, ಕಣ್ಣೀರು ಹಾಕುತ್ತಾ ಮೋಸ ಮಾಡಿದ ಕಂಪನಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ಇದು "ಎಸ್ ಎಲ್ ವಿ ಮಹಿಳಾ ಮಾರ್ಟ್" ಕಂಪನಿಯ ದೋಖಾ ಕಥೆ!

ಹಾವೇರಿ ನಗರದಲ್ಲಿ "ಎಸ್ ಎಲ್ ವಿ (SLV) ಮಹಿಳಾ ಮಾರ್ಟ್" ಎಂಬ ಹೆಸರಿನಲ್ಲಿ ಕಚೇರಿ ತೆರೆದಿದ್ದ ವಿನಾಯಕ ಆನ್ವೇರಿ ಹಾಗೂ ರಮ್ಯ ಎಂಬ ಕ್ರಿಮಿನಲ್ ಜೋಡಿ ಈ ವಂಚನೆಯ ಮಾಸ್ಟರ್ ಮೈಂಡ್ಸ್. ಇವರಿಬ್ಬರು ಪ್ರೇಮಿಗಳಾಗಿದ್ದು, ಮಹಿಳೆಯರನ್ನೇ ಗುರಿಯಾಗಿಸಿಕೊಂಡು ಈ ಲೂಟಿ ಪ್ಲಾನ್ ಮಾಡಿದ್ದರು.

ವಂಚನೆಯ ಜಾಲ ಹೇಗಿತ್ತು ಗೊತ್ತಾ?

ಆಕರ್ಷಕ ಆಫರ್: ಮನೆಯಲ್ಲೇ ಕುಳಿತು ಕೆಲಸ ಮಾಡುವ (Work from Home) ಉದ್ಯೋಗ ಕೊಡುವುದಾಗಿ ಇವರು ಜಾಹೀರಾತು ನೀಡಿದ್ದರು. ಅಗರಬತ್ತಿ, ಕಸಬರಗಿ, ಹಾಗೂ ಮೇಣದಬತ್ತಿಗಳನ್ನು ಮನೆಯಲ್ಲೇ ಪ್ಯಾಕ್ ಮಾಡಿಕೊಡುವ ಗೃಹ ಕೆಲಸದ ಆಸೆ ತೋರಿಸಿದ್ದರು.

ಲಕ್ಷ ಲಕ್ಷ ಬಂಡವಾಳ: ಆದರೆ, ಈ ಕೆಲಸ ಮಾಡಬೇಕಾದರೆ ಮೊದಲು ಕಂಪನಿಗೆ "ಸೆಕ್ಯೂರಿಟಿ ಡೆಪಾಸಿಟ್" ಅಥವಾ ಕಚ್ಚಾ ಸಾಮಗ್ರಿಗಳ ವೆಚ್ಚ ಎಂದು ಹೇಳಿ ಪ್ರತಿಯೊಬ್ಬ ಮಹಿಳೆಯಿಂದಲೂ ಲಕ್ಷ ಲಕ್ಷ ರೂಪಾಯಿ ಬಂಡವಾಳ ಹಾಕಿಸಿಕೊಂಡಿದ್ದರು.

ವಿಶ್ವಾಸ ಗಳಿಸಲು ಕಮಿಷನ್: ಆರಂಭದ ಒಂದೆರಡು ತಿಂಗಳು ಹೂಡಿಕೆ ಮಾಡಿದ ಮಹಿಳೆಯರಿಗೆ ಸರಿಯಾಗಿ ಹಣ ಹಾಗೂ ಕಮಿಷನ್ ನೀಡುವ ನಾಟಕವಾಡಿ ಜನರ ನಂಬಿಕೆ ಗಳಿಸಿದ್ದರು. ಇದನ್ನು ನಂಬಿ ಇನ್ನು ಹೆಚ್ಚಿನ ಮಹಿಳೆಯರು ಹಾಗೂ ಅವರ ಸಂಬಂಧಿಕರು ಕೋಟ್ಯಂತರ ರೂಪಾಯಿ ತಂದು ಇವರ ಕೈಗಿಟ್ಟಿದ್ದರು.

ಕೋಟಿ ಕೋಟಿ ಹಣದೊಂದಿಗೆ "ಫ್ರಾಡ್ ಪ್ರೇಮಿಗಳು" ಪರಾರಿ!

ಯಾವಾಗ ಹಾವೇರಿ ಮಾತ್ರವಲ್ಲದೆ ರಾಜ್ಯದ ಮೂಲೆ ಮೂಲೆಗಳಿಂದ ಬರೋಬ್ಬರಿ 5 ರಿಂದ 10 ಕೋಟಿ ರೂಪಾಯಿ ಹಣ ಕಲೆಕ್ಟ್ ಆಯಿತೋ, ಅಲ್ಲಿಗೆ ಈ ಚೋರ-ಚೋರಿಯರ ಅಸಲಿ ಆಟ ಶುರುವಾಯಿತು. ಒಂದೆರಡು ತಿಂಗಳಿಂದ ಕೆಲಸ ಮಾಡಿದ ಮಹಿಳೆಯರಿಗೆ ಇವರು ಸಂಬಳವನ್ನೂ ನೀಡಲಿಲ್ಲ, ಇತ್ತ ಹೊಸದಾಗಿ ಸೇರಿದವರಿಗೆ ಸಾಮಗ್ರಿಗಳನ್ನೂ ಕೊಡಲಿಲ್ಲ.

ಜನ ಕಚೇರಿಗೆ ಬಂದು ಗಲಾಟೆ ಮಾಡಲು ಆರಂಭಿಸುವ ಮುನ್ಸೂಚನೆ ಸಿಗುತ್ತಿದ್ದಂತೆ, ವಿನಾಯಕ ಆನ್ವೇರಿ ಹಾಗೂ ರಮ್ಯ ಇಬ್ಬರೂ ಕೋಟ್ಯಂತರ ರೂಪಾಯಿ ಹಣದೊಂದಿಗೆ ರಾತ್ರೋರಾತ್ರಿ ಊರು ಬಿಟ್ಟು ಪರಾರಿಯಾಗಿದ್ದಾರೆ. ಪ್ರಸ್ತುತ ಕಂಪನಿಯ ಕಚೇರಿ ಮುಚ್ಚಲ್ಪಟ್ಟಿದ್ದು, ಇಬ್ಬರ ಮೊಬೈಲ್ ಫೋನ್‌ಗಳು ಸ್ವಿಚ್ ಆಫ್ ಆಗಿವೆ.

ಕೊಟ್ಟ ದುಡ್ಡೂ ಇಲ್ಲ, ಮಾಡಿದ ಕೆಲಸಕ್ಕೆ ಕೂಲಿಯೂ ಇಲ್ಲ: ಮಹಿಳೆಯರ ಕಣ್ಣೀರು

ಹಣ ಕಳೆದುಕೊಂಡು ಕಂಗಾಲಾಗಿರುವ ನೂರಾರು ಮಹಿಳೆಯರು ಹಾವೇರಿ ನಗರದ ಕಚೇರಿ ಮುಂದೆ ಜಮಾಯಿಸಿ ಕಣ್ಣೀರು ಹಾಕುತ್ತಿದ್ದಾರೆ. "ಮನೆಯವರ ಹತ್ತಿರ ಜಗಳ ಆಡಿ, ಒಡವೆ ಅಡವಿಟ್ಟು, ಸಾಲ ಮಾಡಿ ತಂದು ಇವರಿಗೆ ದುಡ್ಡು ಕೊಟ್ಟಿದ್ದೆವು. ಈಗ ಕೊಟ್ಟ ದುಡ್ಡೂ ಇಲ್ಲ, ರಾತ್ರಿ ಹಗಲು ಕಷ್ಟಪಟ್ಟು ಪ್ಯಾಕಿಂಗ್ ಮಾಡಿದ ಕೆಲಸದ ಹಣವೂ ಸಿಗುತ್ತಿಲ್ಲ. ನಮ್ಮ ಹೊಟ್ಟೆ ಸೀಳಿದ ಈ ಪಾಪಿಗಳಿಗೆ ಒಳ್ಳೆಯದಾಗಲ್ಲ" ಎಂದು ಮಹಿಳೆಯರು ಆಕ್ರೋಶ ಹೊರಹಾಕಿದ್ದಾರೆ.

ಪೊಲೀಸ್ ಠಾಣೆಗೆ ದೂರು: ಸದ್ಯ ನೊಂದ ಮಹಿಳೆಯರೆಲ್ಲರೂ ಒಟ್ಟಾಗಿ ಹಾವೇರಿ ಶಹರ ಪೊಲೀಸ್ ಠಾಣೆಗೆ ಧಾವಿಸಿ ವಿನಾಯಕ ಆನ್ವೇರಿ ಮತ್ತು ರಮ್ಯ ವಿರುದ್ಧ ಅಧಿಕೃತವಾಗಿ ವಂಚನೆ (Cheating Case) ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಹಾವೇರಿ ನಗರ ಪೊಲೀಸರು, ತಲೆಮರೆಸಿಕೊಂಡಿರುವ ಈ ಹೈಟೆಕ್ ಖದೀಮರ ಪತ್ತೆಗಾಗಿ ಜಾಲ ಬೀಸಿದ್ದಾರೆ.

ಇಂತಹ ಉದ್ಯೋಗದ ಹೆಸರಿನಲ್ಲಿ ಬರುವ ನಕಲಿ ಕಂಪನಿಗಳನ್ನು ನಂಬಿ ಸಾರ್ವಜನಿಕರು ಮುಂಗಡವಾಗಿ ಹಣ ನೀಡಿ ಮೋಸ ಹೋಗಬಾರದು ಎಂದು ಪೊಲೀಸರು ಮನವಿ ಮಾಡಿದ್ದಾರೆ.

Latest News