ಕಳ್ಳತನ ಮಾಡೋದು ಒಂದು ಕಲೆಯಾದ್ರೆ, ಕದ್ದ ಮಾಲನ್ನ ಅಸಲಿಯಿಂದ ನಕಲಿಗೆ ಬದಲಾಯಿಸಿ ಪೊಲೀಸರಿಗೇ ಟೋಪಿ ಹಾಕೋದು ಇದೆಯಲ್ಲ, ಅದು ನಿಜಕ್ಕೂ ಡೇಂಜರಸ್ ಪ್ಲಾನ್! ಇಂತಹದ್ದೇ ಒಂದು ಕಿಲಾಡಿ ಕೆಲಸಕ್ಕೆ ಕೈಹಾಕಿ ಈಗ ಆರ್ ಟಿ ನಗರ ಪೊಲೀಸರ ಅತಿಥಿಯಾಗಿದ್ದಾರೆ ತಬಸ್ಸುಂ ಮತ್ತು ಮುದಾಸೀರ್ ಎಂಬ ಇಬ್ಬರು ಆರೋಪಿಗಳು.
ಏನಿದು ಈಕೆಯ 'ಮಾಸ್ಟರ್' ಪ್ಲಾನ್?
ಸಾಮಾನ್ಯವಾಗಿ ಕಳ್ಳರು ಚಿನ್ನ ಕದ್ದರೆ ಅದನ್ನು ಅಕ್ಕಸಾಲಿಗರಿಗೋ ಅಥವಾ ಫೈನಾನ್ಸ್ ಕಂಪನಿಗೋ ಮಾರಿಬಿಡುತ್ತಾರೆ. ಆದರೆ ಇಲ್ಲಿ ಕಥೆಯೇ ಬೇರೆ. ಕಳ್ಳ ಮುದಾಸೀರ್ ರಾತ್ರಿ ವೇಳೆ ಬೀಗ ಹಾಕಿದ ಮನೆಗಳನ್ನು ಟಾರ್ಗೆಟ್ ಮಾಡಿ ಚಿನ್ನಾಭರಣ ಎಗರಿಸುತ್ತಿದ್ದ. ಈತ ಕದ್ದ 75 ಗ್ರಾಂ ಚಿನ್ನವನ್ನು ತಬಸ್ಸುಂ ಎಂಬ ಮಹಿಳೆಗೆ ಮಾರುತ್ತಿದ್ದ.
ಈ ತಬಸ್ಸುಂ ಅಂತಿಂಥವಳಲ್ಲ, ಈಕೆ ಮಾಡುತ್ತಿದ್ದ ಕೆಲಸ ಕೇಳಿದರೆ ಪೊಲೀಸರೇ ಶಾಕ್ ಆಗಿದ್ದಾರೆ! ಕದ್ದ ಅಸಲಿ ಒಡವೆ ಕೈಗೆ ಸಿಕ್ಕ ಕೂಡಲೇ, ಈಕೆ ಅದೇ ಡಿಸೈನ್‌ನ 'ರೋಲ್ ಗೋಲ್ಡ್' (ನಕಲಿ) ಒಡವೆಗಳನ್ನು ಮಾಡಿಸುತ್ತಿದ್ದಳು. ಅಸಲಿ ಚಿನ್ನವನ್ನು ಮಾರಿ ಹಣ ಮಾಡಿಕೊಳ್ಳುತ್ತಿದ್ದ ಈಕೆ, ತನ್ನ ಬಳಿ ಮಾತ್ರ ನಕಲಿ ಒಡವೆಗಳನ್ನು ಇಟ್ಟುಕೊಳ್ಳುತ್ತಿದ್ದಳು.
ಪೊಲೀಸರಿಗೇ ಕಥೆ ಕಟ್ಟಿದ ಕಿಲಾಡಿ
ಪೊಲೀಸರು ಕಳ್ಳ ಮುದಾಸೀರ್‌ನನ್ನು ಹಿಡಿದು ವಿಚಾರಣೆ ನಡೆಸಿದಾಗ, ಆತ "ನಾನು ತಬಸ್ಸುಂಗೆ ಚಿನ್ನ ಕೊಟ್ಟಿದ್ದೇನೆ" ಎಂದು ಬಾಯ್ಬಿಟ್ಟಿದ್ದಾನೆ. ಕೂಡಲೇ ಪೊಲೀಸರು ಈಕೆಯ ಮನೆಗೆ ದಾಳಿ ಮಾಡಿದಾಗ, ಈಕೆ ತುಂಬಾ ನಾಜೂಕಾಗಿ ನಕಲಿ ಒಡವೆಗಳನ್ನು ಹೊರತೆಗೆದು, "ನೋಡಿ ಸಾರ್, ಆ ಕಳ್ಳ ನನಗೆ ಕೊಟ್ಟಿದ್ದೇ ಇದು. ಅವನು ನನ್ನನ್ನು ಮೋಸ ಮಾಡಿದ್ದಾನೆ, ಇದು ಅಸಲಿ ಚಿನ್ನವೇ ಅಲ್ಲ" ಎಂದು ಕಣ್ಣೀರು ಹಾಕುತ್ತಾ ಕಥೆ ಕಟ್ಟಿದ್ದಾಳೆ.
ಕಳ್ಳ ಕೊಟ್ಟಿದ್ದು ನಕಲಿ ಚಿನ್ನ ಎಂದು ನಂಬಿಸಿ ಪೊಲೀಸರಿಂದ ನುಣುಚಿಕೊಳ್ಳುವುದು ಈಕೆಯ ಪ್ಲಾನ್ ಆಗಿತ್ತು. ಆದರೆ ಆರ್ ಟಿ ನಗರ ಪೊಲೀಸರು ಸುಮ್ಮನೆ ಬಿಡುತ್ತಾರೆಯೇ? ತಮ್ಮದೇ ಶೈಲಿಯಲ್ಲಿ 'ಬಿಸಿ' ಮುಟ್ಟಿಸಿ ವಿಚಾರಣೆ ನಡೆಸಿದಾಗ, ಈಕೆ ಅಸಲಿ ಚಿನ್ನ ಮಾರಿ ನಕಲಿ ಒಡವೆ ಮಾಡಿಸಿ ಇಟ್ಟುಕೊಂಡಿದ್ದ ಸತ್ಯ ಎಳೆಎಳೆಯಾಗಿ ಹೊರಬಂದಿದೆ.
ಪೊಲೀಸರ ಬಲೆಗೆ ಬಿದ್ದಿದ್ದು ಹೇಗೆ?
ಮನೆಯೊಂದರ ಬೀಗ ಒಡೆದು ಸುಮಾರು 80 ಗ್ರಾಂ ಚಿನ್ನ ಕಳವು ಮಾಡಿದ್ದ ಬಗ್ಗೆ ಆರ್ ಟಿ ನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು. ತನಿಖೆ ಕೈಗೆತ್ತಿಕೊಂಡ ಪೊಲೀಸರು ಮೊದಲು ಮುದಾಸೀರ್‌ನನ್ನು ಹೆಡೆಮುರಿ ಕಟ್ಟಿದ್ದಾರೆ. ಆತನ ಮೂಲಕ ಈ ಐನಾತಿ ಲೇಡಿಯ ಜಾಲ ಬಯಲಾಗಿದೆ. ಸದ್ಯ ಪೊಲೀಸರು ಈ ಖತರ್ನಾಕ್ ಜೋಡಿಯಿಂದ 10.55 ಲಕ್ಷ ರೂಪಾಯಿ ಮೌಲ್ಯದ ಸುಮಾರು 75 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.
ಕಳ್ಳನಗಿಂತ ಕಳ್ಳ ಮಾಲು ಕೊಂಡವಳು ಹೆಚ್ಚು ಬುದ್ಧಿವಂತೆ ಎಂಬಂತೆ ವರ್ತಿಸಿದ್ದ ಈಕೆ, ಈಗ ಜೈಲು ಕಂಬಿ ಎಣಿಸುವಂತಾಗಿದೆ. ಸಾರ್ವಜನಿಕರೇ ಎಚ್ಚರ, ಇಂತಹ ಕಿಲಾಡಿಗಳು ನಿಮ್ಮ ಸುತ್ತಮುತ್ತಲೂ ಇರಬಹುದು!