ಕರ್ನಾಟಕ ರಾಜಕೀಯದಲ್ಲಿ ಇವತ್ತು ಒಂದು ಸುದೀರ್ಘ ಆಡಳಿತದ ಅಧ್ಯಾಯ ಮುಕ್ತಾಯವಾಗುತ್ತಿದೆ. ಸಿಎಂ ಸಿದ್ದರಾಮಯ್ಯ ಅವರು ಇಂದು ಮಧ್ಯಾಹ್ನ ತಮ್ಮ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆ ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ನಡೆದ ಸಚಿವರ ಮಹತ್ವದ ‘ಬ್ರೇಕ್ಫಾಸ್ಟ್ ಮೀಟಿಂಗ್’ನಲ್ಲಿ ಸಿದ್ದರಾಮಯ್ಯ ಅವರು ತಮ್ಮ ಪದತ್ಯಾಗದ ನಿರ್ಧಾರವನ್ನು ಪ್ರಕಟಿಸಿದಾಗ ಒಳಗಡೆ ಎಂತಹ ಭಾವುಕ ವಾತಾವರಣ ಸೃಷ್ಟಿಯಾಗಿತ್ತು ಎಂಬುದನ್ನು ಸಚಿವ ಆರ್. ಬಿ. ತಿಮ್ಮಾಪುರ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.
"ಹಲವು ಟೀಕೆಗಳು ಕೇಳಿಬಂದರೂ ಬಡವರಿಗೆ ಅನ್ನ ಕೊಟ್ಟ ತಾಯಿ ಹೃದಯ ಸಿದ್ದರಾಮಯ್ಯ ಅವರದ್ದು. ಇವತ್ತಿನ ಸಭೆಯಲ್ಲಿ ಅವರು ರಾಜೀನಾಮೆ ಕೊಡುವ ವಿಚಾರ ಹೇಳಿದಾಗ ನಾನೂ ಸೇರಿದಂತೆ ಅಲ್ಲಿದ್ದ ಹೆಚ್ಚಿನ ಸಚಿವರಿಗೆ ಕಣ್ಣೀರು ತಡೆಯಲು ಸಾಧ್ಯವಾಗಲಿಲ್ಲ" ಎಂದು ತಿಮ್ಮಾಪುರ ಭಾವುಕರಾಗಿ ನುಡಿದಿದ್ದಾರೆ.
"ನಾನು ರಾಜೀನಾಮೆ ಕೊಡ್ತೇನೆ" ಅಂದಾಗ ಇಡೀ ಸಭೆ ಸೈಲೆಂಟ್!
ಉಪಹಾರ ಸಭೆಯಲ್ಲಿ ನಡೆದ ಹೈ-ಡ್ರಾಮಾವನ್ನು ವಿವರಿಸಿದ ಸಚಿವ ಆರ್. ಬಿ. ತಿಮ್ಮಾಪುರ, "ಸಭೆ ಚೆನ್ನಾಗಿಯೇ ನಡೀತಿತ್ತು. ಆದರೆ ಯಾವಾಗ ಸಿಎಂ ಸಿದ್ದರಾಮಯ್ಯ ಅವರು 'ನಾನು ಹೈಕಮಾಂಡ್ ಸೂಚನೆಯಂತೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡ್ತೇನೆ' ಅಂದರೋ, ಇಡೀ ಸಚಿವ ಸಂಪುಟದ ಸದಸ್ಯರು ಒಂದು ಕ್ಷಣ ಶಾಕ್ ಆದರು. ಇಡೀ ಸಭೆಯಲ್ಲಿ ಮೌನ ಆವರಿಸಿತು. ನನ್ನ ಕಣ್ಣಲ್ಲೂ ನೀರು ಬಂತು, ಹೆಚ್ಚಿನ ಸಚಿವರು ಅಳಲು ಶುರುಮಾಡಿದರು. ಸಚಿವರು ಕಣ್ಣೀರು ಹಾಕುವುದನ್ನು ನೋಡಿ ಕೊನೆಗೆ ಸಿದ್ದರಾಮಯ್ಯನವರೂ ಭಾವುಕರಾಗಿ ಕಣ್ಣೀರಾದರು" ಎಂದಿದ್ದಾರೆ.
ಅನ್ನಭಾಗ್ಯದ ದಿಟ್ಟತನ ಹಾಗೂ ಒಳಮೀಸಲಾತಿಯ ಶಕ್ತಿ
ಸಿದ್ದರಾಮಯ್ಯ ಅವರ ಜನಪರ ಕೆಲಸಗಳನ್ನು ನೆನೆಸಿಕೊಂಡ ತಿಮ್ಮಾಪುರ, "ಸಿದ್ದರಾಮಯ್ಯನವರು ನಡೆದು ಬಂದ ದಾರಿ ಹಾಗೂ ಅವರ ಆಡಳಿತ ಇಂದಿನ ರಾಜಕಾರಣಿಗಳಿಗೆ ದೊಡ್ಡ ಮಾರ್ಗದರ್ಶನ. ಬಡವರಿಗೆ, ಅಸಹಾಯಕರಿಗೆ ಸಹಾಯ ಮಾಡಬೇಕು ಅಂತ ಬಂದರೆ ಅವರು ಎಂತಹ ವಿರೋಧಗಳಿದ್ದರೂ ಗಟ್ಟಿ ನಿರ್ಧಾರ ತಗೋತಿದ್ದರು. ನಾವು ಅನ್ನಭಾಗ್ಯ ಯೋಜನೆ ತಂದಾಗ, 'ಬಡವರಿಗೆ ಇಷ್ಟೊಂದು ಅಕ್ಕಿ ಕೊಟ್ಟರೆ ಜನ ಸೋಮಾರಿಗಳಾಗಿ ದುಡಿಯಲ್ಲ' ಅಂತ ಎಷ್ಟೋ ಜನ ಟೀಕೆ ಮಾಡಿದ್ದರು. ಆದರೆ ಸಿದ್ದರಾಮಯ್ಯ ಅವರು 'ನನ್ನ ರಾಜ್ಯದ ಬಡವರಿಗೆ ಅನ್ನ ಕೊಡಬೇಕಾದ್ದು ನನ್ನ ಕರ್ತವ್ಯ' ಎಂದು ತಾಯಿ ಹೃದಯದಿಂದ ಆ ಯೋಜನೆ ಜಾರಿ ಮಾಡಿದರು" ಎಂದು ಸ್ಮರಿಸಿದ್ದಾರೆ.
ಅಷ್ಟೇ ಅಲ್ಲ, ಇವತ್ತು ಒಳಮೀಸಲಾತಿಯಂತಹ ಅತ್ಯಂತ ಜಟಿಲವಾದ ಸಮಸ್ಯೆಯನ್ನು ಕೈಗೆತ್ತಿಕೊಂಡು ರಾಜ್ಯದ ಹಿಂದುಳಿದ, ಶೋಷಿತ ಜನಾಂಗಕ್ಕೆ ದೊಡ್ಡ ಶಕ್ತಿ ಕೊಟ್ಟಿದ್ದೇ ಸಿದ್ದರಾಮಯ್ಯ. ಕಾಂಗ್ರೆಸ್ ಪಕ್ಷ ಅವರ ನಾಯಕತ್ವವನ್ನು ಗುರುತಿಸಿ ದೇವರಾಜ್ ಅರಸು ಅವರ ಅವಧಿಗಿಂತಲೂ ಹೆಚ್ಚಿನ ಕಾಲ ಅವರಿಗೆ ಸಿಎಂ ಆಗಲು ಅವಕಾಶ ಕೊಟ್ಟಿತು, ಅವರು ಪಕ್ಷಕ್ಕೂ ದೊಡ್ಡ ಶಕ್ತಿ ತುಂಬಿದರು ಎಂದು ಹೊಗಳಿದ್ದಾರೆ.
"ನನ್ನ ರಾಜಕೀಯ ಮುಗೀತು ಅನ್ಕೊಂಡಾಗ ಮರುಜೀವ ಕೊಟ್ಟರು!"
ಖುದ್ದು ತಮಗೆ ಸಿದ್ದರಾಮಯ್ಯ ಮಾಡಿದ ಸಹಾಯವನ್ನು ನೆನೆದು ತಿಮ್ಮಾಪುರ ಭಾವುಕರಾದರು. "ನಾನು ಚುನಾವಣೆಯಲ್ಲಿ ಸತತವಾಗಿ ಮೂರು ಬಾರಿ ಸೋತು ಸುಣ್ಣವಾಗಿದ್ದೆ. ನನ್ನ ರಾಜಕೀಯ ಜೀವನ ಇಷ್ಟಕ್ಕೇ ಮುಗಿದು ಹೋಯ್ತು ಅಂದುಕೊಂಡಿದ್ದ ಸನ್ನಿವೇಶ ಅದು. ಅಂತಹ ಕಠಿಣ ಸಮಯದಲ್ಲಿ ಸಿದ್ದರಾಮಯ್ಯ ಅವರು ನನ್ನ ಕೈಹಿಡಿದು ಎಂಎಲ್‌ಸಿ ಮಾಡಿದರು, ಸಚಿವ ಸ್ಥಾನವನ್ನೂ ಕೊಟ್ಟರು. ಅಷ್ಟೇ ಅಲ್ಲ, ತಿಮ್ಮಾಪುರಗೆ ಯಾಕೆ ಮಂತ್ರಿ ಸ್ಥಾನ ಕೊಡಬೇಕು ಅನ್ನೋದನ್ನು ಎಲ್ಲರ ಮುಂದೆ ದಿಟ್ಟತನದಿಂದ ಸಮರ್ಥಿಸಿಕೊಂಡರು. ಇಂತಹ ಲೀಡರ್‌ಶಿಪ್ ರಾಜ್ಯಕ್ಕೆ ಬೇಕಿತ್ತು" ಎಂದಿದ್ದಾರೆ.
ಪ್ರಜಾಪ್ರಭುತ್ವದ ತಾಪತ್ರಯ ಹಾಗೂ ಡಿಕೆಶಿಗೆ ಸಿದ್ದು ಕೊಟ್ಟ ಸಂದೇಶ
ಸಭೆಯಲ್ಲಿ ಸಿದ್ದರಾಮಯ್ಯ ಅವರು ದೇಶದ ಪ್ರಸ್ತುತ ರಾಜಕೀಯ ಸ್ಥಿತಿಗತಿ ಬಗ್ಗೆಯೂ ಕಳವಳ ವ್ಯಕ್ತಪಡಿಸಿದ್ದಾರಂತೆ. "ಇವತ್ತು ದೇಶದಲ್ಲಿ ರಾಜಕಾರಣ ಎಷ್ಟರ ಮಟ್ಟಿಗೆ ಕೆಟ್ಟುಹೋಗಿದೆ ಎಂದರೆ, ಪಶ್ಚಿಮ ಬಂಗಾಳ ಮತ್ತು ಮಹಾರಾಷ್ಟ್ರವನ್ನು ನೋಡಿ. ಅಧಿಕಾರದ ಲಾಲಸೆಯಿಂದಾಗಿ ಇವತ್ತು ಪ್ರಜಾಪ್ರಭುತ್ವ ಎಂತಹ ತಾಪತ್ರಯಕ್ಕೆ ಸಿಲುಕಿದೆ ಎಂಬುದನ್ನು ಸಿದ್ದರಾಮಯ್ಯ ಸಚಿವರಿಗೆ ವಿವರವಾಗಿ ಹೇಳಿದರು. ವಿಪಕ್ಷಗಳ ರಾಜಕಾರಣದ ಬಗ್ಗೆ ಎಚ್ಚರಿಕೆಯಿಂದ ಇರಲು ಸೂಚಿಸಿದರು" ಎಂದು ತಿಮ್ಮಾಪುರ ತಿಳಿಸಿದ್ದಾರೆ.
ಕೊನೆಯಲ್ಲಿ ಡಿ.ಕೆ. ಶಿವಕುಮಾರ್ ಅವರ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, "ಎಐಸಿಸಿ (AICC) ವರಿಷ್ಠರು ಮುಂದಿನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಗ್ತಾರೆ ಅಂತ ಹೇಳಿದ್ದಾರೆ. ನಾನು ಮೊದಲೇ ಹೇಳಿದ್ದೆ, ರಾಹುಲ್ ಗಾಂಧಿಯವರು ಯಾವಾಗ ಹೇಳ್ತಾರೋ ಆ ಕ್ಷಣವೇ ರಾಜೀನಾಮೆ ಕೊಡ್ತೇನೆ ಅಂತ. ಅದರಂತೆ ಈಗ ಕೊಡುತ್ತಿದ್ದೇನೆ" ಎಂದರು. ಆಗ ಅಲ್ಲೇ ಇದ್ದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಅತ್ಯಂತ ವಿನಯದಿಂದ, "ಸರ್, ಮುಂದಿನ ದಿನಗಳಲ್ಲಿ ನಿಮ್ಮ ಮಾರ್ಗದರ್ಶನದಲ್ಲೇ ನಾನು ಸರ್ಕಾರವನ್ನು ನಡೆಸಿಕೊಂಡು ಹೋಗುತ್ತೇನೆ" ಎಂದು ಭರವಸೆ ನೀಡಿದ್ದಾರೆ.
ಸಚಿವ ಸಂಪುಟದ ಇಂದಿನ ಸಭೆಯಲ್ಲಿ ಯಾವುದೇ ಇಲಾಖೆ ಬದಲಾವಣೆ ಅಥವಾ ಬೇರೆ ಆಡಳಿತಾತ್ಮಕ ಗೊಂದಲಗಳ ಬಗ್ಗೆ ಚರ್ಚೆ ನಡೆದಿಲ್ಲ. ತಮ್ಮ ಇಡೀ ಅಧಿಕಾರಾವಧಿಯಲ್ಲಿ ಯಾವುದೇ ಕಪ್ಪು ಚುಕ್ಕೆ ಅಥವಾ ಆರೋಪ ಬರದಂತೆ ಸರ್ಕಾರ ನಡೆಸಲು ಸಹಕಾರ ಕೊಟ್ಟ ಎಲ್ಲ ಸಚಿವರಿಗೂ ಸಿದ್ದರಾಮಯ್ಯ ಧನ್ಯವಾದ ಹೇಳಿದ್ದಾರೆ. ಸಿದ್ದರಾಮಯ್ಯ ಅವರ ಈ ಭಾವುಕ ವಿದಾಯ ಇಡೀ ಕೈ ಪಾಳಯವನ್ನು ಸದ್ಯಕ್ಕೆ ಸೈಲೆಂಟ್ ಮಾಡಿದೆ. ಮುಂಬರುವ ಡಿಕೆಶಿ ಆಡಳಿತದತ್ತ ಎಲ್ಲರೂ ಮುಖ ಮಾಡುವಂತೆ ಮಾಡಿದೆ.