ನಗುನಗುತ ಆಟವಾಡಬೇಕಿದ್ದ ಮಗು, ಆಟದ ಮೈದಾನದಲ್ಲೇ ಪ್ರಾಣ ಕಳೆದುಕೊಂಡಿರುವ ಘಟನೆ ಪುಣೆಯ ಹಡಪ್ಸರ್‌ನ ಮಗರಪಟ್ಟಾ ಪ್ರದೇಶದಲ್ಲಿ ನಡೆದಿದೆ. ಹೌಸಿಂಗ್ ಸೊಸೈಟಿಯ ಆಟದ ಮೈದಾನದಲ್ಲಿದ್ದ ಕಬ್ಬಿಣದ ಜಾರುಬಂಡೆ (Slide) ಮಗುವಿನ ತಲೆಯ ಮೇಲೆ ಬಿದ್ದ ಪರಿಣಾಮ ನಾಲ್ಕೂವರೆ ವರ್ಷದ ಅನಿಕ್ಕಾ ಮೃತಪಟ್ಟಿದ್ದಾಳೆ.
ಮಗರಪಟ್ಟಾದ ನೋಬಲ್ ಆಸ್ಪತ್ರೆ ಸಮೀಪವಿರುವ 'ವೇದ ವಿಹಾರ್ ಸೊಸೈಟಿ'ಯಲ್ಲಿ ಈ ಘಟನೆ ನಡೆದಿದೆ. ಮೃತ ಬಾಲಕಿಯನ್ನು ಅನಿಕ್ಕಾ ನವನಾಥ್ ದೇವಿಕರ್ (4) ಎಂದು ಗುರುತಿಸಲಾಗಿದೆ. ಏಪ್ರಿಲ್ 7ರಂದು ಮಧ್ಯಾಹ್ನ ಸುಮಾರು 12:30ರ ಸಮಯದಲ್ಲಿ ಅನಿಕ್ಕಾ ತನ್ನ ಮನೆಯವರ ಜೊತೆ ಸೊಸೈಟಿ ಆವರಣದಲ್ಲಿ ಆಟವಾಡುತ್ತಿದ್ದಳು. ಈ ವೇಳೆ ಅಲ್ಲಿದ್ದ ಕಬ್ಬಿಣದ ಜಾರುಬಂಡೆ ಇದ್ದಕ್ಕಿದ್ದಂತೆ ಮಗುವಿನ ತಲೆಯ ಮೇಲೆ ಕುಸಿದು ಬಿದ್ದಿದೆ.
ಜಾರುಬಂಡೆ ಅಪ್ಪಳಿಸಿದ ರಭಸಕ್ಕೆ ಮಗುವಿನ ತಲೆಗೆ ತೀವ್ರ ಪೆಟ್ಟು ಬಿದ್ದು, ಮಗು ಪ್ರಜ್ಞೆ ತಪ್ಪಿ ಬಿದ್ದಿತ್ತು. ತಕ್ಷಣ ಮಗುವನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಸಾವನ್ನಪ್ಪಿದ್ದಾಳೆ.
ತಂದೆಯ ಆಕ್ರೋಶ: "ಮುಂದೆಯೇ ಹೇಳಿದ್ರೂ ಕೇಳಲಿಲ್ಲ!"
ಬಾಲಕಿಯ ತಂದೆ ನವನಾಥ್ ಪಾಂಡುರಂಗ್ ದೇವಿಕರ್ (34) ಅವರು ಹಡಪ್ಸರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ದೂರಿನಲ್ಲಿ ಅವರು ಸೊಸೈಟಿ ಪದಾಧಿಕಾರಿಗಳ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
"ಆ ಜಾರುಬಂಡೆಯನ್ನು ಸರಿಯಾಗಿ ಅಳವಡಿಸಿರಲಿಲ್ಲ. ಅದು ಯಾವ ಕ್ಷಣದಲ್ಲಾದರೂ ಬೀಳಬಹುದು ಅಂತ ನಮಗೆ ಮೊದಲೇ ಗೊತ್ತಿತ್ತು. ಈ ಬಗ್ಗೆ ನಾನು ಹಲವು ಬಾರಿ ಸೊಸೈಟಿಯ ಚೇರ್ಮನ್ ಮತ್ತು ಉಳಿದವರಿಗೆ ತಿಳಿಸಿದ್ದೆ. ಆ ಅಪಾಯಕಾರಿ ಆಟದ ಸಾಮಾನನ್ನು ಅಲ್ಲಿಂದ ತೆಗೆಯಿರಿ ಅಂತ ಎಷ್ಟೇ ಕೇಳಿಕೊಂಡರೂ ಅವರು ಮಾತ್ರ ತಲೆಕೆಡಿಸಿಕೊಳ್ಳಲೇ ಇಲ್ಲ. ಅವರ ಈ ಬೇಜವಾಬ್ದಾರಿತನವೇ ಇವತ್ತು ನನ್ನ ಮಗಳ ಪ್ರಾಣ ತೆಗೆದಿದೆ," ಎಂದು ನವನಾಥ್ ಅವರು ಕಣ್ಣೀರಿಟ್ಟಿದ್ದಾರೆ.
ಪೊಲೀಸರ ಕ್ರಮ: ಪದಾಧಿಕಾರಿಗಳ ವಿರುದ್ಧ ಕೇಸ್!
ಮಗುವಿನ ತಂದೆ ನೀಡಿದ ದೂರಿನ ಆಧಾರದ ಮೇಲೆ ಹಡಪ್ಸರ್ ಪೊಲೀಸರು ಸೊಸೈಟಿಯ ಚೇರ್ಮನ್ ಮತ್ತು ಇತರ ಪದಾಧಿಕಾರಿಗಳ ವಿರುದ್ಧ 'ನಿರ್ಲಕ್ಷ್ಯದ ಪ್ರಕರಣ' ದಾಖಲಿಸಿಕೊಂಡಿದ್ದಾರೆ. ಸರಿಯಾದ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದ ಕಾರಣಕ್ಕೆ ಮತ್ತು ದೂರು ನೀಡಿದರೂ ಸ್ಪಂದಿಸದ ಕಾರಣಕ್ಕೆ ಇವರೆಲ್ಲರನ್ನೂ ಆರೋಪಿಗಳೆಂದು ಹೆಸರಿಸಲಾಗಿದೆ.
ಸದ್ಯ ಅಸಿಸ್ಟೆಂಟ್ ಪೊಲೀಸ್ ಇನ್ಸ್‌ಪೆಕ್ಟರ್ ಸಾನೆ ಅವರು ಈ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಆಟದ ಸಾಮಾನು ಕಿತ್ತುಬಂದಿದ್ದು ಹೇಗೆ? ಅದಕ್ಕೆ ಮೆಂಟೆನೆನ್ಸ್ ಮಾಡಿರಲಿಲ್ವಾ? ಅನ್ನೋ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.
ಇದು ಎಲ್ಲರಿಗೂ ಎಚ್ಚರಿಕೆ!
ಈ ಘಟನೆ ನಮ್ಮ ಸುತ್ತಮುತ್ತಲಿರುವ ಅಪಾರ್ಟ್‌ಮೆಂಟ್ ಮತ್ತು ಸೊಸೈಟಿಗಳಿಗೆ ಒಂದು ಪಾಠದಂತಿದೆ. ಮಕ್ಕಳ ಆಟದ ಮೈದಾನದಲ್ಲಿರುವ ಸಾಮಗ್ರಿಗಳು ಎಷ್ಟು ಗಟ್ಟಿಯಾಗಿವೆ ಅನ್ನೋದನ್ನ ಆಗಾಗ ಚೆಕ್ ಮಾಡಬೇಕಾಗುತ್ತದೆ. ನಾವು ಕೊಡೋ ಮೆಂಟೆನೆನ್ಸ್ ಹಣ ಸರಿಯಾಗಿ ಬಳಕೆಯಾಗುತ್ತಿದೆಯಾ? ಮಕ್ಕಳ ಸುರಕ್ಷತೆಗೆ ಮೊದಲ ಆದ್ಯತೆ ಸಿಗುತ್ತಿದೆಯಾ? ಅನ್ನೋದನ್ನ ಪೋಷಕರೂ ಕೂಡ ಗಮನಿಸಬೇಕಿದೆ.