Mar 16, 2026 Languages : ಕನ್ನಡ | English

ಪರಿಚಯವಾದ ಎರಡೇ ತಿಂಗಳಿಗೆ ಗರ್ಭಿಣಿ - ಮದುವೆ ಹಿಂದಿನ ಅಸಲಿ ರಹಸ್ಯ ಬಿಚ್ಚಿಟ್ಟ ನಟಿ ಅಮಲಾ ಪೌಲ್!!

ದಕ್ಷಿಣ ಭಾರತದ ಖ್ಯಾತ ನಟಿ ಅಮಲಾ ಪೌಲ್ ಅವರು ತಮ್ಮ ವೈಯಕ್ತಿಕ ಜೀವನದ ಬಗ್ಗೆ ಹಂಚಿಕೊಂಡಿರುವ ಸ್ಫೋಟಕ ಸತ್ಯ ಈಗ ಸಿನಿರಂಗದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ತಮ್ಮ ಮದುವೆ ಮತ್ತು ಗರ್ಭಧಾರಣೆಯ ಬಗ್ಗೆ ಅವರು ನೀಡಿದ ಮುಕ್ತ ಹೇಳಿಕೆಯು ಸಮಾಜದ ಕಟ್ಟುಪಾಡುಗಳನ್ನು ಮೀರಿ ನಿಂತ ಅವರ ಧೈರ್ಯವನ್ನು ಎತ್ತಿ ತೋರಿಸಿದೆ.

ಮದುವೆಗೂ ಮುನ್ನ ತಾಯಿಯಾಗುವ ನಿರ್ಧಾರದ ಬಗ್ಗೆ ಅಮಲಾ ಮುಕ್ತ ಮಾತು
ಮದುವೆಗೂ ಮುನ್ನ ತಾಯಿಯಾಗುವ ನಿರ್ಧಾರದ ಬಗ್ಗೆ ಅಮಲಾ ಮುಕ್ತ ಮಾತು

ಮಲಯಾಳಂ ಮೂಲದ ನಟಿ ಅಮಲಾ ಪೌಲ್ ಅವರು ಕನ್ನಡದಲ್ಲಿ ಸುದೀಪ್ ಅಭಿನಯದ 'ಹೆಬ್ಬುಲಿ' ಚಿತ್ರದ ಮೂಲಕ ಕನ್ನಡಿಗರಿಗೂ ಪರಿಚಿತರಾದವರು. ತಮಿಳು ಮತ್ತು ತೆಲುಗಿನಲ್ಲಿ ಸ್ಟಾರ್ ನಟಿಯಾಗಿ ಮಿಂಚುತ್ತಿರುವ ಅಮಲಾ, ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ತಮ್ಮ ಜೀವನದ ಅತಿದೊಡ್ಡ ರಹಸ್ಯವನ್ನು ಬಯಲು ಮಾಡಿದ್ದಾರೆ. ಅದು ಅವರ ಗರ್ಭಧಾರಣೆ ಮತ್ತು ಮದುವೆಯ ನಡುವಿನ ಸಮಯದ ಬಗ್ಗೆ.

ಅಮಲಾ ಪೌಲ್ ಮತ್ತು ಅವರ ಪತಿ ಜಗತ್ ದೇಸಾಯಿ 2023ರಲ್ಲಿ ವಿವಾಹವಾದರು. ಈ ಜೋಡಿಯ ಪ್ರೇಮಕಥೆ ಮತ್ತು ಮದುವೆ ಸಿನೆಮಾ ಶೈಲಿಯಲ್ಲಿ ನಡೆದಿದೆ. ಅಮಲಾ ಹೇಳುವ ಪ್ರಕಾರ, ಅವರು ಜಗತ್ ದೇಸಾಯಿ ಅವರನ್ನು ಭೇಟಿಯಾಗಿ ಕೇವಲ ಎರಡು ತಿಂಗಳಾಗಿದ್ದಾಗ ತಾನು ಗರ್ಭಿಣಿಯಾಗಿದ್ದೆ ಎಂದು ತಿಳಿದುಬಂದಿತು. ಈ ವಿಷ್ಯ ತಿಳಿದ ಮೇಲೆ ಅವರು ಮದುವೆಯಾಗಲು ನಿರ್ಧರಿಸಿದರು.

ಅಮಲಾ ಪೌಲ್ ಈ ಬಗ್ಗೆ ಮಾತನಾಡುತ್ತಾ, "ನಾವಿಬ್ಬರು ಭೇಟಿಯಾದ ಅಲ್ಪ ಸಮಯದಲ್ಲೇ ನಾನು ತಾಯಿಯಾಗುವ ಸುದ್ದಿ ತಿಳಿಯಿತು. ಅದಾದ ನಂತರವೇ ನಮ್ಮ ವಿವಾಹ ಕಾರ್ಯಕ್ರಮಗಳು ನಡೆದವು. ಇದರಲ್ಲಿ ಮುಚ್ಚಿಡುವಂತದ್ದು ಏನೂ ಇಲ್ಲ" ಎಂದು ನೇರವಾಗಿ ಹೇಳಿದ್ದಾರೆ. 2024ರ ಜೂನ್‌ನಲ್ಲಿ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದು, ಆ ಮಗುವಿಗೆ ಇಳೈ (Ilai) ಎಂದು ಹೆಸರಿಟ್ಟಿದ್ದಾರೆ.

ಮಗು ಬಂದ ನಂತರ ಜೀವನದಲ್ಲಿ ಆದ ಬದಲಾವಣೆಗಳ ಬಗ್ಗೆ ಅಮಲಾ ಬಹಳ ಭಾವುಕರಾಗಿ ಮಾತನಾಡಿದ್ದಾರೆ. "ಒಂದು ವೇಳೆ ಮಗು ನಮ್ಮ ಜೀವನಕ್ಕೆ ಬರದೇ ಹೋಗಿದ್ದರೆ, ನಮ್ಮಿಬ್ಬರ ಸಂಬಂಧ ಹೇಗಿರುತ್ತಿತ್ತು ಎಂದು ಊಹಿಸಿಕೊಳ್ಳುವುದು ಕಷ್ಟ. ಮಗು ಬಂದ ಮೇಲೆ ನಮ್ಮ ನಡುವೆ ಇದ್ದ ಸಣ್ಣಪುಟ್ಟ ಅಹಂಗಳು (Ego) ಮಾಯವಾಗಿವೆ. ಈಗ ನಾವಿಬ್ಬರೂ ನಮ್ಮ ಮಗುವಿಗೆ ಮೊದಲ ಪ್ರಾಮುಖ್ಯತೆ ನೀಡುತ್ತೇವೆ. ಇದರಿಂದ ನಮ್ಮ ವೈವಾಹಿಕ ಜೀವನ ಇನ್ನಷ್ಟು ಆರೋಗ್ಯಕರವಾಗಿ ಬೆಳೆದಿದೆ" ಎಂದು ಹೇಳಿದ್ದಾರೆ.

ಮಗು ದೇವರ ರೂಪದಲ್ಲಿ ಬಂದು ತಮ್ಮಿಬ್ಬರ ಪ್ರೀತಿಯನ್ನು ಒಂದುಗೂಡಿಸಿದೆ ಎಂಬುದು ಅವರ ನಂಬಿಕೆ. ಈ ಮಗುವಿನ ಆಗಮನವು ಅವರ ಬದುಕಿನ ದೃಷ್ಟಿಕೋನವನ್ನೇ ಬದಲಿಸಿದೆ ಎಂದು ಅವರು ಕೃತಜ್ಞತೆ ಸಲ್ಲಿಸಿದ್ದಾರೆ.

'ನೀಲತಾವರಂ' ಸಿನಿಮಾದಿಂದ ಆರಂಭವಾದ ಅಮಲಾ ಪೌಲ್ ಅವರ ಸಿನೆಮಾ ಪಯಣ ಅನೇಕ ಏರಿಳಿತಗಳನ್ನು ಕಂಡಿದೆ. ವೈಯಕ್ತಿಕ ಜೀವನದ ಮೊದಲ ವಿವಾಹ ವಿಚ್ಛೇದನದ ನಂತರ ಅವರು ಸಾಕಷ್ಟು ಟೀಕೆಗಳನ್ನು ಎದುರಿಸಿದ್ದರು. ಆದರೆ ಎರಡನೇ ಬಾರಿ ಜಗತ್ ದೇಸಾಯಿ ಅವರೊಂದಿಗೆ ಬದುಕು ಆರಂಭಿಸಿದಾಗ ಅವರು ಹೆಚ್ಚು ಸಂತೋಷವಾಗಿರುವುದನ್ನು ಅವರ ಸೋಶಿಯಲ್ ಮೀಡಿಯಾ ಪೋಸ್ಟ್‌ಗಳು ತಿಳಿಸುತ್ತವೆ.

ಸದ್ಯ ಅಮಲಾ ಪೌಲ್ ಅವರ ಈ ಪ್ರಾಮಾಣಿಕ ಮಾತುಗಳಿಗೆ ಸೋಷಿಯಲ್ ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕೆಲವರು ಅವರ ಧೈರ್ಯವನ್ನು ಮೆಚ್ಚಿದರೆ, ಇನ್ನು ಕೆಲವರು ಸಂಪ್ರದಾಯದ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ಯಾವುದಕ್ಕೂ ತಲೆಕೆಡಿಸಿಕೊಳ್ಳದ ಅಮಲಾ, ಈಗ ತಮ್ಮ ತಾಯ್ತನದ ಸವಿಯನ್ನು ಸವಿಯುತ್ತಿದ್ದಾರೆ.