Apr 21, 2026 Languages : ಕನ್ನಡ | English

ದೇವೇಗೌಡರ ಫಿಟ್ನೆಸ್ ರಹಸ್ಯ ಬಿಚ್ಚಿಟ್ಟ ಪ್ರಧಾನಿ ಮೋದಿ - ದೆಹಲಿಯಲ್ಲಿ ಮುದ್ದೆ ಫೇಮಸ್ ಯಾಕೆ ಗೊತ್ತಾ?

ಕರ್ನಾಟಕ ಅಂದ್ರೆ ಸಾಕು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಎಲ್ಲಿಲ್ಲದ ಪ್ರೀತಿ. ಅದರಲ್ಲೂ ಸಕ್ಕರೆ ನಾಡು ಮಂಡ್ಯಕ್ಕೆ ಬಂದ್ರೆ ಅವರ ಉತ್ಸಾಹ ಇಮ್ಮಡಿಯಾಗುತ್ತದೆ. ಇತ್ತೀಚೆಗೆ ಮಂಡ್ಯದ ಆದಿಚುಂಚನಗಿರಿ ಮಠದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಮೋದಿ, ನಮ್ಮ ಮಣ್ಣಿನ ಸೊಗಡು ಮತ್ತು ಆಹಾರದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಅವರ ಭಾಷಣದ ಹೈಲೈಟ್ಸ್ ಇಲ್ಲಿದೆ ನೋಡಿ.

"ರಾಗಿ ಮುದ್ದೆ ಅಂದ್ರೆ ಬರೀ ಆಹಾರವಲ್ಲ, ಅದೊಂದು ಅದ್ಭುತ ಶಕ್ತಿ"

ದೇವೇಗೌಡರು ಮತ್ತು ರಾಗಿ ಮುದ್ದೆಯ ಕರಾಮತ್ತು!
ವೇದಿಕೆಯ ಮೇಲೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಕುಳಿತಿದ್ದರು. ಅವರನ್ನೇ ನೋಡುತ್ತಾ ಮೋದಿ ಒಂದು ಮಾತು ಹೇಳಿದರು, "ರಾಗಿ ಮುದ್ದೆ ಅಂದ್ರೆ ಅದು ಬರೀ ಆಹಾರವಲ್ಲ, ಅದೊಂದು ಅದ್ಭುತ ಶಕ್ತಿ". ಅಷ್ಟೇ ಅಲ್ಲ, ದೆಹಲಿ ಮಟ್ಟದಲ್ಲಿ ರಾಗಿ ಮುದ್ದೆಯನ್ನು ಫೇಮಸ್ ಮಾಡಿದ್ದೇ ದೇವೇಗೌಡರು ಎಂದು ಅವರು ನೆನಪಿಸಿಕೊಂಡರು. ಇಂದಿನ ಯುವಕರು ಪಿಜ್ಜಾ-ಬರ್ಗರ್ ಹಿಂದೆ ಹೋಗುವ ಬದಲು ರಾಗಿ ಮತ್ತು ನವಧಾನ್ಯಗಳನ್ನು ಹೆಚ್ಚಾಗಿ ಸೇವಿಸಬೇಕು ಎಂದು ಪ್ರಧಾನಿ ಕರೆ ನೀಡಿದರು. ರಾಗಿ ಮುದ್ದೆಯ ಶಕ್ತಿ ನಮ್ಮ ಯುವಪೀಳಿಗೆಯ ಆರೋಗ್ಯಕ್ಕೆ ಬಹಳ ಮುಖ್ಯ ಎಂಬುದು ಅವರ ಆಶಯವಾಗಿತ್ತು.

ತತ್ವಜ್ಞಾನ ಮತ್ತು ತಂತ್ರಜ್ಞಾನದ ಸಂಗಮ
ಕರ್ನಾಟಕದ ಬಗ್ಗೆ ಮಾತನಾಡುತ್ತಾ, ಈ ಮಣ್ಣಿನಲ್ಲಿ ವಿಶೇಷವಾದ ಗುಣವಿದೆ ಎಂದರು. ಇಲ್ಲಿ ಬಸವಣ್ಣನವರಂತಹ ತತ್ವಜ್ಞಾನಿಗಳ ಆಳವಾದ ಚಿಂತನೆಗಳೂ ಇವೆ, ಇಂದಿನ ಕಾಲಕ್ಕೆ ಬೇಕಾದ ಹೈಟೆಕ್ ಟೆಕ್ನಾಲಜಿಯ ಶಕ್ತಿಯೂ ಇದೆ. ಸಂಸ್ಕೃತಿ ಮತ್ತು ಆಧುನಿಕತೆ ಎರಡನ್ನೂ ಸಮತೋಲನದಲ್ಲಿ ಕೊಂಡೊಯ್ಯುವ ಶಕ್ತಿ ಕನ್ನಡಿಗರಿಗಿದೆ" ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಬಾಲಗಂಗಾಧರನಾಥ ಶ್ರೀಗಳ ಶೈಕ್ಷಣಿಕ ಕ್ರಾಂತಿ
ಆದಿಚುಂಚನಗಿರಿ ಮಠದ ಪೂಜ್ಯ ಬಾಲಗಂಗಾಧರನಾಥ ಸ್ವಾಮೀಜಿಯವರನ್ನು ಸ್ಮರಿಸಿದ ಮೋದಿ, ಶ್ರೀಗಳು ಕೇವಲ ಆಧ್ಯಾತ್ಮಿಕ ಗುರುಗಳಾಗಿರಲಿಲ್ಲ, ಅವರು ಸಮಾಜದ ಬಂಧುವಾಗಿದ್ದರು ಎಂದರು. ಹಳ್ಳಿಯಿಂದ ಬಂದ ಶ್ರೀಗಳಿಗೆ ಗ್ರಾಮೀಣ ಮಕ್ಕಳ ಕಷ್ಟ ಏನೆಂದು ಚೆನ್ನಾಗಿ ಗೊತ್ತಿತ್ತು. ಅದಕ್ಕೇ ಅವರು ಬಡವರಿಗಾಗಿ ಎಂಜಿನಿಯರಿಂಗ್ ಮತ್ತು ಮೆಡಿಕಲ್ ಕಾಲೇಜುಗಳನ್ನು ಕಟ್ಟಿ ಶೈಕ್ಷಣಿಕ ಕ್ರಾಂತಿ ಮಾಡಿದರು. ಭಕ್ತಿ ಎಂದರೆ ಎಲ್ಲವನ್ನೂ ಬಿಟ್ಟು ಹೋಗುವುದಲ್ಲ, ಸಮಾಜದ ಜವಾಬ್ದಾರಿ ಹೊರುವುದು ಎಂದು ಶ್ರೀಗಳು ತೋರಿಸಿಕೊಟ್ಟಿದ್ದಾರೆ ಎಂದು ಗುಣಗಾನ ಮಾಡಿದರು.

ಫಿಟ್ನೆಸ್ ಮಂತ್ರ ಮತ್ತು ಜನರ ಜವಾಬ್ದಾರಿ
ಬೊಜ್ಜು ಮತ್ತು ಬದಲಾಗುತ್ತಿರುವ ಜೀವನಶೈಲಿಯ ಬಗ್ಗೆ ಆತಂಕ ವ್ಯಕ್ತಪಡಿಸಿದ ಪ್ರಧಾನಿ, ಜನರಿಗೆ ಒಂದಷ್ಟು ಸರಳ ಸಲಹೆಗಳನ್ನು ನೀಡಿದರು:

ಆಹಾರದಲ್ಲಿ ಜಾಗ್ರತೆ: ಅಡುಗೆ ಎಣ್ಣೆಯ ಬಳಕೆಯನ್ನು ಕನಿಷ್ಠ ಶೇ. 10ರಷ್ಟು ಕಡಿಮೆ ಮಾಡಿ.

ಯೋಗ ಮತ್ತು ನವಧಾನ್ಯ: ನಿತ್ಯ ಯೋಗ ಮಾಡಿ ಮತ್ತು ಸಿರಿಧಾನ್ಯಗಳನ್ನು ಹೆಚ್ಚು ಬಳಸಿ.

ದೇಶ ಸುತ್ತಿ: ವಿದೇಶಕ್ಕೆ ಹೋಗುವ ಮುನ್ನ ನಮ್ಮ ದೇಶದ ಪ್ರವಾಸಿ ತಾಣಗಳನ್ನು (Domestic Tourism) ನೋಡಿ.

ಸ್ವಚ್ಛತೆ: ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ನಮ್ಮೆಲ್ಲರ ಕರ್ತವ್ಯ.