Mar 18, 2026 Languages : ಕನ್ನಡ | English

ಒಂದೇ ಕುಟುಂಬದ 9 ಜೀವಗಳು ಬಲಿ - ಮೂವರು ಪುಟ್ಟ ಮಕ್ಕಳೂ ಸೇರಿ ಇಡೀ ಮನೆ ಸ್ಮಶಾನವಾಗಿದ್ದು ಹೇಗೆ ಗೊತ್ತಾ!!

ದೇಶದ ರಾಜಧಾನಿ ದೆಹಲಿಯ ಪಾಲಂ ಪ್ರದೇಶದಲ್ಲಿ ಬುಧವಾರ ಮುಂಜಾನೆ ಸಂಭವಿಸಿದ ಭೀಕರ ಅಗ್ನಿ ಅವಘಡವು ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಪಾಲಂನ ರಾಮ್ ಮಾರುಕಟ್ಟೆಯಲ್ಲಿರುವ ನಾಲ್ಕು ಅಂತಸ್ತಿನ ಕಟ್ಟಡವೊಂದರಲ್ಲಿ ಕಾಣಿಸಿಕೊಂಡ ಬೆಂಕಿಗೆ ಒಂದೇ ಕುಟುಂಬದ ಒಂಬತ್ತು ಸದಸ್ಯರು ಬಲಿಯಾಗಿದ್ದಾರೆ. ಮೃತರ ಪೈಕಿ ಮೂವರು ಪುಟ್ಟ ಮಕ್ಕಳೂ ಸೇರಿರುವುದು ದುರಂತದ ತೀವ್ರತೆಯನ್ನು ಹೆಚ್ಚಿಸಿದೆ.

ದೆಹಲಿ ಅಗ್ನಿ ಅವಘಡದಲ್ಲಿ 9 ಮಂದಿ ಸಾವು
ದೆಹಲಿ ಅಗ್ನಿ ಅವಘಡದಲ್ಲಿ 9 ಮಂದಿ ಸಾವು

ಪೊಲೀಸ್ ಅಧಿಕಾರಿಗಳ ಮಾಹಿತಿ ಪ್ರಕಾರ, ಬೆಳಿಗ್ಗೆ ಸುಮಾರು 7 ಗಂಟೆಯ ಸುಮಾರಿಗೆ ರಾಮ್ ಚೌಕ್ ಮಾರುಕಟ್ಟೆಯ ಒಂದು ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ಕಟ್ಟಡದ ನೆಲ ಮಹಡಿ ಮತ್ತು ಮೊದಲ ಮಹಡಿಯಲ್ಲಿ ರಾಜೇಂದರ್ ಕಶ್ಯಪ್ ಎಂಬುವವರಿಗೆ ಸೇರಿದ ಬಟ್ಟೆ ಮತ್ತು ಸೌಂದರ್ಯವರ್ಧಕಗಳ ಶೋರೂಮ್ ಇತ್ತು. ಎರಡನೇ ಮತ್ತು ಮೂರನೇ ಮಹಡಿಯಲ್ಲಿ ಅವರ ಕುಟುಂಬ ವಾಸವಾಗಿತ್ತು. ಅಂಗಡಿಯಲ್ಲಿ ಕಾಣಿಸಿಕೊಂಡ ಬೆಂಕಿ ಕ್ಷಣಾರ್ಧದಲ್ಲಿ ಮೇಲಿನ ಮಹಡಿಗಳಿಗೂ ವ್ಯಾಪಿಸಿತು, ಇದರಿಂದಾಗಿ ಮನೆಯಲ್ಲಿದ್ದವರಿಗೆ ಹೊರಬರಲು ಸಾಧ್ಯವಾಗದೆ ಸಂಕಷ್ಟಕ್ಕೆ ಸಿಲುಕಿದರು.

ಬೆಂಕಿಯ ಸುದ್ದಿ ತಿಳಿಯುತ್ತಿದ್ದಂತೆಯೇ ಅಗ್ನಿಶಾಮಕ ದಳದ 31 ವಾಹನಗಳು ಸ್ಥಳಕ್ಕೆ ಧಾವಿಸಿ ಹರಸಾಹಸ ಪಟ್ಟು ಬೆಂಕಿಯನ್ನು ನಂದಿಸಿದವು. ಕಟ್ಟಡದಲ್ಲಿದ್ದ ಹತ್ತು ಜನರನ್ನು ರಕ್ಷಿಸಿ ತಕ್ಷಣವೇ ಹತ್ತಿರದ ಆಸ್ಪತ್ರೆಗಳಿಗೆ ದಾಖಲಿಸಲಾಯಿತು. ಆದರೆ ದುರದೃಷ್ಟವಶಾತ್, ಮಣಿಪಾಲ್ ಆಸ್ಪತ್ರೆಯಲ್ಲಿ ಎಂಟು ಜನರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು. ಐಜಿಐ ಆಸ್ಪತ್ರೆಯಲ್ಲಿ ಮತ್ತೊಬ್ಬ ಮಹಿಳೆ ಸಾವನ್ನಪ್ಪಿದ್ದಾರೆ.

ಪ್ರವೇಶ್ (35), ಕಮಲ್ (40), ಆಶು (32), ಲಾಡೋ (70), ಹಿಮಾಂಶಿ (22).

12 ವರ್ಷ, 6 ವರ್ಷ ಮತ್ತು 5 ವರ್ಷ ವಯಸ್ಸಿನ ಮೂವರು ಅಪ್ರಾಪ್ತ ಬಾಲಕಿಯರು.

38 ವರ್ಷದ ಮತ್ತೊಬ್ಬ ಮಹಿಳೆ.

ಸದ್ಯ 40 ವರ್ಷದ ವ್ಯಕ್ತಿ ಮತ್ತು ಎರಡು ವರ್ಷದ ಬಾಲಕಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶೇ. 25 ರಷ್ಟು ಸುಟ್ಟ ಗಾಯಗಳಾಗಿರುವ ಮತ್ತೊಬ್ಬ ಯುವಕನನ್ನು ಸಫ್ದರ್ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಘಟನೆಯ ಬಗ್ಗೆ ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಘಟನೆಯ ಬಗ್ಗೆ ಸಮಗ್ರ ಮಾಹಿತಿ ಪಡೆಯಲು ಮ್ಯಾಜಿಸ್ಟೀರಿಯಲ್ ತನಿಖೆಗೆ ಆದೇಶಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಎಫ್‌ಎಸ್‌ಎಲ್ (FSL) ತಂಡವು ಸ್ಥಳಕ್ಕೆ ಭೇಟಿ ನೀಡಿ ಬೆಂಕಿ ಹತ್ತಿಕೊಳ್ಳಲು ನಿಖರ ಕಾರಣವೇನು ಎಂಬುದರ ಕುರಿತು ಪರಿಶೀಲನೆ ನಡೆಸುತ್ತಿದೆ.

ಈ ಘಟನೆಯು ನಗರ ಪ್ರದೇಶಗಳಲ್ಲಿನ ಬಹುಮಹಡಿ ಕಟ್ಟಡಗಳಲ್ಲಿನ ಅಗ್ನಿ ಸುರಕ್ಷತಾ ಕ್ರಮಗಳ ಬಗ್ಗೆ ಮತ್ತೆ ಪ್ರಶ್ನೆಗಳನ್ನು ಎತ್ತಿದೆ. ಬೆಂಕಿ ಕಾಣಿಸಿಕೊಂಡಾಗ ಹೊರಬರಲು ಸೂಕ್ತ ದಾರಿ ಇಲ್ಲದಿದ್ದುದು ಇಷ್ಟೊಂದು ದೊಡ್ಡ ಮಟ್ಟದ ಪ್ರಾಣಹಾನಿಗೆ ಕಾರಣವಾಗಿದೆ ಎಂದು ಪ್ರಾಥಮಿಕವಾಗಿ ಅಂದಾಜಿಸಲಾಗಿದೆ.