ನೆಲಮಂಗಲ: ಪ್ರೀತಿಗೆ ಕಣ್ಣಿಲ್ಲ ಅಂತಾರೆ, ಆದರೆ ನಮ್ಮ ಸಮಾಜಕ್ಕೆ ಮಾತ್ರ ಇನ್ನೂ ಜಾತಿ ಕಣ್ಣು ಹೋಗಿಲ್ಲ ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ಜಾತಿಯ ಹೆಸರಿನಲ್ಲಿ ಗರ್ಭಿಣಿ ಮಹಿಳೆಗೆ ಕಿರುಕುಳ ನೀಡಿ, ಕೊ*ಲೆ ಬೆದರಿಕೆ ಹಾಕಿರುವ ಘಟನೆ ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ವಿಶೇಷ ಅಂದ್ರೆ, ತನ್ನ ಹೆಂಡತಿಯನ್ನು ಉಳಿಸಿಕೊಳ್ಳಲು ಮಗನೇ ತನ್ನ ಹೆತ್ತವರ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ.
ನೆಲಮಂಗಲದ ಸುಭಾಷ್ ನಗರದ ನಿವಾಸಿಗಳಾದ ಅಭಿಷೇಕ್ ಮತ್ತು ವಿದ್ಯಾಶ್ರೀ ಎರಡು ವರ್ಷಗಳ ಹಿಂದೆ ಕೆಲಸ ಮಾಡುವ ಜಾಗದಲ್ಲಿ ಭೇಟಿಯಾಗಿ ಪ್ರೀತಿಸಲು ಶುರು ಮಾಡಿದ್ದರು. ಇಬ್ಬರ ಜಾತಿ ಬೇರೆ ಬೇರೆಯಾಗಿದ್ದರಿಂದ ಮನೆಯಲ್ಲಿ ವಿರೋಧ ವ್ಯಕ್ತವಾಗಿತ್ತು. ಆದರೂ ದೃತಿಗೆಡದ ಈ ಜೋಡಿ, ಎಂಟು ತಿಂಗಳ ಹಿಂದೆ ಅಪ್ಪಟ ಪ್ರೇಮಿಗಳಂತೆ ಕರಿ ಕಾಟೇರಮ್ಮ ದೇವಸ್ಥಾನದಲ್ಲಿ ಸರಳವಾಗಿ ಮದುವೆಯಾಗಿದ್ದರು. ಮದುವೆಯಾದ ದಿನದಿಂದಲೇ ಇವರ ಸಂಸಾರದಲ್ಲಿ ಜಾತಿಯ ಕಿಚ್ಚು ಶುರುವಾಗಿತ್ತು.
ಅಭಿಷೇಕ್ ಪೋಷಕರಾದ ಮುನಿಶಂಕರಯ್ಯ ಮತ್ತು ಆನಂದಮ್ಮ ಅವರಿಗೆ ಈ ಮದುವೆ ಮೊದಲಿನಿಂದಲೂ ಇಷ್ಟವಿರಲಿಲ್ಲ. ವಿದ್ಯಾಶ್ರೀ ಬೇರೆ ಜಾತಿಯವಳು ಎಂಬ ಒಂದೇ ಕಾರಣಕ್ಕೆ ಆಕೆಯನ್ನು ಮನೆಯೊಳಗೆ ಸೇರಿಸಲು ಅವರು ನಿರಾಕರಿಸಿದ್ದರು. ಈಗ ವಿದ್ಯಾಶ್ರೀ ಆರು ತಿಂಗಳ ಗರ್ಭಿಣಿ. ಈ ಸುಂದರ ಸಮಯದಲ್ಲಿ ಆಕೆಯನ್ನು ಪ್ರೀತಿಯಿಂದ ನೋಡಿಕೊಳ್ಳುವ ಬದಲು, ಜಾತಿ ಹಿಡಿದು ಅವಾಚ್ಯ ಶಬ್ದಗಳಿಂದ ಬೈದು, ಕೊ*ಲೆ ಬೆದರಿಕೆ ಹಾಕುತ್ತಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.
ಸಾಮಾನ್ಯವಾಗಿ ಇಂತಹ ಸಂದರ್ಭದಲ್ಲಿ ಗಂಡಂದಿರು ಮನೆಯವರ ಪರ ನಿಲ್ಲುವುದು ಅಥವಾ ಮೌನಕ್ಕೆ ಶರಣಾಗುವುದನ್ನು ನೋಡುತ್ತೇವೆ. ಆದರೆ ಅಭಿಷೇಕ್ ಹಾಗೆ ಮಾಡಲಿಲ್ಲ. ತನ್ನ ಗರ್ಭಿಣಿ ಹೆಂಡತಿಗೆ ತನ್ನ ಪೋಷಕರಿಂದಲೇ ಪ್ರಾಣಾಪಾಯ ಇದೆ ಎಂದು ಅರಿತ ಅವರು, ತನ್ನ ಹೆತ್ತ ತಂದೆ-ತಾಯಿಯ ವಿರುದ್ಧವೇ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. "ನನ್ನ ಹೆಂಡತಿ ಮತ್ತು ಹುಟ್ಟಲಿರುವ ಮಗುವಿನ ರಕ್ಷಣೆ ನನಗೆ ಮುಖ್ಯ" ಎಂದು ಅಭಿಷೇಕ್ ಹೇಳಿದ್ದಾರೆ.
ಈ ದೂರಿನ ಹಿನ್ನೆಲೆಯಲ್ಲಿ ನೆಲಮಂಗಲ ಟೌನ್ ಪೊಲೀಸರು ಎನ್‌ಸಿಆರ್ (NCR) ದಾಖಲಿಸಿಕೊಂಡಿದ್ದಾರೆ. ಜಾತಿ ನಿಂದನೆ ಮತ್ತು ಕೊ*ಲೆ ಬೆದರಿಕೆ ಆರೋಪದ ಮೇಲೆ ತನಿಖೆ ಆರಂಭಿಸಿದ್ದಾರೆ. ದಂಪತಿಗಳು ಈಗ ತಮಗೆ ರಕ್ಷಣೆ ಬೇಕು ಎಂದು ಪೊಲೀಸರಲ್ಲಿ ಮನವಿ ಮಾಡಿದ್ದಾರೆ. ಒಂದು ಕಡೆ ಮಗುವಿನ ನಿರೀಕ್ಷೆಯಲ್ಲಿರುವ ಈ ದಂಪತಿಗೆ ಪೋಷಕರೇ ವಿಲನ್ ಆಗಿರುವುದು ನಿಜಕ್ಕೂ ದುರಂತ.
ಇಂದಿನ ಕಾಲದಲ್ಲೂ ಜಾತಿ ಹೆಸರಿನಲ್ಲಿ ಕಿರುಕುಳ ನೀಡುವುದು ಶಿಕ್ಷಾರ್ಹ ಅಪರಾಧ. ಮಗ ಮತ್ತು ಸೊಸೆಯನ್ನು ಹರಿಸಬೇಕಾದ ಪೋಷಕರೇ ಅವರಿಗೆ ಕಂಟಕರಾಗುತ್ತಿರುವುದು ಸಮಾಜದ ಹಿನ್ನಡೆಗೆ ಸಾಕ್ಷಿ. ಪ್ರೀತಿ ಮತ್ತು ಮನುಷ್ಯತ್ವಕ್ಕಿಂತ ಜಾತಿ ದೊಡ್ಡದಲ್ಲ ಎಂಬ ಸತ್ಯವನ್ನು ಎಲ್ಲರೂ ಅರಿತುಕೊಳ್ಳಬೇಕಿದೆ.