ಮೈಸೂರು: ರಾಜ್ಯ ರಾಜಕೀಯದಲ್ಲಿ ಹೈಕಮಾಂಡ್ ಆದೇಶದಂತೆ ಸಿದ್ದರಾಮಯ್ಯ ಅವರು ಸಿಎಂ ಸ್ಥಾನಕ್ಕೆ ರಿಸೈನ್ ಮಾಡಿ, ಜೂನ್ 3ಕ್ಕೆ ಡಿ.ಕೆ. ಶಿವಕುಮಾರ್ ಅವರು ಹೊಸ ಮುಖ್ಯಮಂತ್ರಿಯಾಗಿ ಪಟ್ಟಾಭಿಷೇಕ ಮಾಡಿಕೊಳ್ಳಲು ಕೌಂಟ್‌ಡೌನ್ ಶುರುವಾಗಿದೆ. ಇತ್ತ ಸಿದ್ದರಾಮಯ್ಯ ಸಿಎಂ ಕುರ್ಚಿಯಿಂದ ಕೆಳಗಿಳಿಯುತ್ತಿದ್ದಂತೆ, ಅತ್ತ ಸಾಂಸ್ಕೃತಿಕ ನಗರಿ ಮೈಸೂರಲ್ಲಿ ಹಳೇ ರಾಜಕೀಯ ದ್ವೇಷದ ಜ್ವಾಲೆ ಮತ್ತೆ ಜೋರಾಗಿ ಉರಿಯಲು ಶುರು ಮಾಡಿದೆ. ಹಿರಿಯ ನಾಯಕ, ಎಂಎಲ್‌ಸಿ ಎಚ್. ವಿಶ್ವನಾಥ್ ಮತ್ತು ಸಿದ್ದರಾಮಯ್ಯ ಅವರ ನಡುವಿನ ಹಗ್ಗಜಗ್ಗಾಟ ಸದ್ಯದ ಹಾಟ್ ಟಾಪಿಕ್ ಆಗಿದ್ದು, ಇದರ ಮಧ್ಯೆಯೇ ಸಿದ್ದರಾಮಯ್ಯ ಅವರ ಹಳೆಯ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಭೀಕರವಾಗಿ ವೈರಲ್ ಆಗ್ತಿದೆ.
"ನನ್ನ ಇಡೀ ರಾಜಕೀಯ ಲೈಫ್‌ನಲ್ಲಿ ನಾನು ಯಾರಿಗಾದರೂ ಅನ್ಯಾಯ ಮಾಡಿದ್ದೀನಿ ಅಂದ್ರೆ ಅದು ಮಂಚನಹಳ್ಳಿ ಮಾದೇವನಿಗೆ ಮಾತ್ರ, ಈ ವಿಶ್ವನಾಥ್‌ಗಲ್ಲ!" ಎಂದು ಸಿದ್ದರಾಮಯ್ಯ ಅಬ್ಬರಿಸಿರುವ ಹಳೇ ವಿಡಿಯೋವನ್ನು ಈಗ ಸಿದ್ದು ಅಭಿಮಾನಿಗಳು ಇಂಟರ್ನೆಟ್‌ಗೆ ಹರಿಬಿಟ್ಟು ವಿಶ್ವನಾಥ್‌ಗೆ ಕೌಂಟರ್ ಕೊಡುತ್ತಿದ್ದಾರೆ.
ವಿಶ್ವನಾಥ್ ವರ್ಸಸ್ ಸಿದ್ದು ಫ್ಯಾಮಿಲಿ: ಅಸಲಿ ಮ್ಯಾಟರ್ ಏನು?
ಇತ್ತೀಚೆಗೆ ಹಲ್ಲೆ ಆರೋಪದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಎಂಎಲ್‌ಸಿ ಎಚ್. ವಿಶ್ವನಾಥ್ ವಿರುದ್ಧ ಮೈಸೂರಿನ ದೇವರಾಜ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ (FIR) ದಾಖಲಾಗಿತ್ತು. ಈ ವಿಷಯಕ್ಕೆ ಫುಲ್ ಗರಂ ಆಗಿದ್ದ ವಿಶ್ವನಾಥ್, ನೇರವಾಗಿ ಸಿದ್ದರಾಮಯ್ಯ ಮತ್ತು ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ವಿರುದ್ಧವೇ ಕಿಡಿಕಾರಿದ್ದರು. "ನನ್ನ ಮೇಲೆ ಕೇಸ್ ದಾಖಲಾಗುವಂತೆ ಕದನದ ಸಂಚು ರೂಪಿಸಿದ್ದೇ ಸಿಎಂ ಪುತ್ರ ಯತೀಂದ್ರ," ಎಂದು ವಿಶ್ವನಾಥ್ ಗಂಭೀರ ಆರೋಪ ಮಾಡಿದ್ದರು.
ಯಾವಾಗ ವಿಶ್ವನಾಥ್ ಅವರು ಸಿದ್ದು ಫ್ಯಾಮಿಲಿ ಮೇಲೆ ಮುಗಿಬಿದ್ದರೋ, ತಕ್ಷಣವೇ ಅಲರ್ಟ್ ಆದ ಸಿದ್ದರಾಮಯ್ಯ ಅವರ ಅಭಿಮಾನಿ ಬಳಗ ಮತ್ತು ಕಾಂಗ್ರೆಸ್ ಕಾರ್ಯಕರ್ತರು, ವಿಶ್ವನಾಥ್ ಅವರ ರಾಜಕೀಯ ಬಣ್ಣ ಬಯಲು ಮಾಡಲು ಈ ಹಳೇ ವಿಡಿಯೋ ಬಾಂಬ್ ಅನ್ನು ರೀ-ರಿಲೀಸ್ ಮಾಡಿದ್ದಾರೆ.
ಮಂಚನಹಳ್ಳಿ ಮಾದೇವನ ದೊಡ್ಡ ಗುಣ, ವಿಶ್ವನಾಥ್ ಸ್ವಾರ್ಥ!
ವೈರಲ್ ಆಗಿರುವ ಆ ವಿಡಿಯೋದಲ್ಲಿ ಸಿದ್ದರಾಮಯ್ಯ ಅವರು ತಮ್ಮ ಬೆಂಬಲಿಗರ ಸಭೆಯಲ್ಲಿ ಕುಳಿತು ಹಳೇ ಇತಿಹಾಸವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ:
2008ರ ಅಸೆಂಬ್ಲಿ ಕಥೆ: "2008ರಲ್ಲಿ ವಿಧಾನಸಭಾ ಚುನಾವಣೆ ಬಂತು. ಅವತ್ತು ನಮ್ಮ ಜನಾಂಗದ ಪ್ರತಿಭಾವಂತ ನಾಯಕ, ಸಿಟ್ಟಿಂಗ್ ಎಂಎಲ್‌ಎ ಆಗಿದ್ದ ಮಂಚನಹಳ್ಳಿ ಮಾದೇವನಿಗೆ ಟಿಕೆಟ್ ಕೊಡಬೇಕಿತ್ತು. ಆದರೆ ಆ ಟೈಮಲ್ಲಿ ವಿಶ್ವನಾಥ್ ಓಡೋಡಿ ಬಂದು, 'ನಾನು ಸೀನಿಯರ್ ಇದ್ದೀನಿ, ಮಾದೇವ ಲೋಕಸಭೆಗೆ ನಿಲ್ಲಲಿ, ನಂಗೆ ಇದೊಂದ್ ಸಾರಿ ಅಸೆಂಬ್ಲಿ ಸೀಟ್ ಕೊಡಿ' ಅಂತ ಗೋಗರೆದ. ನಾನು ಮಾದೇವನನ್ನು ಕರೆದು ವಿಷಯ ಹೇಳಿದೆ. ಪಾಪ, ಮಾದೇವ ದೊಡ್ಡ ಮನುಷ್ಯ, ವಿಶ್ವನಾಥನಿಗಾಗಿ ತನ್ನ ಸೀಟು ಬಿಟ್ಟುಕೊಟ್ಟ. ಆದರೆ ಆ ಎಲೆಕ್ಷನ್‌ನಲ್ಲಿ ವಿಶ್ವನಾಥ್ ಸೋತು ಸುಣ್ಣ ಆದ."
2009ರ ಪಾರ್ಲಿಮೆಂಟ್ ಕಥೆ: "ಮುಂದಿನ ವರ್ಷವೇ ಅಂದರೆ 2009ರಲ್ಲಿ ಲೋಕಸಭಾ ಚುನಾವಣೆ ಬಂತು. ನಿಯಮದ ಪ್ರಕಾರ ಆ ಟಿಕೆಟ್ ಮಾದೇವನಿಗೆ ಸಿಗಬೇಕಿತ್ತು. ಆದರೆ ವಿಶ್ವನಾಥ್ ಮತ್ತೆ ಬಂದ! 'ನನಗೆ ವಯಸ್ಸಾಯ್ತು, ಇದೇ ನನ್ನ ಲಾಸ್ಟ್ ಎಲೆಕ್ಷನ್, ಇದಾದ ಮೇಲೆ ರಾಜಕೀಯದಿಂದ ನಿವೃತ್ತಿ ಆಗ್ತೀನಿ, ಪಾರ್ಲಿಮೆಂಟ್ ಟಿಕೆಟ್ ಕೊಡಿ' ಅಂದ. ನಾನು ಮತ್ತೆ ಮಾದೇವನಿಗೆ 'ಅವನಿಗೆ ವಯಸ್ಸಾಗಿದೆಯಂತೆ ಬಿಟ್ಟುಬಿಡಪ್ಪ, ನೀನು ಕೆ.ಆರ್. ನಗರದಲ್ಲೇ ಇರು' ಅಂದೆ. ಪಾಪ, ಅದಕ್ಕೂ ಮಾದೇವ ಒಪ್ಪಿಕೊಂಡ. ನಾವು ವಿಶ್ವನಾಥ್ ಪರ ಕೆಲಸ ಮಾಡಿ ಆತನನ್ನು ಎಂಪಿ (MP) ಮಾಡ್ವಿ," ಎಂದು ಸಿದ್ದರಾಮಯ್ಯ ವಿಡಿಯೋದಲ್ಲಿ ವಿವರಿಸಿದ್ದಾರೆ.
"ಅನ್ಯಾಯವಾಗಿದ್ದರೆ ಅದು ಸತ್ತ ಮಾದೇವನಿಗೆ ಮಾತ್ರ!"
ಸಿದ್ದರಾಮಯ್ಯ ಅವರ ಈ ಮಾತುಗಳು ಕೇಳುಗರ ಕಣ್ಣಾಲಿಗಳು ತೇವವಾಗುವಂತೆ ಇವೆ. "ಬೇರೆ ಯಾರಾದರೂ ಆಗಿದ್ದರೆ ಎರಡು ಬಾರಿ ಸೀಟು ಬಿಟ್ಟುಕೊಡುತ್ತಿದ್ದರಾ?" ಎಂದು ಪ್ರಶ್ನಿಸಿರುವ ಸಿದ್ದು, "ಮಾದೇವ ನಮಗಾಗಿ ಎರಡು ಬಾರಿ ತ್ಯಾಗ ಮಾಡಿದ. ಆದರೆ ಕಾಲ ಚಕ್ರ ಉರುಳಿದಂತೆ ಆ ಮುಗ್ಧ ಮಾದೇವ ಮಧ್ಯದಲ್ಲೇ ತೀರಿಕೊಂಡ. ಹಾಗಾಗಿ, ನಾನು ನನ್ನ ರಾಜಕೀಯ ಜೀವನದಲ್ಲಿ ಯಾರಿಗಾದರೂ ಅನ್ಯಾಯ ಮಾಡಿದ್ದರೆ ಅದು ನನ್ನ ಮಾತಿಗೆ ಬೆಲೆ ಕೊಟ್ಟು ಸೀಟು ಬಿಟ್ಟುಕೊಟ್ಟ ಆ ಮಾದೇವನಿಗೆ ಮಾತ್ರ. ಎಲ್ಲವನ್ನೂ ಉಂಡು ಮಂತ್ರಿಯಾದ, ಎಂಪಿಯಾದ ಈ ವಿಶ್ವನಾಥನಿಗೆ ನಾನು ಯಾವುದೇ ಅನ್ಯಾಯ ಮಾಡಿಲ್ಲ," ಎಂದು ಸಿದ್ದರಾಮಯ್ಯ ವಿಡಿಯೋದಲ್ಲಿ ಖಡಕ್ ಆಗಿ ಹೇಳಿದ್ದಾರೆ.
ಸದ್ಯ ಸಿದ್ದರಾಮಯ್ಯ ಅಧಿಕಾರದಿಂದ ಕೆಳಗಿಳಿಯುತ್ತಿರುವ ಈ ಹೊತ್ತಿನಲ್ಲಿ, ಹಳೇ ಮೈಸೂರು ಭಾಗದ ಈ ಹಳೇ ರಾಜಕೀಯ ಯುದ್ಧದ ವಿಡಿಯೋ ಇಂಟರ್ನೆಟ್‌ನಲ್ಲಿ ಮಿಲಿಯನ್‌ಗಟ್ಟಲೆ ವ್ಯೂಸ್ ಪಡೆದುಕೊಳ್ಳುತ್ತಿದ್ದು, ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಸಂಚಲನ ಮೂಡಿಸಿದೆ.