ಬಿ-ರಿಪೋರ್ಟ್‌ನ ಹಿಂದೆ ಅಡಗಿದ ಅಮಾನವೀಯ ಕೃತ್ಯ - ಡಾ. ನಾಗಶ್ರೀ ಸಾವು ಮತ್ತು ಡಾ. ವಿನಯ್ ಕುಮಾರ್‌ನ ಕರಾಳ ಇತಿಹಾಸ!!

ಒಬ್ಬ ಡಾಕ್ಟರ್ ಎಂದರೆ ಸಮಾಜದಲ್ಲಿ ಗೌರವದ ಸ್ಥಾನ. ಆದರೆ ಮೈಸೂರಿನಲ್ಲಿ ಡಾಕ್ಟರ್ ಒಬ್ಬನ ಮೇಲೆ ಕೇಳಿಬಂದಿರುವ ಆರೋಪಗಳು ಮಾತ್ರ ಇಡೀ ಸಮಾಜವನ್ನೇ ತಲೆತಗ್ಗಿಸುವಂತೆ ಮಾಡಿವೆ. ಡಾ. ವಿನಯ್ ಕುಮಾರ್ ಎಂಬಾತ ಪ್ರೀತಿಯ ಬಲೆಯಲ್ಲಿ ಹೆಣ್ಣುಮಕ್ಕಳನ್ನು ಸಿಲುಕಿಸಿ, ಅವರ ಜೀವನವನ್ನೇ ಬಲಿ ತೆಗೆದುಕೊಂಡಿದ್ದಾನೆ ಎಂಬ ಆರೋಪ ಇದೀಗ ಭಾರಿ ಸದ್ದು ಮಾಡುತ್ತಿದೆ. ಈ ಕರಾಳ ಸತ್ಯವನ್ನು ಸ್ವತಃ ಆತನ ಪತ್ನಿಯೇ ಇದೀಗ ಜಗಜ್ಜಾಹೀರು ಮಾಡಿದ್ದಾರೆ.

ಮೈಸೂರಿನಲ್ಲಿ ವೈದ್ಯ ವೃತ್ತಿಗೆ ಬಂತು ಕಳಂಕ
ಮೈಸೂರಿನಲ್ಲಿ ವೈದ್ಯ ವೃತ್ತಿಗೆ ಬಂತು ಕಳಂಕ

ಡಾ. ನಾಗಶ್ರೀಯವರ ದುರಂತ ಅಂತ್ಯ

ಈ ಪ್ರಕರಣದ ಅತ್ಯಂತ ನೋವಿನ ವಿಷಯವೆಂದರೆ ಡಾ. ನಾಗಶ್ರೀಯವರ ಸಾವು. 2014ರಲ್ಲಿ ಮೈಸೂರಿನ ಖಾಸಗಿ ಕಾಲೇಜಿನ ಆಯುರ್ವೇದ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಹಿರಿಯ ವೈದ್ಯೆ ನಾಗಶ್ರೀ ಅವರಿಗೆ, ಅದೇ ಕಾಲೇಜಿನ ಜೂನಿಯರ್ ಡಾಕ್ಟರ್ ವಿನಯ್ ಕುಮಾರ್ ಪರಿಚಯವಾಗಿದ್ದ. ಪ್ರೀತಿಯ ಬಲೆಗೆ ಬಿದ್ದ ನಾಗಶ್ರೀಯವರಿಗೆ ಮದುವೆಯಾಗುವುದಾಗಿ ನಂಬಿಸಿ, ಕೊನೆಗೆ ಸುಸೈಡ್ ಡ್ರಾಮಾ ಆಡಲಾಗಿದೆ. ಶ್ರೀರಂಗಪಟ್ಟಣದ ಲಾಡ್ಜ್ ಒಂದರಲ್ಲಿ ವಿನಯ್, ನಾಗಶ್ರೀ ಅವರಿಗೆ ನಿದ್ದೆ ಮಾತ್ರೆ ಮತ್ತು ಓವರ್‌ಡೋಸ್ ಇಂಜೆಕ್ಷನ್ ನೀಡಿದ್ದಾನೆ. ಅಂದು ವಿನಯ್ ಒಂದು ದಿನದಲ್ಲೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಹೋಗಿದ್ದ, ಆದರೆ ನಾಗಶ್ರೀ ಮಾತ್ರ ಆ ಇಂಜೆಕ್ಷನ್ ಅಡ್ಡಪರಿಣಾಮದಿಂದ ಕೋಮಾಗೆ ಜಾರಿದ್ದರು. ಬರೋಬ್ಬರಿ 12 ವರ್ಷಗಳ ಕಾಲ 'ಜೀವಂತ ಶವ'ದಂತೆ ಬದುಕಿದ್ದ ಅವರು, ಇತ್ತೀಚೆಗಷ್ಟೇ ಮೃತಪಟ್ಟಿದ್ದಾರೆ.

ಆಗಲೇ ನಾಗಶ್ರೀ ಅವರ ತಂದೆ ಪೊಲೀಸರಿಗೆ ದೂರು ನೀಡಿದ್ದರು. ಇಷ್ಟೆಲ್ಲಾ ನಡೆದರೂ ವಿನಯ್ ಒಂದು ದಿನದಲ್ಲೇ ಚೇತರಿಸಿಕೊಂಡಿದ್ದು ಹೇಗೆ? ಈ ಬಗ್ಗೆ ತನಿಖೆಯಾಗಬೇಕಿತ್ತು. ಆದರೆ, ವಿಪರ್ಯಾಸವೆಂದರೆ ಹುಣಸೂರು ಗ್ರಾಮಾಂತರ ಪೊಲೀಸರು ಈ ಪ್ರಕರಣದಲ್ಲಿ 'ಬಿ-ರಿಪೋರ್ಟ್' (B-Report) ಹಾಕಿದರು. ಇದೇ ರೀತಿ ಗೌತಮಿ ಹಿರೇಮಠ ಎಂಬ ಚಾರ್ಟರ್ಡ್ ಅಕೌಂಟೆಂಟ್ ಸಾವಿನ ಪ್ರಕರಣದಲ್ಲೂ ಬಿ-ರಿಪೋರ್ಟ್ ಹಾಕಲಾಗಿತ್ತು ಎಂಬ ಮಾಹಿತಿ ಈಗ ಹೊರಬಿದ್ದಿದೆ. ಈ ಪ್ರಕರಣಗಳನ್ನು ಮರುತನಿಖೆ ನಡೆಸಬೇಕು ಎಂದು ವಕೀಲ ಪಂಡು ಪೂಜಾರಿ ಇದೀಗ ನ್ಯಾಯಾಲಯದ ಮೊರೆ ಹೋಗಿದ್ದಾರೆ.

ಈ ಎಲ್ಲಾ ಕರಾಳ ಇತಿಹಾಸ ಗೊತ್ತಿಲ್ಲದೆ, ವಿನಯ್‌ರನ್ನು ಮದುವೆಯಾದವರು ಈಗಿನ ಪತ್ನಿ ಯಶೋದಾ (ಹೆಸರು ಬದಲಾಯಿಸಲಾಗಿದೆ). ಮದುವೆಯಾದ ಕೇವಲ 15 ದಿನಗಳಲ್ಲಿ ವಿನಯ್ ಅಸಲಿ ಬಣ್ಣ ಬಯಲಾಗಿದೆ. "ಮದ್ಯಪಾನ ಮಾಡಿ ಬಂದು ನನ್ನ ಮೇಲೆ ಹಲ್ಲೆ ಮಾಡುತ್ತಿದ್ದ, ಗನ್ ತೋರಿಸಿ ಹೆದರಿಸುತ್ತಿದ್ದ ಮತ್ತು ನನ್ನ ಹೆಸರಿನಲ್ಲಿದ್ದ ಆಸ್ತಿಯನ್ನು ಆತನ ಹೆಸರಿಗೆ ವರ್ಗಾಯಿಸಬೇಕೆಂದು ಒತ್ತಾಯಿಸುತ್ತಿದ್ದ" ಎಂದು ಯಶೋದಾ ಅಳಲು ತೋಡಿಕೊಂಡಿದ್ದಾರೆ.

ತನ್ನ ವಿರುದ್ಧ ಸಾಲು ಸಾಲು ಆರೋಪಗಳು ಕೇಳಿಬರುತ್ತಿದ್ದರೂ, ಅಸಲಿ ಮುಖವಾಡ ಧರಿಸಿ ವಿನಯ್ ಕುಮಾರ್ ಇದೀಗ ಹುಣಸೂರು ತಾಲೂಕಿನ ಹನಗೋಡು ಎಂಬಲ್ಲಿ ಕ್ಲಿನಿಕ್ ನಡೆಸುತ್ತಿದ್ದಾನೆ. ಅಮಾಯಕ ಮಹಿಳೆಯರನ್ನು ಬಲಿ ಪಡೆಯುತ್ತಿರುವ ಇವನಿಗೆ ಕಾನೂನಿನ ಪಾಠ ಕಲಿಸಬೇಕೆಂದು ಯಶೋದಾ ಮತ್ತು ಸಂತ್ರಸ್ತ ಕುಟುಂಬಗಳು ಈಗ ಪೊಲೀಸರ ಕದ ತಟ್ಟಿದ್ದಾರೆ. "ನನ್ನ ಬದುಕು ಹಾಳಾಯಿತು, ಮತ್ತೊಬ್ಬ ಮಹಿಳೆಗೆ ಹೀಗಾಗಬಾರದು" ಎಂಬುದು ಯಶೋದಾ ಅವರ ಅಳಲು.

ವೈದ್ಯಕೀಯ ವೃತ್ತಿಯ ಘನತೆಯನ್ನು ಮರೆತು ಇಂತಹ ಅಮಾನವೀಯ ಕೃತ್ಯಗಳಲ್ಲಿ ತೊಡಗಿರುವ ವಿನಯ್ ಕುಮಾರ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂಬ ಕೂಗು ಎಲ್ಲೆಡೆ ಕೇಳಿಬರುತ್ತಿದೆ. ಪೊಲೀಸರು ಈ ಬಾರಿ ಬಿ-ರಿಪೋರ್ಟ್‌ನ ಕಥೆಗಳನ್ನು ಬಿಟ್ಟು, ಸತ್ಯಾಸತ್ಯತೆಯನ್ನು ಹೊರತೆಗೆಯುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.