ಕನಕಪುರ ದೇಗುಲ ಮಠದ ಮುಮ್ಮಡಿ ನಿರ್ವಾಣ ಶ್ರೀಗಳು ಲಿಂಗೈಕ್ಯ - ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ವಿದಾಯ!!

ಕನಕಪುರದ ಐತಿಹಾಸಿಕ ದೇಗುಲ ಮಠದ ಪೀಠಾಧಿಪತಿಗಳಾಗಿದ್ದ ಪರಮಪೂಜ್ಯ ಮುಮ್ಮಡಿ ನಿರ್ವಾಣ ಶ್ರೀಗಳು ಲಿಂಗೈಕ್ಯರಾಗಿರುವುದು ರಾಜ್ಯದ ಆಧ್ಯಾತ್ಮಿಕ ಮತ್ತು ಧಾರ್ಮಿಕ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಸುಮಾರು 700 ವರ್ಷಗಳ ಇತಿಹಾಸವಿರುವ ಈ ಮಠವು ಅನ್ನ, ಅಕ್ಷರ ಮತ್ತು ಆಶ್ರಯದ ತಾಣವಾಗಿ ಜನಮಾನಸದಲ್ಲಿ ನೆಲೆಸಿದೆ. ಶ್ರೀಗಳ ಅಗಲಿಕೆಯಿಂದಾಗಿ ಭಕ್ತ ಸಮೂಹವೇ ಅನಾಥಪ್ರಜ್ಞೆಯಿಂದ ತತ್ತರಿಸಿದೆ. ಈ ದುಃಖದ ಗಳಿಗೆಯಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಅವರು ಮಠಕ್ಕೆ ಭೇಟಿ ನೀಡಿ, ಭಾವುಕರಾಗಿ ತಮ್ಮ ಗುರುಗಳಿಗೆ ನುಡಿನಮನ ಸಲ್ಲಿಸಿದರು.

ಮೂರು ಸುತ್ತು ಗುಂಡು ಹಾರಿಸಿ ಸಿದ್ಧಗಂಗಾ ಮಠದಷ್ಟೇ ಇತಿಹಾಸವಿರೋ ಕ್ಷೇತ್ರಕ್ಕೆ ಗೌರವ
ಮೂರು ಸುತ್ತು ಗುಂಡು ಹಾರಿಸಿ ಸಿದ್ಧಗಂಗಾ ಮಠದಷ್ಟೇ ಇತಿಹಾಸವಿರೋ ಕ್ಷೇತ್ರಕ್ಕೆ ಗೌರವ

ಅಂತಿಮ ದರ್ಶನ ಮತ್ತು ಸಕಲ ಸರ್ಕಾರಿ ಗೌರವ

ಮುಮ್ಮಡಿ ನಿರ್ವಾಣ ಶ್ರೀಗಳ ಅಂತಿಮ ದರ್ಶನ ಪಡೆಯಲು ಕನಕಪುರದ ದೇಗುಲ ಮಠಕ್ಕೆ ಆಗಮಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಶ್ರೀಗಳ ಪಾರ್ಥಿವ ಶರೀರಕ್ಕೆ ಪುಷ್ಪ ನಮನ ಸಲ್ಲಿಸಿ ಭಾವುಕರಾದರು. ಈ ಸಂದರ್ಭದಲ್ಲಿ ಸಚಿವ ಈಶ್ವರ್ ಖಂಡ್ರೆ, ಮಾಜಿ ಸಂಸದ ಡಿ.ಕೆ. ಸುರೇಶ್, ಎಂಎಲ್ಸಿ ಎಸ್. ರವಿ ಕುಮಾರ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ಶ್ರೀಗಳಿಗೆ ಸರ್ಕಾರವು ಅತ್ಯುನ್ನತ ಗೌರವ ಸಲ್ಲಿಸಿತು. ಸಿಎಂ ಡಿ.ಕೆ. ಶಿವಕುಮಾರ್ ಮತ್ತು ಸಚಿವ ಈಶ್ವರ್ ಖಂಡ್ರೆ ಅವರ ನೇತೃತ್ವದಲ್ಲಿ, ಶ್ರೀಗಳ ಪಾರ್ಥಿವ ಶರೀರದ ಮೇಲೆ ತ್ರಿವರ್ಣ ಧ್ವಜವನ್ನು ಹೊದಿಸಲಾಯಿತು. ಪೊಲೀಸ್ ಬ್ಯಾಂಡ್‌ನೊಂದಿಗೆ ರಾಷ್ಟ್ರಗೀತೆಯನ್ನು ನುಡಿಸಿ, ಮೂರು ಸುತ್ತು ಗುಂಡು ಹಾರಿಸುವ ಮೂಲಕ ಸಕಲ ಸರ್ಕಾರಿ ಗೌರವಗಳೊಂದಿಗೆ ಶ್ರೀಗಳಿಗೆ ಅಂತಿಮ ವಿದಾಯ ಹೇಳಲಾಯಿತು. ಈ ವೇಳೆ ತ್ರಿವರ್ಣ ಧ್ವಜವನ್ನು ಮಠದ ಕಿರಿಯ ಶ್ರೀಗಳಿಗೆ ಹಸ್ತಾಂತರಿಸುವಾಗ ಸಿಎಂ ಡಿ.ಕೆ. ಶಿವಕುಮಾರ್ ಅವರು ಗದ್ಗದಿತರಾದ ದೃಶ್ಯ ಎಲ್ಲರನ್ನೂ ಮರುಗುವಂತೆ ಮಾಡಿತು.

"ನಮ್ಮ ಜಿಲ್ಲೆಯ ಆಧ್ಯಾತ್ಮಿಕ ದೀಪ ಆರಿಹೋಯಿತು": ಸಿಎಂ ಡಿ.ಕೆ. ಶಿವಕುಮಾರ್

ಶ್ರೀಗಳೊಂದಿಗಿನ ಅವಿನಾಭಾವ ಸಂಬಂಧವನ್ನು ಮೆಲುಕು ಹಾಕಿದ ಸಿಎಂ, "ನಮ್ಮ ಮಠ ಮತ್ತು ನಮ್ಮ ಕುಟುಂಬಕ್ಕೆ ನೂರಾರು ವರ್ಷಗಳ ಸಂಬಂಧವಿದೆ. ನಾನು ರಾಜ್ಯದ ಮುಖ್ಯಮಂತ್ರಿಯಾಗಿರಬಹುದು, ಆದರೆ ಕನಕಪುರ ಕ್ಷೇತ್ರದಲ್ಲಿ ನಿಮ್ಮ ಶಾಸಕನಾಗಿ ಶ್ರೀಗಳ ಮಾರ್ಗದರ್ಶನ ಪಡೆಯುತ್ತಲೇ ಬಂದಿದ್ದೇನೆ. ಸಿಎಂ ಆಗಿ ಶ್ರೀಗಳಿಗೆ ಸರ್ಕಾರಿ ಗೌರವ ಸಲ್ಲಿಸುವ ಭಾಗ್ಯ ದೊರೆತಿದ್ದು ನನ್ನ ಅದೃಷ್ಟ, ಆದರೆ ಈ ವಿದಾಯದ ಕ್ಷಣ ಮನಸ್ಸಿಗೆ ಅಪಾರ ನೋವು ನೀಡಿದೆ" ಎಂದರು.

ಹಿಂದಿನ ಕಾಲದಲ್ಲಿ ಮೈಸೂರು ಮಹಾರಾಜರು ಸಹ ಈ ಮಠಕ್ಕೆ ಬಂದು ಮಾರ್ಗದರ್ಶನ ಪಡೆಯುತ್ತಿದ್ದರು ಎಂದು ಸ್ಮರಿಸಿದ ಸಿಎಂ, "ದೇಗುಲ ಮಠವು ಸಿದ್ದಗಂಗಾ ಮಠದಷ್ಟೇ ಇತಿಹಾಸ ಹೊಂದಿರುವ ಶ್ರೇಷ್ಠ ಕ್ಷೇತ್ರ. ಶ್ರೀಗಳು ನನಗೆ ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದ ದಿನಗಳು ನೆನಪಿಗೆ ಬರುತ್ತಿವೆ. ಕಳೆದ ಚುನಾವಣೆಯ ಮುನ್ನ ಬಂದು ಆಶೀರ್ವದಿಸಿದಾಗ, ಅವರು ನನಗೆ ಹಣದ ಕಟ್ಟನ್ನು ಕೊಟ್ಟು ಹರಸಿದ್ದರು. ಅಂದು ಅವರು ನನ್ನ ಭವಿಷ್ಯದ ಮುನ್ಸೂಚನೆಯನ್ನು ನೀಡಿದ್ದರು" ಎಂದು ಭಾವುಕವಾಗಿ ಹಂಚಿಕೊಂಡರು.

ಸಾಮಾಜಿಕ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ

ಮಠಕ್ಕೆ ಭೇಟಿ ನೀಡಿದ ಸಚಿವ ಈಶ್ವರ್ ಖಂಡ್ರೆ ಮಾತನಾಡಿ, "ಶ್ರೀಗಳ ಅಗಲಿಕೆ ಬಹಳ ದುಃಖದ ವಿಷಯ. ಸಾಮಾಜಿಕ ಮತ್ತು ಧಾರ್ಮಿಕ ಕ್ಷೇತ್ರಕ್ಕೆ ಅವರು ನೀಡಿರುವ ಕೊಡುಗೆ ಅಪಾರ. ಅವರು ಕೇವಲ ಮಠದ ಸ್ವಾಮೀಜಿಯಾಗಿರಲಿಲ್ಲ, ಸಾವಿರಾರು ವಿದ್ಯಾರ್ಥಿಗಳ ಪಾಲಿನ ದೈವವಾಗಿದ್ದರು. ಅವರ ಆದರ್ಶದ ಹಾದಿಯಲ್ಲಿ ನಡೆಯುವುದೇ ನಾವು ಅವರಿಗೆ ಸಲ್ಲಿಸುವ ನಿಜವಾದ ಶ್ರದ್ಧಾಂಜಲಿ" ಎಂದು ಹೇಳಿದರು.

ದೇಗುಲ ಮಠವು ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿದೆ. ಮಠದ ಜವಾಬ್ದಾರಿಯನ್ನು ಹೊತ್ತಿರುವ ಕಿರಿಯ ಶ್ರೀಗಳ ಮಾರ್ಗದರ್ಶನದಲ್ಲಿ ಮಠವು ಇನ್ನು ಮುಂದೆ ಬಲವಾಗಿ ಬೆಳೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಗದ್ದುಗೆ ದರ್ಶನ ಮತ್ತು ಮುಂದಿನ ಜವಾಬ್ದಾರಿ

ಸಿಎಂ ಡಿ.ಕೆ. ಶಿವಕುಮಾರ್ ಅವರು ಮುಮ್ಮಡಿ ನಿರ್ವಾಣ ಶ್ರೀಗಳ ಅಂತಿಮ ದರ್ಶನದ ಬಳಿಕ, ಮಹಾಲಿಂಗ ಸ್ವಾಮೀಜಿಗಳ ಗದ್ದುಗೆಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. "ಮರಣ ದೇಹಕ್ಕೆ ಹೊರತು, ಜಂಗಮಕ್ಕೆ ಅಲ್ಲ. ಶ್ರೀಗಳ ದಿವ್ಯ ಸಾನ್ನಿಧ್ಯ ಮತ್ತು ಮಾರ್ಗದರ್ಶನ ಸದಾ ನಮ್ಮ ಮೇಲಿರುತ್ತದೆ. ದೇಗುಲ ಮಠ ಹಾಗೂ ಮರಳೇಗವಿ ಮಠ ನಮ್ಮ ಎರಡು ಕಣ್ಣುಗಳಿದ್ದಂತೆ. 'ಮನೆ ಹುಷಾರು, ಮಠ ಹುಷಾರು' ಎಂದು ಹಿರಿಯರು ಹೇಳಿದಂತೆ, ನಮ್ಮ ಮನೆಯನ್ನು ಕಾಪಾಡಿಕೊಳ್ಳುವ ಜವಾಬ್ದಾರಿ ಹೇಗೋ, ಮಠವನ್ನು ಅಭಿವೃದ್ಧಿಪಡಿಸುವ ಜವಾಬ್ದಾರಿಯೂ ನಮ್ಮ ಮೇಲಿದೆ" ಎಂದು ಸಿಎಂ ಸ್ಪಷ್ಟಪಡಿಸಿದರು.

ಮುಂದಿನ ದಿನಗಳಲ್ಲಿ ಕಿರಿಯ ಶ್ರೀಗಳ ಜೊತೆ ಕೈಜೋಡಿಸಿ, ಮಠವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲು ಅಗತ್ಯವಿರುವ ಎಲ್ಲಾ ನೆರವನ್ನು ನೀಡುವುದಾಗಿ ಸಿಎಂ ಭರವಸೆ ನೀಡಿದರು. ಮಠದ ಆವರಣದಲ್ಲೇ ಕುಳಿತು, ಶ್ರೀಗಳ ನೆನಪಿನಲ್ಲಿ ಕೆಲಕಾಲ ಮೌನ ಆಚರಿಸಿದ ಸಿಎಂ ಮತ್ತು ಸಚಿವರು, ಮಠದ ಭಕ್ತರಿಗೆ ಧೈರ್ಯ ತುಂಬಿದರು.

ಲಿಂಗೈಕ್ಯ ಮುಮ್ಮಡಿ ನಿರ್ವಾಣ ಶ್ರೀಗಳು ಭೌತಿಕವಾಗಿ ದೂರವಾದರೂ, ಅವರು ಹಾಕಿಕೊಟ್ಟ ಅನ್ನದಾಸೋಹ ಮತ್ತು ಅಕ್ಷರದಾಸೋಹದ ಮಾರ್ಗವು ಸದಾ ಕಾಲ ಈ ಭಾಗದ ಜನತೆಗೆ ದಾರಿದೀಪವಾಗಿ ಉಳಿಯಲಿದೆ. ಕನಕಪುರದ ಧಾರ್ಮಿಕ ಇತಿಹಾಸದಲ್ಲಿ ಶ್ರೀಗಳ ಹೆಸರು ಶಾಶ್ವತವಾಗಿ ಅಜರಾಮರವಾಗಿರಲಿದೆ.

Latest News