Mar 27, 2026 Languages : ಕನ್ನಡ | English

ಸಿಲಿಕಾನ್ ಸಿಟಿಯ ಬಾಯಾರಿಕೆ ನೀಗಿಸಲು ಡಿಕೆಶಿ ಪಣ - ಮೇಕೆದಾಟು ಯೋಜನೆಗೆ 2 ವರ್ಷದ 'ಡೆಡ್‌ಲೈನ್' ಫಿಕ್ಸ್!!

ಬೆಂಗಳೂರು ಅಂದ್ರೆ ಐಟಿ ಹಬ್ ಮಾತ್ರವಲ್ಲ, ನೀರಿನ ಬವಣೆಯ ಹಬ್ ಕೂಡ ಹೌದು. ಈ ಸಮಸ್ಯೆಗೆ ಶಾಶ್ವತ ಪರಿಹಾರ ಬೇಕಂದ್ರೆ ಅದು 'ಮೇಕೆದಾಟು ಯೋಜನೆ'ಯಿಂದ ಮಾತ್ರ ಸಾಧ್ಯ ಅಂತ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ವಿಧಾನಸಭೆಯಲ್ಲಿ ಗುಡುಗಿದ್ದಾರೆ. ಅಷ್ಟೇ ಅಲ್ಲ, ಈ ಯೋಜನೆಗಾಗಿ ತಮ್ಮ ಸ್ವಂತ ಜಮೀನು ಕೂಡ ಮುಳುಗಡೆಯಾಗುತ್ತಿದೆ ಎಂಬ ಎಮೋಷನಲ್ ವಿಚಾರವನ್ನು ಬಿಚ್ಚಿಟ್ಟಿದ್ದಾರೆ.

“ನನ್ನ ಜಮೀನು ಮುಳುಗಿದ್ರೂ ಪರವಾಗಿಲ್ಲ!” ಡಿಕೆಶಿ ಎಮೋಷನಲ್ ಹೇಳಿಕೆ!
“ನನ್ನ ಜಮೀನು ಮುಳುಗಿದ್ರೂ ಪರವಾಗಿಲ್ಲ!” ಡಿಕೆಶಿ ಎಮೋಷನಲ್ ಹೇಳಿಕೆ!

ಮೇಕೆದಾಟು ಜಲಾಶಯದ ಬಗ್ಗೆ ಮಾತನಾಡುತ್ತಾ ಡಿ.ಕೆ. ಶಿವಕುಮಾರ್ ಒಂದು ಶಾಕಿಂಗ್ ವಿಷಯ ತಿಳಿಸಿದರು. "ಈ ಯೋಜನೆಯಲ್ಲಿ ಅರಣ್ಯ ಪ್ರದೇಶದ ಜೊತೆಗೆ ಸಾವಿರಾರು ಎಕರೆ ಭೂಮಿ ಬೇಕಾಗುತ್ತದೆ. ಇದರಲ್ಲಿ ನನ್ನ ಸ್ವಂತ ಜಮೀನು ಕೂಡ ಮುಳುಗಡೆಯಾಗುತ್ತಿದೆ. ಆದರೆ ರಾಜ್ಯದ ಹಿತದ ಮುಂದೆ ವೈಯಕ್ತಿಕ ನಷ್ಟ ಮುಖ್ಯವಲ್ಲ. ಏನೂ ಮಾಡಲು ಸಾಧ್ಯವಿಲ್ಲ, ಬೆಂಗಳೂರಿನ ಜನರಿಗೆ ನೀರು ಕೊಡೋದು ನಮಗೆ ಮುಖ್ಯ" ಎಂದಿದ್ದಾರೆ. ಮುಂದಿನ ಎರಡು ವರ್ಷಗಳಲ್ಲಿ ಈ ಯೋಜನೆಗೆ ಅಡಿಗಲ್ಲು ಹಾಕಿಯೇ ತೀರುತ್ತೇನೆ ಎಂಬ ಆತ್ಮವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿಗೆ ಯಾಕಿಷ್ಟು ನೀರಿನ ಹಾಹಾಕಾರ?

ಬೆಂಗಳೂರಿನ ಇಂದಿನ ಪರಿಸ್ಥಿತಿ ಬಗ್ಗೆ ಡಿಸಿಎಂ ಕೆಲವು ಭಯಾನಕ ಅಂಕಿಅಂಶಗಳನ್ನು ನೀಡಿದ್ದಾರೆ:

ನಗರದಲ್ಲಿ ಸುಮಾರು 15,000 ಬೋರ್‌ವೆಲ್‌ಗಳಿದ್ದು, ಅವುಗಳಲ್ಲಿ ಈಗಾಲೇ 7,000 ಬತ್ತಿಹೋಗಿವೆ.

ಸಮುದ್ರ ಅಥವಾ ದೊಡ್ಡ ನದಿಗಳ ಪಕ್ಕದಲ್ಲಿರುವ ಇತರ ನಗರಗಳಿಗಿಂತ ಬೆಂಗಳೂರು ಭಿನ್ನ. ನಮಗೆ ಕಾವೇರಿ ಬಿಟ್ಟರೆ ಬೇರೆ ಗತಿಯಿಲ್ಲ.

ಮೇಕೆದಾಟು ಜಾರಿಯಾದರೆ ಮುಂದಿನ 30 ವರ್ಷಗಳವರೆಗೆ ಸಿಲಿಕಾನ್ ಸಿಟಿಗೆ ನೀರಿನ ಟೆನ್ಷನ್ ಇರುವುದಿಲ್ಲ.

ಕಾವೇರಿ 6ನೇ ಹಂತಕ್ಕೆ ಗ್ರೀನ್ ಸಿಗ್ನಲ್!
ಕೇವಲ ಮೇಕೆದಾಟು ಅಷ್ಟೇ ಅಲ್ಲ, ಬೆಂಗಳೂರಿನ ಜನರಿಗೆ ನೀರು ತಲುಪಿಸಲು ಸರ್ಕಾರ ಬೇರೆ ಪ್ಲ್ಯಾನ್‌ಗಳನ್ನೂ ಮಾಡಿದೆ:

ಕಾವೇರಿ 6ನೇ ಹಂತ: ಇದಕ್ಕಾಗಿ ಸುಮಾರು 6,000 ಕೋಟಿ ರೂಪಾಯಿಗಳ ಪ್ಲ್ಯಾನ್ ರೆಡಿಯಾಗಿದ್ದು, ಸಂಪುಟ ಅನುಮೋದನೆ ಕೂಡ ಸಿಕ್ಕಿದೆ. ಜಪಾನ್‌ನ 'ಜಿಕಾ' ಸಂಸ್ಥೆ ಇದಕ್ಕೆ ಸಾಲ ನೀಡಲು ಮುಂದೆ ಬಂದಿದೆ.

ಎತ್ತಿನಹೊಳೆ ಯೋಜನೆ: ಅರಣ್ಯ ಇಲಾಖೆಯ ಅಡೆತಡೆಗಳು ನಿವಾರಣೆಯಾಗಿದ್ದು, ಕೆಲಸ ವೇಗವಾಗಿ ನಡೆಯಲಿದೆ.

ಸರಳ ಮತ್ತು ಮೊಬೈಲ್ ಕಾವೇರಿ: ಟ್ಯಾಂಕರ್ ಮಾಫಿಯಾ ತಡೆಯಲು ಮತ್ತು ಮನೆಮನೆಗೆ ನೀರು ತಲುಪಿಸಲು ಹೊಸ ಸೇವೆಗಳನ್ನು ಜಾರಿಗೆ ತರಲಾಗಿದೆ.

ಡಿಸಿಎಂ ಅವರು ಒಂದು ಮುಖ್ಯ ವಿಷಯ ಪ್ರಸ್ತಾಪಿಸಿದ್ದಾರೆ. ಕಳೆದ 15 ವರ್ಷಗಳಿಂದ ಬೆಂಗಳೂರಿನಲ್ಲಿ ನೀರಿನ ದರ ಪರಿಷ್ಕರಣೆ ಆಗಿಲ್ಲ. ಬಿಡಬ್ಲ್ಯೂಎಸ್‌ಎಸ್‌ಬಿ (BWSSB) ನಷ್ಟದಲ್ಲಿದೆ. ಹಾಗಾಗಿ, ಸಂಸ್ಥೆಯನ್ನು ಉಳಿಸಿಕೊಳ್ಳಲು ನೀರಿನ ದರದಲ್ಲಿ ಸ್ವಲ್ಪ ಬದಲಾವಣೆ ಮಾಡುವ ಅನಿವಾರ್ಯತೆ ಇದೆ ಎಂಬ ಸುಳಿವನ್ನು ನೀಡಿದ್ದಾರೆ.

ಉತ್ತರ ಕರ್ನಾಟಕದ ಭಾಗದ ಬಗ್ಗೆಯೂ ಮಾತನಾಡಿದ ಡಿಕೆಶಿ, ಆಲಮಟ್ಟಿ ವಿಚಾರದಲ್ಲಿ ಅಕ್ಕಪಕ್ಕದ ರಾಜ್ಯಗಳು ಕಿರಿಕ್ ಮಾಡುತ್ತಿವೆ. ಆದರೆ ಕಾನೂನು ತಜ್ಞರ ಜೊತೆ ಚರ್ಚಿಸಿ ರಾಜ್ಯದ ಹಿತ ಕಾಪಾಡುತ್ತೇವೆ ಮತ್ತು ಕೃಷ್ಣಾ ಮೇಲ್ದಂಡೆ ಯೋಜನೆಗೆ ಹಣಕಾಸಿನ ತೊಂದರೆಯಿದ್ದರೂ ಅಡ್ಜಸ್ಟ್ ಮಾಡಿ ರೈತರಿಗೆ ನೀರು ಕೊಡುತ್ತೇವೆ ಎಂದು ಭರವಸೆ ನೀಡಿದ್ದಾರೆ.

ಮೇಕೆದಾಟು ಯೋಜನೆ ಮೂಲಕ ಬೆಂಗಳೂರಿನ ನೀರಿನ ಬಾಯಾರಿಕೆ ನೀಗಿಸಲು ಡಿಕೆಶಿ ಈಗ ಪಣ ತೊಟ್ಟಂತಿದೆ. ವಿರೋಧ ಪಕ್ಷಗಳು ಕೂಡ ಇದಕ್ಕೆ ಸಾಥ್ ನೀಡಬೇಕು ಎಂಬುದು ಅವರ ಕಳಕಳಿಯ ವಿನಂತಿ.