ಮಣಿಪುರದಲ್ಲಿ ನೆತ್ತರು ಹರಿಸಿದ ಉಗ್ರರು - ಚರ್ಚ್ ಅಧಿಕಾರಿಗಳ ಮೇಲೆ ಹೊಂಚು ಹಾಕಿ ದಾಳಿ; ಮೂವರ ಸಾವು!!

ಮಣಿಪುರದಲ್ಲಿ ಜನಾಂಗೀಯ ಸಂಘರ್ಷದ ಕಿಚ್ಚು ಇನ್ನೂ ತಣ್ಣಗಾದಂತೆ ಕಾಣುತ್ತಿಲ್ಲ. ಈಗ ಶಾಂತಿಯ ಮಂತ್ರ ಸಾರುವ ಚರ್ಚ್ ಗುರುಗಳನ್ನೇ ಗುರಿಯಾಗಿಸಿಕೊಂಡು ಶಂಕಿತ ಉಗ್ರರು ಗುಂಡಿನ ಮಳೆಗರೆದಿದ್ದಾರೆ. ಚುರಚಂದ್‌ಪುರದಿಂದ ಕಾಂಗ್‌ಪೋಕ್ಪಿಗೆ ಸಭೆಯೊಂದಕ್ಕೆ ತೆರಳುತ್ತಿದ್ದ ನಿಯೋಗದ ಮೇಲೆ ನಡೆದ ಈ ದಾಳಿಯಲ್ಲಿ ಮೂವರು ಮೃತಪಟ್ಟು, ನಾಲ್ವರು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ.

ಶಾಂತಿ ಸಭೆಗೆ ತೆರಳುತ್ತಿದ್ದ ನಿಯೋಗದ ಮೇಲೆ ಗುಂಡಿನ ಮಳೆ! | Photo Credit: https://x.com/Sumkawn
ಶಾಂತಿ ಸಭೆಗೆ ತೆರಳುತ್ತಿದ್ದ ನಿಯೋಗದ ಮೇಲೆ ಗುಂಡಿನ ಮಳೆ! | Photo Credit: https://x.com/Sumkawn

ಮಣಿಪುರದಲ್ಲಿ ಶಾಂತಿ ಸಭೆಗೆ ತೆರಳುತ್ತಿದ್ದ ಚರ್ಚ್ ಧರ್ಮಗುರುಗಳ ಮೇಲೆ ಉಗ್ರರು ದಾಳಿ ನಡೆಸಿ ಮೂವರು ಮೃತಪಟ್ಟು, ನಾಲ್ವರು ಗಾಯಗೊಂಡಿದ್ದಾರೆ. ಈ ಘಟನೆಗೆ ಪ್ರತಿಯಾಗಿ ಕಾಂಗ್‌ಪೋಕ್ಪಿ ಜಿಲ್ಲೆಯಲ್ಲಿ ಸಂಪೂರ್ಣ ಬಂದ್ ಘೋಷಿಸಲಾಗಿದೆ. NSCN-IM ಸಂಘಟನೆಯ ಕೈವಾಡವಿದೆ ಎಂದು ಆರೋಪಗಳು ಕೇಳಿಬಂದಿದ್ದು, ರಾಜ್ಯದಲ್ಲಿ ಮತ್ತೆ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಸರ್ಕಾರ ಮತ್ತು ಭದ್ರತಾ ಪಡೆಗಳು ಹೈ ಅಲರ್ಟ್‌ನಲ್ಲಿದ್ದು, ಉಗ್ರರ ಪತ್ತೆಗಾಗಿ ಕಾರ್ಯಾಚರಣೆ ತೀವ್ರಗೊಳಿಸಲಾಗಿದೆ.

ಶಾಂತಿ ಸಭೆಗೆ ಹೋಗುವಾಗಲೇ ಸುರಿತ ಗುಂಡಿನ ಮಳೆ!

ದಾಳಿಗೊಳಗಾದವರು 'ಥಡೌ ಬ್ಯಾಪ್ಟಿಸ್ಟ್ ಅಸೋಸಿಯೇಷನ್' (TBA) ಮತ್ತು 'ಯುನೈಟೆಡ್ ಬ್ಯಾಪ್ಟಿಸ್ಟ್ ಕೌನ್ಸಿಲ್‌'ಗೆ ಸೇರಿದ ಧರ್ಮಗುರುಗಳು. ಇವರೆಲ್ಲರೂ ಅಂತರ-ಸಂಘಟನೆಯ ಚರ್ಚ್ ಸಭೆಯಲ್ಲಿ ಭಾಗವಹಿಸಲು ಚುರಚಂದ್‌ಪುರದಿಂದ ಕಾಂಗ್‌ಪೋಕ್ಪಿಗೆ ಪ್ರಯಾಣಿಸುತ್ತಿದ್ದರು. ಆದರೆ ದಾರಿಯ ಮಧ್ಯೆ ಹೊಂಚು ಹಾಕಿದ್ದ ಉಗ್ರರು, ನಿಯೋಗದ ವಾಹನ ಕಂಡ ತಕ್ಷಣ ಏಕಾಏಕಿ ದಾಳಿ ನಡೆಸಿದ್ದಾರೆ.

ಘಟನೆಯಲ್ಲಿ ಬಲಿಯಾದವರು:

ರೆವ್ ವಿ ಸಿಟ್ಲ್‌ಹೌ: ಟಿಬಿಎ ಅಧ್ಯಕ್ಷರು (ತಂಡದ ನೇತೃತ್ವ ವಹಿಸಿದ್ದರು).

  • ರೆವ್ ವಿ ಕೈಗೌಲುನ್.
  • ಪಾದ್ರಿ ಪಾಗೊಲೆನ್.

ಈ ದಾಳಿಯಲ್ಲಿ ರೆವ್ ಎಸ್‌ಎಂ ಹಾಪು, ರೆವ್ ಹೆಕೈ ಸಿಮ್ಟೆ, ರೆವ್ ಪಾವೊಥಾಂಗ್ ಮತ್ತು ಚಾಲಕ ಗೌಮಾಂಗ್ ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಜಿಲ್ಲೆಯಾದ್ಯಂತ "ಸಂಪೂರ್ಣ ಬಂದ್" ಘೋಷಣೆ!

ತಮ್ಮ ಸಮುದಾಯದ ಪ್ರಮುಖ ಧರ್ಮಗುರುಗಳ ಹತ್ಯೆಯಿಂದ ಆಕ್ರೋಶಗೊಂಡಿರುವ ಥಡೌ ಸಂಘಟನೆಗಳು ಕಾಂಗ್‌ಪೋಕ್ಪಿ ಜಿಲ್ಲೆಯ ಸದರ್ ಹಿಲ್ಸ್‌ನಲ್ಲಿ "ಸಂಪೂರ್ಣ ಬಂದ್"ಗೆ ಕರೆ ನೀಡಿವೆ. ಘಟನೆಯನ್ನು ಖಂಡಿಸಿ ಸ್ಥಳೀಯರು ರಸ್ತೆಗಿಳಿದು ಪ್ರತಿಭಟನೆ ನಡೆಸುತ್ತಿದ್ದು, ಮಣಿಪುರದಲ್ಲಿ ಮತ್ತೆ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.

ಯಾರ ಮೇಲೆ ಆರೋಪ?

ಈ ಕೃತ್ಯದ ಹಿಂದೆ ನಾಗಾ ಉಗ್ರಗಾಮಿ ಗುಂಪಿನ ಕೈವಾಡವಿದೆ ಎಂದು 'ಕುಕಿ ಆರ್ಗನೈಸೇಶನ್ ಫಾರ್ ಹ್ಯೂಮನ್ ರೈಟ್ಸ್ ಟ್ರಸ್ಟ್' (KOHUR) ಗಂಭೀರವಾಗಿ ಆರೋಪಿಸಿದೆ. 'ಎನ್‌ಎಸ್‌ಸಿಎನ್-ಐಎಂ' (NSCN-IM) ಸಂಘಟನೆಯು 'ಜೆಲಿಯಾಂಗ್‌ರಾಂಗ್ ಯುನೈಟೆಡ್ ಫ್ರಂಟ್' ಜೊತೆಗೂಡಿ ಈ ಪೂರ್ವಯೋಜಿತ ಭಯೋತ್ಪಾದನಾ ಕೃತ್ಯ ಎಸಗಿದೆ ಎಂದು ಸಂಘಟನೆ ಹೇಳಿಕೆ ನೀಡಿದೆ. "ಇದು ಕೇವಲ ದಾಳಿಯಲ್ಲ, ಇದು ಅಮಾನವೀಯ ಭಯೋತ್ಪಾದನೆ" ಎಂದು ಕೊಹೂರ್ ಆಕ್ರೋಶ ವ್ಯಕ್ತಪಡಿಸಿದೆ.

ಮತ್ತೆ ಭೀತಿಯ ನೆರಳಿನಲ್ಲಿ ಮಣಿಪುರ

ಕಳೆದ ಒಂದು ವರ್ಷದಿಂದ ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ಈಗಾಗಲೇ ನೂರಾರು ಜನರು ಬಲಿಯಾಗಿದ್ದಾರೆ. ಈಗ ಚರ್ಚ್ ನಾಯಕರನ್ನೇ ಗುರಿಯಾಗಿಸಿಕೊಂಡಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸಿದೆ. ಸರ್ಕಾರ ಮತ್ತು ಭದ್ರತಾ ಪಡೆಗಳು ಹೈ ಅಲರ್ಟ್ ಆಗಿದ್ದು, ಉಗ್ರರ ಪತ್ತೆಗಾಗಿ ಕಾರ್ಯಾಚರಣೆ ತೀವ್ರಗೊಳಿಸಿವೆ.

ಧರ್ಮಗುರುಗಳ ನಿಧನಕ್ಕೆ ಹಲವು ಗಣ್ಯರು ಕಂಬನಿ ಮಿಡಿದಿದ್ದು, ರಾಜ್ಯದಲ್ಲಿ ಶಾಂತಿ ನೆಲೆಸಲಿ ಎಂದು ಆಶಿಸಿದ್ದಾರೆ. 

Latest News