Mar 11, 2026 Languages : ಕನ್ನಡ | English

ಅರ್ಚಕನಿಗೆ ಪತ್ನಿಯೇ 'ಯಮ'ದೂತೆ - ಪ್ರಿಯಕರನೊಂದಿಗೆ ಸೇರಿ ಪತಿಯನ್ನೇ ಮುಗಿಸಿದ ಪಾಪಿ ಹೆಂಡತಿ!!

ಮಂಡ್ಯ ಜಿಲ್ಲೆಯ ಮರಳಗಾಲ ಗ್ರಾಮದ ಬಳಿ ನಡೆದ ಅರ್ಚಕ ಸಿದ್ದಲಿಂಗಪ್ಪ ಎಂಬುವವರ ಕೊಲೆ ಪ್ರಕರಣವು ಇದೀಗ ಭಾರಿ ಸುದ್ದಿಯಾಗಿದೆ. ಆರಂಭದಲ್ಲಿ ಅಪಘಾತ ಎಂದು ನಂಬಿಸಲಾಗಿದ್ದ ಈ ಪ್ರಕರಣದಲ್ಲಿ, ಕೊಲೆಗೈದಿದ್ದು ಬೇರೆ ಯಾರೂ ಅಲ್ಲ, ಸ್ವತಃ ಸಿದ್ದಲಿಂಗಪ್ಪ ಅವರ ಪತ್ನಿಯೇ ತನ್ನ ಪ್ರಿಯಕರನೊಂದಿಗೆ ಸೇರಿ ಈ ಸಂಚು ರೂಪಿಸಿದ್ದಳು ಎಂಬುದು ತನಿಖೆಯಲ್ಲಿ ಬಹಿರಂಗವಾಗಿದೆ. ಈ ಸಂಬಂಧ ಪತ್ನಿ ಶಾಲಿನಿ, ಆಕೆಯ ಪ್ರಿಯಕರ ಹರೀಶ್ ಹಾಗೂ ಅವರ ಇಬ್ಬರು ಸಹಚರರನ್ನು ಪೊಲೀಸರು ಬಂಧಿಸಿದ್ದಾರೆ.

ಬೈಕ್ ಅಪಘಾತವಲ್ಲ, ಇದು ಬರ್ಬರ ಹತ್ಯೆ
ಬೈಕ್ ಅಪಘಾತವಲ್ಲ, ಇದು ಬರ್ಬರ ಹತ್ಯೆ

ಮೃತ ಸಿದ್ದಲಿಂಗಪ್ಪ ಸ್ಥಳೀಯ ದೇವಾಲಯವೊಂದರಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದರು. ಅವರ ಪತ್ನಿ ಶಾಲಿನಿಗೆ ಅದೇ ಗ್ರಾಮದ ಹರೀಶ್ ಎಂಬಾತನೊಂದಿಗೆ ಕಳೆದ ಹಲವು ತಿಂಗಳುಗಳಿಂದ ಅಕ್ರಮ ಸಂಬಂಧವಿತ್ತು. ಸುಮಾರು ಒಂದೂವರೆ ವರ್ಷದ ಹಿಂದೆ ಸಿದ್ದಲಿಂಗಪ್ಪ ಅವರು ಪತ್ನಿ ಮತ್ತು ಪ್ರಿಯಕರನನ್ನು ಒಟ್ಟಿಗೆ ರೆಡ್‌ ಹ್ಯಾಂಡ್ ಆಗಿ ಹಿಡಿದಿದ್ದರು. ಅಂದು ಪತ್ನಿಗೆ ಬುದ್ಧಿವಾದ ಹೇಳಿ ಸಂಬಂಧವನ್ನು ಕಡಿದುಕೊಳ್ಳುವಂತೆ ಒತ್ತಾಯಿಸಿದ್ದರು. ಆದರೆ, ಇವರ ಅಕ್ರಮ ಸಂಬಂಧಕ್ಕೆ ಸಿದ್ದಲಿಂಗಪ್ಪ ದೊಡ್ಡ ಅಡ್ಡಿಯಾಗಿದ್ದಾರೆ ಎಂದು ಭಾವಿಸಿದ ಶಾಲಿನಿ, ಹೇಗಾದರೂ ಮಾಡಿ ಪತಿಯನ್ನು ಮುಗಿಸಬೇಕೆಂದು ನಿರ್ಧರಿಸಿದಳು.

ಮಾರ್ಚ್ 6ರಂದು ಸಿದ್ದಲಿಂಗಪ್ಪ ಶೆಟ್ಟಿಹಳ್ಳಿಯ ಗಣಪತಿ ದೇವಾಲಯದಲ್ಲಿ ಪೂಜೆ ಮುಗಿಸಿ ಬೈಕ್‌ನಲ್ಲಿ ನಾಲೆ ಏರಿ ಮನೆಗೆ ಮರಳುತ್ತಿದ್ದರು. ಈ ಬಗ್ಗೆ ಶಾಲಿನಿ ತನ್ನ ಪ್ರಿಯಕರ ಹರೀಶ್‌ಗೆ ಮೆಸೇಜ್ ಮೂಲಕ ಮಾಹಿತಿ ನೀಡಿದ್ದಳು. ಸಿದ್ದಲಿಂಗಪ್ಪ ಬರುತ್ತಿದ್ದಾಗ ಮಾರ್ಗಮಧ್ಯೆಯೇ ಹರೀಶ್ ಮತ್ತು ಆತನ ಇಬ್ಬರು ಸ್ನೇಹಿತರು ಸೇರಿ ಅವರನ್ನು ಅಡ್ಡಗಟ್ಟಿದರು. ಬಳಿಕ ದೊಣ್ಣೆಯಿಂದ ತಲೆಗೆ ಬಲವಾಗಿ ಹೊಡೆದು ಅವರನ್ನು ಬರ್ಬರವಾಗಿ ಹತ್ಯೆ ಮಾಡಿದರು.

ಕೊಲೆ ಮಾಡಿದ ನಂತರ ಆರೋಪಿಗಳು ಮೃತದೇಹವನ್ನು ಸಮೀಪದ ನಾಲೆಗೆ ಎಸೆದು, ಇದು ಬೈಕ್ ಅಪಘಾತ ಎಂದು ಬಿಂಬಿಸಲು ಪ್ರಯತ್ನಿಸಿದರು. ಆದರೆ, ಕುಟುಂಬಸ್ಥರು ನಡೆಸಿದ ಹುಡುಕಾಟದ ವೇಳೆ ಚಿಕ್ಕ ದೇವರಾಯ ಸಾಗರ ನಾಲೆಯ ದಡದಲ್ಲಿ ಸಿದ್ದಲಿಂಗಪ್ಪನವರ ಚಪ್ಪಲಿ ಹಾಗೂ ಬಟ್ಟೆಗಳು ಪತ್ತೆಯಾದವು. ನಂತರ ನಾಲೆಯಲ್ಲೇ ಮೃತದೇಹ ಮತ್ತು ಬೈಕ್ ಪತ್ತೆಯಾಯಿತು.

ಸ್ಥಳ ಪರಿಶೀಲನೆ ನಡೆಸಿದ ಪೊಲೀಸರಿಗೆ, ಚಪ್ಪಲಿ ಬಿದ್ದಿದ್ದ ಸ್ಥಳದಲ್ಲಿ ರಕ್ತದ ಕಲೆಗಳು ಕಂಡುಬಂದವು. ಇದು ಅಪಘಾತವಲ್ಲ, ಕೊಲೆ ಎಂಬುದು ಖಚಿತವಾಯಿತು. ಕೂಡಲೇ ಪೊಲೀಸರು ಪತ್ನಿ ಶಾಲಿನಿ ಮತ್ತು ಪ್ರಿಯಕರ ಹರೀಶ್ ಅವರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದರು. ವಿಚಾರಣೆ ವೇಳೆ, ತಾವೇ ಪತಿಯನ್ನು ಮುಗಿಸಿರುವುದಾಗಿ ಶಾಲಿನಿ ಮತ್ತು ಹರೀಶ್ ತಪ್ಪೊಪ್ಪಿಕೊಂಡರು. ಇದರೊಂದಿಗೆ ಅರ್ಚಕನ ಕೊಲೆಯ ರಹಸ್ಯ ಸಂಪೂರ್ಣವಾಗಿ ಬಯಲಾಗಿದೆ.

Latest News