Apr 7, 2026 Languages : ಕನ್ನಡ | English

ಅವರಿಗೆ ನಿದ್ದೆಯಲ್ಲೂ RSS ಕಾಣಿಸುತ್ತೆ - ಖರ್ಗೆ ಫ್ಯಾಮಿಲಿ ವಿರುದ್ಧ ಬಿಜೆಪಿ ಶಾಸಕರು ವ್ಯಂಗ್ಯ!!

ರಾಜಕೀಯದಲ್ಲಿ ಚುನಾವಣೆ ಹತ್ತಿರ ಬಂತು ಅಂದ್ರೆ ಸಾಕು, ನಾಯಕರ ನಾಲಿಗೆಯಿಂದ ಹೊರಬರುವ ಮಾತುಗಳು ಬೆಂಕಿ ಹಚ್ಚುತ್ತವೆ. ಈಗ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ನೀಡಿರುವ ಒಂದು ಹೇಳಿಕೆ ದೇಶಾದ್ಯಂತ ದೊಡ್ಡ ಬಿರುಗಾಳಿ ಎಬ್ಬಿಸಿದೆ. ಆರ್‌ಎಸ್‌ಎಸ್ (RSS) ಮತ್ತು ಬಿಜೆಪಿಯನ್ನು ವಿಷಕಾರಿ ಹಾವಿಗೆ ಹೋಲಿಸಿರುವ ಖರ್ಗೆ ವಿರುದ್ಧ ಈಗ ಕರ್ನಾಟಕ ಬಿಜೆಪಿ ನಾಯಕರು ಸಿಡಿದೆದ್ದಿದ್ದಾರೆ.

ಚುನಾವಣೆ ಹೊತ್ತಲ್ಲಿ 'ವಿಷಕಾರಿ' ಮಾತು
ಚುನಾವಣೆ ಹೊತ್ತಲ್ಲಿ 'ವಿಷಕಾರಿ' ಮಾತು

ಅಸ್ಸಾಂ ವಿಧಾನಸಭಾ ಚುನಾವಣೆಯ ಪ್ರಚಾರದ ವೇಳೆ ಅಸ್ಸಾಂನ ನಿಲಾಂಬಜಾರ್‌ನಲ್ಲಿ ನಡೆದ ಸಭೆಯಲ್ಲಿ ಖರ್ಗೆ ಅವರು ಮಾತನಾಡುತ್ತಾ ಒಂದು ವಿವಾದಾತ್ಮಕ ಉದಾಹರಣೆ ನೀಡಿದ್ದರು. "ನಮಾಜ್ ಮಾಡುವಾಗಲೂ ವಿಷಕಾರಿ ಹಾವನ್ನು ಕಂಡರೆ ಅದನ್ನು ಕೊಲ್ಲಬೇಕು ಎಂದು ಕುರಾನ್‌ನಲ್ಲಿ ಹೇಳಲಾಗಿದೆ. ಆರ್‌ಎಸ್‌ಎಸ್ ಮತ್ತು ಬಿಜೆಪಿ ಕೂಡ ಅದೇ ರೀತಿಯ ಹಾವುಗಳು, ಅವನ್ನು ಕೊಲ್ಲದಿದ್ದರೆ ನೀವು ಬದುಕಲು ಸಾಧ್ಯವಿಲ್ಲ," ಎನ್ನುವ ಅರ್ಥದಲ್ಲಿ ಮಾತನಾಡಿದ್ದರು. ಈ ಮಾತು ಈಗ ಬಿಜೆಪಿಯ ಕೆಂಗಣ್ಣಿಗೆ ಗುರಿಯಾಗಿದೆ.

ಬೆಂಗಳೂರಿನಲ್ಲಿ ದೂರು ದಾಖಲು

ಖರ್ಗೆ ಅವರ ಈ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಕರ್ನಾಟಕ ಬಿಜೆಪಿ, ಇಂದು (ಏಪ್ರಿಲ್ 07) ಬೆಂಗಳೂರಿನ ಡಿಜಿ ಮತ್ತು ಐಜಿಪಿ ಕಚೇರಿಯಲ್ಲಿ ಅಧಿಕೃತವಾಗಿ ದೂರು ನೀಡಿದೆ. ಜಯನಗರ ಶಾಸಕ ಸಿ.ಕೆ. ರಾಮಮೂರ್ತಿ ಮತ್ತು ದಾಸರಹಳ್ಳಿ ಶಾಸಕ ಎಸ್. ಮುನಿರಾಜು ಅವರ ನೇತೃತ್ವದಲ್ಲಿ ಬಂದ ತಂಡವು, ಖರ್ಗೆ ಅವರು ಹಿಂಸೆಗೆ ಪ್ರಚೋದನೆ ನೀಡುತ್ತಿದ್ದಾರೆ ಎಂದು ಆರೋಪಿಸಿದೆ.

ಶಾಸಕರ ಖಡಕ್ ತಿರುಗೇಟು!
ದೂರು ನೀಡಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಸಿ.ಕೆ. ರಾಮಮೂರ್ತಿ ಅವರು ಖರ್ಗೆ ಕುಟುಂಬದ ವಿರುದ್ಧ ವ್ಯಂಗ್ಯವಾಡಿದ್ದಾರೆ.

"ಇತ್ತೀಚೆಗೆ ಮಲ್ಲಿಕಾರ್ಜುನ ಖರ್ಗೆ ಮತ್ತು ಅವರ ಮಗ ಪ್ರಿಯಾಂಕ್ ಖರ್ಗೆಗೆ ಸರಿಯಾಗಿ ನಿದ್ದೆ ಬರುತ್ತಿಲ್ಲ ಅನ್ಸುತ್ತೆ. ಕಣ್ಣು ಮುಚ್ಚಿದರೆ ಸಾಕು ಅವರಿಗೆ ಆರ್‌ಎಸ್‌ಎಸ್ ಕಾಣಿಸುತ್ತೆ. ಅವರಿಗೆ ನೆಮ್ಮದಿ ಬೇಕೆಂದರೆ ಒಂದು ತಿಂಗಳು ನಾಗಪುರದ ಆರ್‌ಎಸ್‌ಎಸ್ ಕಚೇರಿಗೊ ಅಥವಾ ಬೆಂಗಳೂರಿನ ಕೇಶವಕೃಪಾಕ್ಕೊ ಹೋಗಿ ಕೆಲಸ ಮಾಡಲಿ, ಆಗ ಅವರಿಗೆ ಬುದ್ಧಿ ಬರುತ್ತೆ," ಎಂದು ಲೇವಡಿ ಮಾಡಿದ್ದಾರೆ.

ಮತ್ತೊಂದೆಡೆ ಶಾಸಕ ಮುನಿರಾಜು ಅವರು, "ಖರ್ಗೆ ಅವರು ದೇಶದಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಕೋಮು ಗಲಭೆ ಸೃಷ್ಟಿಸುವ ಇಂತಹ ಭಾಷಣಗಳನ್ನು ಮಾಡುವವರನ್ನು ಕೂಡಲೇ ಬಂಧಿಸಬೇಕು," ಎಂದು ಆಗ್ರಹಿಸಿದ್ದಾರೆ.

ಸಂಕಷ್ಟದಲ್ಲಿ ಖರ್ಗೆ?

ಒಂದೆಡೆ ಬಿಜೆಪಿ ದೇಶಾದ್ಯಂತ ಪ್ರತಿಭಟನೆಗೆ ಸಜ್ಜಾಗಿದ್ದರೆ, ಇನ್ನೊಂದೆಡೆ ಸೋಷಿಯಲ್ ಮೀಡಿಯಾದಲ್ಲಿ ಖರ್ಗೆ ವಿರುದ್ಧ ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕು ಎನ್ನುವ ಒತ್ತಾಯ ಜೋರಾಗಿದೆ. ಮತದಾರರನ್ನು ಸೆಳೆಯಲು ಧರ್ಮ ಮತ್ತು ಹಿಂಸೆಯ ಉದಾಹರಣೆ ನೀಡುವುದು ಸಂವಿಧಾನ ವಿರೋಧಿ ಎಂದು ಬಿಜೆಪಿ ವಾದಿಸುತ್ತಿದೆ.

ಸದ್ಯಕ್ಕೆ ದೂರು ದಾಖಲಾಗಿದ್ದು, ಕರ್ನಾಟಕ ಪೊಲೀಸ್ ಇಲಾಖೆ ಎಐಸಿಸಿ ಅಧ್ಯಕ್ಷರ ಮೇಲೆ ಯಾವ ಕ್ರಮ ಕೈಗೊಳ್ಳಲಿದೆ ಎನ್ನುವುದನ್ನು ಕಾದು ನೋಡಬೇಕು. ರಾಜಕೀಯ ಅಖಾಡದಲ್ಲಿ ಈ 'ಹಾವಿನ' ಜಗಳ ಎಲ್ಲಿಗೆ ಹೋಗಿ ನಿಲ್ಲುತ್ತೆ ಅನ್ನೋದು ಈಗ ಕುತೂಹಲ ಮೂಡಿಸಿದೆ.

Latest News