ಈ ವರ್ಷದಲ್ಲಿ ರೈತರು ಬೆಳೆದಿರುವ ಕಬ್ಬಿನ ಬೆಳೆಗಳಿಗೆ ಸರಿಯಾದ ರೀತಿ ಬೆಲೆ ಸಿಗುತ್ತಿಲ್ಲ ಎನ್ನುವ ವಿಚಾರಕ್ಕೆ ರೈತರಿಂದ ಹಾಗೂ ರೈತ ಸಂಘಟನೆಗಳಿಂದ ನಡೆದ ಹೋರಾಟ, ನಂತರ ರಾಜ್ಯ ಸರ್ಕಾರ ಅದಕ್ಕೆ ಬೆಲೆ ನಿಗದಿಪಡಿಸಿದ ವಿಚಾರ ಈಗಾಗಲೇ ಎಲ್ಲರಿಗೂ ಗೊತ್ತಿದೆ. ಅದರ ಬೆನ್ನಲ್ಲೇ ಇದೀಗ ಮತ್ತೊಂದು ಬೆಳೆಯ ಗಲಾಟೆ ಎದ್ದಿದೆ. ಉತ್ತರ ಕರ್ನಾಟಕದಲ್ಲಿ ಮೆಕ್ಕೆಜೋಳ ಬೆಲೆ ಕುಸಿತದ ಕಾರಣಕ್ಕೆ ರೈತರು ಮತ್ತೆ ಕೆಲವು ಕಡೆ ಪ್ರತಿಭಟನೆ ಮಾಡಿದ್ದು, ರಾಜ್ಯದಲ್ಲಿ ಮೆಕ್ಕೆಜೋಳದ ಬೆಲೆ ಕುಸಿತ ಕಂಡ ಹಿನ್ನೆಲೆಯಲ್ಲಿ ರೈತರು ಬೆಂಬಲ ಬೆಲೆ ಯೋಜನೆಯಡಿ ಖರೀದಿ ಮಾಡಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ. ಕ್ವಿಂಟಲ್‌ಗೆ ₹3,400 ದರ ನಿಗದಿಪಡಿಸಬೇಕೆಂದು ಹಲವು ರೈತ ಸಂಘಟನೆಗಳು ಒತ್ತಾಯಿಸುತ್ತಿವೆ. ಉತ್ತರ ಕರ್ನಾಟಕದ ರೈತರು ಖರೀದಿ ಕೇಂದ್ರಗಳನ್ನು ತೆರೆಯುವಂತೆ ಒತ್ತಾಯಿಸುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾವೇರಿ ನಿವಾಸದಲ್ಲಿ ಸಭೆ ನಡೆಸಿದರು.
ಬೆಲೆ ಕುಸಿತಕ್ಕೆ ಕಾರಣಗಳು
ಸಭೆಯಲ್ಲಿ ಮೆಕ್ಕೆಜೋಳದ ದರ ಕುಸಿತಕ್ಕೆ ಕಾರಣಗಳ ಬಗ್ಗೆ ಚರ್ಚೆ ನಡೆಯಿತು. ರಾಜ್ಯ ಮತ್ತು ದೇಶದಲ್ಲಿ ಉತ್ಪಾದನೆ ಹೆಚ್ಚಾಗಿರುವುದರಿಂದ ಮಾರುಕಟ್ಟೆಯಲ್ಲಿ ಬೆಲೆ ಕುಸಿತ ಕಂಡಿದೆ. ಇದಕ್ಕೆ ಜೊತೆಗೆ ಕೇಂದ್ರ ಸರ್ಕಾರ ವಿದೇಶಗಳಿಂದ 70 ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳವನ್ನು ಆಮದು ಮಾಡಿರುವುದು ರೈತರಿಗೆ ಹೆಚ್ಚುವರಿ ಹೊರೆ ತಂದಿದೆ. ಹೌದು ಎಥೆನಾಲ್ ಉತ್ಪಾದನೆಗೆ ರಾಜ್ಯಕ್ಕೆ ನೀಡಿರುವ ಕೋಟಾ ಪ್ರಮಾಣ ಕಡಿಮೆಯಾಗಿರುವುದರಿಂದ ಡಿಸ್ಟಿಲರಿಗಳು ಖರೀದಿಗೆ ಮುಂದೆ ಬರದೆ ಸಮಸ್ಯೆ ಹೆಚ್ಚಾಗಿದೆ.
ಏಜೆನ್ಸಿಗಳ ನಿರ್ಲಕ್ಷ್ಯ
ಕೇಂದ್ರದ ನೋಡಲ್ ಏಜೆನ್ಸಿಗಳಾದ ನಾಫೆಡ್ ಮತ್ತು ಎನ್ಸಿಸಿಎಫ್ ಬೆಂಬಲ ಬೆಲೆ ಯೋಜನೆಯಡಿ ಖರೀದಿ ಪ್ರಕ್ರಿಯೆ ಆರಂಭಿಸಬೇಕಾಗಿತ್ತು. ಆದರೆ ಮಾರ್ಗಸೂಚಿ ಹೊರಬಂದಿದ್ದರೂ ಖರೀದಿ ಪ್ರಾರಂಭವಾಗಿಲ್ಲ. ಡಿಸ್ಟಿಲರಿಗಳು ಬೆಲೆ ಕಡಿಮೆ ಇದ್ದಾಗಲೇ ಶೇಖರಣೆ ಮಾಡಿಕೊಂಡಿರುವುದರಿಂದ ಈಗ ಖರೀದಿಗೆ ಮುಂದೆ ಬರದೆ ನಿಯಮ ಉಲ್ಲಂಘನೆ ಮಾಡಿದ್ದಾರೆ. ಇದರಿಂದ ರೈತರಿಗೆ ತೀವ್ರ ಸಂಕಷ್ಟ ಉಂಟಾಗಿದೆ.
ಸಭೆಯಲ್ಲಿ ವ್ಯಕ್ತವಾದ ಸಲಹೆಗಳು
ಸಭೆಯಲ್ಲಿ ಹಲವು ಸಲಹೆಗಳು ವ್ಯಕ್ತವಾದವು. ಮೆಕ್ಕೆಜೋಳ ಆಮದು ಮೇಲೆ ತಕ್ಷಣ ನಿಯಂತ್ರಣ ಹೇರುವ ಮೂಲಕ ಬೆಲೆಯಲ್ಲಿ ಸ್ಥಿರತೆ ಸಾಧಿಸಬೇಕು ಎಂದು ಅಭಿಪ್ರಾಯ ವ್ಯಕ್ತವಾಯಿತು. 8 ಲಕ್ಷ ಟನ್ ಮೆಕ್ಕೆಜೋಳವನ್ನು ತಕ್ಷಣ ಖರೀದಿಸಲು ಏಜೆನ್ಸಿಗಳನ್ನು ಒತ್ತಾಯಿಸಬೇಕು. ಖರೀದಿ ಕೇಂದ್ರಗಳನ್ನು ತಕ್ಷಣ ಆರಂಭಿಸುವ ಮೂಲಕ ಮಾರುಕಟ್ಟೆಯಲ್ಲಿ ಧಾರಣೆ ಸ್ಥಿರಗೊಳಿಸಬೇಕೆಂದು ಕೃಷಿ ಸಚಿವ ಚಲುವರಾಯಸ್ವಾಮಿ ಮಾಹಿತಿ ನೀಡಿದರು.
ಸಿದ್ದರಾಮಯ್ಯನವರ ಸೂಚನೆಗಳು
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಲೆ ಕುಸಿತದಿಂದ ಸಂಕಷ್ಟ ಎದುರಿಸುತ್ತಿರುವ ರೈತರ ನೆರವಿಗೆ ಸರ್ಕಾರ ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಿದೆ ಎಂದು ಭರವಸೆ ನೀಡಿದರು. ಆಮದು ನಿರ್ಬಂಧಿಸಲು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲು ನಿರ್ಧಾರ ಕೈಗೊಂಡರು. ಎಥೆನಾಲ್ ಉತ್ಪಾದನೆಗಾಗಿ ಮೆಕ್ಕೆಜೋಳವನ್ನು ತಕ್ಷಣ ಖರೀದಿಸಲು ರಾಜ್ಯದ ಪ್ರಮುಖ ಡಿಸ್ಟಿಲರಿಗಳೊಂದಿಗೆ ಸಭೆ ನಡೆಸಲು ಸೂಚಿಸಿದರು. ಜೊತೆಗೆ ಕುಕ್ಕುಟೋದ್ಯಮದ ಬೇಡಿಕೆಯನ್ನು ಪೂರೈಸಲು ಅವರೊಂದಿಗೆ ಮಾತುಕತೆ ನಡೆಸಲು ಸೂಚನೆ ನೀಡಿದ್ದಾರೆ.