ಒಂದೆಡೆ ಅಂತರರಾಷ್ಟ್ರೀಯ ಮಟ್ಟದ ಬಿಕ್ಕಟ್ಟಿನಿಂದಾಗಿ ದೇಶದಲ್ಲಿ ಗ್ಯಾಸ್ ಸಿಲಿಂಡರ್ ಅಭಾವ ತಲೆದೂರಿದ್ದರೆ, ಇನ್ನೊಂದೆಡೆ ಇದನ್ನೇ ಬಂಡವಾಳ ಮಾಡಿಕೊಂಡಿರುವ ಕಳ್ಳರು ಈಗ ಸಿಲಿಂಡರ್ ಕಳ್ಳತನಕ್ಕೆ ಇಳಿದಿದ್ದಾರೆ. ಈ ಹಿಂದೆ ಚಿನ್ನ, ಹಣ, ಬೈಕ್ ಕಳ್ಳತನ ಮಾಡುತ್ತಿದ್ದ ಖದೀಮರು ಈಗ ಗ್ಯಾಸ್ ಸಿಲಿಂಡರ್ ಕಂಡರೆ ಸಾಕು, ಎಗರಿಸಿಕೊಂಡು ಹೋಗುತ್ತಿದ್ದಾರೆ. ಬೀದರ್‌ನಿಂದ ಬೆಂಗಳೂರಿನವರೆಗೆ ಇಂತಹ ಸಾಲು ಸಾಲು ಪ್ರಕರಣಗಳು ವರದಿಯಾಗುತ್ತಿರುವುದು ಜನರಲ್ಲಿ ಆತಂಕ ಮೂಡಿಸಿದೆ.
ಬೀದರ್ ಜಿಲ್ಲೆಯ ಹುಲಸೂರು ತಾಲೂಕಿನ ಗೋರ್ಟಾ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಅತ್ಯಂತ ಅಮಾನವೀಯ ಘಟನೆ ನಡೆದಿದೆ. ಶಾಲೆಯ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ತಯಾರಿಸಲು ಇಟ್ಟಿದ್ದ ಬರೋಬ್ಬರಿ 6 ಗ್ಯಾಸ್ ಸಿಲಿಂಡರ್‌ಗಳನ್ನು ಕಳ್ಳರು ಹೊತ್ತೊಯ್ದಿದ್ದಾರೆ. ಅಡುಗೆ ಕೋಣೆಯ ಬೀಗ ಮುರಿದು ಈ ಕೃತ್ಯ ಎಸಗಲಾಗಿದ್ದು, ಸದ್ಯ ಬಸವಕಲ್ಯಾಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಕ್ಕಳ ಊಟಕ್ಕೂ ಸಂಚಕಾರ ತಂದಿರುವ ಕಳ್ಳರ ಈ ವರ್ತನೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೇ ಜಿಲ್ಲೆಯ ಭಾಲ್ಕಿಯ ನಿವಾಸಿ ಮಲ್ಲಿಕಾರ್ಜುನ ಎಂಬುವವರು ಸಿಲಿಂಡರ್ ಖರೀದಿಸಲು ಗೋದಾಮಿಗೆ ಹೋದಾಗ, ಅಲ್ಲೂ ಕೂಡ ಕಳ್ಳನೊಬ್ಬ ತನ್ನ ಕೈಚಳಕ ತೋರಿಸಿದ್ದಾನೆ. ಮಾರ್ಚ್ 14ರಂದು ನಡೆದ ಈ ಘಟನೆಯಲ್ಲಿ, ಅಪರಿಚಿತ ವ್ಯಕ್ತಿಯೊಬ್ಬ ಮಲ್ಲಿಕಾರ್ಜುನ ಅವರ ಕಣ್ಣೆದುರೇ ಸಿಲಿಂಡರ್ ಕದ್ದು ಪರಾರಿಯಾಗಿದ್ದಾನೆ. ಈ ಬಗ್ಗೆ ಭಾಲ್ಕಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ರಾಜಧಾನಿ ಬೆಂಗಳೂರು ಕೂಡ ಈ ಸಿಲಿಂಡರ್ ಕಳ್ಳರಿಂದ ಹೊರತಾಗಿಲ್ಲ. ಬೇಗೂರು ಪೊಲೀಸ್ ಠಾಣೆ ವ್ಯಾಪ್ತಿಯ ಆರ್.ಸಿ ಲೇಔಟ್‌ನ ಸಾಯಿ ಅಪಾರ್ಟ್‌ಮೆಂಟ್‌ನಲ್ಲಿ ಹಾಡಹಗಲೇ ಕಳ್ಳತನ ನಡೆದಿದೆ. ಯುಗಾದಿ ಹಬ್ಬದ ದಿನವೇ ಹೆಲ್ಮೆಟ್ ಧರಿಸಿ ಸ್ಕೂಟರ್‌ನಲ್ಲಿ ಬಂದಿದ್ದ ಇಬ್ಬರು ಖದೀಮರು, ಅಪಾರ್ಟ್‌ಮೆಂಟ್‌ನ ಬೇಸ್‌ಮೆಂಟ್ ಒಳಗೆ ನುಗ್ಗಿದ್ದಾರೆ. ಅಲ್ಲಿ ಇಟ್ಟಿದ್ದ ಎರಡು ಸಿಲಿಂಡರ್‌ಗಳನ್ನು ಸ್ಕೂಟರ್‌ನಲ್ಲಿ ಇರಿಸಿಕೊಂಡು ಪರಾರಿಯಾಗಿದ್ದಾರೆ. ಈ ಇಡೀ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಪೊಲೀಸರು ಕಳ್ಳರಿಗಾಗಿ ಬಲೆ ಬೀಸಿದ್ದಾರೆ.
ಪ್ರಸ್ತುತ ಮಾರುಕಟ್ಟೆಯಲ್ಲಿ ಗ್ಯಾಸ್ ಅಭಾವ ಇರುವುದರಿಂದ ಕಮರ್ಷಿಯಲ್ ಸಿಲಿಂಡರ್‌ಗಳ ಪೂರೈಕೆ ಕಡಿಮೆಯಾಗಿದೆ. ಇದರಿಂದ ಹೋಟೆಲ್ ಉದ್ಯಮಕ್ಕೆ ಭಾರಿ ಹೊಡೆತ ಬಿದ್ದಿದ್ದು, ಹಲವು ಹೋಟೆಲ್‌ಗಳು ಮುಚ್ಚುವ ಸ್ಥಿತಿಗೆ ತಲುಪಿವೆ. ಈ ಕೃತಕ ಅಭಾವವನ್ನು ಬಳಸಿಕೊಳ್ಳುತ್ತಿರುವ ಕಳ್ಳರು, ಕದ್ದ ಸಿಲಿಂಡರ್‌ಗಳನ್ನು ಕಾಳಸಂತೆಯಲ್ಲಿ (Black Market) ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ ಎನ್ನಲಾಗಿದೆ.
ನಿಮ್ಮ ಮನೆಯ ಹೊರಗೆ ಅಥವಾ ಅಪಾರ್ಟ್‌ಮೆಂಟ್ ಬೇಸ್‌ಮೆಂಟ್‌ಗಳಲ್ಲಿ ಸಿಲಿಂಡರ್ ಇಡುವಾಗ ಜಾಗರೂಕರಾಗಿರಿ. ಸಿಲಿಂಡರ್‌ಗಳಿಗೆ ಸರಿಯಾದ ಲಾಕ್ ವ್ಯವಸ್ಥೆ ಮಾಡಿ ಅಥವಾ ಅವುಗಳು ಕಳ್ಳರ ಕಣ್ಣಿಗೆ ಬೀಳದಂತೆ ಸುರಕ್ಷಿತವಾಗಿ ಇಡಿ. ಅಡುಗೆ ಕೋಣೆ ಅಥವಾ ಗೋದಾಮುಗಳ ಬೀಗ ಭದ್ರವಾಗಿದೆಯೇ ಎಂದು ಪರೀಕ್ಷಿಸಿಕೊಳ್ಳಿ.
ಗ್ಯಾಸ್ ಬಿಕ್ಕಟ್ಟಿನ ಈ ಸಮಯದಲ್ಲಿ ಪೊಲೀಸರು ಈ 'ಸಿಲಿಂಡರ್ ಗ್ಯಾಂಗ್' ಅನ್ನು ಮಟ್ಟಹಾಕಬೇಕಿದೆ. ಇಲ್ಲವಾದರೆ ಸಾಮಾನ್ಯ ಜನರ ಅಡುಗೆ ಮನೆಗೂ ಕಳ್ಳರು ಕನ್ನ ಹಾಕುವ ದಿನಗಳು ದೂರವಿಲ್ಲ.