ಕನ್ನಡ ಭಾಷೆ, ಸಂಸ್ಕೃತಿ ಮತ್ತು ಸಾಹಿತ್ಯದ ಉಳಿವಿಗಾಗಿ, ಬೆಳವಣಿಗೆಗಾಗಿ ನಡೆಯುವ ವೇದಿಕೆಗಳೇ ಸಾಹಿತ್ಯ ಸಮ್ಮೇಳನಗಳು. ಆದರೆ ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ಇತ್ತೀಚೆಗೆ ನಡೆದ ಸಾಹಿತ್ಯಿಕ ಕಾರ್ಯಕ್ರಮವೊಂದರಲ್ಲಿ ನಡೆದ ಘಟನೆ ಇಡೀ ಕನ್ನಡ ನಾಡೇ ತಲೆತಗ್ಗಿಸುವಂತೆ ಮಾಡಿದೆ. ಕನ್ನಡಕ್ಕೆ ಮಾತ್ರವೇ ಮೊದಲ ಆದ್ಯತೆ ಇರಬೇಕಾದ, ಕನ್ನಡತನವನ್ನು ಎತ್ತಿಹಿಡಿಯಬೇಕಾದ ವೇದಿಕೆಯಲ್ಲೇ ಹಿಂದಿ ಚಿತ್ರಗೀತೆಯೊಂದಕ್ಕೆ ಅರೆಬರೆ ಬಟ್ಟೆಯುಟ್ಟು ಬೇಕಾಬಿಟ್ಟಿ ನೃತ್ಯ ಮಾಡಿರುವುದು ಈಗ ತೀವ್ರ ವಿವಾದಕ್ಕೆ ಕಾರಣವಾಗಿದೆ.
ಆನೆಗುಡ್ಡೆ ಗಣಪತಿ ಸನ್ನಿಧಾನದಲ್ಲಿ ನಡೆದ ಅಚಾತುರ್ಯ
ಕುಂದಾಪುರ ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಆನೆಗುಡ್ಡೆ ಶ್ರೀ ಮಹಾಗಣಪತಿ ದೇವರ ಸನ್ನಿಧಾನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕುಂದಾಪುರ ತಾಲೂಕು ಘಟಕದ ಆಶ್ರಯದಲ್ಲಿ ೨೦ ನೇ ತಾಲೂಕು ಸಾಹಿತ್ಯ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಮ್ಮೇಳನದ ಅಂಗವಾಗಿ ನಡೆದ 'ನುಡಿ ಬೆಳಕು' ಎಂಬ ಸಾಂಸ್ಕೃತಿಕ ಕಾರ್ಯಕ್ರಮದಲ್ಲೇ ಈ ಗಂಭೀರ ಎಡವಟ್ಟು ಸಂಭವಿಸಿದೆ. ಕನ್ನಡದ ಗೀತೆಗಳು, ಜಾನಪದ ಕಲೆಗಳು ಅನಾವರಣಗೊಳ್ಳಬೇಕಾಗಿದ್ದ ಈ ಪವಿತ್ರ ವೇದಿಕೆಯಲ್ಲಿ ಯುವತಿಯೊಬ್ಬಳು 'ಚೋಲಿ ಕೆ ಪೀಚೆ ಕ್ಯಾ ಹೈ' ಎಂಬ ವಿವಾದಾತ್ಮಕ ಹಿಂದಿ ಚಿತ್ರದ ಹಾಡಿಗೆ ಅಸಭ್ಯವಾಗಿ ನೃತ್ಯ ಮಾಡಿದ್ದಾಳೆ.
ಕನ್ನಡ ಸಾಹಿತ್ಯ ಪರಿಷತ್ತಿನ ಇತಿಹಾಸದಲ್ಲೇ ಇಂತಹದೊಂದು ಘಟನೆ ನಡೆದಿರುವುದು ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ತಂದಿದೆ. ಸಾಹಿತ್ಯ ಸಮ್ಮೇಳನದ ವೇದಿಕೆಯು ಕೇವಲ ಮನೋರಂಜನೆಯ ತಾಣವಲ್ಲ, ಅದು ಕನ್ನಡ ಭಾಷೆಯ ಘನತೆಯನ್ನು ಸಾರುವ ಪವಿತ್ರ ಸ್ಥಳ. ಅಂತಹ ಜಾಗದಲ್ಲಿ, ಅದೂ ಕೂಡ ದೇವಸ್ಥಾನದ ಆವರಣದಲ್ಲಿ ಇಂತಹದೊಂದು ಪ್ರದರ್ಶನಕ್ಕೆ ಅವಕಾಶ ನೀಡಿದ್ದು ಹೇಗೆ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಎದ್ದಿದೆ.
ಆಯೋಜಕರ 'ಜಾಣ ಕಿವುಡು' ಮತ್ತು ಮೌನ
ಇಡೀ ಘಟನೆಯಲ್ಲಿ ಅತ್ಯಂತ ಬೇಸರದ ಸಂಗತಿಯೆಂದರೆ, ಆಯೋಜಕರ ನಡೆ. ವೇದಿಕೆಯ ಮುಂಭಾಗದಲ್ಲಿ ಸಾಹಿತ್ಯ ಪರಿಷತ್ತಿನ ಪ್ರಮುಖ ಪದಾಧಿಕಾರಿಗಳು, ಗಣ್ಯರು ಕುಳಿತಿದ್ದರು. ಅನ್ಯ ಭಾಷೆಯ, ಅದೂ ಕೂಡ ಅಶ್ಲೀಲ ಸಾಹಿತ್ಯವಿರುವ ಹಾಡಿಗೆ ಯುವತಿ ಬೇಕಾಬಿಟ್ಟಿಯಾಗಿ ಕುಣಿಯುತ್ತಿದ್ದರೂ, ಕಾರ್ಯಕ್ರಮವನ್ನು ಅರ್ಧದಲ್ಲೇ ನಿಲ್ಲಿಸುವ ಗೋಜಿಗೆ ಯಾರೂ ಹೋಗಲಿಲ್ಲ. ಹಾಡು ಮುಗಿಯುವವರೆಗೂ ಆಯೋಜಕರು ಕಣ್ಣುಬಿಟ್ಟುಕೊಂಡು, ಆ ನೃತ್ಯವನ್ನು ಸವಿಯುತ್ತಾ ಮನೋರಂಜನೆ ಪಡೆದರೇ ವಿನಃ ಅದನ್ನು ತಡೆಯುವ ಸೌಜನ್ಯ ತೋರಲಿಲ್ಲ. ಆಯೋಜಕರ ಈ ಜಾಣ ಕಿವುಡು ಮತ್ತು ಜಾಣ ಕುರುಡುತನಕ್ಕೆ ಕನ್ನಡಿಗರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾ ಅಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ ಹಾಗೂ ಕುಂದಾಪುರ ತಾಲೂಕು ಅಧ್ಯಕ್ಷರಾದ ಡಾ. ಉಮೇಶ್ ಪುತ್ರನ್ ಅವರ ಸಮ್ಮುಖದಲ್ಲೇ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಇಬ್ಬರೂ ನಾಯಕರ ಮೌನ ಈಗ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಕನ್ನಡದ ಹೆಸರಿನಲ್ಲಿ ವೇದಿಕೆ ನಿರ್ಮಿಸಿ, ಕನ್ನಡೇತರ ಮತ್ತು ಸಾಹಿತ್ಯ ಸಮ್ಮೇಳನದ ಆಶಯಕ್ಕೆ ವಿರುದ್ಧವಾದ ಇಂತಹ ನೃತ್ಯಕ್ಕೆ ಅವಕಾಶ ನೀಡಿದ ಇವರ ವಿರುದ್ಧ ಕನ್ನಡಿಗರು ಕೆಂಡಾಮಂಡಲವಾಗಿದ್ದಾರೆ.
ನೆಟ್ಟಿಗರ ಮತ್ತು ಸಾರ್ವಜನಿಕರ ಆಕ್ರೋಶ
ಈ ನೃತ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ನೆಟ್ಟಿಗರು ಆಯೋಜಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. "ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಇಂತಹ ದುಸ್ಥಿತಿ ಬರಬಾರದಿತ್ತು. ಕನ್ನಡ ಭಾಷೆಯನ್ನು ಬೆಳೆಸಬೇಕಾದವರೇ ಈ ರೀತಿ ಪರಭಾಷಾ ಸಂಸ್ಕೃತಿಗೆ ಮಣೆ ಹಾಕುತ್ತಿರುವುದು ನಾಚಿಕೆಗೇಡು" ಎಂದು ಅನೇಕರು ಕಮೆಂಟ್ ಮಾಡಿದ್ದಾರೆ. ಜಿಲ್ಲಾಧ್ಯಕ್ಷರು, ತಾಲೂಕು ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಬೇಜವಾಬ್ದಾರಿತನದ ವಿರುದ್ಧ ವ್ಯಾಪಕ ಅಸಮಾಧಾನ ವ್ಯಕ್ತವಾಗುತ್ತಿದ್ದು, ಇವರೆಲ್ಲರೂ ಕನ್ನಡಿಗರ ಕ್ಷಮೆಯಾಚಿಸಬೇಕು ಹಾಗೂ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ.
ಸಮ್ಮೇಳನದ ಆಶಯಕ್ಕೆ ಬಿದ್ದ ಪೆಟ್ಟು
ಸಾಹಿತ್ಯ ಸಮ್ಮೇಳನಗಳು ಇರುವುದು ಮುಂದಿನ ಪೀಳಿಗೆಗೆ ಕನ್ನಡದ ಶ್ರೀಮಂತಿಕೆಯನ್ನು ಪರಿಚಯಿಸಲು. ಆದರೆ ಇಂತಹ ಘಟನೆಗಳಿಂದಾಗಿ ಸಮ್ಮೇಳನದ ಅಸಲಿ ಉದ್ದೇಶವೇ ಹಳಿ ತಪ್ಪಿದಂತಾಗಿದೆ. ಕನ್ನಡ ಸಾಹಿತ್ಯ ಪರಿಷತ್ತು ತನ್ನ ಘನತೆಯನ್ನು ಕಾಪಾಡಿಕೊಳ್ಳಬೇಕಾದರೆ, ಇಂತಹ ಕೃತ್ಯಗಳನ್ನು ಕಟ್ಟುನಿಟ್ಟಾಗಿ ತಡೆಯಬೇಕಿತ್ತು. ಆದರೆ ಕುಂದಾಪುರದಲ್ಲಿ ನಡೆದ ಈ ಘಟನೆಯು ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳ ನಿರ್ಲಕ್ಷ್ಯ ಮತ್ತು ಕನ್ನಡದ ಮೇಲಿನ ಕಾಳಜಿಯ ಕೊರತೆಯನ್ನು ಎತ್ತಿ ತೋರಿಸುತ್ತದೆ. ಆನೆಗುಡ್ಡೆಯಂತಹ ಪವಿತ್ರ ಧಾರ್ಮಿಕ ಕ್ಷೇತ್ರದಲ್ಲಿ ನಡೆದ ಈ ಅಪಚಾರಕ್ಕೆ ಸಾಹಿತ್ಯ ಪರಿಷತ್ತಿನ ವರಿಷ್ಠರು ಸೂಕ್ತ ಕ್ರಮ ಕೈಗೊಳ್ಳಬೇಕಿದೆ.