ಕೊಪ್ಪಳದಲ್ಲಿ ನಡೆದ ಒಂದು ಅಂತರ್ಜಾತಿ ವಿವಾಹ ಪ್ರಕರಣವು ಇದೀಗ ಚರ್ಚೆಗೆ ಗ್ರಾಸವಾಗಿದೆ. ಚುಕ್ಕನಕಲ್ ಗ್ರಾಮದ ಗಣೇಶ ಮತ್ತು ಮುದ್ದಾಬಳ್ಳೀ ಗ್ರಾಮದ ಉಷಾರಾಣಿ ಶಾಲಾ ದಿನಗಳಿಂದಲೇ ಪರಸ್ಪರ ಪ್ರೀತಿಸುತ್ತಿದ್ದರು. ಕುಟುಂಬದ ವಿರೋಧದ ನಡುವೆಯೂ ಇಬ್ಬರೂ ತಮ್ಮ ಪ್ರೀತಿಯನ್ನು ಮದುವೆಯ ಮೂಲಕ ಸಾರ್ಥಕಗೊಳಿಸಿದರು. ಪೋಷಕರ ವಿರೋಧದ ನಡುವೆ, ಈ ಜೋಡಿ ದೇವಸ್ಥಾನದಲ್ಲಿ ಮದುವೆಯಾಗಿದ್ದು, ನಂತರವೂ ಯುವತಿಯ ಮನೆಯವರಿಂದ ಯುವಕನಿಗೆ ಜೀವ ಬೆದರಿಕೆ ಬಂದಿರುವುದಾಗಿ ಆರೋಪಿಸಲಾಗಿದೆ. “ನಾವು ಪ್ರೀತಿಸಿ ಮದುವೆಯಾಗೋದು ತಪ್ಪಾ? ಅವರ ಮನೆಯಲ್ಲಿ ದೊಡ್ಡಪ್ಪ, ಅಣ್ಣ ಕೂಡ ಪ್ರೀತಿಸಿ ಮದುವೆಯಾಗಿದ್ದಾರೆ. ಆದರೆ ನಮ್ಮ ವಿಷಯಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ” ಎಂದು ಯುವಕ ಗಣೇಶ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉಷಾರಾಣಿ ಕೂಡ ತನ್ನ ನಿರ್ಧಾರವನ್ನು ಸ್ಪಷ್ಟಪಡಿಸಿದ್ದು, “ನಾನೇ ಅವನನ್ನು ಕರೆದುಕೊಂಡು ಬಂದಿದ್ದೇನೆ. ಅವನು ಬೇಡ ಅಂದ್ರೂ, ನಾನೆ ಕರೆದುಕೊಂಡು ಬಂದಿರುವೆ. ದೇವಸ್ಥಾನದಲ್ಲಿ ಇಬ್ಬರು ಮದುವೆಯಾಗಿದ್ದೇವೆ. ನಮ್ಮ ಮನೆಯಲ್ಲಿ ಬೆದರಿಕೆ ಹಿನ್ನೆಲೆ ಠಾಣೆಗೆ ಬಂದಿದ್ದೇವೆ” ಎಂದು ಹೇಳಿದ್ದಾರೆ. ಜೀವ ಬೆದರಿಕೆ ಹಿನ್ನೆಲೆಯಲ್ಲಿ ಈ ಜೋಡಿ ಗಂಗಾವತಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಅಲ್ಲಿ ದೂರು ದಾಖಲಿಸಿದ್ದಾರೆ. ನಂತರ ಅಧಿಕಾರಿಗಳು ಇಬ್ಬರನ್ನೂ ಪೊಲೀಸ್ ರಕ್ಷಣೆಯಲ್ಲಿ ಕೊಪ್ಪಳ ಪೊಲೀಸ್ ಠಾಣೆಗೆ ಕಳುಹಿಸಿದ್ದಾರೆ. ಈ ಘಟನೆ ಸ್ಥಳೀಯವಾಗಿ ಭಾರಿ ಚರ್ಚೆಗೆ ಕಾರಣವಾಗಿದೆ.
ಅಂತರ್ಜಾತಿ ವಿವಾಹದ ಹಿನ್ನೆಲೆಯಲ್ಲಿ ಪೋಷಕರ ವಿರೋಧ, ಸಮಾಜದ ಒತ್ತಡ ಹಾಗೂ ಜೀವ ಬೆದರಿಕೆ ಬಂದಿದ್ದು, ಜಾತಿಗಿಂತ ನನಗೆ ಪ್ರೀತಿಯೇ ಮುಖ್ಯ ಎಂದು ವಿವಾಹವಾಗಿ ಸಮಸ್ಯೆ ಎದುರಿಸುವ ಈ ಪ್ರಕರಣವು ಸಮಾಜದಲ್ಲಿ ಇನ್ನೂ ಅಂತರ್ಜಾತಿ ವಿವಾಹಗಳಿಗೆ ಎದುರಾಗುವ ಅಡೆತಡೆಗಳನ್ನು ತೋರಿಸುತ್ತದೆ.