Mar 9, 2026 Languages : ಕನ್ನಡ | English

ಸಾವಿಗೇ ಸೋಲಿಸಿದ ಛಲದಂಕ ಮಲ್ಲ - 14 ವರ್ಷಗಳ ಹಿಂದೆ ಜೈವಿಕ ಸಾವು ಕಂಡಿದ್ದ ಮಹಿಳೆಯ ಅದ್ಭುತ ಮರುಜೀವ!!

ಕೋಮಲ್ ಅವರು ತಮ್ಮ 33ನೇ ವಯಸ್ಸಿನಲ್ಲಿ 'ಗ್ವಿಲೆನ್-ಬಾರ್ ಸಿಂಡ್ರೋಮ್' (GBS) ಎಂಬ ಗಂಭೀರ ಆರೋಗ್ಯ ಸಮಸ್ಯೆಗೆ ತುತ್ತಾದರು. ದೇಹದ ನರಗಳ ಮೇಲೆ ರೋಗನಿರೋಧಕ ವ್ಯವಸ್ಥೆ ದಾಳಿ ಮಾಡುವ ಈ ಕಾಯಿಲೆಯಿಂದ ಕೋಮಲ್ ಅವರ ಕಾಲುಗಳು ಸಂಪೂರ್ಣವಾಗಿ ಬಲಹೀನಗೊಂಡಿದ್ದವು. ಚಿಕಿತ್ಸೆಯ ಸಮಯದಲ್ಲಿ ಅವರಿಗೆ ನೀಡಿದ ಔಷಧಿಯ ತೀವ್ರತೆಯನ್ನು ತಡೆದುಕೊಳ್ಳಲಾಗದೆ, ಕೋಮಲ್ ಅವರಿಗೆ ಸತತವಾಗಿ ಹೃದಯಾಘಾತ ಸಂಭವಿಸಿತು. ಒಂದು ಹಂತದಲ್ಲಿ ವೈದ್ಯರು ಕೋಮಲ್ ಮೃತಪಟ್ಟಿದ್ದಾರೆ ಎಂದು ಘೋಷಿಸಿ, ಅವರನ್ನು ಮನೆಗೆ ಕೊಂಡೊಯ್ಯುವಂತೆ ಕುಟುಂಬಕ್ಕೆ ತಿಳಿಸಿದರು. ಆದರೆ, ಕೋಮಲ್ ಅವರ ಪತಿ ಮಾತ್ರ ಆ ನೋವಿನ ಕ್ಷಣದಲ್ಲೂ ಬಿಟ್ಟುಕೊಡಲಿಲ್ಲ. ವೈದ್ಯಕೀಯ ತರ್ಕವನ್ನೂ ಮೀರಿ, ಅವರು ಸತತ 35 ನಿಮಿಷಗಳ ಕಾಲ ನಿರಂತರವಾಗಿ ಸಿಪಿಆರ್ (CPR) ಮಾಡಿದರು. ಅದೃಷ್ಟವಶಾತ್, ಕೋಮಲ್ ಅವರ ಹೃದಯ ಮತ್ತೆ ಬಡಿಯಲು ಪ್ರಾರಂಭಿಸಿತು, ಇದು ವೈದ್ಯರಿಗೇ ಆಘಾತ ಮತ್ತು ಅಚ್ಚರಿಯನ್ನುಂಟುಮಾಡಿತು.

ಪತ್ನಿಯ ಬದುಕಿಗಾಗಿ 35 ನಿಮಿಷ ಹೋರಾಡಿದ ಪತಿಯ ಅಚಲ ನಂಬಿಕೆಗೆ ನೆಟ್ಟಿಗರ ಸಲಾಮ್
ಪತ್ನಿಯ ಬದುಕಿಗಾಗಿ 35 ನಿಮಿಷ ಹೋರಾಡಿದ ಪತಿಯ ಅಚಲ ನಂಬಿಕೆಗೆ ನೆಟ್ಟಿಗರ ಸಲಾಮ್

ನಂತರದ ದಿನಗಳು ಕೋಮಲ್ ಮತ್ತು ಅವರ ಕುಟುಂಬಕ್ಕೆ ಅಗ್ನಿಪರೀಕ್ಷೆಯಾಗಿದ್ದವು. ಕೋಮಲ್ ಅವರು ಹತ್ತು ದಿನಗಳ ಕಾಲ ವೆಂಟಿಲೇಟರ್‌ನಲ್ಲಿದ್ದರು. ಚೇತರಿಕೆಯ ಹಾದಿಯಲ್ಲಿ ಅವರು ಮಂಚದಿಂದ ಏಳಲು ಸಾಧ್ಯವಾಗದ ಸ್ಥಿತಿಯಲ್ಲಿದ್ದರು. ಅಂತಹ ಕಷ್ಟದ ಸಮಯದಲ್ಲಿ ಕೋಮಲ್ ಅವರ ಪತಿ ತಮ್ಮ ಉದ್ಯೋಗದಿಂದ ಮೂರು ತಿಂಗಳ ರಜೆ ತೆಗೆದುಕೊಂಡು, ಅವರ ಸ್ನಾನ ಮಾಡಿಸುವುದರಿಂದ ಹಿಡಿದು ಫಿಸಿಯೋಥೆರಪಿಯವರೆಗೆ ಎಲ್ಲವನ್ನೂ ಸ್ವತಃ ನೋಡಿಕೊಂಡರು. ಕೇವಲ 7 ಮತ್ತು 10 ವರ್ಷ ವಯಸ್ಸಿನ ಅವರ ಮಕ್ಕಳೂ ಕೂಡ ತಾಯಿಯ ಸೇವೆಗೆ ಸಾಥ್ ನೀಡಿದರು. "ನನ್ನ ಕಾಲುಗಳು ಶಕ್ತಿಹೀನವಾಗಿದ್ದಾಗ, ನನ್ನ ಇಡೀ ಕುಟುಂಬವೇ ನನ್ನ ಕಾಲುಗಳಾದವು" ಎಂದು ಕೋಮಲ್ ಭಾವುಕರಾಗಿ ನೆನಪಿಸಿಕೊಳ್ಳುತ್ತಾರೆ.

ಸಾವು ಸೋತ ಕ್ಷಣ: 14 ವರ್ಷಗಳ ನಂತರದ ಬದುಕು

ಇಂದು ಆ ಘಟನೆ ನಡೆದು 14 ವರ್ಷಗಳು ಕಳೆದಿವೆ. ಕೋಮಲ್ ಅವರಿಗೆ ಈಗ 47 ವರ್ಷ. ಪರಿಪೂರ್ಣವಾಗಿ ಮೊದಲಿನಂತೆ ಓಡಾಡಲು ಸಾಧ್ಯವಾಗದಿದ್ದರೂ, ಕೋಲು ಇಲ್ಲದೆ ಸ್ವತಂತ್ರವಾಗಿ ನಡೆಯುವಷ್ಟು ಅವರು ಚೇತರಿಸಿಕೊಂಡಿದ್ದಾರೆ. "ಒಮ್ಮೆ ಸತ್ತಿದ್ದೇನೆ ಎಂದು ಘೋಷಿಸಲ್ಪಟ್ಟ ನಾನು, ಇಂದು ನನ್ನ ಮಕ್ಕಳು ಬೆಳೆಯುವುದನ್ನು ನೋಡುತ್ತಿದ್ದೇನೆ. ಇದಕ್ಕಿಂತ ದೊಡ್ಡ ಅದೃಷ್ಟ ಬೇರೆ ಬೇಕೆ?" ಎಂದು ಅವರು ನಗುತ್ತಾ ಹೇಳುತ್ತಾರೆ.

ಕೋಮಲ್ ಅವರ ಈ ಕಥೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, "ಸಾವಿತ್ರಿ ಕಥೆ ಕೇಳಿದ್ದೆವು, ಆದರೆ ಇಲ್ಲಿ ಪತ್ನಿಯ ಬದುಕಿಗಾಗಿ ಹೋರಾಡಿದ 'ಸತ್ಯವಾನ್' ಪತಿಯಿದ್ದಾರೆ" ಎಂದು ನೆಟ್ಟಿಗರು ಪತಿಯ ಛಲವನ್ನು ಮತ್ತು ಕುಟುಂಬದ ಪ್ರೀತಿಯನ್ನು ಮುಕ್ತಕಂಠದಿಂದ ಶ್ಲಾಘಿಸುತ್ತಿದ್ದಾರೆ.