ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಅಂದ್ರೆ ಸಾಮಾನ್ಯವಾಗಿ ಶಾಂತವಾಗಿರೋ ಜಾಗ. ಆದ್ರೆ ಇತ್ತೀಚೆಗೆ ಅಲ್ಲಿ ನಡೆದ ಒಂದು ಘಟನೆ ಇಡೀ ಜಿಲ್ಲೆಯನ್ನೇ ಬೆಚ್ಚಿಬೀಳಿಸಿದೆ. ಕೊಳ್ಳೇಗಾಲದ ಹೊರವಲಯದ ರೆಸಾರ್ಟ್ ಒಂದರಲ್ಲಿ ಭರ್ಜರಿ 'ಡ್ರಗ್ಸ್ ಪಾರ್ಟಿ' ನಡೆಯುತ್ತಿರೋ ಖಚಿತ ಮಾಹಿತಿ ಮೇರೆಗೆ ಪೊಲೀಸರು ನಡೆಸಿದ ಮಿಂಚಿನ ದಾಳಿ ಈಗ ಎಲ್ಲೆಡೆ ಚರ್ಚೆಯಾಗ್ತಿದೆ.
ಬರ್ತ್‌ಡೇ ಪಾರ್ಟಿ ಹೆಸರಲ್ಲಿ ಮಾದಕ ವಸ್ತು ಮೋಜು!
ಈ ಮಾದಕ ವಸ್ತು ಪಾರ್ಟಿಯ ಹಿಂದಿರೋದು ಬೆಂಗಳೂರು ಮೂಲದ ರೌಡಿಶೀಟರ್ ಜಹೀರ್. ಅಸಲಿಗೆ ಇದು ಜಹೀರ್‌ನ ಹುಟ್ಟುಹಬ್ಬದ ಸಂಭ್ರಮವಂತೆ. ತನ್ನ ಬರ್ತ್‌ಡೇ ಆಚರಿಸಿಕೊಳ್ಳೋಕೆ ಅಂತ ಈತ ಕೊಳ್ಳೇಗಾಲದ ರೆಸಾರ್ಟ್ ಒಂದನ್ನು ಆಯ್ದುಕೊಂಡಿದ್ದ. ಬೆಂಗಳೂರಿನಿಂದ ಗ್ಯಾಂಗ್ ಕಟ್ಟಿಕೊಂಡು ಬಂದಿದ್ದ ಜಹೀರ್, ಸುಮಾರು 50ಕ್ಕೂ ಹೆಚ್ಚು ಜನರನ್ನು ಈ ಪಾರ್ಟಿಗೆ ಕರೆಸಿಕೊಂಡಿದ್ದ ಎನ್ನಲಾಗಿದೆ.
ರೆಸಾರ್ಟ್‌ನಲ್ಲಿ ಮ್ಯೂಸಿಕ್, ಮೋಜು-ಮಸ್ತಿ ಜೋರಾಗಿಯೇ ಇತ್ತು. ಆದ್ರೆ ಈ ಮಸ್ತಿಯ ಹಿಂದೆ ಗಾಂಜಾ ಮತ್ತು ಚರಸ್‌ನಂತಹ ಮಾದಕ ದ್ರವ್ಯಗಳ ಅಟ್ಟಹಾಸವಿತ್ತು. ಪಾರ್ಟಿಯಲ್ಲಿ ಭಾಗವಹಿಸಿದ್ದವರು ಮನಬಂದಂತೆ ಡ್ರಗ್ಸ್ ಸೇವಿಸಿ ತೇಲಾಡುತ್ತಿದ್ದರು ಅನ್ನೋದು ಪೊಲೀಸರ ತನಿಖೆಯಿಂದ ಬಯಲಾಗಿದೆ.
15 ಮಂದಿಗೆ ಮಾದಕ ವಸ್ತು ಸೇವನೆ ದೃಢ
ಪೊಲೀಸರು ದಾಳಿ ಮಾಡಿದ ತಕ್ಷಣ ರೆಸಾರ್ಟ್‌ನಲ್ಲಿದ್ದವರೆಲ್ಲಾ ಕಂಗಾಲಾಗಿದ್ದಾರೆ. ಸುಮಾರು 50 ಮಂದಿಯನ್ನು ವಶಕ್ಕೆ ಪಡೆದ ಪೊಲೀಸರು ತಕ್ಷಣವೇ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ. ಈ ಪೈಕಿ 15 ಮಂದಿ ಗಾಂಜಾ ಮತ್ತು ಚರಸ್ ಸೇವಿಸಿರೋದು ಮೆಡಿಕಲ್ ರಿಪೋರ್ಟ್‌ನಲ್ಲಿ ಪಕ್ಕಾ ಆಗಿದೆ.
ವಿಶೇಷ ಅಂದ್ರೆ ಈ ಪಾರ್ಟಿಯಲ್ಲಿ ಕೇವಲ ರೌಡಿಶೀಟರ್‌ಗಳು ಮಾತ್ರವಲ್ಲ, ಜಹೀರ್ ಕುಟುಂಬದ ಸದಸ್ಯರು ಮತ್ತು ಮಹಿಳೆಯರು ಕೂಡ ಭಾಗಿಯಾಗಿದ್ದರು ಎನ್ನಲಾಗಿದೆ. ಮಹಿಳೆಯರ ವಿಚಾರಣೆಗಾಗಿ ಮಹಿಳಾ ಕಾನ್ಸ್ಟೇಬಲ್‌ಗಳನ್ನು ನಿಯೋಜಿಸಲಾಗಿದ್ದು, ಸದ್ಯ ಎಲ್ಲರನ್ನೂ ಕೊಳ್ಳೇಗಾಲ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ.
ರಾಜಕೀಯ ನಂಟು ಮತ್ತು ವಿವಾದ
ಈ ಮಾದಕ ವಸ್ತು ಪಾರ್ಟಿ ನಡೆದಿದ್ದು ಕೊಳ್ಳೇಗಾಲದ ಫಯಾಜ್ ಖಾನ್ ಎಂಬುವವರಿಗೆ ಸೇರಿದ ರೆಸಾರ್ಟ್‌ನಲ್ಲಿ. ಫಯಾಜ್ ಖಾನ್ ಅವರು ಎ1 ಕಾಂಟ್ರಾಕ್ಟರ್ ಆಗಿದ್ದು, ಇವರಿಗೆ ಪ್ರಭಾವಿ ರಾಜಕೀಯ ನಾಯಕರ ಸಂಪರ್ಕ ಇದೆ ಎಂಬ ಮಾತುಗಳು ಕೇಳಿಬರುತ್ತಿವೆ. ಅದರಲ್ಲೂ ಇವರು ಕಾಂಗ್ರೆಸ್ ನಾಯಕರ ಆಪ್ತ ಎನ್ನಲಾಗುತ್ತಿರುವುದು ಈ ಪ್ರಕರಣಕ್ಕೆ ಹೊಸ ತಿರುವು ನೀಡಿದೆ. ಒಬ್ಬ ರೌಡಿಶೀಟರ್ ಬರ್ತ್‌ಡೇ ಪಾರ್ಟಿಗೆ ಇಂತಹ ದೊಡ್ಡ ರೆಸಾರ್ಟ್ ಸಿಕ್ಕಿದ್ದು ಹೇಗೆ? ಇದರ ಹಿಂದೆ ಯಾರ್ಯಾರ ಕೈವಾಡ ಇದೆ ಅನ್ನೋದನ್ನು ಪೊಲೀಸರು ಈಗ ಜಾಲಾಡುತ್ತಿದ್ದಾರೆ.
ಪೊಲೀಸ್ ಕಾರ್ಯಾಚರಣೆ: ಚಾಮರಾಜನಗರ ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ತಗೆದುಕೊಂಡಿದ್ದಾರೆ. ಜಿಲ್ಲೆಯಲ್ಲಿ ಮಾದಕ ದ್ರವ್ಯಗಳ ಹಾವಳಿ ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಪಾರ್ಟಿಯಲ್ಲಿ ಭಾಗಿಯಾದ ಪ್ರತಿಯೊಬ್ಬರ ಹಿನ್ನೆಲೆಯನ್ನು ಕೆದಕಲಾಗುತ್ತಿದ್ದು, ಮಾದಕ ವಸ್ತು ಎಲ್ಲಿಂದ ಬಂತು? ಯಾರು ಪೂರೈಕೆ ಮಾಡಿದರು? ಎಂಬ ಬಗ್ಗೆ ತನಿಖೆ ಚುರುಕುಗೊಂಡಿದೆ.
ನೆಮ್ಮದಿಯಾಗಿದ್ದ ಕೊಳ್ಳೇಗಾಲದಂತಹ ಊರುಗಳಲ್ಲಿ ಇಂತಹ ಮಾದಕ ವಸ್ತು ಸಂಸ್ಕೃತಿ ಕಾಲಿಡುತ್ತಿರೋದು ನಿಜಕ್ಕೂ ಆತಂಕಕಾರಿ ವಿಚಾರ. ಯುವಜನತೆ ಇಂತಹ ಮೋಜು-ಮಸ್ತಿಗಳ ಆಕರ್ಷಣೆಗೆ ಬಿದ್ದು ಜೀವನ ಹಾಳುಮಾಡಿಕೊಳ್ಳಬಾರದು. ಪೊಲೀಸರ ಈ ಸಮಯೋಚಿತ ದಾಳಿಯಿಂದಾಗಿ ಒಂದು ದೊಡ್ಡ ಡ್ರಗ್ಸ್ ಜಾಲದ ಲಿಂಕ್ ಸಿಗುವ ಸಾಧ್ಯತೆ ಇದೆ. ಸದ್ಯಕ್ಕಂತೂ ಕೊಳ್ಳೇಗಾಲದಲ್ಲಿ ಈ 'ರೆಸಾರ್ಟ್ ಮಾದಕ ವಸ್ತು ಪಾರ್ಟಿ'ದ್ದೇ ಸದ್ದು.