Mar 11, 2026 Languages : ಕನ್ನಡ | English

ಕೋಲಾರದಲ್ಲಿ ಜೋರಾಗಿ ನಡೆಯುತ್ತಿರುವ ಹಿಂದೂ ಸಮಾಜೋತ್ಸವ - ಭವ್ಯ ಶೋಭಾಯಾತ್ರೆಗೆ ಸಜ್ಜಾದ ವೇದಿಕೆ!!

ಕೋಲಾರ ನಗರದಲ್ಲಿ ಇಂದು ಹಿಂದೂ ಸಮಾಜೋತ್ಸವ ಭವ್ಯವಾಗಿ ನಡೆಯುತ್ತಿದೆ. ಕಳೆದ ಒಂದು ತಿಂಗಳಿನಿಂದ ಜಿಲ್ಲೆಯಾದ್ಯಂತ ವಿವಿಧಡೆ ನಡೆದ ಸಮಾಜೋತ್ಸವ ಕಾರ್ಯಕ್ರಮಗಳ ಅಂತಿಮ ಹಂತವಾಗಿ, ಇಂದು ನಗರದಲ್ಲಿ ವಿಶೇಷ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಜೂನಿಯರ್ ಕಾಲೇಜು ಮೈದಾನದಲ್ಲಿ ಹಿಂದೂ ಸಮಾಜೋತ್ಸವ
ಜೂನಿಯರ್ ಕಾಲೇಜು ಮೈದಾನದಲ್ಲಿ ಹಿಂದೂ ಸಮಾಜೋತ್ಸವ

ಮಧ್ಯಾಹ್ನ 2:30ಕ್ಕೆ ಜೂನಿಯರ್ ಕಾಲೇಜು ಮೈದಾನದಿಂದ ಶೋಭಾಯಾತ್ರೆ ಆರಂಭವಾಗಲಿದೆ. ನಗರದ ಪ್ರಮುಖ ಬೀದಿಗಳಲ್ಲಿ ಸಾಗುವ ಈ ಶೋಭಾಯಾತ್ರೆಯಲ್ಲಿ ಸಾವಿರಾರು ಮಂದಿ ಭಾಗವಹಿಸುವ ನಿರೀಕ್ಷೆಯಿದೆ. ಭಕ್ತರು, ಸಂಘಟನೆಗಳು ಹಾಗೂ ಸ್ಥಳೀಯರು ಒಟ್ಟಾಗಿ ಸೇರಿ ಶೋಭಾಯಾತ್ರೆಯನ್ನು ಭವ್ಯಗೊಳಿಸಲು ಸಜ್ಜಾಗಿದ್ದಾರೆ.

ಸಂಜೆ 5 ಗಂಟೆಗೆ ಜೂನಿಯರ್ ಕಾಲೇಜು ಮೈದಾನದಲ್ಲೇ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಈ ಸಂದರ್ಭದಲ್ಲಿ ಕಲ್ಲಡ್ಕ ಪ್ರಭಾಕರ್ ಭಟ್ ಅವರು ಮುಖ್ಯ ಭಾಷಣ ಮಾಡಲಿದ್ದಾರೆ. ಸಮಾಜದ ಏಕತೆ, ಸಂಸ್ಕೃತಿ ಮತ್ತು ಪರಂಪರೆಯ ಮಹತ್ವವನ್ನು ಹಂಚಿಕೊಳ್ಳುವ ನಿರೀಕ್ಷೆಯಿದೆ.

ಸಾವಿರಾರು ಮಂದಿ ಸೇರುವ ನಿರೀಕ್ಷೆಯ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ನಗರಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಜಿಲ್ಲಾಧಿಕಾರಿಗಳು ಇಂದು ಸಂಜೆವರೆಗೂ ನಗರದಲ್ಲಿರುವ ಎಲ್ಲಾ ಮದ್ಯದಂಗಡಿಗಳನ್ನು ಬಂದ್ ಮಾಡಲು ಆದೇಶಿಸಿದ್ದಾರೆ. ಇದರಿಂದ ಕಾರ್ಯಕ್ರಮದ ವೇಳೆ ಶಾಂತಿ, ಸುವ್ಯವಸ್ಥೆ ಕಾಪಾಡಲು ಸಾಧ್ಯವಾಗಲಿದೆ.

ಪೊಲೀಸರು ಪ್ರಮುಖ ಬೀದಿಗಳಲ್ಲಿ, ಮೈದಾನದಲ್ಲಿ ಹಾಗೂ ಶೋಭಾಯಾತ್ರೆ ಮಾರ್ಗದಲ್ಲಿ ಭದ್ರತಾ ವ್ಯವಸ್ಥೆ ಮಾಡಿದ್ದು, ಜನಸಮೂಹವನ್ನು ನಿಯಂತ್ರಿಸಲು ವಿಶೇಷ ತಂಡಗಳನ್ನು ನಿಯೋಜಿಸಲಾಗಿದೆ.  ಹೌದು, ಕೋಲಾರದಲ್ಲಿ ನಡೆಯುತ್ತಿರುವ ಹಿಂದೂ ಸಮಾಜೋತ್ಸವವು ಭಕ್ತರ ಉತ್ಸಾಹ, ಸಂಸ್ಕೃತಿಯ ಗೌರವ ಮತ್ತು ಸಮಾಜದ ಏಕತೆಯನ್ನು ಪ್ರತಿಬಿಂಬಿಸುತ್ತಿದೆ ಎನ್ನಬಹುದು. 

ಶೋಭಾಯಾತ್ರೆ ಹಾಗೂ ವೇದಿಕೆ ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಭಾಗವಹಿಸುವ ನಿರೀಕ್ಷೆಯಿದ್ದು, ಜಿಲ್ಲಾಡಳಿತವು ಶಾಂತಿ ಮತ್ತು ಸುರಕ್ಷತೆಗಾಗಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ.

Latest News