May 5, 2026 Languages : ಕನ್ನಡ | English

ಕೊಡಗಿನ ಯೋಧನ ದುರಂತ ಅಂತ್ಯ - ಕಾಶ್ಮೀರದ ಪುಲ್ವಾಮಾದಲ್ಲಿ ಗುಂಡು ಹಾರಿಸಿಕೊಂಡು CRPF ಯೋಧ ಆ*ತ್ಮಹತ್ಯೆ!!

ಕೊಡಗು ಅಂದ್ರೆ ಅದು ಸೈನಿಕರ ನಾಡು. ಇಲ್ಲಿನ ಪ್ರತಿ ಮನೆಯಲ್ಲೂ ಒಬ್ಬೊಬ್ಬ ವೀರ ಯೋಧ ಇರ್ತಾರೆ. ಆದ್ರೆ, ಇವತ್ತು ಅದೇ ಕೊಡಗಿನಿಂದ ಕೇಳಿಬಂದಿರುವ ಸುದ್ದಿ ಎಲ್ಲರ ಎದೆಯನ್ನೋ ಸೀಳುವಂತಿದೆ. ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಕರ್ತವ್ಯದಲ್ಲಿದ್ದಾಗಲೇ ಕೊಡಗು ಮೂಲದ ಸಿಆರ್‌ಪಿಎಫ್ (CRPF) ಯೋಧ ನವೀನ್ ಕೆ.ಜೆ ಅವರು ಆ*ತ್ಮಹತ್ಯೆಗೆ ಶರಣಾಗಿದ್ದಾರೆ.

ಸೋಮವಾರಪೇಟೆಯ ನವೀನ್  ಇನ್ನಿಲ್ಲ
ಸೋಮವಾರಪೇಟೆಯ ನವೀನ್ ಇನ್ನಿಲ್ಲ

ಜಮ್ಮು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಟ್ರಾಲ್ ಅನ್ನೋ ಏರಿಯಾದ ಲಾಡಿಯಾರ್ ಪ್ರದೇಶದಲ್ಲಿ ಈ ದುರ್ಘಟನೆ ನಡೆದಿದೆ. ನವೀನ್ ಅವರು ಸಿಆರ್‌ಪಿಎಫ್‌ನ 180ನೇ ಬೆಟಾಲಿಯನ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಇಂದು ಬೆಳಿಗ್ಗೆ ಅವರು ಕರ್ತವ್ಯದ ಮೇಲೆ ಇದ್ದಾಗ, ಏಕಾಏಕಿ ತಮ್ಮದೇ ಸರ್ವಿಸ್ ರೈಫಲ್‌ನಿಂದ ಗುಂಡು ಹಾರಿಸಿಕೊಂಡಿದ್ದಾರೆ. ಗುಂಡಿನ ಶಬ್ದ ಕೇಳಿ ಸಹೋದ್ಯೋಗಿಗಳು ಓಡಿ ಬರುವಷ್ಟರಲ್ಲಿ ಎಲ್ಲವೂ ಮುಗಿದು ಹೋಗಿತ್ತು. ನವೀನ್ ರ*ಕ್ತದ ಮಡುವಿನಲ್ಲಿ ಬಿದ್ದು ಪ್ರಾಣ ಬಿಟ್ಟಿದ್ದರು.

ಯಾರು ಈ ನವೀನ್?

ನವೀನ್ ಕೆ.ಜೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಯಡವಾರೆ ಗ್ರಾಮದವರು. ಇವರು ಯಡವಾರೆಯ ಜೋಯಪ್ಪ ಮತ್ತು ವಿಶಾಲಾಕ್ಷಿ ದಂಪತಿಗಳ ಪುತ್ರ. ದೇಶದ ಮೇಲೆ ಅಪಾರ ಪ್ರೇಮವಿಟ್ಟು ಸೇನೆಗೆ ಸೇರಿದ್ದ ಇವರು, ಇಷ್ಟು ಬೇಗ ಇಂತಹ ನಿರ್ಧಾರ ತಗೋತಾರೆ ಅಂತ ಅವರ ಫ್ರೆಂಡ್ಸ್ ಇರಲಿ, ಕುಟುಂಬದವರೂ ಅಂದುಕೊಂಡಿರಲಿಲ್ಲ. ನವೀನ್ ಅವರಿಗೆ ಪತ್ನಿ, ಒಬ್ಬ ಮಗ ಮತ್ತು ಒಬ್ಬ ಮಗಳಿದ್ದಾರೆ. ಈಗ ಈ ಕುಟುಂಬ ಆಧಾರವಿಲ್ಲದೆ ಬೀದಿಗೆ ಬಿದ್ದಂತಾಗಿದೆ.

ಕಾರಣ ಏನಿರಬಹುದು?

ದೇಶದ ಗಡಿಯಲ್ಲಿ ಶತ್ರುಗಳ ಎದೆಯಲ್ಲಿ ನಡುಕ ಹುಟ್ಟಿಸುತ್ತಿದ್ದ ಯೋಧ, ತನ್ನ ಮೇಲೆ ತಾನೇ ಗುಂಡು ಹಾರಿಸಿಕೊಳ್ಳೋಕೆ ಕಾರಣವೇನು ಅನ್ನೋದು ಸದ್ಯಕ್ಕೆ ದೊಡ್ಡ ಪ್ರಶ್ನೆಯಾಗಿದೆ. ವೈಯಕ್ತಿಕ ಕಾರಣಗಳೋ ಅಥವಾ ಕೆಲಸದ ಒತ್ತಡವೋ? ಇದರ ಬಗ್ಗೆ ಇನ್ನೂ ಯಾವುದೇ ನಿಖರ ಮಾಹಿತಿ ಸಿಕ್ಕಿಲ್ಲ. ಸದ್ಯಕ್ಕೆ ಟ್ರಾಲ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಸೇನಾ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಏನೇ ಇರಲಿ, ಒಬ್ಬ ಯುವ ಯೋಧನನ್ನು ಕಳೆದುಕೊಂಡಿದ್ದು ದೇಶಕ್ಕೆ ಮತ್ತು ಕೊಡಗಿಗೆ ತುಂಬಲಾರದ ನಷ್ಟ.

ಪಾರ್ಥಿವ ಶರೀರ ಯಾವಾಗ ಬರುತ್ತೆ?

ನವೀನ್ ಅವರ ಸಾ*ವಿನ ಸುದ್ದಿ ತಿಳಿದ ಯಡವಾರೆ ಗ್ರಾಮದಲ್ಲಿ ಈಗ ನೀರವ ಮೌನ ಆವರಿಸಿದೆ. ಇಡೀ ಊರೇ ಶೋಕ ಸಾಗರದಲ್ಲಿ ಮುಳುಗಿದೆ. ಮೂಲಗಳ ಪ್ರಕಾರ, ನಾಳೆ (ಮಂಗಳವಾರ) ಸಂಜೆಯ ವೇಳೆಗೆ ಯೋಧ ನವೀನ್ ಅವರ ಪಾರ್ಥಿವ ಶರೀರ ವಿಮಾನದ ಮೂಲಕ ಬೆಂಗಳೂರಿಗೆ ಬಂದು, ನಂತರ ಸ್ವಗ್ರಾಮ ಯಡವಾರೆಗೆ ತಲುಪುವ ಸಾಧ್ಯತೆ ಇದೆ. ಸಕಲ ಸರ್ಕಾರಿ ಗೌರವಗಳೊಂದಿಗೆ ಅವರ ಅಂತ್ಯಕ್ರಿಯೆ ನಡೆಯಲಿದೆ ಎನ್ನಲಾಗುತ್ತಿದೆ.

ನೂರಾರು ಸೈನಿಕರನ್ನು ದೇಶಕ್ಕೆ ಕೊಟ್ಟ ಕೊಡಗಿನ ಮಣ್ಣಿನ ಮಗ ಹೀಗೆ ಅರ್ಧದಲ್ಲೇ ಬದುಕು ಮುಗಿಸಿದ್ದು ನಿಜಕ್ಕೂ ಬೇಸರದ ಸಂಗತಿ. ಮನೆಯವರನ್ನು, ಪುಟ್ಟ ಮಕ್ಕಳನ್ನು ಅಗಲಿ ಹೋಗಿರೋ ನವೀನ್ ಅವರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬಕ್ಕೆ ಈ ನೋವನ್ನು ಭರಿಸುವ ಶಕ್ತಿ ಆ ದೇವರು ನೀಡಲಿ ಅಂತ ನಾವೆಲ್ಲರೂ ಪ್ರಾರ್ಥಿಸೋಣ.

Latest News