ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರ ಖಾತೆ ಹಂಚಿಕೆ ಗೊಂದಲ ಸದ್ಯಕ್ಕೆ ಹೈಡ್ರಾಮಾ ಸೃಷ್ಟಿಸಿದೆ. ಸೀನಿಯರ್ ಲೀಡರ್ ರಾಮಲಿಂಗಾರೆಡ್ಡಿ ಅವರು ತಮಗೆ ಸಿಕ್ಕ ಇಲಾಖೆ ಬಗ್ಗೆ ಬೇಸತ್ತು ಸಚಿವ ಸ್ಥಾನಕ್ಕೆ ರಿಸೈನ್ ಮಾಡಿದ ಬೆನ್ನಲ್ಲೇ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಕೆ.ಎಚ್. ಮುನಿಯಪ್ಪ ಕೂಡ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದರು. ಆದರೆ, ಈ ಹೈವೋಲ್ಟೇಜ್ ಕಿತ್ತಾಟಕ್ಕೆ ಈಗ ಎಂಟ್ರಿ ಕೊಟ್ಟಿರುವ ಕಾಂಗ್ರೆಸ್ ಹೈಕಮಾಂಡ್, ಕೆಲವೇ ಗಂಟೆಗಳಲ್ಲಿ ಮುನಿಯಪ್ಪ ಅವರ ಮುನಿಸನ್ನು ಶಮನ ಮಾಡಿದೆ. ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರೇ ಖುದ್ದಾಗಿ ಮಧ್ಯಪ್ರವೇಶಿಸಿ ಭರವಸೆ ನೀಡಿದ ಬೆನ್ನಲ್ಲೇ ಮುನಿಯಪ್ಪ ಈಗ ‘ಫುಲ್ ಹ್ಯಾಪಿ’ ಆಗಿದ್ದಾರೆ.
ಬೆಳಗ್ಗೆ ‘ಮುನಿ’ದಿದ್ದ ಮುನಿಯಪ್ಪ: ಹೈಕಮಾಂಡ್‌ಗೆ ಖಡಕ್ ವಾರ್ನಿಂಗ್
ಶುಕ್ರವಾರ ಬೆಳಗ್ಗೆ ರಾಮಲಿಂಗಾರೆಡ್ಡಿ ಅವರ ರಾಜೀನಾಮೆ ಸುದ್ದಿ ಹೊರಬರುತ್ತಿದ್ದಂತೆ ಸಚಿವ ಕೆ.ಎಚ್. ಮುನಿಯಪ್ಪ ಮಾಧ್ಯಮಗಳ ಮುಂದೆ ಬಂದು ತಮ್ಮ ಆಕ್ರೋಶ ಹೊರಹಾಕಿದ್ದರು. "ನಾನು ಎಂಟು ಬಾರಿ ಸಂಸದನಾಗಿ ಗೆದ್ದವನು, ಕೇಂದ್ರದಲ್ಲೂ ಮಂತ್ರಿಯಾಗಿದ್ದವನು. ಪಕ್ಷದಲ್ಲಿ ಇಷ್ಟೊಂದು ಸೀನಿಯರ್ ಆಗಿರುವ ನನಗೆ ತಕ್ಕ ಗೌರವ ಸಿಕ್ಕಿಲ್ಲ. ನನ್ನ ಹಿರಿತನಕ್ಕೆ ಮ್ಯಾಚ್ ಆಗುವಂತಹ ಖಾತೆಯನ್ನು ನೀಡಿಲ್ಲ. ನಾಯಕರು ತಕ್ಷಣವೇ ಈ ತಪ್ಪನ್ನು ತಿದ್ದಿಕೊಳ್ಳಬೇಕು. ಹಿರಿಯರನ್ನು ಹೀಗೆಯೇ ನೆಗ್ಲೆಕ್ಟ್ ಮಾಡುತ್ತಾ ಹೋದರೆ ಮುಂದಿನ 2028ರ ಎಲೆಕ್ಷನ್‌ನಲ್ಲಿ ಪಕ್ಷಕ್ಕೆ ದೊಡ್ಡ ಕಷ್ಟವಾಗಲಿದೆ," ಎಂದು ನೇರವಾಗಿಯೇ ಎಚ್ಚರಿಕೆ ಕೊಟ್ಟಿದ್ದರು.
ಜನರ ಸೇವೆ ಮಾಡಲು ಅವಕಾಶವಿರುವ ದೊಡ್ಡ ಇಲಾಖೆಯನ್ನು ತಮಗೆ ನೀಡಬೇಕು ಎಂಬುದು ಮುನಿಯಪ್ಪ ಅವರ ಬೇಡಿಕೆಯಾಗಿತ್ತು. "ಹಿಂದಿನ ಸಿದ್ದರಾಮಯ್ಯ ಅವರ ಕ್ಯಾಬಿನೆಟ್‌ನಲ್ಲೂ ನನಗೆ ಇದೇ ಆಹಾರ ಖಾತೆಯನ್ನೇ ಕೊಡಲಾಗಿತ್ತು. ಈ ಬಾರಿಯಾದರೂ ಜನರ ಕನೆಕ್ಟ್ ಇರುವ ಇಲಾಖೆ ಕೊಡಿ ಅಂತ ಲೀಡರ್ಸ್‌ಗೆ ರಿಕ್ವೆಸ್ಟ್ ಮಾಡಿದ್ದೆ. ಆದರೆ ಈಗಲೂ ಮತ್ತೆ ಅದೇ ಖಾತೆಯನ್ನೇ ತಲೆಗೆ ಕಟ್ಟಿದ್ದಾರೆ. ನನಗೆ ಸಮಾಜ ಕಲ್ಯಾಣ ಇಲಾಖೆ ಅಥವಾ ಕೃಷಿ ಇಲಾಖೆಯಂತಹ ಖಾತೆಗಳನ್ನು ಕೊಟ್ಟರೆ ಜನರಿಗೆ ಹೆಲ್ಪ್ ಆಗುವಂತಹ ಒಳ್ಳೆ ಕೆಲಸಗಳನ್ನು ಮಾಡಬಹುದು," ಎಂದು ತಮ್ಮಿಷ್ಟದ ಇಲಾಖೆಗಳ ಹೆಸರನ್ನು ಓಪನ್ ಆಗಿಯೇ ಹೇಳಿಕೊಂಡಿದ್ದರು.
"ರಿಸೈನ್ ಮಾಡಲ್ಲ, ಆದರೆ ಗೌರವ ಬೇಕು"
ರಾಮಲಿಂಗಾರೆಡ್ಡಿ ಅವರ ತರಹ ನೀವೂ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡ್ತೀರಾ ಅಂತ ಜರ್ನಲಿಸ್ಟ್‌ಗಳು ಕೇಳಿದ ಪ್ರಶ್ನೆಗೆ ಮುನಿಯಪ್ಪ ಭಾವುಕರಾಗಿಯೇ ಉತ್ತರಿಸಿದ್ದರು. "ಕಾಂಗ್ರೆಸ್ ಪಕ್ಷ ನನಗೆ ತಾಯಿ ಸಮಾನ, ಹಾಗಾಗಿ ನಾನು ಯಾವುದೇ ಕಾರಣಕ್ಕೂ ರಿಸೈನ್ ಮಾಡಲ್ಲ. ಆದರೆ ಅತಿ ಹೆಚ್ಚು ಬಾರಿ ಗೆದ್ದು ಬಂದಿರುವ ನನ್ನನ್ನು, ಆರ್.ವಿ. ದೇಶಪಾಂಡೆ ಹಾಗೂ ರಾಮಲಿಂಗಾರೆಡ್ಡಿ ಅವರಂತಹ ಹಿರಿಯ ನಾಯಕರನ್ನು ಗೌರವದಿಂದ ನಡೆಸಿಕೊಳ್ಳಬೇಕು. ಈ ಇಡೀ ಮ್ಯಾಟರ್ ಅನ್ನು ನಾನು ರಾಹುಲ್ ಗಾಂಧಿ ಸೇರಿದಂತೆ ದೆಹಲಿಯ ಹಿರಿಯ ನಾಯಕರ ಗಮನಕ್ಕೆ ತರುತ್ತೇನೆ," ಎಂದು ಬೆಳಗ್ಗೆ ಹೇಳಿದ್ದರು.
ಮಧ್ಯಾಹ್ನಕ್ಕೆ ಸೀನ್ ಚೇಂಜ್: ‘ಐ ಆ್ಯಮ್ ಹ್ಯಾಪಿ’ ಎಂದ ಸಚಿವ
ಬೆಳಗ್ಗೆ ಅಸಮಾಧಾನದ ಬಾಂಬ್ ಸಿಡಿಸಿದ್ದ ಮುನಿಯಪ್ಪ, ಮಧ್ಯಾಹ್ನದ ಹೊತ್ತಿಗೆ ದಿಢೀರ್ ಸೈಲೆಂಟ್ ಆದರು. ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ ಚರ್ಚಿಸಿದ ನಂತರ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರ ಜೊತೆ ಒಂದೇ ಕಾರಿನಲ್ಲಿ ಕುಳಿತು ಹೊರಬಂದ ಮುನಿಯಪ್ಪ ಅವರ ಮುಖದಲ್ಲಿ ದೊಡ್ಡ ನಗು ಇತ್ತು.
ಕಾರಿನಿಂದಲೇ ಮಾಧ್ಯಮಗಳ ಜೊತೆ ಮಾತನಾಡಿದ ಅವರು, "ನಾನು ದೆಹಲಿಯಲ್ಲಿ ರಾಹುಲ್ ಗಾಂಧಿ, ಕೆ.ಸಿ. ವೇಣುಗೋಪಾಲ್ ಹಾಗೂ ರಣದೀಪ್ ಸಿಂಗ್ ಸುರ್ಜೇವಾಲಾ ಅವರನ್ನು ಮೀಟ್ ಮಾಡಿ ಮಾತನಾಡಿದೆ. ನನ್ನ ಅಳಲನ್ನು ಕೇಳಿದ ರಾಹುಲ್ ಗಾಂಧಿ ಅವರು ಶೀಘ್ರದಲ್ಲೇ ಈ ಎಲ್ಲಾ ಗೊಂದಲಗಳನ್ನು ಸರಿಪಡಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ. ಹೈಕಮಾಂಡ್ ಮಾತಿನ ಮೇಲೆ ನನಗೆ ಪೂರ್ಣ ನಂಬಿಕೆ ಇದೆ, ಹಾಗಾಗಿ ‘ಐ ಆ್ಯಮ್ ಫುಲ್ ಹ್ಯಾಪಿ’," ಎಂದು ಖುಷಿಯಿಂದ ಹೆಳ್ತಾರೆ. ಮುನಿಯಪ್ಪ ಅವರ ಈ ಸ್ಟೇಟ್‌ಮೆಂಟ್‌ನಿಂದಾಗಿ ಸದ್ಯಕ್ಕೆ ಕಾಂಗ್ರೆಸ್ ಸರ್ಕಾರಕ್ಕಿದ್ದ ಒಂದು ದೊಡ್ಡ ತಲೆನೋವು ಸದ್ಯಕ್ಕೆ ಸಾಲ್ವ್ ಆದಂತಾಗಿದೆ.