ಕಳೆದ ಕೆಲವು ದಿನಗಳಿಂದ ರಾಜ್ಯದ ಹಲವೆಡೆ ಮಳೆರಾಯ ತನ್ನ ಪ್ರತಾಪ ತೋರಿಸುತ್ತಿದ್ದಾನೆ. ಸಾಧಾರಣ ಮಳೆಯಿಂದ ಶುರುವಾದ ಈ ಆಟ, ಈಗ ಗುಡುಗು-ಸಿಡಿಲಿನ ಅಬ್ಬರಕ್ಕೆ ತಿರುಗಿದೆ. ಇವತ್ತು ಕೂಡ ರಾಜ್ಯದ ಹವಮಾನದಲ್ಲಿ ದೊಡ್ಡ ಬದಲಾವಣೆಗಳೇನೂ ಇಲ್ಲ. ಅಂದರೆ, ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
ಹವಾಮಾನ ಇಲಾಖೆಯ ಲೇಟೆಸ್ಟ್ ರಿಪೋರ್ಟ್ ಪ್ರಕಾರ, ಇಂದು ರಾಜ್ಯದ ಸುಮಾರು 22 ಜಿಲ್ಲೆಗಳಲ್ಲಿ ಮಳೆಯಾಗುವ ಮುನ್ಸೂಚನೆ ಇದೆ. ಅದರಲ್ಲೂ ಮುಖ್ಯವಾಗಿ 10 ಜಿಲ್ಲೆಗಳಿಗೆ 'ಯೆಲ್ಲೋ ಅಲರ್ಟ್' ಘೋಷಿಸಲಾಗಿದೆ. ಅಂದರೆ, ಈ ಭಾಗದ ಜನರು ಸ್ವಲ್ಪ ಜಾಗರೂಕರಾಗಿರುವುದು ಒಳಿತು. ಗುಡುಗು, ಸಿಡಿಲು ಮತ್ತು ಬಿರುಗಾಳಿ ಸಹಿತ ಮಳೆ ಬೀಳುವ ಸಾಧ್ಯತೆ ದಟ್ಟವಾಗಿದೆ.
ಯೆಲ್ಲೋ ಅಲರ್ಟ್ ಇರುವ ಜಿಲ್ಲೆಗಳು
- ಕಲಬುರ್ಗಿ
- ಧಾರವಾಡ
- ಗದಗ
- ಶಿವಮೊಗ್ಗ
- ಉಡುಪಿ
- ಚಿಕ್ಕಮಗಳೂರು
- ಹಾಸನ
- ದಕ್ಷಿಣ ಕನ್ನಡ
- ಕೊಡಗು
- ಚಾಮರಾಜನಗರ
ಈ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾದರೂ, ಗಾಳಿಯ ವೇಗ ಮತ್ತು ಗುಡುಗಿನ ಆರ್ಭಟ ಜೋರಾಗಿರಲಿದೆ ಎಂದು ಹೇಳಲಾಗಿದೆ.
ಕರಾವಳಿ ಭಾಗದ ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಮಳೆ ಬರುವುದು ಬಹುತೇಕ ಖಚಿತ. ಹಾಗೆಯೇ ಉತ್ತರ ಒಳನಾಡಿನ ಬೆಳಗಾವಿ, ರಾಯಚೂರು ಮತ್ತು ಕಲ್ಬುರ್ಗಿ ಭಾಗದಲ್ಲೂ ಮೋಡ ಕವಿದ ವಾತಾವರಣವಿದ್ದು, ಸಂಜೆ ವೇಳೆಗೆ ಮಳೆ ಸುರಿಯಬಹುದು.
ಇನ್ನು ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಮೈಸೂರು, ಮಂಡ್ಯ, ಬೆಂಗಳೂರು ಗ್ರಾಮಾಂತರ ಮತ್ತು ಕೋಲಾರದಲ್ಲಿ ಗಾಳಿಯ ವೇಗ ಗಂಟೆಗೆ 30 ರಿಂದ 40 ಕಿಲೋಮೀಟರ್ ಇರಲಿದೆ. ಅಂದರೆ, ಮಳೆ ಬರುವ ಮುನ್ನ ಜೋರಾದ ಗಾಳಿ ಬೀಸಲಿದ್ದು, ಧೂಳಿನ ಎಚ್ಚರಿಕೆ ಕೂಡ ಅಗತ್ಯ!
ಬೆಂಗಳೂರಿನ ಹವಾಮಾನ
ಬೆಂಗಳೂರಿಗರಿಗೆ ಇಂದು ಕೂಡ 'ಕೂಲ್ ಕೂಲ್' ದಿನ. ಬೆಳಗ್ಗೆಯಿಂದಲೇ ನಗರದಲ್ಲಿ ಮೋಡ ಕವಿದ ವಾತಾವರಣ ಇರಲಿದೆ. ಸಾಧಾರಣ ಮಳೆಯಾಗುವ ಸಾಧ್ಯತೆ ಹೆಚ್ಚಿದ್ದು, ಟ್ರಾಫಿಕ್ ಕಿರಿಕಿರಿ ತಪ್ಪಿಸಲು ರೈನ್ ಕೋಟ್ ಅಥವಾ ಛತ್ರಿ ಜೊತೆಗಿಟ್ಟುಕೊಳ್ಳುವುದು ಉತ್ತಮ. ನಗರದ ತಾಪಮಾನದಲ್ಲಿ ಅಲ್ಪ ಇಳಿಕೆಯಾಗಲಿದ್ದು, ಸಂಜೆ ಹೊತ್ತಿಗೆ ತಂಪಾದ ಗಾಳಿ ಬೀಸಲಿದೆ.
ಕೆಲವು ಜಿಲ್ಲೆಗಳಲ್ಲಿ ಮಳೆ ಹೆಚ್ಚಿರಲಿದ್ದರೂ, ಇನ್ನುಳಿದ ಜಿಲ್ಲೆಗಳಲ್ಲಿ ಒಣ ಹವೆ ಮುಂದುವರಿಯಲಿದೆ. ಗುಡುಗು ಸಹಿತ ಮಳೆ ಬರುವಾಗ ಮರದ ಕೆಳಗೆ ಅಥವಾ ವಿದ್ಯುತ್ ಕಂಬಗಳ ಹತ್ತಿರ ನಿಲ್ಲಬೇಡಿ. ರೈತರು ಕೂಡ ತಮ್ಮ ಬೆಳೆಗಳ ಬಗ್ಗೆ ಮತ್ತು ಜಾನುವಾರುಗಳ ಸುರಕ್ಷತೆಯ ಬಗ್ಗೆ ಗಮನ ಹರಿಸುವುದು ಮುಖ್ಯ.