ರಾಜ್ಯದ ಎಲ್ಲಾ ಜೈಲುಗಳಿಗೆ ಡಿಜಿಪಿ ಅಲೋಕ್ ಕುಮಾರ್ ಅವರು ಇದೀಗ ಹೊಸದೊಂದು ಸುತ್ತೋಲೆ ಹೊರಡಿಸಿದ್ದು, ಕೈದಿಗಳ ಆಹಾರ, ಬಟ್ಟೆ ಮತ್ತು ಹಾಸಿಗೆ ಸರಬರಾಜು ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಹೌದು ಜೈಲು ಮ್ಯಾನ್ಯುಯಲ್ ಪ್ರಕಾರವೇ ಕೈದಿಗಳಿಗೆ ಅಗತ್ಯ ವಸ್ತುಗಳನ್ನು ಒದಗಿಸುವಂತೆ ಸೂಚನೆ ನೀಡಲಾಗಿದೆ.
ಇತ್ತೀಚೆಗೆ ಜೀವಹಾನಿ ಪ್ರಕರಣದ ಆರೋಪಿ ನಟ ದರ್ಶನ್ ಅವರು ಸೇರಿದಂತೆ ಹಲವಾರು ಕೈದಿಗಳಿಗೆ ಸಂದರ್ಶನ ಸಮಯದಲ್ಲಿ ಖಾಸಗಿ ವ್ಯಕ್ತಿಗಳಿಂದ ಆಹಾರ ಪೂರೈಕೆ ನಡೆಯುತ್ತಿತ್ತು. ಇದಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ, ಸಂದರ್ಶನ ಸಮಯದಲ್ಲಿ ಕೇವಲ ಪ್ಯಾಕ್ ಮಾಡಲಾದ ಆಹಾರ ಪದಾರ್ಥಗಳನ್ನು ಮಾತ್ರ ನೀಡಲು ಅವಕಾಶ ಕಲ್ಪಿಸಲಾಗಿದೆ. ಅದೂ ನಿರ್ದಿಷ್ಟ ಪ್ರಮಾಣದಲ್ಲಿ ಮಾತ್ರ ನೀಡಲು ನಿಯಮ ಜಾರಿಯಾಗಿದೆ ಎನ್ನಲಾಗುತ್ತಿದೆ.
ಹೊಸ ನಿಯಮ ಪ್ರಕಾರ, ಬಾಳೆಹಣ್ಣು, ಸೇಬು, ಮಾವು, ಪೇರಲೆ ಮತ್ತು ಚಿಕ್ಕೂ ಹಣ್ಣುಗಳನ್ನು ಒಟ್ಟಾರೆ 2 ಕೆ.ಜಿ ಒಳಗೆ ಮಾತ್ರ ನೀಡಬಹುದು. ಡ್ರೈ ಫ್ರೂಟ್ಸ್ ಹಾಗೂ ಬೇಕರಿ ತಿಂಡಿಗಳು ಅರ್ಧ ಕೆ.ಜಿ ಮೀರಬಾರದು. ಕೈದಿಗಳಿಗೆ ಎರಡು ಜೊತೆ ಬಟ್ಟೆ ಹಾಗೂ ಎರಡು ಒಳಉಡುಪುಗಳನ್ನು ಮಾತ್ರ ನೀಡಲು ಅನುಮತಿ ಇದೆ. ವಿಚಾರಣಾಧೀನ ಕೈದಿಗಳಿಗೆ ಹೆಚ್ಚುವರಿ ಬಟ್ಟೆಗಳನ್ನು ನೀಡುವಂತಿಲ್ಲ ಎಂದು ಸ್ಪಷ್ಟ ಸೂಚನೆ ನೀಡಲಾಗಿದೆ.
ಸುರಕ್ಷತೆ ದೃಷ್ಟಿಯಿಂದ, ಕೈದಿಗಳಿಗೆ ನೀಡುವ ವಸ್ತುಗಳ ತಪಾಸಣೆಗೆ ಎರಡು ರೀತಿಯ ಕ್ರಮಗಳನ್ನು ಅನುಸರಿಸಲು ಸೂಚಿಸಲಾಗಿದೆ. ದೈಹಿಕ ತಪಾಸಣೆ ಹಾಗೂ ಸೆಕ್ಯುರಿಟಿ ತಪಾಸಣೆ ಕಡ್ಡಾಯವಾಗಿದ್ದು, ಅಗತ್ಯವಿದ್ದರೆ ಜೈಲಾಧಿಕಾರಿಗಳು ಯಾವುದೇ ರೀತಿಯ ತಪಾಸಣೆ ನಡೆಸಬಹುದು. ಈ ನಿಯಮಗಳು ತಕ್ಷಣವೇ ಜಾರಿಯಾಗುವಂತೆ ಆದೇಶ ಹೊರಡಿಸಲಾಗಿದೆ. ರಾಜ್ಯದ ಎಲ್ಲಾ ಜೈಲುಗಳಲ್ಲಿ ಕೈದಿಗಳಿಗೆ ಸರಬರಾಜಾಗುವ ಆಹಾರ, ಬಟ್ಟೆ ಮತ್ತು ಹಾಸಿಗೆಗಳ ಮೇಲೆ ನಿಯಂತ್ರಣ ಸಾಧಿಸುವ ಮೂಲಕ, ಜೈಲು ವ್ಯವಸ್ಥೆಯಲ್ಲಿ ಶಿಸ್ತನ್ನು ಕಾಪಾಡುವ ಪ್ರಯತ್ನವಾಗಿದೆ.
ಡಿಜಿಪಿ ಅಲೋಕ್ ಕುಮಾರ್ ಹೊರಡಿಸಿದ ಈ ಸುತ್ತೋಲೆ ಕೈದಿಗಳ ಜೀವನದಲ್ಲಿ ನಿಯಮಿತತೆ, ಶಿಸ್ತು ಮತ್ತು ಸುರಕ್ಷತೆಯನ್ನು ಹೆಚ್ಚಿಸುವುದರೊಂದಿಗೆ, ಜೈಲು ವ್ಯವಸ್ಥೆಯ ಪಾರದರ್ಶಕತೆಯನ್ನು ಬಲಪಡಿಸುವ ಮಹತ್ವದ ಹೆಜ್ಜೆಯಾಗಿದೆ.