ರಾಜ್ಯಾದ್ಯಂತ ಮುಂಗಾರು ಮಳೆ ತೀವ್ರಗೊಂಡಿದ್ದು, ಜನಜೀವನ ಸಂಪೂರ್ಣವಾಗಿ ಮಳೆಮಯವಾಗಿದೆ. ಕಳೆದ ಕೆಲವು ದಿನಗಳಿಂದ ಬಿಡುವು ನೀಡಿದ್ದ ವರುಣದೇವ ಇದೀಗ ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಆರ್ಭಟಿಸುತ್ತಿದ್ದಾನೆ. ಹವಾಮಾನ ಇಲಾಖೆಯ ಮುನ್ಸೂಚನೆಯಂತೆ, ಕರಾವಳಿ ಜಿಲ್ಲೆಗಳಲ್ಲಿ ಅತ್ಯಂತ ಭಾರೀ ಮಳೆಯಾಗುತ್ತಿರುವುದರಿಂದ ರೆಡ್ ಅಲರ್ಟ್ ಘೋಷಿಸಲಾಗಿದೆ. ಇನ್ನುಳಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಭಾರೀ ಮಳೆಯ ಮುನ್ಸೂಚನೆ ಇರುವುದರಿಂದ ಆರೆಂಜ್ ಅಲರ್ಟ್ ಜಾರಿಗೊಳಿಸಲಾಗಿದೆ. ಜುಲೈ 9 ಮತ್ತು 10 ರ ನಂತರ ಉತ್ತರ ಹಾಗೂ ದಕ್ಷಿಣ ಕರ್ನಾಟಕದ ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ಕೊಂಚ ಇಳಿಕೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.
ಪಶ್ಚಿಮ ಘಟ್ಟಗಳಲ್ಲಿ ಭೂಕುಸಿತದ ಮುನ್ನೆಚ್ಚರಿಕೆ
ಜುಲೈ 7 ರಿಂದ ಜುಲೈ 11 ರವರೆಗೆ ಪಶ್ಚಿಮ ಘಟ್ಟದ ಪ್ರಕೃತಿ ರಮಣೀಯ ಪ್ರದೇಶಗಳಲ್ಲಿ ಅತ್ಯಂತ ಭಾರೀ ಮಳೆಯಾಗುವ ಮುನ್ಸೂಚನೆ ಇರುವುದರಿಂದ, ಈ ಭಾಗಗಳಲ್ಲಿ ಭೂಕುಸಿತ (Landslides) ಉಂಟಾಗುವ ಆತಂಕ ಎದುರಾಗಿದೆ. ಘಾಟ್ ರಸ್ತೆಗಳಲ್ಲಿ ಸಂಚರಿಸುವ ಪ್ರಯಾಣಿಕರು ಮತ್ತು ಪ್ರವಾಸಿಗರು ಜಾಗರೂಕರಾಗಿರಬೇಕು ಎಂದು ಸರ್ಕಾರ ಹಾಗೂ ವಿಪತ್ತು ನಿರ್ವಹಣಾ ಮಂಡಳಿ ಕಟ್ಟುನಿಟ್ಟಿನ ಮುನ್ನೆಚ್ಚರಿಕೆ ನೀಡಿದೆ. ಪ್ರಮುಖವಾಗಿ ರಾತ್ರಿ ವೇಳೆಯ ಪ್ರಯಾಣವನ್ನು ಆದಷ್ಟು ತಪ್ಪಿಸುವುದು ಸೂಕ್ತ ಎನ್ನಲಾಗಿದೆ.
ಬುಧವಾರದ ಹವಾಮಾನ ಹೇಗಿರಲಿದೆ
ಬುಧವಾರದ ದಿನವೂ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮಳೆಯ ಆರ್ಭಟ ಮುಂದುವರಿಯಲಿದ್ದು, ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಉತ್ತರ ಕರ್ನಾಟಕದ ಬೆಳಗಾವಿ, ಧಾರವಾಡ, ಗದಗ ಜಿಲ್ಲೆಗಳು ಹಾಗೂ ಮಲೆನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ.
ರಾಜಧಾನಿ ಬೆಂಗಳೂರು ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರಲಿದ್ದು, ಹಗುರದಿಂದ ಸಾಧಾರಣ ಮಳೆಯಾಗುವ ಮುನ್ಸೂಚನೆ ಇದೆ. ಈ ಅವಧಿಯಲ್ಲಿ ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿರಲಿದೆ.
ಲಿಂಗನಮಕ್ಕಿಗೆ ಜೀವಕಳೆ
ವಿಶ್ವಪ್ರಸಿದ್ಧ ಜೋಗ್‌ಫಾಲ್ಸ್ ಮತ್ತು ಶರಾವತಿ ಕಣಿವೆ ಪ್ರದೇಶದಲ್ಲಿ ಕಳೆದ ಎರಡು ದಿನಗಳಿಂದ ಆರಿದ್ರಾ ನಕ್ಷತ್ರದ ಮಳೆ ಅಬ್ಬರಿಸುತ್ತಿದೆ. ಮಳೆಯ ಜೊತೆಗೆ ಭಾರಿ ವೇಗದ ಗಾಳಿಯೂ ಬೀಸುತ್ತಿರುವುದರಿಂದ ಮಲೆನಾಡಿನ ಸೊಬಗು ಹೆಚ್ಚಿದೆ. ಈ ಭಾರೀ ಮಳೆಯಿಂದಾಗಿ ಶಿವಮೊಗ್ಗ ಜಿಲ್ಲೆಯ ಪ್ರಮುಖ ವಿದ್ಯುತ್ ಉತ್ಪಾದನಾ ಕೇಂದ್ರವಾದ ಲಿಂಗನಮಕ್ಕಿ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಗಣನೀಯವಾಗಿ ಹೆಚ್ಚಾಗಿದೆ.
ಜಲಾಶಯದ ಇಂದಿನ ಸ್ಥಿಗತಿ:
ಭಾನುವಾರ ಬೆಳಗಿನ ಅಂಕಿ-ಅಂಶಗಳ ಪ್ರಕಾರ, ಜಲಾಶಯಕ್ಕೆ 15,376 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಇದರಿಂದಾಗಿ ಕೇವಲ ಎರಡು ದಿನಗಳಲ್ಲಿ ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟದಲ್ಲಿ 1.40 ಅಡಿ ಹೆಚ್ಚಳ ಕಂಡುಬಂದಿದೆ. ಪ್ರಸ್ತುತ ನೀರಿನ ಮಟ್ಟ 1749.85 ಅಡಿ ತಲುಪಿದೆ.
ಆದಾಗ್ಯೂ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ನೀರಿನ ಸಂಗ್ರಹ ತೀರಾ ಕಡಿಮೆಯಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಜಲಾಶಯದಲ್ಲಿ 1791.20 ಅಡಿ ನೀರಿತ್ತು. ಅಂದರೆ, ಕಳೆದ ವರ್ಷಕ್ಕಿಂತ ಈ ಬಾರಿ ಬರೋಬ್ಬರಿ 42 ಅಡಿಗಳಷ್ಟು ಕಡಿಮೆ ನೀರಿದೆ. ಸದ್ಯಕ್ಕೆ ಭಾನುವಾರ ಮಳೆಯ ತೀವ್ರತೆ ಕೊಂಚ ಕಡಿಮೆಯಾಗಿದ್ದು, ಆಗಾಗ್ಗೆ ಸಾಧಾರಣ ಮಳೆ ಸುರಿಯುತ್ತಿದೆ. ಮುಂಬರುವ ದಿನಗಳಲ್ಲಿ ಮಳೆ ಹೀಗೆಯೇ ಮುಂದುವರಿದರೆ ಜಲಾಶಯದ ಮಟ್ಟ ತೃಪ್ತಿಕರವಾಗಿ ಏರಿಕೆಯಾಗಲಿದೆ.
ಭೋರ್ಗರೆಯುತ್ತಿರುವ ವಿಶ್ವವಿಖ್ಯಾತ ಜೋಗ ಜಲಪಾತ
ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಕಳೆಗುಂದಿದ್ದ ವಿಶ್ವವಿಖ್ಯಾತ ಜೋಗ ಜಲಪಾತಕ್ಕೆ ಕೊನೆಗೂ ಮರುಜೀವ ಬಂದಿದೆ. ರಾಜ, ರಾಣಿ, ರೋರರ್ ಮತ್ತು ರಾಕೆಟ್ ಸತಿ-ಪತಿಯರು ಮತ್ತೆ ಭೋರ್ಗರೆಯಲು ಆರಂಭಿಸಿದ್ದಾರೆ.
ಸಾಮಾನ್ಯವಾಗಿ ಜೋಗ ಜಲಪಾತವು ಜೂನ್ ಮಧ್ಯಭಾಗದ ವೇಳೆಗೆ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿತ್ತು. ಆದರೆ ಈ ವರ್ಷ ಮುಂಗಾರು ವಿಳಂಬವಾದ ಹಿನ್ನೆಲೆಯಲ್ಲಿ ಜುಲೈ ಮೊದಲ ವಾರದವರೆಗೂ ಜಲಪಾತದಲ್ಲಿ ನೀರಿನ ತೀವ್ರತೆ ಇಲ್ಲದೆ ಸೊರಗಿಹೋಗಿತ್ತು. ಕೇವಲ ಬಂಡೆಗಲ್ಲುಗಳು ಮಾತ್ರ ಕಾಣಿಸುತ್ತಿದ್ದವು. ಸದ್ಯದ ಮಳೆಯ ಆರ್ಭಟ ಜಲಪಾತಕ್ಕೆ ಹಳೆ ಕಳೆಯನ್ನು ತಂದಿದೆ. ಮಳೆ ಹೀಗೆಯೇ ಮುಂದುವರಿದರೆ ಜಲಪಾತದ ಸೌಂದರ್ಯ ಮತ್ತಷ್ಟು ಹೆಚ್ಚಲಿದ್ದು, ಪ್ರವಾಸಿಗರ ಕಣ್ಣಿಗೆ ಹಬ್ಬವಾಗುವುದರಲ್ಲಿ ಸಂಶಯವಿಲ್ಲ.