ರಾಜ್ಯ ರಾಜಕಾರಣದಲ್ಲಿ ಈಗ ಎಲ್ಲೆಡೆ ಒಂದೇ ಚರ್ಚೆ - ಅದು ವಿಧಾನಸೌಧದ ಮೆಟ್ಟಿಲುಗಳ ಮೇಲೆ ನಡೆದ ಶಾಸಕರ 'ಗ್ರೂಪ್ ಫೋಟೋ ಶೂಟ್'! ಸಾಮಾನ್ಯವಾಗಿ ಐದು ವರ್ಷದ ಅವಧಿ ಮುಗಿಯುವಾಗ ತೆಗೆಸಿಕೊಳ್ಳಬೇಕಿದ್ದ ಫೋಟೋವನ್ನು, ಅವಧಿ ಇನ್ನೂ ಎರಡು ವರ್ಷ ಬಾಕಿ ಇರುವಾಗಲೇ ಸ್ಪೀಕರ್ ಯು.ಟಿ. ಖಾದರ್ ಅವರು ಯಾಕೆ ತೆಗೆಸಿದರು? ಇದರ ಹಿಂದಿನ ಮರ್ಮವೇನು? ಈ ಪ್ರಶ್ನೆಗಳು ಈಗ ಶಾಸಕರಿಂದ ಹಿಡಿದು ಸಾಮಾನ್ಯ ಜನರವರೆಗೂ ತೀವ್ರ ಕುತೂಹಲ ಕೆರಳಿಸಿವೆ.
ಸಾಮಾನ್ಯವಾಗಿ ಸರ್ಕಾರ ಪೂರ್ಣಾವಧಿ ಮುಗಿಸುವ ಹಂತದಲ್ಲಿದ್ದಾಗ ಸ್ಪೀಕರ್ ಸಮ್ಮುಖದಲ್ಲಿ ಶಾಸಕರ ಗ್ರೂಪ್ ಫೋಟೋ ತೆಗೆಸಿಕೊಳ್ಳುವುದು ಒಂದು ಸಂಪ್ರದಾಯ. ಆದರೆ, ಈಗ ಈ ಫೋಟೋ ಶೂಟ್ ನಡೆದ ತಕ್ಷಣವೇ ರಾಜ್ಯ ರಾಜಕಾರಣದಲ್ಲಿ ಭಾರಿ ಗೊಂದಲ ಶುರುವಾಗಿದೆ. ಈ ಫೋಟೋ ಶೂಟ್ ಹಿಂದೆ ಏನಾದರೂ ದೊಡ್ಡ ರಾಜಕೀಯ ಸಂದೇಶವಿದೆಯೇ ಎಂದು ಎಲ್ಲರೂ ತಮ್ಮದೇ ಲೆಕ್ಕಾಚಾರಗಳನ್ನು ಹಾಕುತ್ತಿದ್ದಾರೆ.
ಇದು ಸಿಎಂ @siddaramaiah ಅವರ ಔಟ್ ಗೋಯಿಂಗ್ ಫೋಟೋ ಶೂಟ್ ಅಲ್ವಾ @INCKarnataka ..?? #CongressVsCongress pic.twitter.com/u9PExaRACY
— BJP Karnataka (@BJP4Karnataka) March 25, 2026
ಸಿಎಂ ಬದಲಾವಣೆ?: ಕೆಲವರು ಇದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬದಲಾವಣೆಯ ಮುನ್ಸೂಚನೆ ಎಂದು ವ್ಯಾಖ್ಯಾನಿಸುತ್ತಿದ್ದಾರೆ. ಬಹುಶಃ ಸಿಎಂ ಬದಲಾವಣೆ ಆದೀತು ಎಂಬ ಕಾರಣಕ್ಕೆ ಈಗಲೇ ನೆನಪಿಗಾಗಿ ಫೋಟೋ ತೆಗೆಸಿಕೊಳ್ಳಲಾಗಿದೆಯೇ?
ಸಂಪುಟ ಪುನಾರಚನೆ?: ಶೀಘ್ರವೇ ಸಂಪುಟಕ್ಕೆ 'ಸರ್ಜರಿ' ಆಗಲಿದೆ ಎಂಬ ಮಾತುಗಳು ಬಲವಾಗಿ ಕೇಳಿಬರುತ್ತಿವೆ. ಆ ಬದಲಾವಣೆಯಲ್ಲಿ ಸ್ಪೀಕರ್ ಯು.ಟಿ. ಖಾದರ್ ಅವರು ಸಚಿವ ಸ್ಥಾನ ಪಡೆದು ಸಂಪುಟ ಸೇರುವ ಸಾಧ್ಯತೆ ಇರುವುದರಿಂದ, ಅವರು ಈಗಲೇ ಫೋಟೋ ಶೂಟ್ ಮಾಡಿಸಿದ್ದಾರೆ ಎನ್ನಲಾಗುತ್ತಿದೆ.
ಮಧ್ಯಂತರ ಚುನಾವಣೆ?: ಎಲ್ಲಾದರೂ ಪರಿಸ್ಥಿತಿ ಕೈಮೀರಿ ಮಧ್ಯಂತರ ಚುನಾವಣೆ ಬಂದೇಬಿಟ್ಟರೆ, ಈಗಿರುವ ಶಾಸಕರ ನೆನಪಿಗಾಗಿ ಈ ಫೋಟೋ ಅಗತ್ಯವಾಗಿತ್ತು ಎಂದು ಕೆಲವರು ಮಾತನಾಡಿಕೊಳ್ಳುತ್ತಿದ್ದಾರೆ.
ಬಿಜೆಪಿ ಟೀಕೆ ಮತ್ತು ಗೊಂದಲದ ವಾತಾವರಣ
ವಿಧಾನಸೌಧದ ಪಡಸಾಲೆಗಳಲ್ಲಿ ಶಾಸಕರ ನಡುವೆ ಈ ವಿಷಯವೇ ಬಿಸಿಬಿಸಿ ಚರ್ಚೆಯಾಗುತ್ತಿದೆ. ಅಧಿಕೃತವಾಗಿ ಯಾರು ಏನೂ ಹೇಳುತ್ತಿಲ್ಲವಾದರೂ, ಗೊಂದಲವಂತೂ ಜೋರಾಗಿದೆ. ಇನ್ನು ವಿರೋಧ ಪಕ್ಷದ ನಾಯಕರು ಸರ್ಕಾರದ ಈ ನಡೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಬಿಜೆಪಿ ಶಾಸಕ ಸುರೇಶ್ ಕುಮಾರ್ ಅವರು ಸೋಷಿಯಲ್ ಮೀಡಿಯಾದಲ್ಲಿ ಈ ಫೋಟೋ ಶೂಟ್ ಬಗ್ಗೆ ವ್ಯಂಗ್ಯವಾಡಿದ್ದಾರೆ. "ಇದು ಸಿಎಂ ಸಿದ್ದರಾಮಯ್ಯ ಅವರ 'ಔಟ್-ಗೋಯಿಂಗ್' ಫೋಟೋಶೂಟ್ ಅಲ್ವಾ?" ಎಂದು ಪ್ರಶ್ನಿಸುವ ಮೂಲಕ ಆಡಳಿತ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ. ಅಲ್ಲದೆ, ವಿಧಾನಸೌಧದ ಹಳೆಯ ಬಾಗಿಲುಗಳನ್ನು ಬದಲಾಯಿಸಿದ್ದರಿಂದ ಹಿಡಿದು, ಈಗ ಅವಧಿಗೂ ಮುನ್ನವೇ ಫೋಟೋ ತೆಗೆಸಿಕೊಂಡಿದ್ದರವರೆಗೆ ಸ್ಪೀಕರ್ ಅವರ ಕೆಲಸಗಳ ಬಗ್ಗೆ ಹಲವು ಸಂಶಯಗಳನ್ನು ಬಿಜೆಪಿ ವ್ಯಕ್ತಪಡಿಸಿದೆ.
ಒತ್ತಡದಲ್ಲಿ ಸರ್ಕಾರ?
ಒಂದೆಡೆ ಸಚಿವ ಸಂಪುಟ ಪುನಾರಚನೆಗೆ ಆಕಾಂಕ್ಷಿಗಳಿಂದ ಹೈಕಮಾಂಡ್‌ಗೆ ಭಾರಿ ಒತ್ತಡವಿದೆ. "ಎರಡು ವರ್ಷ ಸಚಿವರಾದವರು ಇನ್ನುಳಿದವರಿಗೆ ಅವಕಾಶ ಮಾಡಿಕೊಡಬೇಕು" ಎಂಬ ಕೂಗು ಕಾಂಗ್ರೆಸ್‌ನಲ್ಲೇ ಕೇಳಿಬರುತ್ತಿದೆ. ಈ ಎಲ್ಲಾ ಬೆಳವಣಿಗೆಗಳ ನಡುವೆಯೇ ನಡೆದ ಫೋಟೋ ಶೂಟ್, ಯಾವುದೋ ದೊಡ್ಡ ಬದಲಾವಣೆಯ ಸಿಗ್ನಲ್ ಅನ್ನು ರವಾನಿಸುತ್ತಿದೆಯೇ ಎಂಬುದು ಸದ್ಯದ ಪ್ರಶ್ನೆ.
ವಿಧಾನಸಭೆಯ ಈ ಫೋಟೋ ಶೂಟ್ ರಾಜಕೀಯ ಅಂಗಳದಲ್ಲಿ ಭಾರೀ ಸದ್ದು ಮಾಡುತ್ತಿದೆ. ಮುಂದಿನ ದಿನಗಳಲ್ಲಿ ರಾಜ್ಯ ರಾಜಕಾರಣದಲ್ಲಿ ಏನೆಲ್ಲಾ ಬದಲಾವಣೆಗಳಾಗಲಿವೆ ಎಂಬುದನ್ನು ಕಾದು ನೋಡಬೇಕಿದೆ.