ಬೆಂಗಳೂರು: ಧಾರವಾಡದಲ್ಲಿ ಸರ್ಕಾರಿ ಕೆಲಸಕ್ಕಾಗಿ ಹಗಲಿರುಳು ಶ್ರಮಿಸುತ್ತಿರುವ ಉದ್ಯೋಗಾಕಾಂಕ್ಷಿಗಳು ನಡೆಸುತ್ತಿರುವ ಪ್ರತಿಭಟನೆಯನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಅಭ್ಯರ್ಥಿಗಳ ಆತಂಕ, ಹತಾಶೆ ಮತ್ತು ಅನಿಶ್ಚಿತತೆಯನ್ನು ನಾನು ಹತ್ತಿರದಿಂದ ಬಲ್ಲೆ. ಪ್ರತಿ ಅರ್ಜಿಯ ಹಿಂದೆ ಒಂದು ಕುಟುಂಬದ ಕನಸು ಮತ್ತು ವರ್ಷಗಳ ಕಠಿಣ ಪರಿಶ್ರಮವಿರುತ್ತದೆ. ನಿಮ್ಮೆಲ್ಲರ ಆತಂಕಗಳು ಸರ್ಕಾರಕ್ಕೆ ಕೇಳಿಸುತ್ತಿವೆ ಮತ್ತು ನಿಮ್ಮ ಭವಿಷ್ಯ ನಮಗೆ ಅತ್ಯಂತ ಮುಖ್ಯ ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ.
ರಾಜ್ಯದಲ್ಲಿ ಲಕ್ಷಾಂತರ ಹುದ್ದೆಗಳು ಖಾಲಿ ಉಳಿದಿರುವುದು ಕಳೆದ ಬಿಜೆಪಿ ಸರ್ಕಾರದ ಆಡಳಿತಾತ್ಮಕ ನಿರ್ಲಕ್ಷ್ಯಕ್ಕೆ ಸಾಕ್ಷಿ. ಸರಿಯಾದ ನೇಮಕಾತಿ ನೀಲಿನಕ್ಷೆ ಇಲ್ಲದಿದ್ದರಿಂದ ಮತ್ತು 2019-23ರ ಅವಧಿಯ ಸಾಲು ಸಾಲು ಹಗರಣಗಳಿಂದಾಗಿ ವ್ಯವಸ್ಥೆ ಹಾಳಾಗಿತ್ತು. ಅಂದು ಅಕ್ರಮಗಳಿಗೆ ಅವಕಾಶ ನೀಡಿದವರು ಇಂದು ರಾಜಕೀಯ ಲಾಭಕ್ಕಾಗಿ ಉದ್ಯೋಗಾಕಾಂಕ್ಷಿಗಳ ಹಾದಿ ತಪ್ಪಿಸುತ್ತಿದ್ದಾರೆ. ಹದಗೆಟ್ಟಿರುವ ವ್ಯವಸ್ಥೆಯನ್ನು ಸರಿಪಡಿಸಿ, ಪಾರದರ್ಶಕವಾಗಿ ನೇಮಕಾತಿ ಪ್ರಕ್ರಿಯೆ ನಡೆಸುವುದು ನಮ್ಮ ಸರ್ಕಾರದ ಮೊದಲ ಆದ್ಯತೆಯಾಗಿದೆ.
ಆಂತರಿಕ ಮೀಸಲಾತಿಗೆ ಸಂಬಂಧಿಸಿದ ಕಾನೂನು ಸವಾಲುಗಳು ನ್ಯಾಯಾಲಯದ ಮುಂದೆ ಇದ್ದ ಕಾರಣ, ಕೆಲವು ನೇಮಕಾತಿ ಪ್ರಕ್ರಿಯೆಗಳನ್ನು ಅನಿವಾರ್ಯವಾಗಿ ತಾತ್ಕಾಲಿಕವಾಗಿ ನಿಲ್ಲಿಸಬೇಕಾಯಿತು. ಸಂವಿಧಾನ ಮತ್ತು ಸಾಮಾಜಿಕ ನ್ಯಾಯಕ್ಕೆ ಗೌರವ ನೀಡುವ ದೃಷ್ಟಿಯಿಂದ ನಾವು ಕಾನೂನಿನ ಚೌಕಟ್ಟಿನಲ್ಲೇ ಕೆಲಸ ಮಾಡುತ್ತಿದ್ದೇವೆ, ಅವಸರದ ನಿರ್ಧಾರಗಳನ್ನು ತೆಗೆದುಕೊಂಡು ಸಾವಿರಾರು ಅಭ್ಯರ್ಥಿಗಳ ಭವಿಷ್ಯಕ್ಕೆ ತೊಂದರೆಯಾಗಬಾರದು ಎಂಬುದು ನಮ್ಮ ಆಶಯವಾಗಿದೆ.
ಸಂಕಷ್ಟಗಳಿದ್ದರೂ ನಾವು ಸುಮ್ಮನೆ ಕೂರಲಿಲ್ಲ; ಈಗಾಗಲೇ 40,000ಕ್ಕೂ ಅಧಿಕ ಮಂದಿಗೆ ಉದ್ಯೋಗ ನೀಡುವಲ್ಲಿ ಯಶಸ್ವಿಯಾಗಿದ್ದೇವೆ. ವಯೋಮಿತಿ ಮುಗಿಯುತ್ತಿದೆ ಎಂದು ಆತಂಕಪಡುತ್ತಿರುವ ಅಭ್ಯರ್ಥಿಗಳ ಪರವಾಗಿ ನಮ್ಮ ಸರ್ಕಾರ ನಿಂತಿದೆ. ಆದ್ದರಿಂದಲೇ ವಯೋಮಿತಿಯಲ್ಲಿ 5 ವರ್ಷಗಳ ರಿಯಾಯಿತಿ ಘೋಷಿಸಲಾಗಿದೆ. ನಿಮ್ಮ ಶ್ರಮಕ್ಕೆ ನ್ಯಾಯ ಸಿಗಬೇಕು ಮತ್ತು ಯಾರಿಗೂ ಅನ್ಯಾಯವಾಗಬಾರದು ಎಂಬುದೇ ನಮ್ಮ ಆಶಯ. ಬಾಕಿ ಇರುವ ಎಲ್ಲಾ ಹುದ್ದೆಗಳನ್ನು ಪಾರದರ್ಶಕವಾಗಿ ಮತ್ತು ಕಾಲಮಿತಿಯೊಳಗೆ ಭರ್ತಿ ಮಾಡಲು ನಾವು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ಅಭ್ಯರ್ಥಿಗಳು ಯಾವುದೇ ಗೊಂದಲಗಳಿಗೆ ಕಿವಿಗೊಡದೆ ತಮ್ಮ ಶಿಕ್ಷಣ ಮತ್ತು ಪರೀಕ್ಷೆಯ ತಯಾರಿ ಮೇಲೆ ಗಮನ ಹರಿಸಬೇಕು ಎಂದು ಮುಖ್ಯಮಂತ್ರಿಗಳು ಮನವಿ ಮಾಡಿದ್ದಾರೆ.
ಕರ್ನಾಟಕದ ಯುವಜನತೆಯೇ ನಮ್ಮ ನಾಡಿನ ಭವಿಷ್ಯದ ಶಿಲ್ಪಿಗಳು. ನಿಮ್ಮ ತಾಳ್ಮೆ ನಮಗೆ ಸ್ಫೂರ್ತಿ ನೀಡುತ್ತದೆ. ನಮ್ಮ ಸರ್ಕಾರವು ಕೇವಲ ಮಾತುಗಳಲ್ಲಿ ಮಾತ್ರವಲ್ಲದೆ, ಕೆಲಸದಲ್ಲಿಯೂ ನಿಮ್ಮೊಂದಿಗೆ ಇರಲಿದೆ ಎಂದು ಸಿಎಂ ಧೈರ್ಯ ತುಂಬಿದ್ದಾರೆ. ಪ್ರತಿಯೊಬ್ಬ ಅರ್ಹ ಯುವಕನಿಗೂ ಸಮಾನ ಅವಕಾಶ ಸಿಗುವಂತೆ ಮಾಡುವುದು ಸರ್ಕಾರದ ಗುರಿಯಾಗಿದೆ.