ನಾಳೆ ಬಸ್ ಬಂದ್ ಇಲ್ಲ, ಎಂದಿನಂತೆ ಇರಲಿವೆ KSRTC, BMTC - ಹೈಕೋರ್ಟ್‌ನಿಂದ ನೌಕರರ ಮುಷ್ಕರಕ್ಕೆ ದಿಢೀರ್ ಬ್ರೇಕ್!!

ನಾಳೆ (ಮೇ 20) ಆಫೀಸ್‌ಗೆ ಹೋಗೋರು, ಎಕ್ಸಾಮ್ ಬರೆಯೋರು ಮತ್ತು ಊರಿಗೆ ಜರ್ನಿ ಮಾಡೋರು ಯಾರೂ ಟೆನ್ಷನ್ ತಗೋಬೇಕಾಗಿಲ್ಲ. ಯಾಕಂದ್ರೆ, ಸಾರಿಗೆ ನೌಕರರ ಸಂಘಟನೆಗಳು ನಾಳೆಯಿಂದ ನಡೆಸಲು ಪ್ಲಾನ್ ಮಾಡಿದ್ದ ಅನಿರ್ದಿಷ್ಟಾವಧಿ ಬಸ್ ಮುಷ್ಕರಕ್ಕೆ ಕರ್ನಾಟಕ ಹೈಕೋರ್ಟ್ ಮಂಗಳವಾರದಂದು ತಾತ್ಕಾಲಿಕ ತಡೆ ನೀಡಿದೆ.

ಸಾರಿಗೆ ನೌಕರರ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದ ಗೃಹಕಾರ್ಮಿಕ ಮಹಿಳೆ!
ಸಾರಿಗೆ ನೌಕರರ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದ ಗೃಹಕಾರ್ಮಿಕ ಮಹಿಳೆ!

"ಯಾವುದೇ ಕಾರಣಕ್ಕೂ ಸದ್ಯಕ್ಕೆ ಮುಷ್ಕರ ನಡೆಸಬೇಡಿ. ಸರ್ಕಾರ ಮತ್ತು ಸಾರಿಗೆ ಸಂಘಟನೆಗಳು ಒಟ್ಟಿಗೆ ಕುಳಿತು ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳಿ" ಅಂತ ಹೈಕೋರ್ಟ್‌ನ ರಜೆ ಪೀಠದ ನ್ಯಾಯಮೂರ್ತಿಗಳಾದ ಸೂರಜ್ ಗೋವಿಂದರಾಜ್ ಮತ್ತು ಕೆ. ಮನ್ಮದಾ ರಾವ್ ಅವರಿದ್ದ ಪೀಠ ಕಡಕ್ ಆದೇಶ ಹೊರಡಿಸಿದೆ. ಇದರ ಜೊತೆಗೆ ಸಾರಿಗೆ ಸಚಿವರ ನೇತೃತ್ವದಲ್ಲಿ ತಕ್ಷಣವೇ ಸಭೆ ನಡೆಸುವಂತೆ ಸರ್ಕಾರ ಮತ್ತು ಸಾರಿಗೆ ನೌಕರರ ಸಂಘಟನೆಗಳಿಗೆ ನೋಟಿಸ್ ಕೂಡ ಜಾರಿ ಮಾಡಿದೆ.

ಕೋರ್ಟ್ ಮೆಟ್ಟಿಲೇರಿದ್ದ ಗೃಹಕಾರ್ಮಿಕ ಮಹಿಳೆ ಮತ್ತು ಕಟ್ಟಡ ಕಾರ್ಮಿಕ!

ಬಸ್ ಮುಷ್ಕರದ ಮ್ಯಾಟರ್ ಹೈಕೋರ್ಟ್ ತಲುಪಿದ್ದು ಹೇಗೆ ಗೊತ್ತಾ? ದಿನವಿಡೀ ಕಷ್ಟಪಟ್ಟು ದುಡಿಯುವ ಒಬ್ಬ ಸಾಮಾನ್ಯ ಗೃಹಕಾರ್ಮಿಕ ಮಹಿಳೆ ಮತ್ತು ಒಬ್ಬ ಕಟ್ಟಡ ಕಾರ್ಮಿಕ ಸೇರಿ ಸಾರಿಗೆ ನೌಕರರ ಮುಷ್ಕರವನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಸಲ್ಲಿಸಿದ್ದರು. "ಬಸ್ ಇಲ್ಲದಿದ್ದರೆ ನಮ್ಮ ದೈನಂದಿನ ಕೂಲಿ ಕೆಲಸಕ್ಕೆ ಹೋಗಲು ಆಗಲ್ಲ, ನಮ್ಮ ಹೊಟ್ಟೆಪಾಡು ಕಷ್ಟವಾಗುತ್ತದೆ" ಎಂದು ಅವರು ಕೋರ್ಟ್‌ನಲ್ಲಿ ವಾದಿಸಿದ್ದರು.

ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಸಾರ್ವಜನಿಕರ ಹಿತದೃಷ್ಟಿಯಿಂದ ಮುಷ್ಕರಕ್ಕೆ ತಡೆ ನೀಡಿದೆ. ಅರ್ಜಿದಾರರ ಪರವಾಗಿ ಹಿರಿಯ ವಕೀಲ ವಿಕ್ರಮ್ ಹುಯಿಲಗೋಳ ಅವರು ಸಾಲಿಡ್ ವಾದ ಮಂಡಿಸಿದ್ದರು.

ಮುಷ್ಕರ ತಡೆಗೆ ಕೋರ್ಟ್ ನೀಡಿದ ಪ್ರಮುಖ ಕಾರಣಗಳು

ನಾಳೆ ನಡೆಯಬೇಕಿದ್ದ ಮುಷ್ಕರಕ್ಕೆ ಬ್ರೇಕ್ ಹಾಕಲು ನ್ಯಾಯಾಲಯ ಹಲವು ಪ್ರಮುಖ ಅಂಶಗಳನ್ನು ಗಂಭೀರವಾಗಿ ಪರಿಗಣಿಸಿದೆ:

ವಿದ್ಯಾರ್ಥಿಗಳಿಗೆ ತೊಂದರೆ: ಸದ್ಯ ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ (SSLC) ಪೂರಕ ಪರೀಕ್ಷೆಗಳು ನಡೆಯುತ್ತಿವೆ. ಮೇ 18 ರಿಂದ ಮೇ 25 ರವರೆಗೆ ಪರೀಕ್ಷೆಗಳು ಇರುವುದರಿಂದ, ಹಳ್ಳಿ ಮತ್ತು ಅರೆನಗರ ಪ್ರದೇಶದ ನೂರಾರು ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರ ತಲುಪಲು ಕೆಎಸ್‌ಆರ್‌ಟಿಸಿ (KSRTC) ಬಸ್‌ಗಳನ್ನೇ ನಂಬಿಕೊಂಡಿದ್ದಾರೆ. ಬಸ್ ಬಂದ್ ಆದ್ರೆ ಅವರ ಭವಿಷ್ಯಕ್ಕೆ ತೊಂದರೆಯಾಗುತ್ತೆ ಎಂದು ಕೋರ್ಟ್ ಹೇಳಿದೆ.

ಜುಲೈವರೆಗೆ ಬಂದ್ ಹಾಗಿಲ್ಲ: ಕಳೆದ ವರ್ಷ ಡಿಸೆಂಬರ್‌ನಲ್ಲೇ ರಾಜ್ಯ ಸರ್ಕಾರ ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಎನ್‌ಡಬ್ಲ್ಯುಕೆಆರ್‌ಟಿಸಿ ಮತ್ತು ಕೆಕೆಆರ್‌ಟಿಸಿ ಸಂಸ್ಥೆಗಳನ್ನು ಜೂನ್ 30ರವರೆಗೆ “ಸಾರ್ವಜನಿಕ ಉಪಯೋಗ ಸೇವೆಗಳು” ಎಂದು ಘೋಷಿಸಿತ್ತು. ಈ ಅವಧಿಯಲ್ಲಿ ಮುಷ್ಕರ ನಡೆಸಲು ಕಾನೂನಿನಲ್ಲಿ ಅವಕಾಶ ಇಲ್ಲ.

ಜನಸಾಮಾನ್ಯರ ಕಷ್ಟ: ಬಸ್ ಇಲ್ಲದಿದ್ದರೆ ದಿನಗೂಲಿ ಕಾರ್ಮಿಕರು, ರೋಗಿಗಳು, ವೃದ್ಧರು ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗದ ಜನರಿಗೆ ತೀವ್ರ ತೊಂದರೆ ಉಂಟಾಗುತ್ತದೆ.

ಜಂಟಿ ಕ್ರಿಯಾ ಸಮಿತಿಗೆ (JAC) ಕಾನೂನಿನ ಚಾವಟಿ

ಬಾಕಿ ವೇತನ ಪಾವತಿ ಮಾಡಬೇಕು ಮತ್ತು ವೇತನ ಹೆಚ್ಚಳ ಮಾಡಬೇಕು ಅನ್ನೋ ಬೇಡಿಕೆ ಮುಂದಿಟ್ಟುಕೊಂಡು ಜಂಟಿ ಕ್ರಿಯಾ ಸಮಿತಿ (JAC) ಈ ಮುಷ್ಕರಕ್ಕೆ ಕರೆ ಕೊಟ್ಟಿತ್ತು. ಇದರಲ್ಲಿ ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಈಶಾನ್ಯ (NWKRTC) ಹಾಗೂ ಕಲ್ಯಾಣ ಕರ್ನಾಟಕ (KKRTC) ಸಾರಿಗೆ ನಿಗಮಗಳ ನೌಕರರ ಸಂಘಗಳು ಭಾಗಿಯಾಗಿದ್ದವು.

ಕೋರ್ಟ್ ಆದೇಶದ ಪ್ರಕಾರ, "ಜಂಟಿ ಕ್ರಿಯಾ ಸಮಿತಿ ಮತ್ತು ಅದರ ಅಂಗ ಸಂಸ್ಥೆಗಳು ಏಪ್ರಿಲ್ 29ರಂದು ನೀಡಿದ್ದ ಮುಷ್ಕರ ನೋಟಿಸ್ ಅನ್ವಯ ನಾಳೆ ಮುಷ್ಕರ ನಡೆಸುವಂತಿಲ್ಲ" ಎಂದು ಸ್ಪಷ್ಟವಾಗಿ ಹೇಳಲಾಗಿದೆ.

ಮುಂದಿನ ವಿಚಾರಣೆ ಮೇ 21ಕ್ಕೆ

ಮುಂದೇನು?: ಸಾರಿಗೆ ನೌಕರರ ಸಂಘದ ಪದಾಧಿಕಾರಿಗಳು, ಸಾರಿಗೆ ಸಚಿವರು ಮತ್ತು ಮುಖ್ಯಮಂತ್ರಿಗಳ ನಡುವಿನ ಸಭೆ ಯಾವಾಗ ನಡೆಯಬಹುದು ಎಂಬ ಬಗ್ಗೆ ಸರ್ಕಾರದ ಕಡೆಯಿಂದ ಮಾಹಿತಿ ಪಡೆಯಲು ಹೆಚ್ಚುವರಿ ಎರಡು ದಿನಗಳ ಕಾಲಾವಕಾಶ ಬೇಕು ಎಂದು ಸರ್ಕಾರದ ಪರ ಹಾಜರಿದ್ದ ಹೆಚ್ಚುವರಿ ಅಡ್ವೊಕೇಟ್ ಜನರಲ್ ತಾರನಾಥ ಪೂಜಾರಿ ಕೋರ್ಟ್‌ಗೆ ತಿಳಿಸಿದ್ದಾರೆ.

ಇದನ್ನು ಒಪ್ಪಿಕೊಂಡಿರುವ ಹೈಕೋರ್ಟ್, ಪ್ರಕರಣದ ಮುಂದಿನ ವಿಚಾರಣೆಯನ್ನು ಮೇ 21ಕ್ಕೆ ಮುಂದೂಡಿದೆ. ಈ ವಿಚಾರಣೆಯಲ್ಲಿ ಸಾರಿಗೆ ನಿಗಮಗಳ ಪರವಾಗಿ ವಕೀಲ ಹೆಚ್.ಆರ್. ರೇಣುಕ ಮತ್ತು ನೌಕರರ ಸಮಿತಿಯ ಪರವಾಗಿ ವಕೀಲರಾದ ಲಿಪ್ಟಾನ್ ರೊಸರಿಯೊ ಹಾಗೂ ಕ್ಲಿಫ್ಟಾನ್ ರೊಸಾರಿಯೊ ಹಾಜರಿದ್ದರು.

Latest News