Apr 21, 2026 Languages : ಕನ್ನಡ | English

Cheque Bounce Case - ಬ್ಯಾಂಕ್ ಮೆಮೊದಲ್ಲಿ ಸೀಲು-ಸಹಿ ಇಲ್ಲದಿದ್ರೂ ಶಿಕ್ಷೆ ಗ್ಯಾರಂಟಿ - ಹೈಕೋರ್ಟ್ ಆದೇಶ ಒಮ್ಮೆ ಗಮನಿಸಿ!!

ಸಾಮಾನ್ಯವಾಗಿ ಚೆಕ್ ಬೌನ್ಸ್ ಪ್ರಕರಣಗಳಲ್ಲಿ "ಬ್ಯಾಂಕ್ ಕೊಟ್ಟ ಚೀಟಿಯಲ್ಲಿ ಅಧಿಕಾರಿಯ ಸಹಿ ಇಲ್ಲ, ಬ್ಯಾಂಕ್ ಸೀಲು ಇಲ್ಲ, ಹಾಗಾಗಿ ಈ ಕೇಸ್ ನಡೆಯಲ್ಲ" ಅಂತ ಆರೋಪಿಗಳು ನುಣುಚಿಕೊಳ್ಳುವುದನ್ನು ನಾವು ನೋಡಿದ್ದೇವೆ. ಆದರೆ ಈಗ ಕರ್ನಾಟಕ ಹೈಕೋರ್ಟ್ ಇಂತಹ ಕಿರಿಕಿರಿಗಳಿಗೆ ಬ್ರೇಕ್ ಹಾಕಿದೆ. ತಾಂತ್ರಿಕ ಕಾರಣಗಳನ್ನು ಒಡ್ಡಿ ತಪ್ಪಿಸಿಕೊಳ್ಳುವವರಿಗೆ ನ್ಯಾಯಾಲಯ ಬಿಗ್ ಶಾಕ್ ನೀಡಿದೆ.

ಹೈಕೋರ್ಟ್‌ನಿಂದ ಹೊಸ ಕಾನೂನು ಜಾರಿ
ಹೈಕೋರ್ಟ್‌ನಿಂದ ಹೊಸ ಕಾನೂನು ಜಾರಿ

ಬೆಂಗಳೂರಿನ ಆರ್. ಜಗದೀಶ್ ಎಂಬುವವರು ಆದಿತ್ಯ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯಿಂದ 3 ಲಕ್ಷ ರೂಪಾಯಿ ಸಾಲ ಪಡೆದಿದ್ದರು. ಸಾಲಕ್ಕೆ ಗ್ಯಾರಂಟಿಯಾಗಿ ಒಂದು ಚೆಕ್ ನೀಡಿದ್ದರು. ಸಾಲ ತೀರಿಸದ ಕಾರಣ ಸೊಸೈಟಿಯವರು ಆ ಚೆಕ್ ಅನ್ನು ಬ್ಯಾಂಕಿಗೆ ಹಾಕಿದಾಗ, ಖಾತೆಯಲ್ಲಿ ಹಣವಿಲ್ಲದೆ ಚೆಕ್ ಬೌನ್ಸ್ ಆಯಿತು.

ಈ ಕೇಸ್‌ನ ವಿಚಾರಣೆ ನಡೆಸಿದ್ದ ಕೆಳಹಂತದ ನ್ಯಾಯಾಲಯ ಜಗದೀಶ್ ಅವರಿಗೆ 4 ಲಕ್ಷ ರೂಪಾಯಿ ದಂಡ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಜಗದೀಶ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಅವರ ವಾದ ಏನೆಂದರೆ, "ಬ್ಯಾಂಕ್ ಕೊಟ್ಟ ರಿಟರ್ನ್ ಮೆಮೊದಲ್ಲಿ (ಚೆಕ್ ಬೌನ್ಸ್ ಆದ ಬಗ್ಗೆ ಕೊಡುವ ಚೀಟಿ) ಬ್ಯಾಂಕ್ ಅಧಿಕಾರಿಯ ಸಹಿಯಾಗಲಿ ಅಥವಾ ಸೀಲ ಆಗಲಿ ಇಲ್ಲ, ಹಾಗಾಗಿ ಇದನ್ನು ಸಾಕ್ಷಿ ಎಂದು ಪರಿಗಣಿಸಬಾರದು" ಎಂಬುದಾಗಿತ್ತು.

ಹೈಕೋರ್ಟ್ ನೀಡಿದ ಮಹತ್ವದ ತೀರ್ಪು

ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರ ಪೀಠವು ಈ ವಾದವನ್ನು ಸಾರಾಸಗಟಾಗಿ ತಳ್ಳಿಹಾಕಿತು. ನ್ಯಾಯಾಲಯ ಹೇಳಿದ ಮುಖ್ಯ ಅಂಶಗಳು ಇಲ್ಲಿವೆ:

ಡಿಜಿಟಲ್ ಯುಗ: ಈಗಿನ ಕಾಲದಲ್ಲಿ ಎಲ್ಲವೂ ಆನ್‌ಲೈನ್‌ನಲ್ಲಿ ನಡೆಯುತ್ತಿದೆ. ಚೆಕ್ ಕ್ಲಿಯರಿಂಗ್ ಪ್ರಕ್ರಿಯೆಯೂ ಎಲೆಕ್ಟ್ರಾನಿಕ್ ವಿಧಾನದಲ್ಲೇ ನಡೆಯುತ್ತದೆ.

ಕಂಪ್ಯೂಟರ್ ಮೆಮೊ: ಕಂಪ್ಯೂಟರ್ ಮೂಲಕ ಜನರೇಟ್ ಆಗುವ ಬ್ಯಾಂಕ್ ರಿಟರ್ನ್ ಮೆಮೊಗಳಿಗೆ ಮನುಷ್ಯರು ಸಹಿ ಮಾಡಬೇಕು ಅಥವಾ ಬ್ಯಾಂಕ್ ಮುದ್ರೆ ಹಾಕಬೇಕು ಎಂಬ ಕಡ್ಡಾಯ ನಿಯಮವಿಲ್ಲ.

ತಾಂತ್ರಿಕ ನೆಪ ಬೇಡ: ಇಂತಹ ಸಣ್ಣಪುಟ್ಟ ತಾಂತ್ರಿಕ ಕಾರಣಗಳನ್ನು ಮುಂದಿಟ್ಟುಕೊಂಡು ಚೆಕ್ ಬೌನ್ಸ್ ಕೇಸ್‌ಗಳನ್ನು ವಜಾಗೊಳಿಸಲು ಸಾಧ್ಯವಿಲ್ಲ.

ಸುಳ್ಳು ವಾದಕ್ಕೆ ಬೆಲೆ ಇಲ್ಲ!

ಆರೋಪಿ ಜಗದೀಶ್ ಅವರು "ನಾನು ಸಾಲ ತೀರಿಸಿದ್ದೇನೆ, ಅವರು ನನ್ನ ಖಾಲಿ ಚೆಕ್ ದುರ್ಬಳಕೆ ಮಾಡಿಕೊಂಡಿದ್ದಾರೆ" ಎಂದೂ ವಾದಿಸಿದ್ದರು. ಆದರೆ ಅವರು ಸಾಲ ತೀರಿಸಿದ್ದಕ್ಕೆ ಯಾವುದೇ ದಾಖಲೆ ತೋರಿಸಿರಲಿಲ್ಲ.

ನ್ಯಾಯಾಲಯ ಕೇಳಿದ್ದು ಇಷ್ಟೇ: "ಒಂದು ವೇಳೆ ನೀವು ಸಾಲ ತೀರಿಸಿದ್ದರೆ, ನಿಮ್ಮ ಖಾಲಿ ಚೆಕ್ ಅನ್ನು ವಾಪಸ್ ಪಡೆಯಲು ಯಾಕೆ ಪ್ರಯತ್ನಿಸಲಿಲ್ಲ? ಅದು ದುರ್ಬಳಕೆಯಾಗಿದೆ ಎಂದು ಪೊಲೀಸ್ ದೂರು ಯಾಕೆ ನೀಡಲಿಲ್ಲ?" ಈ ಪ್ರಶ್ನೆಗಳಿಗೆ ಉತ್ತರವಿಲ್ಲದ ಕಾರಣ ಹೈಕೋರ್ಟ್ ಕೆಳಹಂತದ ನ್ಯಾಯಾಲಯ ನೀಡಿದ್ದ ಶಿಕ್ಷೆಯನ್ನು ಎತ್ತಿಹಿಡಿಯಿತು.

ದಂಡದ 4 ಲಕ್ಷ ರೂಪಾಯಿಗಳಲ್ಲಿ 3.95 ಲಕ್ಷ ರೂ. ಅನ್ನು ದೂರುದಾರ ಸೊಸೈಟಿಗೆ ನೀಡಬೇಕು ಮತ್ತು 5,000 ರೂ. ಸರ್ಕಾರಕ್ಕೆ ಕಟ್ಟಬೇಕು ಎಂದು ಕೋರ್ಟ್ ಆದೇಶಿಸಿದೆ.

ಈ ತೀರ್ಪಿನಿಂದಾಗಿ ಇನ್ಮುಂದೆ ಚೆಕ್ ಬೌನ್ಸ್ ಪ್ರಕರಣಗಳಲ್ಲಿ ಡಿಜಿಟಲ್ ದಾಖಲೆಗಳಿಗೆ ಹೆಚ್ಚಿನ ಬೆಲೆ ಸಿಕ್ಕಂತಾಗಿದೆ. ಸೀಲು ಇಲ್ಲ, ಸಹಿ ಇಲ್ಲ ಎಂಬ ಕಾರಣ ನೀಡಿ ಕೇಸ್‌ನಿಂದ ತಪ್ಪಿಸಿಕೊಳ್ಳಲು ಇನ್ಮುಂದೆ ಸಾಧ್ಯವಿಲ್ಲ.