ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಸರ್ಕಾರಿ ಆಸ್ಪತ್ರೆಗಳ ವೈದ್ಯರು ಮಾರ್ಚ್ 11ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿರುವುದು ರಾಜ್ಯದ ಆರೋಗ್ಯ ವಲಯ. ಸುಮಾರು 15 ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟುಕೊಂಡು ನಡೆಸುತ್ತಿರುವ ಈ ಹೋರಾಟದಿಂದಾಗಿ ರಾಜ್ಯದಾದ್ಯಂತ ಓಪಿಡಿ ಸೇವೆಗಳು ಸ್ಥಗಿತಗೊಳ್ಳುವ ಭೀತಿ ಎದುರಾಗಿದೆ.
ಇದು ವಿಶೇಷವಾಗಿ ಸರ್ಕಾರಿ ಆಸ್ಪತ್ರೆಗಳನ್ನೇ ನಂಬಿಕೊಂಡಿರುವ ಬಡ ಮತ್ತು ಮಧ್ಯಮ ವರ್ಗದ ರೋಗಿಗಳಿಗೆ ದೊಡ್ಡ ಹೊಡೆತ ನೀಡಲಿದೆ. ಜ್ವರ ಕೆಮ್ಮು, ಸ್ಕ್ಯಾನಿಂಗ್ ಅಥವಾ ರಕ್ತ ಪರೀಕ್ಷೆಯಂತಹ ಸಾಮಾನ್ಯ ಚಿಕಿತ್ಸೆಗಾಗಿ ಆಸ್ಪತ್ರೆಗೆ ಬರುವವರು ತೀವ್ರ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ. ಸರ್ಕಾರ ಮತ್ತು ವೈದ್ಯಾಧಿಕಾರಿಗಳ ಸಂಘದ ನಡುವೆ ಈವರೆಗೆ ನಡೆದ ಏಳು ಸುತ್ತಿನ ಮಾತುಕತೆಗಳು ವಿಫಲವಾಗಿರುವುದು ಈ ಪರಿಸ್ಥಿತಿಯನ್ನು ಮತ್ತಷ್ಟು ಗಂಭೀರಗೊಂಡಿದೆ.
ವೈದ್ಯರ ಈ ಹೋರಾಟಕ್ಕೆ ದಶಕಗಳಿಂದ ನನೆಗುದಿಗೆ ಬಿದ್ದಿರುವ ಸಮಸ್ಯೆಗಳೇ ಪ್ರಮುಖ ಕಾರಣಗಳಾಗಿದೆ. ಕಳೆದ 13 ವರ್ಷಗಳಿಂದ ವೈದ್ಯರ ಜೇಷ್ಠತಾ ಪಟ್ಟಿಯನ್ನು ಪರಿಷ್ಕರಿಸದಿರುವುದು ಮತ್ತು ನಾಲ್ಕು ವರ್ಷಗಳಿಂದ ವೃಂದ ಹಾಗೂ ನೇಮಕಾತಿ ಪ್ರಕ್ರಿಯೆಗಳು ನಡೆಯದಿರುವುದು ವೈದ್ಯರಲ್ಲಿ ಅಸಮಾಧಾನ ಮೂಡಿಸಿದೆ.
ಇದರ ಜೊತೆಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಅಗತ್ಯ ಔಷಧಗಳ ಕೊರತೆ ಇರುವುದು ರೋಗಿಗಳ ಚಿಕಿತ್ಸೆಗೆ ಅಡ್ಡಿಯಾಗುತ್ತಿದೆ ಎಂಬುದು ವೈದ್ಯರ ವಾದ. ಮಾರ್ಚ್ 2ರಂದು ಆರೋಗ್ಯ ಸಚಿವರ ನೇತೃತ್ವದಲ್ಲಿ ನಡೆದ ಸಭೆಯಲ್ಲೂ ಯಾವುದೇ ಲಿಖಿತ ಭರವಸೆ ಸಿಗದ ಕಾರಣ, ಅನಿವಾರ್ಯವಾಗಿ ಮುಷ್ಕರಕ್ಕೆ ಮುಂದಾಗಬೇಕಾಯಿತು ಎಂದು ಸಂಘದ ನಾಯಕರು ಸ್ಪಷ್ಟಪಡಿಸಿದ್ದಾರೆ. ವೈದ್ಯರ ಈ ಬೇಡಿಕೆಗಳು ಈಡೇರದಿದ್ದರೆ ಮಾರ್ಚ್ 16ರಿಂದ ಸಾಮೂಹಿಕವಾಗಿ ಕರ್ತವ್ಯಕ್ಕೆ ಗೈರಾಗುವ ಎಚ್ಚರಿಕೆಯನ್ನೂ ನೀಡಲಾಗಿದೆ.
ಈ ಮುಷ್ಕರದ ಮೊದಲ ಹಂತವಾಗಿ ಮಾರ್ಚ್ 11ರಿಂದ ವೈದ್ಯರು ಕಪ್ಪು ಪಟ್ಟಿಯನ್ನು ಧರಿಸಿ ಕರ್ತವ್ಯ ನಿರ್ವಹಿಸುವ ಮೂಲಕ ಓಪಿಡಿ ಸೇವೆಗಳನ್ನು ಬಂದ್ ಮಾಡಲಿದ್ದಾರೆ. ಇದರಿಂದಾಗಿ ತುರ್ತು ಚಿಕಿತ್ಸೆಗಳನ್ನು ಹೊರತುಪಡಿಸಿ ಉಳಿದ ಸೇವೆಗಳು ಲಭ್ಯವಿರುವುದಿಲ್ಲ. ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಅಧ್ಯಕ್ಷರಾದ ಡಾ. ರವೀಂದ್ರನಾಥ್ ಮೇಟಿ ಅವರ ನೇತೃತ್ವದಲ್ಲಿ ಈಗಾಗಲೇ ಬೆಂಗಳೂರು ಜಿಲ್ಲಾ ಅಧಿಕಾರಿಗಳಿಗೆ ಅಧಿಕೃತವಾಗಿ ಮನವಿ ಪತ್ರ ಸಲ್ಲಿಸಲಾಗಿದೆ.
ಈ ಮುಷ್ಕರ ಸುದೀರ್ಘ ಕಾಲ ಮುಂದುವರಿದರೆ, ಖಾಸಗಿ ಆಸ್ಪತ್ರೆಗಳ ಮೇಲೆ ಒತ್ತಡ ಹೆಚ್ಚಾಗುವುದಲ್ಲದೆ, ಹಣಕಾಸಿನ ತೊಂದರೆ ಇರುವ ರೋಗಿಗಳು ಚಿಕಿತ್ಸೆಯಿಂದ ವಂಚಿತರಾಗುವ ಅಪಾಯವಿದೆ. ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ವೈದ್ಯರ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುವ ಮೂಲಕ ಈ 'ಹೆಲ್ತ್ ಎಮರ್ಜೆನ್ಸಿ'ಯನ್ನು ತಪ್ಪಿಸಬೇಕಿದೆ ಎಂಬುದು ಸಾರ್ವಜನಿಕರ ಆಶಯವಾಗಿದೆ.