Mar 27, 2026 Languages : ಕನ್ನಡ | English

ಬೆಳಗಾವಿ 'ತ್ರಿಮೂರ್ತಿ'ಗಳ ಮೇಲೆ ಹೈಕಮಾಂಡ್ ಭರವಸೆ - ಬಾಗಲಕೋಟೆ-ದಾವಣಗೆರೆ ಗೆಲ್ಲಲು ಕಾಂಗ್ರೆಸ್ ಮಾಸ್ಟರ್ ಪ್ಲ್ಯಾನ್!!

ಕರ್ನಾಟಕದಲ್ಲಿ ಈಗ ಉಪಚುನಾವಣೆಯ ಹವಾ ಜೋರಾಗಿದೆ. ಅದರಲ್ಲೂ ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ಕ್ಷೇತ್ರಗಳ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಈ ಎರಡು ಕೋಟೆಗಳನ್ನು ವಶಪಡಿಸಿಕೊಳ್ಳಲು ಕಾಂಗ್ರೆಸ್ ಹೈಕಮಾಂಡ್ ಈಗ ಬೆಳಗಾವಿ ಜಿಲ್ಲೆಯ ಮೂವರು 'ಭಾರೀ' ನಾಯಕರನ್ನು ಅಖಾಡಕ್ಕೆ ಇಳಿಸಿದೆ. ಹೌದು, ಸತೀಶ್ ಜಾರಕಿಹೊಳಿ, ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಲಕ್ಷ್ಮಣ ಸವದಿ ಅವರಿಗೆ ಈಗ ಬಿಗ್ ಜವಾಬ್ದಾರಿ ಸಿಕ್ಕಿದೆ.

ಉಪಚುನಾವಣೆಯಲ್ಲಿ ಕಾಂಗ್ರೆಸ್ ಮಾಸ್ಟರ್ ಪ್ಲ್ಯಾನ್! 3 ಸ್ಟಾರ್ ನಾಯಕರು ಅಖಾಡಕ್ಕೆ!
ಉಪಚುನಾವಣೆಯಲ್ಲಿ ಕಾಂಗ್ರೆಸ್ ಮಾಸ್ಟರ್ ಪ್ಲ್ಯಾನ್! 3 ಸ್ಟಾರ್ ನಾಯಕರು ಅಖಾಡಕ್ಕೆ!

ಯಾರಿಗೆ ಯಾವ ಜವಾಬ್ದಾರಿ?

ಕಾಂಗ್ರೆಸ್ ಈ ಬಾರಿ ಫುಲ್ ಕ್ಯಾಲ್ಕುಲೇಟೆಡ್ ಆಗಿ ಗೇಮ್ ಪ್ಲ್ಯಾನ್ ಮಾಡಿದೆ:

ಬಾಗಲಕೋಟೆ ಉಸ್ತುವಾರಿ: ಬಾಗಲಕೋಟೆಯ ಜವಾಬ್ದಾರಿಯನ್ನು 'ಸಾಹುಕಾರ್' ಸತೀಶ್ ಜಾರಕಿಹೊಳಿ ಹೆಗಲಿಗೆ ಹಾಕಲಾಗಿದೆ. ಅಹಿಂದ ವರ್ಗದ ಮತಗಳನ್ನು ಸೆಳೆಯುವಲ್ಲಿ ಸತೀಶ್ ಎತ್ತಿದ ಕೈ, ಹಾಗಾಗಿ ಬಾಗಲಕೋಟೆ ಗೆಲ್ಲುವ ಜವಾಬ್ದಾರಿ ಈಗ ಅವರದ್ದು.

ದಾವಣಗೆರೆ ದಕ್ಷಿಣ ಉಸ್ತುವಾರಿ: ಇಲ್ಲಿನ ಉಸ್ತುವಾರಿಯನ್ನು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ನೀಡಲಾಗಿದೆ. ದಾವಣಗೆರೆಯಲ್ಲಿ ಮಹಿಳಾ ಮತದಾರರನ್ನು ಮತ್ತು ತಮ್ಮದೇ ಆದ ಪ್ರಭಾವ ಬಳಸಿ ಕಾಂಗ್ರೆಸ್ ಬಾವುಟ ಹಾರಿಸುವುದು ಇವರ ಟಾರ್ಗೆಟ್.

ಎರಡೂ ಕ್ಷೇತ್ರಗಳ ಸ್ಟಾರ್ ಪ್ರಚಾರಕ: ಈ ಎರಡೂ ಕಡೆ ಲಿಂಗಾಯತ ಮತಗಳು ನಿರ್ಣಾಯಕ. ಹಾಗಾಗಿ, ಅಥಣಿ ಶಾಸಕ ಲಕ್ಷ್ಮಣ ಸವದಿ ಅವರನ್ನು ಸ್ಟಾರ್ ಪ್ರಚಾರಕರನ್ನಾಗಿ ಮಾಡಲಾಗಿದೆ. ಸವದಿ ಅವರ ಎಂಟ್ರಿಯಿಂದ ಲಿಂಗಾಯತ ವೋಟ್ ಬ್ಯಾಂಕ್ ಕಾಂಗ್ರೆಸ್ ಕಡೆ ವಾಳುತ್ತೆ ಅನ್ನೋದು ಹೈಕಮಾಂಡ್ ಲೆಕ್ಕಾಚಾರ.

ಕಾಂಗ್ರೆಸ್‌ಗೆ ದಾವಣಗೆರೆ 'ದೊಡ್ಡ ತಲೆನೋವು'!

ಬಾಗಲಕೋಟೆ ಏನೋ ಓಕೆ, ಆದರೆ ದಾವಣಗೆರೆ ದಕ್ಷಿಣದಲ್ಲಿ ಕಾಂಗ್ರೆಸ್‌ಗೆ ಹಾದಿ ಅಷ್ಟು ಸುಗಮವಾಗಿಲ್ಲ. ಅಲ್ಲಿ ಒಂದಲ್ಲ ಎರಡಲ್ಲ, ಸಾಲು ಸಾಲು ಸಮಸ್ಯೆಗಳಿವೆ.

ಗುಂಪು ರಾಜಕೀಯ: ಸ್ಥಳೀಯವಾಗಿ ಕಾಂಗ್ರೆಸ್ ನಾಯಕರ ನಡುವೆ ಕಿತ್ತಾಟ ಜೋರಾಗಿದೆ.

ಬಂಡಾಯದ ಬಿಸಿ: ಎಲ್ಲಕ್ಕಿಂತ ಮುಖ್ಯವಾಗಿ, ಅಲ್ಪಸಂಖ್ಯಾತ ನಾಯಕರು ಕಾಂಗ್ರೆಸ್ ವಿರುದ್ಧ ಬಂಡಾಯ ಎದ್ದು ಸ್ಪರ್ಧೆ ಮಾಡಿರುವುದು ಪಕ್ಷಕ್ಕೆ ನುಂಗಲಾರದ ತುತ್ತಾಗಿದೆ.

ಅಭ್ಯರ್ಥಿ ಆಯ್ಕೆ ಅಸಮಾಧಾನ: ಟಿಕೆಟ್ ಸಿಗದವರು ಒಳಗೊಳಗೇ ಕುದಿಯುತ್ತಿದ್ದಾರೆ. ಇದನ್ನು ಸರಿಪಡಿಸುವುದೇ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ದೊಡ್ಡ ಚಾಲೆಂಜ್.

ಇದು ಕೇವಲ ಚುನಾವಣೆ ಅಲ್ಲ, ಪ್ರಭಾವದ ಪರೀಕ್ಷೆ!

ಈ ಉಪಚುನಾವಣೆ ಕೇವಲ ಸೀಟು ಗೆಲ್ಲೋದಕ್ಕೆ ಮಾತ್ರ ಸೀಮಿತವಾಗಿಲ್ಲ. ಇದು ಬೆಳಗಾವಿಯ ಈ ಮೂವರು ನಾಯಕರ ರಾಜಕೀಯ ಪ್ರಭಾವ ಎಷ್ಟಿದೆ ಅನ್ನೋದಕ್ಕೆ ಲಿಟ್ಮಸ್ ಟೆಸ್ಟ್ ಇದ್ದಂತೆ. ಇಲ್ಲಿ ಕಾಂಗ್ರೆಸ್ ಗೆದ್ದರೆ ಈ ನಾಯಕರ ಬೆಲೆ ಹೈಕಮಾಂಡ್ ಮಟ್ಟದಲ್ಲಿ ಇನ್ನೂ ಜಾಸ್ತಿಯಾಗುತ್ತೆ. ಸೋತರೆ ಮುಂದಿನ ದಿನಗಳಲ್ಲಿ ರಾಜಕೀಯ ಲೆಕ್ಕಾಚಾರಗಳೇ ಬದಲಾಗಬಹುದು.

ಬಾಗಲಕೋಟೆ ಮತ್ತು ದಾವಣಗೆರೆಯಲ್ಲಿ ಈಗ 'ಕೈ' ನಾಯಕರ ನಡುವಿನ ಸಮನ್ವಯ ಎಷ್ಟರ ಮಟ್ಟಿಗೆ ವರ್ಕ್ ಆಗುತ್ತೆ ಅನ್ನೋದನ್ನ ಕಾದು ನೋಡಬೇಕು.

Latest News