ಖ್ಯಾತ ನಟಿ ಅಮೂಲ್ಯ ಅವರ ಪತಿ ಜಗದೀಶ್ ಆರ್. ಚಂದ್ರ ಅವರಿಗೆ ಬಿಜೆಪಿ ಪಕ್ಷವು ಮಹತ್ವದ ಜವಾಬ್ದಾರಿಯೊಂದನ್ನು ನೀಡಿದೆ. ಸದಾ ಸಮಾಜ ಸೇವೆಯಲ್ಲಿ ಗುರುತಿಸಿಕೊಂಡಿದ್ದ ಜಗದೀಶ್ ಅವರಿಗೆ ಈಗ ರಾಜಕೀಯವಾಗಿ ದೊಡ್ಡ ಮಟ್ಟದ ಮನ್ನಣೆ ಸಿಕ್ಕಂತಾಗಿದೆ.
ಬಿಜೆಪಿ ಪಕ್ಷವು ತನ್ನ ಸಾಂಸ್ಥಿಕ ಚಟುವಟಿಕೆಗಳನ್ನು ಬಲಪಡಿಸುವ ಉದ್ದೇಶದಿಂದ ಇತ್ತೀಚೆಗೆ ವಿವಿಧ ಮೋರ್ಚಾಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಿದೆ. ಇದರಲ್ಲಿ ಜಗದೀಶ್ ಆರ್. ಚಂದ್ರ ಅವರಿಗೆ ಬಿಜೆಪಿ ಕೇಂದ್ರ ಜಿಲ್ಲೆಯ ಯುವ ಮೋರ್ಚಾ ಅಧ್ಯಕ್ಷ ಸ್ಥಾನವನ್ನು ನೀಡಲಾಗಿದೆ. ಬೆಂಗಳೂರಿನ ಕೇಂದ್ರ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಸಪ್ತಗಿರಿ ಗೌಡ ಅವರು ಈ ನೇಮಕಾತಿ ಆದೇಶವನ್ನು ಹೊರಡಿಸಿದ್ದಾರೆ. ಯುವ ಪಡೆಯನ್ನು ಸಂಘಟಿಸುವ ಮತ್ತು ಪಕ್ಷದ ತತ್ವಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಜಗದೀಶ್ ಅವರಿಗೆ ಈ ಪ್ರಮುಖ ಹುದ್ದೆ ಒಲಿದುಬಂದಿದೆ.
ಜಗದೀಶ್ ಅವರು ರಾಜಕೀಯ ಹಿನ್ನೆಲೆಯುಳ್ಳ ಕುಟುಂಬದಿಂದ ಬಂದವರು. ಇವರ ತಂದೆ ಜಿ.ಎಚ್. ರಾಮಚಂದ್ರ ಅವರು ಹಿರಿಯ ರಾಜಕಾರಣಿ ಹಾಗೂ ಯಶಸ್ವಿ ಉದ್ಯಮಿ. ಜಗದೀಶ್ ಅವರು ವಿದೇಶದಲ್ಲಿ ಉನ್ನತ ಶಿಕ್ಷಣ ಮುಗಿಸಿ ಭಾರತಕ್ಕೆ ಮರಳಿದ ನಂತರ ತಂದೆಯ ಹಾದಿಯಲ್ಲೇ ಸಮಾಜ ಸೇವೆಯಲ್ಲಿ ತೊಡಗಿಕೊಂಡರು.
ಅವರ ರಾಜಕೀಯ ಪ್ರಯಾಣ ಏರಿಳಿತಗಳಿಂದ ಕೂಡಿದೆ. 2018ರ ಸಮಯದಲ್ಲಿ ಅವರು ಬಿಜೆಪಿ ತೊರೆದು ಜೆಡಿಎಸ್ ಸೇರಿದ್ದರು. ಆದರೆ, ಪಕ್ಷದ ಸಿದ್ಧಾಂತಗಳ ಮೇಲಿನ ಒಲವಿನಿಂದಾಗಿ ಮತ್ತೆ ಮರಳಿ ಬಿಜೆಪಿಗೆ ಬಂದರು. ರಾಜರಾಜೇಶ್ವರಿ ನಗರ (RR ನಗರ) ಕ್ಷೇತ್ರದಲ್ಲಿ ಅವರು ಅತ್ಯಂತ ಸಕ್ರಿಯವಾಗಿದ್ದು, ವಿಧಾನಸಭಾ ಚುನಾವಣೆಯ ಟಿಕೆಟ್ ಆಕಾಂಕ್ಷಿಯೂ ಆಗಿದ್ದರು. ಕೆಲವು ಬಾರಿ ಟಿಕೆಟ್ ಕೈತಪ್ಪಿದರೂ ಸಹ ಅವರು ಎದೆಗುಂದದೆ ಪಕ್ಷದ ಸಂಘಟನೆಯಲ್ಲಿ ನಿರತರಾಗಿದ್ದರು.
ಕೇವಲ ರಾಜಕೀಯ ಮಾತ್ರವಲ್ಲದೆ, ಕಷ್ಟಕಾಲದಲ್ಲಿ ಜನರ ಪರವಾಗಿ ನಿಂತಿದ್ದಕ್ಕೆ ಜಗದೀಶ್ ಅವರಿಗೆ ಒಳ್ಳೆಯ ಹೆಸರಿದೆ. ಮುಖ್ಯವಾಗಿ ಕೊರೊನಾ ಸಂಕಷ್ಟದ ಸಮಯದಲ್ಲಿ ಅಮೂಲ್ಯ ಮತ್ತು ಜಗದೀಶ್ ದಂಪತಿಗಳು ಸಾವಿರಾರು ಜನರಿಗೆ ನೆರವಿನ ಹಸ್ತ ಚಾಚಿದ್ದರು. ಆರ್.ಆರ್. ನಗರ ವ್ಯಾಪ್ತಿಯಲ್ಲಿ ಮೂಲಸೌಕರ್ಯ ಸಮಸ್ಯೆಗಳು ಎದುರಾದಾಗ ಮತ್ತು ಜನರ ದ್ವನಿಯಾಗಬೇಕಾದ ಸಂದರ್ಭದಲ್ಲಿ ಜಗದೀಶ್ ಅವರು ಮುಂಚೂಣಿಯಲ್ಲಿ ನಿಂತು ಕೆಲಸ ಮಾಡಿದ್ದಾರೆ. ಅವರ ಈ ಜನಪರ ಕಾಳಜಿಯೇ ಇಂದು ಅವರಿಗೆ ಇಂತಹದೊಂದು ಹುದ್ದೆ ಸಿಗಲು ಕಾರಣವಾಗಿದೆ ಎನ್ನಬಹುದು.
ಜಗದೀಶ್ ಆರ್. ಚಂದ್ರ ಅವರಿಗೆ ಯುವ ಮೋರ್ಚಾ ಅಧ್ಯಕ್ಷ ಪಟ್ಟ ಸಿಗುತ್ತಿದ್ದಂತೆಯೇ ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ. ನಟಿ ಅಮೂಲ್ಯ ಅವರ ಅಭಿಮಾನಿಗಳು ಹಾಗೂ ಬಿಜೆಪಿ ಕಾರ್ಯಕರ್ತರು ಜಗದೀಶ್ ಅವರ ಹೊಸ ಜವಾಬ್ದಾರಿಗೆ ಬೆಂಬಲ ಸೂಚಿಸಿದ್ದಾರೆ. ಯುವಕರನ್ನು ಒಗ್ಗೂಡಿಸಿ ಪಕ್ಷವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.
ಅಮೂಲ್ಯ ಪತಿ ಜಗದೀಶ್ ಅವರು ಈಗ ಪೂರ್ಣ ಪ್ರಮಾಣದ ರಾಜಕೀಯ ನಾಯಕನಾಗಿ ಹೊರಹೊಮ್ಮುತ್ತಿದ್ದಾರೆ. ತಂದೆಯ ಮಾರ್ಗದರ್ಶನ ಮತ್ತು ಸ್ವಂತ ಪರಿಶ್ರಮದಿಂದ ಅವರು ಈ ಹಂತಕ್ಕೆ ತಲುಪಿದ್ದಾರೆ. ಮುಂದಿನ ದಿನಗಳಲ್ಲಿ ಅವರು ಯಾವ ರೀತಿಯ ಬದಲಾವಣೆಗಳನ್ನು ತರುತ್ತಾರೆ ಎಂಬ ಕುತೂಹಲ ಎಲ್ಲರಲ್ಲಿದೆ.