Mar 16, 2026 Languages : ಕನ್ನಡ | English

ಗ್ಯಾಸ್ ಇಲ್ಲದೆ ಗತಿಗೇಟ್ಟ ಹೋಟೆಲ್ ಉದ್ಯಮ - ಮತ್ತೆ ಅಡುಗೆಮನೆ ಸೇರಿತು ಸೌದೆ ಒಲೆ ಮತ್ತು ಇದ್ದಿಲು!!

ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧದ ಜಾಗತಿಕ ಪರಿಣಾಮಗಳು ಇದೀಗ ಕರ್ನಾಟಕದ ಸಾಮಾನ್ಯ ಜನರ ಅಡುಗೆಮನೆ ಮತ್ತು ಪ್ರವಾಸೋದ್ಯಮದ ಮೇಲೆ ತೀವ್ರವಾಗಿ ತಟ್ಟಿವೆ. ರಾಜ್ಯಾದ್ಯಂತ ವಾಣಿಜ್ಯ ಮತ್ತು ಗೃಹಬಳಕೆಯ ಸಿಲಿಂಡರ್‌ಗಳ ಅಭಾವ ಸೃಷ್ಟಿಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.

ಬಿರಿಯಾನಿ ತಯಾರಿಸಲು ಇದ್ದಿಲೇ ಗತಿ! ಯುದ್ಧದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಗ್ಯಾಸ್ ಅಭಾವದ ಆತಂಕಕಾರಿ ವರದಿ
ಬಿರಿಯಾನಿ ತಯಾರಿಸಲು ಇದ್ದಿಲೇ ಗತಿ! ಯುದ್ಧದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಗ್ಯಾಸ್ ಅಭಾವದ ಆತಂಕಕಾರಿ ವರದಿ

ಜಾಗತಿಕ ಯುದ್ಧದ ಹಿನ್ನೆಲೆಯಲ್ಲಿ ಅಡುಗೆ ಅನಿಲ ಪೂರೈಕೆಯಲ್ಲಿ ಭಾರಿ ವ್ಯತ್ಯಯ ಉಂಟಾಗಿದೆ. ಇದರಿಂದಾಗಿ ರಾಜ್ಯದ ಹೋಟೆಲ್ ಉದ್ಯಮ, ಪ್ರವಾಸಿ ತಾಣಗಳು ಮತ್ತು ಧಾರ್ಮಿಕ ಕೇಂದ್ರಗಳ ದಾಸೋಹದ ಮೇಲೆ ಗಂಭೀರ ಪರಿಣಾಮ ಬೀರಿದೆ.

ಗ್ಯಾಸ್ ಸಿಲಿಂಡರ್‌ಗಳು ಸಿಗದ ಕಾರಣ ಅನಿವಾರ್ಯವಾಗಿ ಹೋಟೆಲ್ ಮಾಲೀಕರು ಹಳೆಯ ಕಾಲದ ಸೌದೆ ಒಲೆ ಮತ್ತು ಇದ್ದಿಲು ಒಲೆಗಳ ಮೊರೆ ಹೋಗಿದ್ದಾರೆ.

ದಾವಣಗೆರೆ: ಇಲ್ಲಿನ ಹೋಟೆಲ್‌ಗಳಲ್ಲಿ ಕೇವಲ ದೋಸೆ ಮಾತ್ರ ಲಭ್ಯವಿದ್ದು, ಉಳಿದ ತಿಂಡಿಗಳನ್ನು ತಯಾರಿಸಲು ಸಾಧ್ಯವಾಗುತ್ತಿಲ್ಲ.

ಕೊಪ್ಪಳ: ಹೋಟೆಲ್ ಮಾಲೀಕರು ಬಯಲು ಪ್ರದೇಶದಲ್ಲಿ ಕಟ್ಟಿಗೆ ಒಲೆ ಹೂಡಿ ಅಡುಗೆ ತಯಾರಿಸಿ ಪೂರೈಸುತ್ತಿದ್ದಾರೆ.

ಶಿವಮೊಗ್ಗ: ರಂಜಾನ್ ಹಬ್ಬದ ಈ ಸಮಯದಲ್ಲಿ ಗ್ಯಾಸ್ ಕೊರತೆಯಿಂದಾಗಿ ಹೋಟೆಲ್ ಮುಚ್ಚುವ ಬದಲು ಬಿರಿಯಾನಿ ಮತ್ತು ಸಮೋಸ ತಯಾರಿಕೆಗೆ ಇದ್ದಿಲು ಬಳಸಲಾಗುತ್ತಿದೆ.

ಕೊಡಗು ಮತ್ತು ಚಿಕ್ಕಮಗಳೂರಿನಂತಹ ಪ್ರವಾಸಿ ತಾಣಗಳಲ್ಲಿನ ಹೋಮ್‌ ಸ್ಟೇ ಮತ್ತು ರೆಸಾರ್ಟ್‌ಗಳು ಈಗ ಪ್ರವಾಸಿಗರಿಲ್ಲದೆ ಬಣಗುಡುತ್ತಿವೆ. ಹೋಟೆಲ್‌ಗಳಲ್ಲಿ ಮಿತವಾದ ಆಹಾರದ ಪಟ್ಟಿ (ಮೆನು) ಮಾತ್ರ ಲಭ್ಯವಿರುವುದರಿಂದ, ಪ್ರವಾಸಿಗರು ಪ್ರವಾಸ ಕೈಗೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಸಿಲಿಂಡರ್ ಕೊರತೆಯಿಂದಾಗಿ ಪ್ರವಾಸಿಗರಿಗೆ ಇಷ್ಟವಾದ ಆಹಾರ ನೀಡಲು ಸಾಧ್ಯವಾಗುತ್ತಿಲ್ಲ ಎಂಬುದು ಮಾಲೀಕರ ಅಳಲು.

ಮಠ-ಮಾನ್ಯಗಳು: ಕೊಪ್ಪಳದ ಗವಿಸಿದ್ಧೇಶ್ವರ ಮಠ, ಹಾವೇರಿಯ ಹುಕ್ಕೇರಿ ಮಠ ಮತ್ತು ಶರಣ ಬಸವೇಶ್ವರ ದೇವಾಲಯಗಳಲ್ಲಿ ಅನ್ನದಾಸೋಹ ನಿಲ್ಲಬಾರದೆಂಬ ಕಾರಣಕ್ಕೆ ಸೌದೆ ಒಲೆಗಳನ್ನು ಬಳಸಲಾಗುತ್ತಿದೆ.

ಗ್ರಾಹಕರ ಪರದಾಟ: ಮಡಿಕೇರಿ, ಬೆಳಗಾವಿ ಮತ್ತು ವಿಜಯಪುರಗಳಲ್ಲಿ ಗ್ಯಾಸ್ ಏಜೆನ್ಸಿಗಳ ಮುಂದೆ ಕಿಲೋಮೀಟರ್‌ಗಟ್ಟಲೆ ಕ್ಯೂ ಕಂಡುಬರುತ್ತಿದೆ. ಸಿಲಿಂಡರ್ ವಿತರಣೆ ಮಾಡಲು ಪೊಲೀಸರ ಭದ್ರತೆ ಪಡೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ಬಿಕ್ಕಟ್ಟಿನ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಸಚಿವ ಹರದೀಪ್ ಸಿಂಗ್ ಪುರಿ ಅವರಿಗೆ ಪತ್ರ ಬರೆದು ಪರ್ಯಾಯ ಮಾರ್ಗಗಳ ಮೂಲಕ ಅನಿಲ ಪೂರೈಕೆಗೆ ಮನವಿ ಮಾಡಿದ್ದಾರೆ. ಅಡುಗೆ ಅನಿಲ ಅಭಾವವನ್ನು ನೀಗಿಸಲು ಕೇಂದ್ರ ಸರ್ಕಾರ ಭರವಸೆ ನೀಡಿದೆ ಎಂದು ಸಿಎಂ ತಿಳಿಸಿದ್ದಾರೆ.

ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಅವರ ಪ್ರಕಾರ, ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಇಂದು (ಸೋಮವಾರ) ಗ್ಯಾಸ್ ಕಂಪನಿಗಳ ಜೊತೆ ಮಹತ್ವದ ಸಭೆ ನಡೆಯಲಿದೆ. ಈಗಾಗಲೇ ಅನಿಲ ತುಂಬಿದ ಎರಡು ಹಡಗುಗಳು ಭಾರತಕ್ಕೆ ಆಗಮಿಸಿರುವುದರಿಂದ ಮುಂದಿನ ಕೆಲವು ದಿನಗಳಲ್ಲಿ ಪರಿಸ್ಥಿತಿ ಸುಧಾರಿಸುವ ನಿರೀಕ್ಷೆಯಿದೆ. ಆದರೆ ಯುದ್ಧ ಇನ್ನೂ ನಡೆಯುತ್ತಿರುವುದರಿಂದ ಅನಿಲವನ್ನು ಮಿತವಾಗಿ ಬಳಸುವಂತೆ ಸಚಿವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

Latest News