Mar 18, 2026 Languages : ಕನ್ನಡ | English

ಪರೀಕ್ಷಾ ಕೊಠಡಿಗೆ ಮಗಳನ್ನು ಹೊತ್ತುಕೊಂಡು ಬಂದ ಮುಗ್ಧ ಅಪ್ಪ - ವೈರಲ್ ಆಗ್ತಿದೆ ತಂದೆ ಮಗಳ ಈ ಸ್ಟೋರಿ!!

ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯ ನೌರಂಗಾಬಾದ್ ಪ್ರದೇಶದಲ್ಲಿ ನಡೆದ ಈ ಘಟನೆ ಜನರ ಮನಸ್ಸಿಗೆ ಸ್ಪರ್ಶಿಸಿದೆ. ಪ್ಯಾರೆಲಾಲ್ ಎಂಬ ಕಾರ್ಮಿಕ ತನ್ನ ಅಂಗವಿಕಲ ಮಗಳು ಮಾನ್ಯಳನ್ನು ಬೆನ್ನಿನ ಮೇಲೆ ಹೊತ್ತುಕೊಂಡು ಪರೀಕ್ಷಾ ಹಾಲ್‌ಗೆ ಕರೆದುಕೊಂಡು ಬಂದಿದ್ದಾರೆ. ಮಗಳ ಶಿಕ್ಷಣದ ಕನಸು ನೆರವೇರಿಸಲು ತಂದೆ ತೋರಿದ ತ್ಯಾಗವು ಎಲ್ಲರಿಗೂ ಮಾದರಿಯಾಗಿದೆ.

ಮಗಳ ಕನಸುಗಳಿಗೆ ತಂದೆಯ ತ್ಯಾಗ – ದೇಶಾದ್ಯಂತ ಚರ್ಚೆಯಾಗುತ್ತಿರುವ ಹತ್ರಾಸ್ ಘಟನೆ
ಮಗಳ ಕನಸುಗಳಿಗೆ ತಂದೆಯ ತ್ಯಾಗ – ದೇಶಾದ್ಯಂತ ಚರ್ಚೆಯಾಗುತ್ತಿರುವ ಹತ್ರಾಸ್ ಘಟನೆ

ವಿಧಿಯಾಟಕ್ಕೆ ಮಗಳು ಕಾಲು ಕಳೆದುಕೊಂಡರೂ, ಅವಳ ವಿದ್ಯಾಭ್ಯಾಸಕ್ಕೆ ತಂದೆಯೇ ಕಾಲುಗಳಾಗಿ ನಿಂತು ಪರೀಕ್ಷಾ ಕೇಂದ್ರಕ್ಕೆ ಹೊತ್ತು ತಂದ ದೃಶ್ಯ ಮೈನವಿರೇಳಿಸುವಂತಿತ್ತು. ದಿನಗೂಲಿ ಕಾರ್ಮಿಕ ಪ್ಯಾರೆಲಾಲ್ ಅವರ ಮಗಳು ಮಾನ್ಯಳಿಗೆ ಓದೆಂದರೆ ಪಂಚಪ್ರಾಣ, ಆದರೆ ವಿಧಿ ಅವಳ ಪಾಲಿಗೆ ಕಠೋರವಾಯಿತು. ಒಂಬತ್ತನೇ ತರಗತಿಯಲ್ಲಿ ಕಲಿಯುತ್ತಿದ್ದಾಗ ಸಂಭವಿಸಿದ ಯಂತ್ರದ ಅಪಘಾತ ಅವಳ ಜೀವನವನ್ನೇ ಬದಲಿಸಿತು. ಅನಿವಾರ್ಯವಾಗಿ ವೈದ್ಯರು ಅವಳ ಪ್ರಾಣ ಉಳಿಸುವ ಸಲುವಾಗಿ ಅವಳ ಕಾಲನ್ನೇ ಕತ್ತರಿಸಿ ಹಾಕಬೇಕಾದ ದುಸ್ಥಿತಿ ಬಂದೊದಗಿತು. ಈ ಘಟನೆಯಿಂದ ಆ ಕುಟುಂಬವೇ ಕಂಗಾಲಾಯಿತು. ನಡೆಯಲು ಸಾಧ್ಯವಾಗದ ಸ್ಥಿತಿಯಲ್ಲಿದ್ದ ಮಾನ್ಯಳಿಗೆ ತನ್ನ ಶಾಲಾ ಜೀವನ ಮುಗಿದೇ ಹೋಯಿತು ಎಂಬ ಆತಂಕವಿತ್ತು.

ಒಂದೆಡೆ ಬಡತನ, ಮತ್ತೊಂದೆಡೆ ಮಗಳ ದೈಹಿಕ ಸ್ಥಿತಿ. ಆದರೆ ಪ್ಯಾರೆಲಾಲ್ ಅವರು ಸೋಲೊಪ್ಪಿಕೊಳ್ಳಲಿಲ್ಲ. ತನ್ನ ಮಗಳು ಓದಿ ದೊಡ್ಡ ಅಧಿಕಾರಿಯಾಗಬೇಕು ಎಂಬ ಕನಸನ್ನು ಅವರು ಜೀವಂತವಾಗಿರಿಸಿದ್ದರು. ಇದೀಗ ಮಾನ್ಯಳಿಗೆ ಯುಪಿ ಬೋರ್ಡ್ ಹೈಸ್ಕೂಲ್, 10ನೇ ತರಗತಿ  ಪರೀಕ್ಷೆಯ ಸಮಯ ಬಂದಿತ್ತು. ಮಗಳಿಗೆ ನಡೆಯಲು ಅಸಾಧ್ಯವಾಗಿದ್ದರಿಂದ ಪರೀಕ್ಷಾ ಕೇಂದ್ರಕ್ಕೆ ತಲುಪಿಸುವುದು ಕಷ್ಟದ ಕೆಲಸವಾಗಿತ್ತು. ಆದರೂ ಪ್ಯಾರೆಲಾಲ್ ಅವರು ಮಗಳನ್ನು ಮನೆಯಲ್ಲೇ ಬಿಡದೆ, ತಮ್ಮ ಬೆನ್ನ ಮೇಲೆ ಹೊತ್ತು ಪರೀಕ್ಷಾ ಕೊಠಡಿಯವರೆಗೆ ಕರೆದುಕೊಂಡು ಹೋದರು.

ಬಿಸಿಲು ಮತ್ತು ಆಯಾಸವನ್ನು ಲೆಕ್ಕಿಸದೆ ಪ್ಯಾರೆಲಾಲ್ ಅವರು ಮಗಳನ್ನು ಹೊತ್ತು ಪರೀಕ್ಷಾ ಕೇಂದ್ರಕ್ಕೆ ತಂದ ದೃಶ್ಯ ನೋಡುಗರನ್ನು ಭಾವುಕರನ್ನಾಗಿಸಿತು. ಮಗಳ ಭವಿಷ್ಯಕ್ಕಾಗಿ ಅವರು ತೋರಿದ ಈ ಸಾಹಸ ಅವಳಲ್ಲಿ ಆತ್ಮವಿಶ್ವಾಸ ಮೂಡಿಸಿತು. ಮಾನ್ಯಳ ಮುಖದ ಮೇಲಿದ್ದ ಭರವಸೆಯ ನಗುವು ತಂದೆಯ ಬೆಂಬಲಕ್ಕೆ ಹಿಡಿದ ಕನ್ನಡಿಯಂತಿತ್ತು.

ಮಾನ್ಯಳ ಛಲ ಮತ್ತು ಪ್ಯಾರೆಲಾಲ್ ಅವರ ನಿಸ್ವಾರ್ಥ ಪ್ರೀತಿಯು ಶಿಕ್ಷಣದ ಮೇಲಿರುವ ಗೌರವವನ್ನು ಎತ್ತಿ ಹಿಡಿದಿದೆ. 'ಅಂಗವೈಕಲ್ಯವು ಸಾಧನೆಗೆ ಅಡ್ಡಿಯಲ್ಲ' ಎಂಬುದಕ್ಕೆ ಮಾನ್ಯ ಉದಾಹರಣೆಯಾದರೆ, 'ಮಕ್ಕಳ ಏಳಿಗೆಗಾಗಿ ತಂದೆ ಯಾವುದಕ್ಕೂ ಸಿದ್ಧ' ಎಂಬುದಕ್ಕೆ ಪ್ಯಾರೆಲಾಲ್ ಸಾಕ್ಷಿಯಾಗಿದ್ದಾರೆ. ಹತ್ರಾಸ್ ಜಿಲ್ಲೆಯ ಈ ಸ್ಫೂರ್ತಿದಾಯಕ ಜೋಡಿ ಇಂದು ದೇಶಾದ್ಯಂತ ಚರ್ಚೆಯಾಗುತ್ತಿದೆ. 

Latest News